ಬೆಂಗಳೂರು:ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಭೂ ಗ್ಯಾರಂಟಿ ಯೋಜನೆಯಡಿ ಆರಂಭಿಸಿರುವ “ನನ್ನ ಇ-ಖಾತಾ, ನನ್ನ ಹಕ್ಕು” ಅಭಿಯಾನಕ್ಕೆ ನಾಗರಿಕರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ 50 ಸ್ಥಳಗಳಲ್ಲಿ ಆಯೋಜಿಸಲಾಗಿದ್ದ, ವಿಶೇಷ ಅಭಿಯಾನಕ್ಕೆ ಸಾರ್ವಜನಿಕರು ಭೇಟಿ ನೀಡಿ ಇ-ಖಾತಾ ಸಂಬಂಧಿತ ಸೇವೆಗಳ ಪ್ರಯೋಜನ ಪಡೆಯುತ್ತಿದ್ದಾರೆ.
ಈ ಅಭಿಯಾನದ ಮೂಲಕ ನಾಗರಿಕರಿಗೆ ಇ-ಖಾತಾ ಪಡೆಯುವ ಪ್ರಕ್ರಿಯೆಯನ್ನು ಸರಳ ಮತ್ತು ಸುಲಭಗೊಳಿಸಲಾಗಿದ್ದು, ಖಾತಾ ಸಂಬಂಧಿತ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲಾಗುತ್ತಿದೆ. ಶಿಬಿರಗಳಲ್ಲಿ ಅರ್ಜಿಗಳ ಪರಿಶೀಲನೆ, ದಾಖಲೆಗಳ ತಪಾಸಣೆ, ತಾಂತ್ರಿಕ ದೋಷಗಳ ನಿವಾರಣೆ, ಮಾಹಿತಿ ತಿದ್ದುಪಡಿ ಹಾಗೂ ಇತರೆ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಥಳದಲ್ಲಿಯೇ ಪರಿಹಾರ ನೀಡುತ್ತಿದ್ದಾರೆ.
ಅದಲ್ಲದೆ, ಇ-ಖಾತಾ ಕುರಿತು ನಾಗರಿಕರಲ್ಲಿ ಅರಿವು ಮೂಡಿಸುವ ಜೊತೆಗೆ ಅರ್ಜಿಗಳ ತ್ವರಿತ ವಿಲೇವಾರಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಾಗರಿಕರು ವಿವಿಧ ಕಚೇರಿಗಳಿಗೆ ಭೇಟಿ ನೀಡದೆ ಒಂದೇ ಸ್ಥಳದಲ್ಲಿ ಅಗತ್ಯ ಸೇವೆಗಳನ್ನು ಪಡೆಯುತ್ತಿರುವುದು ಅಭಿಯಾನದ ಪ್ರಮುಖ ವಿಶೇಷತೆಯಾಗಿದೆ.
“ನನ್ನ ಇ-ಖಾತಾ, ನನ್ನ ಹಕ್ಕು” ಅಭಿಯಾನವು ನಾಗರಿಕರ ಆಸ್ತಿ ದಾಖಲೆಗಳ ಡಿಜಿಟಲೀಕರಣಕ್ಕೆ ಉತ್ತೇಜನ ನೀಡುವುದರೊಂದಿಗೆ, ಪಾರದರ್ಶಕ ಮತ್ತು ಜನಸ್ನೇಹಿ ಆಡಳಿತದತ್ತ ಮಹತ್ವದ ಹೆಜ್ಜೆಯಾಗಿದೆ.
4 ವಾರಗಳಲ್ಲಿ 11,230 ಮಂದಿ ಅಭಿಯಾನ ಸ್ಥಳಗಳಿಗೆ ಭೇಟಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಗಳಲ್ಲಿ ರಾಜ್ಯ ಸರ್ಕಾರದ 6ನೇ ಗ್ಯಾರಂಟಿ “ಭೂ ಗ್ಯಾರಂಟಿ” ಯೋಜನೆಯಡಿ ಆರಂಭಿಸಿರುವ “ನನ್ನ ಇ-ಖಾತಾ ನನ್ನ ಹಕ್ಕು” ಅಭಿಯಾನದಲ್ಲಿ 4 ವಾರಗಳಲ್ಲಿ 11,230 ಮಂದಿ ಭೇಟಿ ನೀಡಿದ್ದಾರೆ. ಈ 4,447 ಅರ್ಜಿಗಳ ವಿಲೇವಾರಿ ಮಾಡಲಾಗಿದೆ.
