ಸಮಗ್ರ ಸುದ್ದಿ

ಸರ್ಕಾರಿ ಕಟ್ಟಡಗಳಲ್ಲಿ ಸೌರ ಮೇಲ್ಛಾವಣಿ ಶೇ.80 ಪ್ರಗತಿ|53,874 ಕಟ್ಟಡಗಳಿಂದ 855 ಮೆಗಾವ್ಯಾಟ್ ಸಾಮರ್ಥ್ಯ; ಸಚಿವ ಪ್ರಲ್ಹಾದ ಜೋಶಿ

Share

ನವದೆಹಲಿ: ಸರ್ಕಾರಿ ಕಟ್ಟಡಗಳ ಮೇಲೆ ಸೌರ ಮೇಲ್ಛಾವಣಿ ಅಳವಡಿಕೆಯಲ್ಲಿ ಶೇ.80ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ದೆಹಲಿಯಲ್ಲಿ ಗುರುವಾರ ನಡೆದ ವಿವಿಧ ಸಚಿವಾಲಯ ಮತ್ತು ಸಂಸ್ಥೆಗಳ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಸಚಿವರು, ಸರ್ಕಾರಿ ಕಟ್ಟಡಗಳ ಸೌರ ಮೇಲ್ಛಾವಣಿಯಿಂದ 855 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಸಾಧಿಸಲಾಗಿದೆ ಎಂದು ತಿಳಿಸಿದರು.

ಸರ್ಕಾರಿ ಕಟ್ಟಡಗಳ ಮೇಲ್ಛಾವಣಿ ಸೌರಶಕ್ತಿ ಅಳವಡಿಕೆ ಪ್ರಗತಿ ಪರಿಶೀಲಿಸಿ, ಶೇ.80ರಷ್ಟು ಸೌರ ಅಳವಡಿಕೆ ಗುರಿ ಸಾಧಿಸಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

53,874 ಸರ್ಕಾರಿ ಕಟ್ಟಡಗಳಲ್ಲಿ ಸೌರ ಮೇಲ್ಛಾವಣಿ: ಈವರೆಗೆ 53,874 ಸರ್ಕಾರಿ ಕಟ್ಟಡಗಳನ್ನು ಸೌರಶಕ್ತಿ ಚಾಲಿತಗೊಳಿಸಲಾಗಿದೆ. ಒಟ್ಟು 855 ಮೆಗಾವ್ಯಾಟ್ ಸಾಮರ್ಥ್ಯವಿದೆ. ಈ ಯೋಜನೆ ಅನುಷ್ಠಾನವನ್ನು ಮತ್ತಷ್ಟು ತ್ವರಿತಗೊಳಿಸಲು ಸಚಿವಾಲಯ ಮತ್ತು ಇಲಾಖೆ ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಸೌರಶಕ್ತಿಯಲ್ಲಿ ಪಾರದರ್ಶಕ ಮತ್ತು ಏಕೀಕೃತ ಮೌಲ್ಯಮಾಪನಕ್ಕಾಗಿ ಡೇಟಾವನ್ನು ಸಮನ್ವಯಗೊಳಿಸುವ ಅಗತ್ಯವಿದೆ. ಸಂಸ್ಥೆಗಳ ನಡುವೆ ನಿಕಟ ಸಮನ್ವಯತೆ ಸಾಧಿಸಿದ್ದು, ಎಲ್ಲಾ ಪಾಲುದಾರರು ಸೌರ ಅನುಷ್ಠಾನವನ್ನು ತ್ವರಿತಗೊಳಿಸುವಂತೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.

15 ದಿನದಲ್ಲಿ ಮತ್ತೊಂದು ಸಭೆ: ಸರ್ಕಾರಿ ಕಟ್ಟಡಗಳ ಮೇಲೆ ಸೌರ ಮೇಲ್ಛಾವಣಿ ಅಳವಡಿಕೆ ಪ್ರಗತಿ ಮತ್ತು ಸಕಾಲಿಕ ಅನುಷ್ಠಾನ ಬಗ್ಗೆ ಚರ್ಚಿಸಲು 15 ದಿನದೊಳಗೆ ಮತ್ತೊಂದು ಪರಿಶೀಲನಾ ಸಭೆ ನಡೆಸಲಾಗುವುದು ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ಪಿಎಂ ಸೂರ್ಯಘರ್ 40 ಲಕ್ಷ ದಾಟಿದೆ: ಸೂರ್ಯಘರ್ ಯೋಜನೆ ಅಳವಡಿಕೆ ಎರೆಡು ವರ್ಷದಲ್ಲಿ 40 ಲಕ್ಷ ದಾಟಿದೆ. ದೇಶದಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸುತ್ತಿರುವ ಈ ಯೋಜನೆ ಅಳವಡಿಕೆಗೆ 65 ಲಕ್ಷ ಅರ್ಜಿಗಳು ಸಲ್ಲಿಕೆ ಹಂತದಲ್ಲಿವೆ ಎಂದು ವಿವರಿಸಿದರು.

ಇನ್ನೇಳು ತಿಂಗಳಲ್ಲಿ 75 ಲಕ್ಷ ಮನೆಗಳ ಸೌರ ಮೇಲ್ಛಾವಣಿ ಗುರಿ: ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ, ಆಶಯದಂತೆ ದೇಶದೆಲ್ಲೆಡೆ ಪಿಎಂ ಸೂರ್ಯಘರ್ ಹೊಸ ಮೈಲಿಗಲ್ಲು ಸ್ಥಾಪಿಸುತ್ತಿದೆ. ಮುಂದಿನ 7 ತಿಂಗಳಲ್ಲಿ 75 ಲಕ್ಷ ಮನೆಗಳ ಸೌರ ಮೇಲ್ಛಾವಣಿ ಗುರಿ ಹೊಂದಲಾಗಿದೆ ಎಂದು ಗಮನ ಸೆಳೆದರು.

ಸೌರ ಶಕ್ತಿ ಅಳವಡಿಕೆಯಲ್ಲಿ ಅತಿ ದೊಡ್ಡ ಫಲಾನುಭವಿಗಳು ಬಡ ಮತ್ತು ಮಧ್ಯಮ ಆದಾಯದ ಕುಟುಂಬಗಳು, ವಿಶೇಷವಾಗಿ 1 KW ನಿಂದ 3 KW ವರೆಗೆ ವಿದ್ಯುತ್ ಬಳಸುವ ಕುಟುಂಬಗಳಿಂದ ಅಗಾಧ ಮತ್ತು ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ಪ್ರತಿ ಮನೆಗೂ ಸೌರ ಶಕ್ತಿ ಬೆಳಕು ಚೆಲ್ಲುವ ಯೋಜನೆ ಯಶಸ್ಸನ್ನು ಪ್ರತಿಬಿಂಬಿಸುತ್ತದೆ ಎಂದು ಸಚಿವ ಪ್ರಲ್ಹಾದ ಜೋಶಿ ಪ್ರತಿಪಾದಿಸಿದರು.


Share

You cannot copy content of this page