ಸಮಗ್ರ ಸುದ್ದಿ

ಇ-ಗಸ್ತು ತಂತ್ರಾಂಶದಲ್ಲಿ ಅರಣ್ಯಗಸ್ತು ನಿಗಾಕ್ಕೆ ಈಶ್ವರ ಖಂಡ್ರೆ ಸೂಚನೆ

Share

ಕೊಳ್ಳೆಗಾಲ: ರಾಜ್ಯ ಅರಣ್ಯ ಇಲಾಖೆ ಅಭಿವೃದ್ಧಿಪಡಿಸಿರುವ ಇ-ಗಸ್ತು ತಂತ್ರಾಂಶದ ಮೂಲಕ ಇಲಾಖೆಯ ಮುಂಚೂಣಿ ಸಿಬ್ಬಂದಿ ದಿನವೊಂದಕ್ಕೆ ಎಷ್ಟು ಗಸ್ತು ತಿರುಗುತ್ತಾರೆ ಎಂಬ ಬಗ್ಗೆ ನಿಗಾ ಇಡಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ.

ಕೊಳ್ಳೆಗಾಲದಲ್ಲಿ ನಿನ್ನೆ ಚಾಮರಾಜನಗರ ಮತ್ತು ಮೈಸೂರು ವೃತ್ತದ ಅರಣ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಹೊಸದಾಗಿ ರೂಪಿಸಲಾಗಿರುವ ಈ ತಂತ್ರಾಂಶದ ಬಗ್ಗೆ ಸೂಕ್ತ ಪ್ರತಿಕ್ರಿಯೆ ನೀಡಿ, ತಂತ್ರಾಂಶ ಅಭಿವೃದ್ಧಿ ಪಡಿಸಿ ಎಂದೂ ಆದೇಶಿಸಿದರು.

ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಿಸಲು ಗಸ್ತು ಅತ್ಯಂತ ಮುಖ್ಯವಾಗಿದ್ದು, ಇದನ್ನು ಬಲಪಡಿಸುವ ಅಗತ್ಯವಿದೆ. ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಈಗಾಗಲೇ ಅಳವಡಿಸಲಾಗಿರುವ ಎಂ.ಸ್ಟ್ರೈಪ್ ಜೊತೆಗೆ ನಮ್ಮ ಇ-ಗಸ್ತು ತಂತ್ರಾಂಶವನ್ನೂ ಜಾರಿ ಮಾಡಿ ನಿಗಾ ವಹಿಸುವಂತೆ ಸೂಚಿಸಿದರು.

ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿ :

ಇಂದಿನ ಯುವ ಪೀಳಿಗೆಗೆ ಮತ್ತು ಮಕ್ಕಳಿಗೆ ಅರಣ್ಯ ಮತ್ತು ವನ್ಯಜೀವಿಗಳ ಸ್ವಭಾವದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯಲ್ಲಿರುವ ಉತ್ತಮ ವಾಗ್ಮಿಗಳು ಅಥವಾ ಆಸಕ್ತ ಎನ್.ಜಿ.ಓ. ಬಳಸಿಕೊಂಡು ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು. ಹುಲಿ ಪ್ರತಿಷ್ಠಾನದ ಹಣದಲ್ಲಿ ಮೂರನೇ ಒಂದು ಭಾಗವನ್ನು ಅರಣ್ಯದಂಚಿನ ಗ್ರಾಮಗಳಲ್ಲಿನ ಜನ ಸಂಪರ್ಕ ಕಾರ್ಯಕ್ಕೆ ವೆಚ್ಚ ಮಾಡಿ ಎಂದು ಸೂಚಿಸಿದರು.

