ಸಮಗ್ರ ಸುದ್ದಿ

ಜಲ ನಿರ್ವಹಣೆಯಲ್ಲಿ ಅತ್ಯುತ್ತಮ ಸಾಧನೆ: BWSSB ಗೆ ‘ಜಿಯೋಸ್ಪೇಷಿಯಲ್ ಎಕ್ಸಲೆನ್ಸ್ ಪ್ರಶಸ್ತಿ’

Share

ನವದೆಹಲಿ:ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತನ್ನ ಜಿಐಎಸ್-ಆಧಾರಿತ ಯುಟಿಲಿಟಿ ಆಸ್ತಿ ನಿರ್ವಹಣಾ ವೇದಿಕೆ ‘ಜಲಪಥಕ್ಕಾಗಿ ಪ್ರತಿಷ್ಠಿತ ‘ಜಿಯೋಸ್ಪೇಷಿಯಲ್ ಎಕ್ಸಲೆನ್ಸ್ ಪ್ರಶಸ್ತಿ’ (Geospatial Excellence Award) ಗೆ ಭಾಜನವಾಗಿದೆ.

ಸರ್ವೆ ಆಫ್ ಇಂಡಿಯಾ ಮತ್ತು ರಾಷ್ಟ್ರೀಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ನವದೆಹಲಿಯ ಭಾರತ್ ಮಂಟಪಂನಲ್ಲಿ ಆಯೋಜಿಸಿದ್ದ ‘ಜಿಯೋಸ್ಮಾರ್ಟ್ ಇಂಡಿಯಾ 2025’ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಸಮ್ಮೇಳನದ ಸಮಾರೋಪ ಅಧಿವೇಶನದಲ್ಲಿ ಬಿಡಬ್ಲ್ಯುಎಸ್‍ಎಸ್‍ಬಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

ಕಾರ್ಯಕ್ರಮದ ನಂತರ ಮಾತನಾಡಿದ ಡಾ. ಮನೋಹರ್ ಅವರು, ಜಿಯೋಸ್ಪೇಷಿಯಲ್ ಮ್ಯಾಪಿಂಗ್ ತಂತ್ರಜ್ಞಾನದ ಮೂಲಕ ಆಸ್ತಿಗಳ ಡಿಜಿಟಲೀಕರಣ, ರಿಯಲ್ ಟೈಮ್ ಡೇಟಾ ಇಂಟಿಗೇಷನ್‍ನಲ್ಲಿ ಬೆಂಗಳೂರು ಜಲಮಂಡಳಿಯ ಸಾಧನೆಗಳನ್ನು ಗುರುತಿಸಿದೆ. ಈ ಮೂಲಕ ಸಾವಿರಾರು ನೀರು ಮತ್ತು ಒಳಚರಂಡಿ ಆಸ್ತಿಗಳನ್ನು ಏಕೀಕೃತ ವೇದಿಕೆಯಲ್ಲಿ ಕೇಂದ್ರೀಕರಿಸಲು ಸಹಾಯ ಮಾಡಿದೆ, ಇದು ಯೋಜನಾ ಪ್ರಕ್ರಿಯೆ, ಮೇಲ್ವಿಚಾರಣೆ ಮತ್ತು ನಿರ್ವಹಣೆಯ ದಕ್ಷತೆಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ.

