ಕ್ರೀಡೆ

ಎರಡನೇ ಬಾರಿ ಐಪಿಎಲ್‌ ಟ್ರೋಫಿ ಗೆದ್ದ ಆರ್ ಸಿಬಿ

Share

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿದ ಆರ್‌ಸಿಬಿ ತಂಡವು ಸತತ ಎರಡು ಆವೃತ್ತಿಗಳಲ್ಲಿ ಚಾಂಪಿಯನ್ ಆಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 2010 ಹಾಗೂ 2011ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ 2019 ಹಾಗೂ 2020ರಲ್ಲಿ ಮುಂಬೈ ಇಂಡಿಯನ್ಸ್ ತಂಡಗಳು ಮಾತ್ರ ಸತತ ಎರಡು ಆವೃತ್ತಿಗಳಲ್ಲಿ ಚಾಂಪಿಯನ್ ಆಗಿದ್ದವು. ಇದೀಗ, 2025 ಹಾಗೂ 2026ರಲ್ಲಿ ಆರ್ ಸಿಬಿ ಚಾಂಪಿಯನ್ ಆಗಿದೆ.

ಗುಜರಾತ್ ಟೈಟನ್ಸ್ ನೀಡಿದ್ದ 156 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ವೆಂಕಟೇಶ್‌ ಐಯ್ಯರ್ ಹಾಗೂ ವಿರಾಟ್ ಕೊಹ್ಲಿ 62 ರನ್‌ಗಳ ಸ್ಫೋಟಕ ಆರಂಭ ನೀಡಿದರು. ಈ ಹಂತದಲ್ಲಿ 32 ರನ್‌ಗಳಿಸಿದ್ದ ಐಯ್ಯರ್ ಔಟ್ ಆಗುತ್ತಿದ್ದಂತೆ ಬಂದ ದೇವದತ್ತ ಪಡಿಕ್ಕಲ್ (1), ನಾಯಕ ರಜತ್ ಪಾಟಿದಾರ್ (15) ಮತ್ತು ಕೃನಾಲ್ ಪಾಂಡ್ಯ (1) ರನ್ ಗಳಿಸಿ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು.

ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಸ್ಫೋಟಕ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ ಅವರು 42 ಎಸೆತಗಳಲ್ಲಿ ಅಜೇಯ 75 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಕೊಹ್ಲಿ ಅವರ ಈ ಪ್ರದರ್ಶನದ ನೆರವಿನಿಂದ ಆರ್‌ಸಿಬಿ ತಂಡವು 18 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿ ಚಾಂಪಿಯನ್ ಆಗಿದೆ.


Share

You cannot copy content of this page