ಚಿಕ್ಕಮಗಳೂರು: ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆಯ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಇಂದು ಅಜ್ಜಂಪುರದಲ್ಲಿರುವ ಲೆವೆಲ್ ಕ್ರಾಸಿಂಗ್ ಸಂಖ್ಯೆ 138ರ ಬದಲಿಗೆ ನಿರ್ಮಿಸಲಾಗುತ್ತಿರುವ ರಸ್ತೆ ಮೇಲ್ಸೇತುವೆ (ROB) ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಅಜ್ಜಂಪುರ–ಬೀರೂರು ರೈಲು ನಿಲ್ದಾಣಗಳ ನಡುವಿನ ಪಾದಚಾರಿ ಸಬ್ ವೆ ಮಾರ್ಗ (Pedestrian Subway) ನಿರ್ಮಾಣಕ್ಕೂ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಚನ್ನರಾಯಪಟ್ಟಣ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆ ಕಲ್ಪಿಸಲಾದ ರೈಲು ಸಂಖ್ಯೆ 11312 ಹಾಸನ–ಸೊಲ್ಲಾಪುರ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವ ವಿ. ಸೋಮಣ್ಣ, ಅಜ್ಜಂಪುರ ರೈಲು ನಿಲ್ದಾಣವನ್ನು ಶೀಘ್ರದಲ್ಲೇ ಹೆಚ್ಚುವರಿ ಪ್ರಯಾಣಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರಸ್ತುತ ವರ್ಷದಲ್ಲಿ 17 ಜೋಡಿ ರೈಲು ಸೇವೆಗಳನ್ನು ಕಾಯಂ ಮಾಡಲಾಗಿದ್ದು, ಪ್ರಯಾಣಿಕರ ದರವನ್ನು 30 ಶೇಕಡಾ ಕಡಿತಗೊಳಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ವಂದೇ ಭಾರತ್ ಸ್ಲೀಪರ್ ರೈಲು ಸೇವೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ತಿಳಿಸಿದ ಅವರು, ಕರ್ನಾಟಕದ 61 ರೈಲು ನಿಲ್ದಾಣಗಳನ್ನು ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಸುಮಾರು ₹2,000 ಕೋಟಿ ವೆಚ್ಚದಲ್ಲಿ ಪುನರ್ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.
ಅಜ್ಜಂಪುರದ ಎಲ್‌ಸಿ ಸಂಖ್ಯೆ 138ರ ಬದಲಿಗೆ ನಿರ್ಮಿಸಲಾಗುತ್ತಿರುವ ರಸ್ತೆ ಮೇಲ್ಸೇತುವೆಯನ್ನು ₹50.48 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಇದು ಸುರಕ್ಷತೆ ಹಾಗೂ ರಸ್ತೆ ಸಂಪರ್ಕವನ್ನು ಸುಧಾರಿಸಲಿದೆ. ಅಜ್ಜಂಪುರ ಮತ್ತು ಬೀರೂರು ನಿಲ್ದಾಣಗಳ ನಡುವಿನ ಪಾದಚಾರಿ ಸುರಂಗ ಮಾರ್ಗವನ್ನು ₹5.10 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಇದು ಪಾದಚಾರಿಗಳಿಗೆ ಸುರಕ್ಷಿತ ಸಂಚಾರ ಸೌಲಭ್ಯ ಒದಗಿಸುವುದರ ಜೊತೆಗೆ ರೈಲು ಹಳಿಗಳ ಮೇಲಿನ ಅನಧಿಕೃತ ದಾಟುವಿಕೆಯನ್ನು ತಡೆಯಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಜಿ.ಎಚ್. ಶ್ರೀನಿವಾಸ್, ಶಿವನಿ ನಿಲ್ದಾಣದಲ್ಲಿ ಹೊಸಪೇಟೆ–ಬೆಂಗಳೂರು ರೈಲಿಗೆ ನಿಲುಗಡೆ ಮಂಜೂರು ಮಾಡಿದಕ್ಕಾಗಿ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಅಲ್ಲದೆ ಅಜ್ಜಂಪುರ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ಪ್ರಯಾಣಿಕ ಸೌಲಭ್ಯಗಳನ್ನು ಒದಗಿಸುವಂತೆ ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಅಜ್ಜಂಪುರದ ಎಲ್‌ಸಿ ಸಂಖ್ಯೆ 138ರ ಬದಲಿಗೆ ನಿರ್ಮಿಸಲಾಗುತ್ತಿರುವ ರಸ್ತೆ ಮೇಲ್ಸೇತುವೆ ಸ್ಥಳೀಯ ಜನತೆಗೆ ಸುರಕ್ಷತೆ ಮತ್ತು ಸಂಪರ್ಕದ ದೃಷ್ಟಿಯಿಂದ ಮಹತ್ತರ ಪ್ರಯೋಜನವನ್ನು ನೀಡಲಿದೆ ಎಂದು ಅಭಿಪ್ರಾಯಪಟ್ಟರು.
ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸಾರ್ವಜನಿಕರ ಬೇಡಿಕೆಯ ಮೇರೆಗೆ ಅಜ್ಜಂಪುರ ಹಾಗೂ ಶಿವನಿ ನಿಲ್ದಾಣಗಳಲ್ಲಿ ಹೆಚ್ಚುವರಿ ರೈಲು ನಿಲುಗಡೆಗಳನ್ನು ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಿದ ಅವರು, ಕಳೆದ ವರ್ಷ ಚಿಕ್ಕಮಗಳೂರು–ತಿರುಪತಿ ರೈಲು ಸೇವೆಗೆ ಚಾಲನೆ ನೀಡಿರುವುದನ್ನು ಸ್ಮರಿಸಿದರು.
ಪಾದಚಾರಿ ಸುರಂಗ ಮಾರ್ಗದ ಶಂಕುಸ್ಥಾಪನಾ ಸಮಾರಂಭದಲ್ಲಿ ಮಾತನಾಡಿದ ಕಡೂರು ಕ್ಷೇತ್ರದ ಕೆ.ಎಸ್. ಆನಂದ್ ಮಾತನಾಡಿ, ಧರ್ಮಸ್ಥಳಕ್ಕೆ ತೆರಳುವ ಉತ್ತರ ಕರ್ನಾಟಕದ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಕಡೂರು ಮೂಲಕ ಸಂಚರಿಸುವುದರಿಂದ ಕಡೂರು ರೈಲು ನಿಲ್ದಾಣದಲ್ಲಿ ಹೆಚ್ಚುವರಿ ಪ್ರಯಾಣಿಕ ಸೌಲಭ್ಯಗಳನ್ನು ಕಲ್ಪಿಸಿ ನಿಲ್ದಾಣವನ್ನು ಅಭಿವೃದ್ಧಿಪಡಿಸುವಂತೆ ಮನವಿ ಮಾಡಿದರು. ಅಲ್ಲದೆ ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಯನ್ನು ಗಮನಿಸಿ ಕಡೂರು ನಿಲ್ದಾಣದಲ್ಲಿ ಹೆಚ್ಚುವರಿ ರೈಲು ನಿಲುಗಡೆಗಳನ್ನು ಒದಗಿಸುವಂತೆ ಕೋರಿದರು.
ನಂತರ ಚನ್ನರಾಯಪಟ್ಟಣ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಯೊಂದಿಗೆ ರೈಲು ಸಂಖ್ಯೆ 11312 ಹಾಸನ–ಸೊಲ್ಲಾಪುರ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದರು.
ಚನ್ನರಾಯಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಪ್ರಯಾಣಿಕರ ಬಹುಕಾಲದ ಬೇಡಿಕೆಯನ್ನು ಈಡೇರಿಸುವ ಉದ್ದೇಶದಿಂದ ಈ ಹೆಚ್ಚುವರಿ ನಿಲುಗಡೆಯನ್ನು ಕಲ್ಪಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ವಿ.ಸೋಮಣ್ಣ, ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಪ್ರಯಾಣಿಕರ ಸುರಕ್ಷತೆಗೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.
ಕಳೆದ ಹತ್ತು ವರ್ಷಗಳಲ್ಲಿ ದೇಶಾದ್ಯಂತ 13,800 ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳನ್ನು ನಿರ್ಮೂಲನೆ ಮಾಡಲಾಗಿದೆ. ಹಾಸನ, ಅರಸೀಕೆರೆ ಹಾಗೂ ಸಕಲೇಶಪುರ ರೈಲು ನಿಲ್ದಾಣಗಳನ್ನು ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಹಾಸನ–ಸೊಲ್ಲಾಪುರ ಎಕ್ಸ್‌ಪ್ರೆಸ್ ರೈಲು ಈ ಭಾಗದ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಹೇಳಿದರು.