ಅದೇ ರೀತಿ ಹುಲಿ ಬಂದಾಗ ಏನು ಮಾಡಬೇಕು, ಚಿರತೆ, ಕರಡಿ, ಆನೆ ಬಂದರೆ ಹೇಗೆ ನಡೆದುಕೊಳ್ಳಬೇಕು, ಹಾವು ಕಂಡಾಗ ಏನು ಮಾಡಬೇಕು ಎಂಬ ಬಗ್ಗೆ ಕಾಡಿನಂಚಿನ ಮಕ್ಕಳಿಗೆ ತಿಳಿವಳಿಕೆ ಮೂಡಿಸಲು ಅಣಕು ಪ್ರದರ್ಶನಗಳನ್ನು ಏರ್ಪಡಿಸಿ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಅರಣ್ಯ ಪ್ರದೇಶ ಹೆಚ್ಚಳವಾಗುತ್ತಿಲ್ಲ. ಬದಲಾಗಿ ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಒಂದು ಗಂಡು ಹುಲಿಗೆ ಕನಿಷ್ಠ 14 ಚದರ ಕಿಲೋ ಮೀಟರ್ ಪ್ರದೇಶ ಬೇಕಿದ್ದರೆ, ಹೆಣ್ಣು ಹುಲಿಗೆ 8ರಿಂದ 10 ಚದರ ಕಿಲೋ ಮೀಟರ್ ಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಒಂದು ಅಂದಾಜಿನ ರೀತ್ಯ ಬಂಡೀಪುರದಲ್ಲಿ 190 ಹುಲಿಗಳಿದ್ದು, ಅರಣ್ಯ ಪ್ರದೇಶ ಇರುವುದು 950 ಚದರ ಕಿಲೋ ಮೀಟರ್. ಅಂದರೆ ಕಾಡಿಗಿಂತ ಹುಲಿಯ ಸಂಖ್ಯೆ ಹೆಚ್ಚಿದೆ. ಇದಕ್ಕೆ ಸಹಬಾಳ್ವೆಯೊಂದೇ ಪರಿಹಾರವಾಗಿದೆ ಎಂದು ಹೇಳಿದರು.

ಅರಣ್ಯ ಸಿಬ್ಬಂದಿ ಗ್ರಾಮದಂಚಿನ ಜನರೊಂದಿಗೆ ಹೆಚ್ಚು ಸ್ನೇಹಪರವಾಗಿದ್ದಾಗ ಸಮಸ್ಯೆ ಪರಿಹರಿಸಲು ಸಾಧ್ಯ. ಗ್ರಾಮದ ಜನರಿಂದಲೇ ನಿಮಗೆ ಮಾಹಿತಿ ಲಭಿಸುತ್ತದೆ. ವನ್ಯಜೀವಿಗಳೂ ಸುರಕ್ಷಿತವಾಗಿರುತ್ತವೆ. ತಕ್ಷಣ ನೀವು ಸ್ಪಂದಿಸಿದರೆ ಜನರ ಜೀವ, ಬೆಳೆಯೂ ಉಳಿಯುತ್ತದೆ ಎಂದರು.

ವನ್ಯಜೀವಿಗಳು ವಸತಿ ಪ್ರದೇಶದ ಬಳಿ ಬಂದ ಬಗ್ಗೆ ಮಾಹಿತಿ ದೊರೆತ ಕೂಡಲೇ ಅಲ್ಲಿಗೆ ಧಾವಿಸಲು ವಾಹನ ಮತ್ತು ಸಿಬ್ಬಂದಿ ಸಜ್ಜಾಗಿರುವಂತೆ ನೋಡಿಕೊಳ್ಳಿ ಮತ್ತು ಹುಲಿ ಸಂಚಾರ ಇರುವ 100 ಕಿಲೋ ಮೀಟರ್ ವ್ಯಾಪ್ತಿಯ ಗ್ರಾಮಗಳ ಬಳಿ ಪ್ರತಿ 5 ಕಿಲೋ ಮೀಟರ್ ಗೆ ಒಂದು ತಾತ್ಕಾಲಿಕ ಶಿಬಿರ ಮಾಡಿ ಗಸ್ತು ಹೆಚ್ಚಿಸಿ ಎಂದು ತಿಳಿಸಿದರು.

ಹಿರಿಯ ಅಧಿಕಾರಿಗಳು ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಿರುವ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ ಜನರ ಸಮಸ್ಯೆ ಆಲಿಸಬೇಕು. ಸಮಸ್ಯೆಗೆ ಪರಿಹಾರ ದೊರಕಿಸಬೇಕು ಎಂದೂ ತಿಳಿಸಿದರು.

ಸಭೆಯಲ್ಲಿ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಮಂಜುನಾಥ್ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.


Share

You cannot copy content of this page