ಸಮಗ್ರ ಸುದ್ದಿ

ಶೌಚಗುಂಡಿ ಸ್ವಚ್ಛತೆಗೆ ಯಂತ್ರ ಬಳಸಲು ಈಶ್ವರ ಖಂಡ್ರೆ ಸೂಚನೆ | ಪಂಚಾಯ್ತಿಯ ಎಲ್ಲ ಸರ್ಕಾರಿ ಆಸ್ತಿ ಜಿಯೋಟ್ಯಾಗ್ ಗೆ ಈಶ್ವರ ಖಂಡ್ರೆ ಸೂಚನೆ

Share

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಮತ್ತು ಪಂಚಾಯ್ತಿ ಸೃಜಿಸಿರುವ ಎಲ್ಲ ಸರ್ಕಾರಿ ಆಸ್ತಿಗಳನ್ನು ಜಿಯೋಟ್ಯಾಗ್ ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ದೇವನಹಳ್ಳಿಯ ಜಿಲ್ಲಾ ಪಂಚಾಯ್ತಿ ಕಾರ್ಯಾಲಯದಲ್ಲಿಂದು ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿಗಳ ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಭೂಮಿಗೆ ಬಂಗಾರದ ಬೆಲೆ ಇದ್ದು, ಪಂಚಾಯ್ತಿಯ ಯಾವುದೇ ಆಸ್ತಿ ಕಬಳಿಕೆ ಆಗದಂತೆ ಮತ್ತು ಗುಣಮಟ್ಟದ ಖಾತ್ರಿಗೆ ಜಿಯೋ ಟ್ಯಾಗ್ ಮಾಡಲು ಸೂಚಿಸಿರುವುದಾಗಿ ಹೇಳಿದರು.

ರಾಜ್ಯದಲ್ಲಿ ಇಂದಿಗೂ 7483 ಶೌಚಗುಂಡಿ ಕಾರ್ಮಿಕರು (ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್) ಇದ್ದಾರೆ ಎಂದು ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ನೀಡಿರುವ ಹೇಳಿಕೆ ಉಲ್ಲೇಖಿಸಿದ ಸಚಿವರು, ಯಾವುದೇ ಮಲಗುಂಡಿಯ ಸ್ವಚ್ಛತೆಯನ್ನು ಯಾವುದೇ ಕರ್ಮಚಾರಿಯ ಕೈಯಿಂದ ಮಾಡಿಸಿದರೆ ನಿಯಮಾನುಸಾರ ಶಿಸ್ತುಕ್ರಮ ಜರುಗಿಸಲಾಗುವುದು, ಯಂತ್ರಗಳ ಮೂಲಕವೇ ಸ್ವಚ್ಛತೆ ಮಾಡಬೇಕೆಂದು ಸೂಚಿಸಲಾಗಿದ್ದು ಇದಕ್ಕಾಗಿ ಅಗತ್ಯವಿರುವ ಜೆಟ್ಟಿಂಗ್, ಸಕ್ಕಿಂಗ್ ಯಂತ್ರ ಖರೀದಿಸಲಾಗುವುದು ಎಂದರು.

ತಾವು ಈ ಹಿಂದೆ ಪೌರಾಡಳಿತ ಸಚಿವರಾಗಿದ್ದಾಗ ಮಲತ್ಯಾಜ್ಯ ಸಂಸ್ಕರಣಾ ಘಟಕ (ಎಫ್.ಎಸ್.ಟಿ.ಪಿ.) ನಿರ್ಮಿಸಲು ಯೋಜನೆ ರೂಪಿಸಿ, ದೇವನಹಳ್ಳಿಯಲ್ಲಿ ಕೂಡ ಒಂದು ಎಫ್.ಎಸ್.ಟಿ.ಪಿ. ಮಾಡಿದ್ದನ್ನು ಸ್ಮರಿಸಿದ ಈಶ್ವರ ಖಂಡ್ರೆ, ಈಗ ಪಂಚಾಯ್ತಿ ಮಟ್ಟದಲ್ಲೂ ಎಫ್.ಎಸ್.ಟಿ.ಪಿ. ನಿರ್ಮಿಸುವುದಾಗಿ ತಿಳಿಸಿದರು.