ಈ ಪ್ರಶಸ್ತಿಯು ಬೆಳೆಯುತ್ತಿರುವ ಬೆಂಗಳೂರು ನಗರಕ್ಕೆ ವೈಜ್ಞಾನಿಕ ಮತ್ತು ತಂತ್ರಜ್ಞಾನ ಆಧಾರಿತ ನೀರು ನಿರ್ವಹಣೆಯನ್ನು ಒದಗಿಸುವ ಬದ್ದತೆಯನ್ನು ಪ್ರತಿಬಿಂಬಿಸುತ್ತದೆ. ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರ ದೂರದೃಷ್ಟಿಯಿಂದ ಈ ತಂತ್ರಜ್ಞಾನದ ಅಳವಡಿಕೆ ಸಾಧ್ಯವಾಗಿದೆ. ಜಲಮಂಡಳಿಯಲ್ಲಿ ಈ ಮಹತ್ವದ ತಂತ್ರಜ್ಞಾನ ಕಾರ್ಯಕ್ರಮ ಅನುಷ್ಠಾನಕ್ಕೆ ಮಾರ್ಗದರ್ಶನ ನೀಡಿದ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ತಂತ್ರಜ್ಞಾನ ಅಳವಡಿಕೆಗೆ ಚಾಲನೆ ನೀಡಿದ್ದ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಈ ಪ್ರಶಸ್ತಿಯು ನಮ್ಮ ಬಿಡಬ್ಲ್ಯುಎಸ್‍ಎಸ್‍ಬಿ ಎಂಜಿನಿಯರ್‌ಗಳು, ಜಿಐಎಸ್ ತಂಡಗಳು ಮತ್ತು ಈ ಪರಿವರ್ತನೆಯನ್ನು ನಿರ್ಮಿಸಿದ ನಮ್ಮ ಕ್ಷೇತ್ರ ಸಿಬ್ಬಂದಿಗೆ ಸೇರಿದ್ದು, ಎಂದು ಅವರು ತಿಳಿಸಿದರು.

ಭವಿಷ್ಯದ ಮೇಲೆ ಕೇಂದ್ರೀಕರಿಸಿದ ಜಲ ಜಾಲ:
ಬೆಂಗಳೂರು ಜಲಮಂಡಳಿಯು ‘ಜಲಪಥ’ ತಂತ್ರಜ್ಞಾನವನ್ನು ಇನ್ನಷ್ಟು ಆಧುನಿಕಗೊಳಿಸಲಿದೆ. ಮುಂದಿನ ಹಂತದಲ್ಲಿ ಸುಧಾರಿತ ಭೌಗೋಳಿಕ-ಪ್ರಾದೇಶಿಕ ವಿಶ್ಲೇಷಣೆಗಳು, ಪ್ರಿಡಿಕ್ಟಿವ್ ಮೆಂಟೇನೇನ್ಸ್ ಉಪಕರಣಗಳು ಮತ್ತು ರೀಯಲ್ ಟೈಮ್ ಯೋಜನೆಗಳ ಮೇಲ್ವಿಚಾರಣೆಯನ್ನು ಮಾಡಲು ಅನುವು ಮಾಡಿಕೊಡಲಿದೆ.

ಈ ನವೀಕರಣಗಳು ಸೇವಾ ವಿತರಣೆಯನ್ನು ಬಲಪಡಿಸುತ್ತವೆ, ನೀರಿನ ನಷ್ಟವನ್ನು ಕಡಿಮೆ ಮಾಡುತ್ತವೆ ಮತ್ತು ಬೆಂಗಳೂರಿನ ಭವಿಷ್ಯಕ್ಕಾಗಿ ಸಿದ್ಧವಾಗಿರುವ ಜಲ ಜಾಲವನ್ನು ನಿರ್ಮಿಸಲಿವೆ ಎಂದು ಡಾ. ಮನೋಹರ್ ಹೇಳಿದರು.

ಈ ಸಂಧರ್ಭದಲ್ಲಿ ಬೆಂಗಳೂರು ಜಲಮಂಡಳಿಯ ಮುಖ್ಯ ಅಭಿಯಂತರರಾದ ಸನತ್ ಹಾಗೂ ಸಹಾಯಕ ಮುಖ್ಯ ಅಭಿಯಂತರಾದ ಮಹೇಶ್ವರಪ್ಪ ಉಪಸ್ಥಿತರಿದ್ದರು.


Share

You cannot copy content of this page