ಸಮಗ್ರ ಸುದ್ದಿ

ಗ್ಯಾರಂಟಿ ಯೋಜನೆಗಳು ಅರ್ಹರಿಗೆ ತಲುಪಲು ಕ್ರಮ; ಬಿಪಿಎಲ್ ಆದಾಯ ಮಿತಿ ₹3 ಲಕ್ಷಕ್ಕೆ ಹೆಚ್ಚಿಸಲು ಚಿಂತನೆ: ಸಚಿವ ಕೆ.ಹೆಚ್. ಮುನಿಯಪ್ಪ

Share

​ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಹಾಗೂ ಯಾವುದೇ ಲೋಪವಿಲ್ಲದೆ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದರು.

​ಬೆಂಗಳೂರಿನಲ್ಲಿ ಇಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ. ರೇವಣ್ಣ ಅವರ ನೇತೃತ್ವದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

​ಉಚಿತ ಪಡಿತರ ಹಾಗೂ ಹಸಿವು ಮುಕ್ತ ರಾಜ್ಯ: ‘ಅನ್ನಭಾಗ್ಯ’ ಯೋಜನೆಯಡಿ ರಾಜ್ಯದ ಸುಮಾರು 4.42 ಕೋಟಿ ಫಲಾನುಭವಿಗಳಿಗೆ ತಲಾ 10 ಕೆಜಿ ಪಡಿತರ ಧಾನ್ಯ ವಿತರಿಸುವ ಮೂಲಕ ಸರ್ಕಾರವು ರಾಜ್ಯವನ್ನು ಹಸಿವು ಮುಕ್ತಗೊಳಿಸಲು ಶ್ರಮಿಸುತ್ತಿದೆ ಎಂದರು.

ಕಾಳಸಂತೆ ತಡೆಗೆ ತಂತ್ರಜ್ಞಾನದ ಸ್ಪರ್ಶ: ಪಡಿತರ ಅಕ್ರಮ ತಡೆಯಲು ಗೋದಾಮುಗಳಿಗೆ ಸಿಸಿಟಿವಿ ಕ್ಯಾಮೆರಾ ಹಾಗೂ ಪಡಿತರ ಸಾಗಣೆ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುತ್ತಿದೆ. ಇವುಗಳ ಮೇಲ್ವಿಚಾರಣೆಗೆ ಇಲಾಖೆಯ ಕೇಂದ್ರ ಕಚೇರಿಯಲ್ಲಿ ‘ಕಮಾಂಡ್ ಕಂಟ್ರೋಲ್ ರೂಂ’ ಸ್ಥಾಪಿಸಲಾಗುತ್ತಿದೆ.

ಬಿಪಿಎಲ್ ಆದಾಯ ಮಿತಿ ಏರಿಕೆ: ಬಿಪಿಎಲ್ ಕಾರ್ಡ್ ಪಡೆಯಲು ಪ್ರಸ್ತುತ ಇರುವ 1.20 ಲಕ್ಷ ರೂಪಾಯಿ ವಾರ್ಷಿಕ ಆದಾಯದ ಮಿತಿಯನ್ನು, ಆಡಳಿತಾತ್ಮಕ ಸುಧಾರಣಾ ಆಯೋಗದ ಶಿಫಾರಸಿನಂತೆ 3 ಲಕ್ಷ ರೂಪಾಯಿಗೆ ಹೆಚ್ಚಿಸಲು ಕ್ರಮ ವಹಿಸಲಾಗುತ್ತಿದೆ.

ಬಿಪಿಎಲ್ ಕಾರ್ಡ್ ರದ್ದು ಮಾಡಲ್ಲ: ಕೇಂದ್ರ ಸರ್ಕಾರದ ಮಾನದಂಡಗಳಂತೆ ಪಡಿತರ ಕಾರ್ಡ್‌ಗಳ ಪರಿಶೀಲನೆ ನಡೆಯುತ್ತಿದ್ದು, ಯಾವುದೇ ಅರ್ಹ ಕಾರ್ಡ್‌ಗಳನ್ನು ರದ್ದುಪಡಿಸುವುದಿಲ್ಲ. ಕೇವಲ ಅನರ್ಹ ಕಾರ್ಡ್‌ಗಳನ್ನು ಎಪಿಎಲ್‌ಗೆ ವರ್ಗಾಯಿಸಲಾಗುವುದು.