ಯುಪಿಎ ಕಾರ್ಯಕಾಲದಲ್ಲಿ ಜಾರಿಗೆ ತಂದ ನರೇಗಾದ ಬದಲಾದ ರೂಪವಾದ ವಿಬಿ ಜೀ ರಾಮ್ ಜೀಯನ್ನು ಜುಲೈ 1ರಿಂದ ಜಾರಿ ಮಾಡಬೇಕಾಗಿದ್ದು, ಕೇಂದ್ರ ಸರ್ಕಾರ ಯೋಜನೆಯ ವೇತನಕ್ಕಾಗಿ ನೀಡುವ ಅನುದಾನವನ್ನು ಮನ್ರೇಗಾದಲ್ಲಿದ್ದ 90:10 ಅನುಪಾತದಲ್ಲಿಯೇ ನೀಡಬೇಕು, ಇಲ್ಲವೇ ಕನಿಷ್ಠ 80:20 ಅನುಪಾತಕ್ಕಾದರೂ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿರುವುದಾಗಿ ತಿಳಿಸಿದರು.

ಇದೇ ತಿಂಗಳ 28 ಮತ್ತು 29ರಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರು ಕರೆದಿರುವ ಸಭೆಯಲ್ಲಿ ಭಾಗಿಯಾಗಿ ಯೋಜನೆಯಡಿ ಯಾವ ಕಾಮಗಾರಿ ನಡೆಸಬೇಕು ಎನ್ನುವ ಸ್ವಾತಂತ್ರ್ಯರಾಜ್ಯಗಳಿಗೆ ಇರಬೇಕು, 60 ದಿನಗಳ ಕೆಲಸಕ್ಕೆ ನೀಡಿರುವ ಬಿಡುವು ಕೈ ಬಿಡಬೇಕು ಹಾಗೂ ಕರ್ನಾಟಕ ಈಗಾಗಲೇ ಕನಿಷ್ಠ ವೇತನ ಹೆಚ್ಚಳಕ್ಕೆ ನಿರ್ಣಯ ಕೈಗೊಂಡಿರುವ ಹಿನ್ನೆಲೆಯಲ್ಲಿ ವಿಬಿಜೀ ರಾಮ್ ಜೀಯ ವೇತನವನ್ನು ಅದಕ್ಕೆ ಸರಿದೂಗಿಸುವ ರೀತಿಯಲ್ಲಿ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಲಾಗುವುದು ಎಂದರು.

ಇಸ್ವತ್ತು ಪಡೆಯುವಲ್ಲಿ ಇರುವ ಸರ್ವರ್ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದರ ಜೊತೆಗೆ ಪೂರ್ವಜರಿಂದ ಬಂದ ಆಸ್ತಿಗೆ ಸಂಬಂಧಿಸಿದಂತೆ ಕೆಲವು ಗ್ರಾಮೀಣರ ಬಳಿ ಯಾವುದೇ ದಾಖಲೆ ಇಲ್ಲದ ಕಾರಣ ಅವರೆಲ್ಲರಿಗೂ ದಾಖಲೆಯ ವಿನಾಯಿತಿ ನೀಡಿ, ಸ್ವಾಧೀನಾನುಭವದ ಖಾತ್ರಿ ಪಡಿಸಿಕೊಂಡು ಆಸ್ತಿ ಹಕ್ಕು ನೀಡುವ ಕುರಿತಂತೆ ಪರಿಶೀಲಿಸಲಾಗುವುದು ಎಂದರು.
ಅವಧಿ ಮುಗಿದಿರುವ ಎಲ್ಲ ಪಂಚಾಯ್ತಿಗಳಿಗೆ ಚುನಾವಣೆ ನಡೆಸಲು ಇಲಾಖೆ ಈಗಾಗಲೇ ಕ್ರಮ ವಹಿಸಿದ್ದು, ಈ ವರ್ಷಾಂತ್ಯದೊಳಗೆ ಚುನಾವಣೆ ನಡೆದೇ ನಡೆಯುತ್ತದೆ, ಅಧಿಕಾರ ವಿಕೇಂದ್ರೀಕರಣದ ಉದ್ದೇಶವನ್ನು ಸರ್ಕಾರ ಈಡೇರಿಸುತ್ತದೆ ಎಂದರು.

ಜಲಜೀವನ ಅಭಿಯಾನದ ಅಡಿಯಲ್ಲಿ ಕೊಳವೆ ಅಳವಡಿಸಲು ಅಗೆದಿರುವ ರಸ್ತೆಯನ್ನು ಮರು ಅಭಿವೃದ್ಧಿ ಪಡಿಸದೇ ಇರುವ ಕಾರಣ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಏನು ಕ್ರಮ ವಹಿಸುತ್ತೀರಿ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ಅಧಿಕಾರಿಗಳಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ಪಷ್ಟ ಸೂಚನೆ ನೀಡುವುದಾಗಿ ತಿಳಿಸಿದರು.

ನಂತರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗಿಯಾದ ಈಶ್ವರ ಖಂಡ್ರೆ, ನೀರಿನ ಕೊಳವೆ ಅಳವಡಿಸಲು ಅಗೆದಿರುವ ರಸ್ತೆಗಳ ಪರಿಶೀಲನೆ ನಡೆಸಿ ಸಂಚಾರಕ್ಕೆ ಅಡ್ಡಿ ಆಗದ ರೀತಿಯಲ್ಲಿ ತುರ್ತು ಕ್ರಮ ವಹಿಸಲು ಮತ್ತು ಎಷ್ಟು ಗ್ರಾಮಗಳಲ್ಲಿ ಹರ್ ಘರ್ ಜಲ್ ವರದಿ ಮಾಡಲಾಗಿದೆ. ಎಷ್ಟು ಪ್ರಮಾಣಪತ್ರ ಆಗಿದೆ ಎಂಬ ಸ್ಪಷ್ಟ ಮಾಹಿತಿ ಒದಗಿಸಲು ಸೂಚಿಸಿದರು.
ಜಲ ಜೀವನ್ ಮಿಷನ್ ಮತ್ತು ರಸ್ತೆ ಅಭಿವೃದ್ಧಿ ಸೇರಿದಂತೆ ಯಾವುದೇ ಕಾಮಗಾರಿಯಲ್ಲಿ ಯಾರೇ ಗುತ್ತಿಗೆದಾರರು ವಿಳಂಬ ಮಾಡಿದ್ದರೆ, ನೋಟಿಸ್ ಜಾರಿ ಮಾಡಿ, ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸುವಂತೆ ತಿಳಿಸಿದರು.

ಎಲ್ಲ ನಾಗರಿಕತೆಗಳೂ ಹುಟ್ಟಿರುವುದು ನದಿ ಮತ್ತು ಜಲ ಮೂಲಗಳ ತಟದಲ್ಲಿ. ಮನುಷ್ಯ ನೀರಿಲ್ಲದೆ ಬದುಕಲು ಸಾಧ್ಯವಿಲ್ಲ. ಹೀಗಾಗಿ ಕುಡಿಯುವ ನೀರಿನ ಪೂರೈಗೆಕೆ ಒತ್ತು ನೀಡುವಂತೆ ಹಾಗೂ ಯಾವುದೇ ಜಲ ಮೂಲದಲ್ಲಾಗಲೀ, ಕೊಳವೆ ಮಾರ್ಗದಲ್ಲಾಗಲಿ ಕಲುಷಿತ ನೀರು ಸೋರಿಕೆ ಆಗದಂತೆ ಕಟ್ಟೆಚ್ಚರ ವಹಿಸಲು, ಸೋರಿಕೆ ಇದ್ದರೆ ಪರಿಶೀಲಿಸಿ ಎನ್ ಕೇಸಿಂಗ್ ಮಾಡುವಂತೆ ಸೂಚಿಸಿದರು.

ಕೊಳವೆ ಬಾವಿಯಿಂದ ಪೂರೈಸುವ ನೀರಿನ ಗುಣಮಟ್ಟದ ಪರೀಕ್ಷೆ ನಡೆಸಿ ಪ್ಲೊರೈಡ್ ಸೇರಿದಂತೆ ಯಾವುದೇ ಅಪಾಯಕಾರಿ ಅಂಶಗಳಿದ್ದರೆ ಕೂಡಲೇ ಸೂಕ್ತ ಕ್ರಮ ವಹಿಸುವಂತೆ ಸೂಚನೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಇಲಾಖೆಯ ಕಾರ್ಯದರ್ಶಿಗಳಾದ ಸಮೀರ್ ಶುಕ್ಲ, ರಂದೀಪ್, ಜಿಲ್ಲಾಧಿಕಾರಿ ಡಾ.ಕೆ.ಎನ್. ಅನೂರಾಧಾ ಮತ್ತು ಜಿಲ್ಲಾಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವಾಸಂತಿ ಅಮರ್ ಮತ್ತಿತರರು ಪಾಲ್ಗೊಂಡಿದ್ದರು.


Share

You cannot copy content of this page