ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಾಗಿ ಐ.ಎ.ಎಸ್ ಅಧಿಕಾರಿ ಜಿ.ಜಗದೀಶ ಅವರು ಇಂದು ಎಂ.ಜಿ. ರಸ್ತೆಯ ಪಿ.ಯು.ಬಿ ಕಟ್ಟಡದಲ್ಲಿನ ಆಯುಕ್ತರ ಕಛೇರಿಯಲ್ಲಿ ಅಧಿಕಾರ ವಹಿಸಿಕೊಂಡರು.
ಅಧಿಕಾರ ಸ್ವೀಕಾರ ಮಾಡಿದ ತದನಂತರ ಆಯುಕ್ತರ ಕಛೇರಿ ಸಭಾಂಗಣದಲ್ಲಿ ಅಧಿಕಾರಿಗಳ ಪರಿಚಯ ಹಾಗೂ ಕೇಂದ್ರ ನಗರ ಪಾಲಿಕೆಯ ವಿವಿಧ ವಿಭಾಗವಾರು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ, ನಾಗರೀಕರಿಗೆ ನೀಡಲಾಗುತ್ತಿರುವ ಸೇವೆಗಳ ಗುಣಮಟ್ಟ, ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಸಮಗ್ರವಾಗಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಇಲಾಖೆಗಳ ನಡುವಿನ ಸಮನ್ವಯವನ್ನು ಮತ್ತಷ್ಟು ಬಲಪಡಿಸಿ, ಸಾರ್ವಜನಿಕರಿಗೆ ತ್ವರಿತ ಹಾಗೂ ಪರಿಣಾಮಕಾರಿ ಸೇವೆಗಳನ್ನು ಒದಗಿಸಲು ಎಲ್ಲರೂ ಕಾನೂನಿನ ಚೌಕಟ್ಟಿನಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಲು ಸೂಚನೆ ನೀಡಿದರು.
ಪಾರ್ಕ್ ಗಳಿಗೆ ಮಕ್ಕಳು, ಹಿರಿಯ ನಾಗರೀಕರು, ಮಹಿಳೆಯರು, ಸಾರ್ವಜನಿಕರು ವಾಯುವಿಹಾರಕ್ಕೆ ಆಗಮಿಸುತ್ತಾರೆ. ಅವರಿಗೆ ನಡಿಗೆದಾರರ ಸ್ನೇಹಿ (Walker friendly) ಪಾರ್ಕ್ ಗಳನ್ನಾಗಿ ರೂಪಿಸುವುದು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಶೇ. 100% ರಷ್ಟು ಗುರಿ ಸಾಧನೆಗೆ ತ್ವರಿತ ಕ್ರಮ ವಹಿಸುವುದು ಈ ನಿಟ್ಟಿನಲ್ಲಿ ಅಗತ್ಯ ತರಬೇತಿ ಏರ್ಪಡಿಸಲು ಸೂಚನೆ ನೀಡಿದರು.
ಮಾರುಕಟ್ಟೆ ಸೇರಿದಂತೆ ಬಾಡಿಗೆ ಪಾವತಿ ಮಾಡದ ಮಳಿಗೆಗಳನ್ನು / ಸ್ವತ್ತುಗಳನ್ನು ಖಾಲಿ ಮಾಡಿಸಿ ಬೀಗ ಹಾಕುವುದು. ತ್ಯಾಜ್ಯ ನಿರ್ವಹಣೆಗೆ ಸ್ವಚ್ಛತ ಸಿಬ್ಬಂದಿಗಳಿಗೆ ಹಾಜರಾತಿ ಕಡ್ಡಾಯಗೊಳಿಸಲು ಸೂಚಿಸಿದರು.
ಪ್ರತಿ ದಿನ ಮನೆ ಮನೆ ತ್ಯಾಜ್ಯ ಸಂಗ್ರಹಣೆ ಶೇ. 100 ಪ್ರಗತಿ ಸಾಧಿಸುವುದು. ತ್ಯಾಜ್ಯ ಕಪ್ಪು (ಬ್ಲ್ಯಾಕ್ ಸ್ಪಾಟ್) ಚುಕ್ಕೆಗಳ ಶಾಶ್ವತವಾಗಿ ನಿರ್ಮೂಲನೆಗೆ ಸೂಚನೆ ನೀಡಿದರು.
ನಾವೆಲ್ಲರೂ ಸಾರ್ವಜನಿಕರ ಸೇವಕರಾಗಿದ್ದು, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಲು ಹಾಗೂ ಅವರ ಕುಂದುಕೊರತೆಗಳನ್ನು ತ್ವರಿತವಾಗಿ ಪರಿಹರಿಸಲು ನಿರ್ದೇಶನ ನೀಡಿದರು.
ಸಭೆಯಲ್ಲಿ ಅಭಿವೃದ್ಧಿ ಅಪರ ಆಯುಕ್ತರಾದ ವೆಂಕಟಾಚಲಪತಿ, ಕಂದಾಯ ಅಪರ ಆಯುಕ್ತರಾದ ಕೆ. ರಂಗನಾಥ್, ಜಂಟಿ ಆಯುಕ್ತರಾದ ಹೇಮಂತ್ ಶರಣ್, ಮುಖ್ಯ ಇಂಜಿನಿಯರ್ ವಿಜಯ್ ಕುಮಾರ್ ಹರಿದಾಸ್, ಹೇಮಲತಾ, ನಗರ ಯೋಜನೆ ಜಂಟಿ ನಿರ್ದೇಶಕರು, ಆರೋಗ್ಯಾಧಿಕಾರಿ ಶಿವಕುಮಾರ್, ಹಣಕಾಸು ಉಪ ನಿಯಂತ್ರಕರಾದ ವಿಜಯಲಕ್ಷ್ಮಿ, ಅರಣ್ಯ, ತೋಟಗಾರಿಕೆ, ಪಶು ಸಂಗೋಪನೆ, ಶಿಕ್ಷಣ, ಕಂದಾಯ, ವಿಭಾಗದ ಅಧಿಕಾರಿಗಳು ಹಾಜರಿದ್ದರು.