ಇಂದಿರಾ ಕಿಟ್ ಶೀಘ್ರ ವಿತರಣೆ: ಯೋಜನೆಗಾಗಿ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಮುಂದಿನ ಎರಡು ತಿಂಗಳಲ್ಲಿ ಇಂದಿರಾ ಕಿಟ್ ವಿತರಣೆ ಆರಂಭವಾಗಲಿದೆ. ಸುಮಾರು ₹6,000 ಕೋಟಿ ವೆಚ್ಚದ ಯೋಜನೆಯಾದ್ದರಿಂದ ಜಾಗರೂಕತೆಯಿಂದ ಪರಿಶೀಲನೆ ನಡೆಸಲಾಗುತ್ತಿದೆ.

ನ್ಯಾಯಬೆಲೆ ಅಂಗಡಿಗಳ ಸಮಯ ಹೆಚ್ಚಳ: ಸಾರ್ವಜನಿಕರ ಅನುಕೂಲಕ್ಕಾಗಿ ನ್ಯಾಯಬೆಲೆ ಅಂಗಡಿಗಳನ್ನು ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ತೆರೆದು ಪಡಿತರ ವಿತರಿಸಲು ಸೂಚಿಸಲಾಗಿದೆ. ಇದರಲ್ಲಿ ಲೋಪ ಕಂಡುಬಂದಲ್ಲಿ ಇಲಾಖೆಯ ಉಚಿತ ಸಹಾಯವಾಣಿ 1967 ಕ್ಕೆ ದೂರು ನೀಡಬಹುದು.

ಅಕ್ರಮಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಕಾಳಸಂತೆಗೆ ಪಡಿತರ ತಲುಪುವುದನ್ನು ತಡೆಯಲು ಇದುವರೆಗೆ 1,497 ಎಫ್‌ಐಆರ್ ದಾಖಲಿಸಲಾಗಿದ್ದು, ₹50 ಕೋಟಿ ಮೌಲ್ಯದ ಪಡಿತರವನ್ನು ವಶಪಡಿಸಿಕೊಳ್ಳಲಾಗಿದೆ.

ಇ-ಕೆವೈಸಿ ಸುಲಭೀಕರಣ: ‘ಕರ್ತವ್ಯ’ ಆ್ಯಪ್ ಮಾದರಿಯಲ್ಲಿ ಫಲಾನುಭವಿಗಳು ಸ್ವತಃ ತಮ್ಮ ಮೊಬೈಲ್ ಮೂಲಕವೇ ಇ-ಕೆವೈಸಿ (e-KYC) ಮಾಡಿಕೊಳ್ಳುವ ಅವಕಾಶ ಕಲ್ಪಿಸುವ ಬಗ್ಗೆ ಚರ್ಚಿಸಲಾಗಿದೆ.

ಖರೀದಿ ಮತ್ತು ಪರಿಶೀಲನೆ: ಎಂಎಸ್‌ಪಿ ಬೆಂಬಲ ಬೆಲೆ ಯೋಜನೆಯಡಿ 5.60 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಿ, ಶುದ್ಧೀಕರಿಸಿ ವಿತರಿಸಲಾಗುತ್ತಿದೆ. ಅಲ್ಲದೆ, ಕಾನೂನು ಮಾಪನ ಶಾಸ್ತ್ರ ಇಲಾಖೆಗೆ 33 ತಪಾಸಣಾ ವಾಹನಗಳನ್ನು ನೀಡಲಾಗಿದ್ದು, ಕಳೆದ 3 ವರ್ಷಗಳಲ್ಲಿ ₹250 ಕೋಟಿ ರಾಜಸ್ವ ಸಂಗ್ರಹಿಸಲಾಗಿದೆ.

​ಸಭೆಯಲ್ಲಿ ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡ, ಎಸ್.ಆರ್. ಪಾಟೀಲ್, ಪುಷ್ಪ ಅಮರನಾಥ್, ಮೆಹರೋಜ್ ಖಾನ್, ಕೃಷ್ಣಪ್ಪ, ರಮೇಶ್ ಕುಮಾರ್, ಆಹಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ, ಕಾರ್ಯದರ್ಶಿ ಕನಗವಲ್ಲಿ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page