ಬೆಂಗಳೂರು: ಶತಮಾನಗಳ ಶಾಪದಿಂದ ತೀವ್ರ ಹಿಂದುಳಿದಿರುವ ಬೀದರ್ ಜಿಲ್ಲೆಯನ್ನು ಮೈಸೂರು, ಬೆಂಗಳೂರು ರೀತಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎಂಬುದು ತಮ್ಮ ಕನಸಾಗಿದ್ದು, ಇದಕ್ಕಾಗಿ ಶಕ್ತಿಮೀರಿ ಶ್ರಮಿಸುವುದಾಗಿ ನೂತನ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ತಮ್ಮನ್ನು ಭೇಟಿ ಮಾಡಿ ಅಭಿನಂದಿಸಿದ ಬೀದರ್ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಬಸವಾದಿ ಶರಣರ ನಾಡು ಬೀದರ್ ತೀವ್ರ ಹಿಂದುಳಿದಿದೆ. ಈ ಪ್ರದೇಶ ಔದ್ಯೋಗಿಕವಾಗಿ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಸಾಧಿಸಬೇಕು. ಈ ನಿಟ್ಟಿನಲ್ಲಿ ಎಲ್ಲರ ಪೂರ್ಣ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುವುದಾಗಿ ಹೇಳಿದರು.
ರಾಜ್ಯ ಸರ್ಕಾರ ಜನಪರವಾಗಿದ್ದು, ಶೋಷಿತರು, ವಂಚಿತರು, ದುರ್ಬಲರು, ದಲಿತರು, ಹಿಂದುಳಿದವರನ್ನು ಮೇಲೆತ್ತಲು ಹಗಲಿರುಳು ದುಡಿಯುತ್ತಿದೆ. ಕಳೆದ 3 ವರ್ಷ ಜೀವಪರ ಮತ್ತು ಜನಪರ ಆಡಳಿತ ನೀಡಿದ್ದು, ಮುಂದಿನ 2 ವರ್ಷವೂ ಉತ್ತಮ ಆಡಳಿತ ನೀಡಿ ಜನಮೆಚ್ಚುಗೆ ಗಳಿಸಿ 2028ರಲ್ಲಿ ಕಾಂಗ್ರೆಸ್ ಪಕ್ಷ ಮರಳಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬೀದರ್ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಇಲ್ಲಿ ಪ್ರತಿಯೊಬ್ಬರೂ ಸೌಹಾರ್ದತೆಯಿಂದ ಮತ್ತು ಸಹಬಾಳ್ವೆ ನಡೆಸುತ್ತಿದ್ದಾರೆ. ಬೀದರ್ ಜನತೆ ತಮ್ಮ ಮೇಲೆ ಅಭಿಮಾನವಿಟ್ಟಿದ್ದಾರೆ. ಇವರೆಲ್ಲರ ಪ್ರಾರ್ಥನೆಯ ಫಲವಾಗಿ ತಮಗೆ 3ನೇ ಬಾರಿಗೆ ಸಚಿವರಾಗಿ ಕಾರ್ಯ ನಿರ್ವಹಿಸುವ ಅವಕಾಶ ಸಿಕ್ಕಿದ್ದು, ರಾಜ್ಯದ ಸಮಸ್ತ ಜನತೆಗೆ ಮತ್ತು ಮುಖ್ಯಮಂತ್ರಿಗಳು ಹಾಗೂ ಪಕ್ಷದ ವರಿಷ್ಠರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಜನರ ಪ್ರೀತಿ ವಿಶ್ವಾಸ ತಮಗೆ ಸ್ಪೂರ್ತಿ, ಉತ್ಸಾಹ ತುಂಬುತ್ತಿದ್ದು, ಕೆಲಸ ಮಾಡಲು ಪ್ರೇರಣೆ ಮತ್ತು ಬಲ ನೀಡುತ್ತಿದೆ. ಜನರ ಕಷ್ಟಸುಖದಲ್ಲಿ ತಾವು ಸದಾ ಭಾಗಿಯಾಗುವುದಾಗಿ ಹೇಳಿದ ಅವರು ಅಧಿಕಾರ ಶಾಶ್ವತವಲ್ಲ, ಬರುತ್ತದೆ ಹೋಗುತ್ತದೆ. ಆದರೆ ರಾಜ್ಯದ ಜನರು ತೋರಿರುವ ಪ್ರೀತಿ, ವಿಶ್ವಾಸ ಅಜರಾಮರ ಎಂದರು.