ಇಂದು ನಡೆದ ನನ್ನ ಇ-ಖಾತಾ ನನ್ನ ಹಕ್ಕು ಅಭಿಯಾನಕ್ಕೆ ಇ-ಖಾತಾ, ಮ್ಯುಟೆಷನ್, ತಿದ್ದುಪಡಿ, ಹೊಸ ಇ-ಖಾತಾ, ಬಿ ಟು ಎ ಖಾತಾ ಹಾಗೂ ದೂರುಗಳ ಅರ್ಜಿಗಳು ಸೇರಿದಂತೆ ಇತರೆ ವಿಷಯಗಳಿಗಾಗಿ 1,773 ಮಂದಿ ಭೇಟಿ ನೀಡಿದ್ದು, ಈ ಪೈಕಿ ಸ್ಥಳದಲ್ಲಿಯೇ 1,068 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.
ನಾಗರಿಕರೇ ಸ್ವತಃ ಅರ್ಜಿ ಸಲ್ಲಿಸಿ:
ಬಿ ಖಾತಾ ದಿಂದ ಎ ಖಾತಾ ಪರಿವರ್ತನೆ ಮಾಡಿಕೊಳ್ಳುವ ಕುರಿತು ಕನ್ನಡ ಹಾಗೂ ಇಂಗ್ಲೀಷ್ ನಲ್ಲಿರುವ ವೀಡಿಯೋವನ್ನು ಯುಟ್ಯೂಬ್ [ https://youtube.com/@revenuebmp?si=tc1soT4EJ4sYhO5j ] ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಅದನ್ನು ವೀಕ್ಷಿಸುವ ಮೂಲಕ ಖಾತಾಗೆ ಅರ್ಜಿಸಲ್ಲಿಸುವ ಜಾಲತಾಣಕ್ಕೆ https://bbmpeaasthi.karnataka.gov.in/ ಭೇಟಿ ನೀಡುವ ಮೂಲಕ ತಾವೇ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ನಿಮ್ಮ ಮನೆ ಬಾಗಿಲಿಗೆ ಜನಸೇವಕ:
ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ, ಹೊಸ ಖಾತಾ, ಬಿ ಟು ಎ ಖಾತಾ ಮಾಡಿಕೊಳ್ಳಲು ಸಮಸ್ಯೆ ಆಗುತ್ತಿದೆಯೇ, ಹಾಗಾದಲ್ಲಿ ನೀವು ಜನಸೇವರನ್ನು ಸಂಪರ್ಕಿಸಿದರೆ, ಅವರು ನಿಮ್ಮ ಮನೆ ಬಾಗಿಲಿಗೆ ಬಂದು ಅರ್ಜಿಯನ್ನು ಸಲ್ಲಿಸಲ್ಲಿದ್ದಾರೆ. ವೆಬ್‌ಸೈಟ್ https://www.janasevaka.karnataka.gov.in/SlotBooking ಅಥವಾ ದೂರವಾಣಿ ಸಂಖ್ಯೆ 080-4920388 ಗೆ ಕರೆ ಮಾಡಿ ಸ್ಲಾಟ್ ಅನ್ನು ಬುಕ್ ಮಾಡಿಕೊಳ್ಳಬಹುದು. ಜನಸೇವಕರು ನಿಮ್ಮ ಬಾಗಿಲಿಗೆ ಬಂದು ಅರ್ಜಿ ಸಲ್ಲಿಸಲು 160 ರೂ. ಪಾವತಿಸಬೇಕಾಗುತ್ತದೆ.
ಬೆಂಗಳೂರು ಒನ್ ಕೇಂದ್ರಗಳಲ್ಲೂ ಸೌಲಭ್ಯ:
ಜಿಬಿಎ ವ್ಯಾಪ್ತಿಯಲ್ಲಿ 140 ಬೆಂಗಳೂರು ಒನ್ ಕೇಂದ್ರಗಳು ಬರಲಿದ್ದು, ನಿಮ್ಮ ಹತ್ತಿರದ ಬೆಂಗಳೂರು ಒನ್ ಕೇಂದ್ರ [https://gba.karnataka.gov.in/files/B1centres.pdf ಕ್ಕೆ ಭೇಟಿ ನೀಡಿ 45 ರೂ. ಪಾವತಿಸಿ ಇ-ಖಾತಾಗೆ ಅರ್ಜಿ ಸಲ್ಲಿಸಬಹುದಾಗಿದೆ.
