ಸಮಗ್ರ ಸುದ್ದಿ

ಮೋದಿ ನೇತೃತ್ವದಲ್ಲಿ ಮನೆ ಮನೆಗೂ ತಲುಪಿದ ಕೇಂದ್ರದ ಯೋಜನೆಗಳು|ಮೋದಿ ಅವರ ನೇತೃತ್ವದಲ್ಲಿ ವಿಕಸಿತ ಭಾರತ ಸಾಕಾರ; ಹೆಚ್.ಡಿ.ಕುಮಾರಸ್ವಾಮಿ

Share

ಮಂಡ್ಯ:ಕಳೆದ 12 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ಪ್ರತಿಯೊಬ್ಬ ಪ್ರಜೆಯ ಮನೆಬಾಗಿಲಿಗೆ ಕೇಂದ್ರ ಸರ್ಕಾರದ ಯೋಜನೆಗಳು ತಲುಪಿವೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರತಿಪಾದಿಸಿದರು.

ನೇರ ನಗದು ವರ್ಗಾವಣೆ, ಯುಪಿಐ ಹಣ ವಹಿವಾಟು ಸೇರಿದಂತೆ ಅನೇಕ ಪರಿವರ್ತನಾತ್ಮಕ ಯೋಜನೆಗಳು ಜಾರಿಗೆ ಬಂದಿವೆ. ಅಲ್ಲದೆ ಕೇಂದ್ರ ಸರ್ಕಾರದಿಂದ ಜನರಿಗೆ ತಲುಪಬೇಕಾದ ಪ್ರತಿ ಪೈಸೆಯ ನೇರವಾಗಿ ಆಯಾ ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಆಗುತ್ತಿದೆ. ಇದು ಡಿಜಿಟಲ್ ಇಂಡಿಯಾದ ಶಕ್ತಿಯಾಗಿದೆ ಎಂದು ಸಚಿವರು ಹೇಳಿದರು.

ಚುನಾಯಿತ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಯಶಸ್ವಿಯಾಗಿ 12 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಮಂಡ್ಯದ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮಾತನಾಡಿದರು.

ಸ್ವತಂತ್ರ ಭಾರತದ ಇತಿಹಾಸದಲ್ಲೇ ಸುದೀರ್ಘ ಕಾಲ ದೇಶ ಮುನ್ನಡೆಸಿದ ಪ್ರಮುಖ ಚುನಾಯಿತ ಪ್ರಧಾನಿಗಳಲ್ಲಿ ಒಬ್ಬರಾಗಿ ಅವರು ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಜನಧನ್ ಖಾತೆಗಳನ್ನು ತೆರೆದು ಬ್ಯಾಂಕ್ ವಹಿವಾಟು ಗೊತ್ತಿಲ್ಲದ ಕೋಟ್ಯಂತರ ಜನರನ್ನು ಬ್ಯಾಂಕು ವಹಿವಾಟಿನ ವ್ಯಾಪ್ತಿಗೆ ತರಲಾಯಿತು ಎಂದು ಸಚಿವರು ಹೇಳಿದರು.

2014ರಲ್ಲಿ ಸುಮಾರು $2 ಟ್ರಿಲಿಯನ್ ಇದ್ದ ಭಾರತದ ಆರ್ಥಿಕತೆಯು, 2026 ರ ವೇಳೆಗೆ ಅಂದಾಜು $4.2 ಟ್ರಿಲಿಯನ್ ಜಿಡಿಪಿ ತಲುಪುವ ಮೂಲಕ ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿದೆ. ಇದು ಪ್ರಧಾನಿಗಳ ದೂರದೃಷ್ಟಿಯಿಂದ ಸಾಧ್ಯವಾಗಿದೆ. ಭಾರತವು ಈಗ ಜಗತ್ತಿನ ಬಲಿಷ್ಠ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿದೆ ಎಂದು ಹೇಳಿದರು.

ಭಾರತದ ಸ್ವದೇಶಿ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಯುಪಿಐ, ದೇಶದ ಮೂಲೆ ಮೂಲೆಗೂ ತಲುಪಿ ನಗದು ರಹಿತ ವಹಿವಾಟಿನಲ್ಲಿ ಜಾಗತಿಕ ದಾಖಲೆ ಬರೆದಿದೆ.
ಜನಧನ್ ಯೋಜನೆ ಮೂಲಕ ಬ್ಯಾಂಕಿಂಗ್ ಸೌಲಭ್ಯದಿಂದ ವಂಚಿತರಾಗಿದ್ದ ಬಡವರಿಗಾಗಿ 55 ಕೋಟಿಗೂ ಹೆಚ್ಚು ಶೂನ್ಯ ಠೇವಣಿ ಖಾತೆಗಳನ್ನು ತೆರೆಯಲಾಗಿದೆ. ಸರ್ಕಾರದ ಸಬ್ಸಿಡಿಗಳು ಮತ್ತು ಕಲ್ಯಾಣ ಯೋಜನೆಗಳ ಹಣವು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ. ಇದು ಭಾರತದಲ್ಲಿ ಪರಿವರ್ತನಾತ್ಮಕ ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದು ಕೇಂದ್ರ ಸಚಿವರು ಪ್ರತಿಪಾದಿಸಿದರು.

ಸಾಮಾಜಿಕ ಕಲ್ಯಾಣ ಮತ್ತು ಬಡವರ ಕಲ್ಯಾಣ ಯೋಜನೆಗಳ ಜಾರಿಯಲ್ಲಿಯೂ ನರೇಂದ್ರ ಮೋದಿಯವರು ಸದಾ ಮುಂದೆ ಇದ್ದಾರೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ದೇಶದ 81 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

ಸ್ವಚ್ಛ ಭಾರತ ಅಭಿಯಾನ ಪ್ರಧಾನಿಗಳ ಮಹತ್ವಕಾಂಕ್ಷೆಯ ಯೋಜನೆ ಆಗಿದ್ದು, ಕಳೆದ 12 ವರ್ಷಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ವಿಷಯದಲ್ಲಿ ಗುರುತರವಾದ ಬದಲಾವಣೆಯನ್ನು ನಾವು ನೋಡುತ್ತಿದ್ದೇವೆ ಎಂದು ಸಚಿವರು ನುಡಿದರು.

ಆಯುಷ್ಮಾನ್ ಭಾರತ್ ಜಗತ್ತಿನ ಅತಿ ದೊಡ್ಡ ಆರೋಗ್ಯ ವಿಮಾ ಯೋಜನೆ. ಇದರಡಿಯಲ್ಲಿ ದೇಶದ ಕೋಟ್ಯಂತರ ಜನರಿಗೆ ಉಚಿತ ವೈದ್ಯಕೀಯ ಚಿಕಿತ್ಸೆಯ ಸೌಲಭ್ಯ ಒದಗಿಸಲಾಗಿದೆ. ಬಡವರು ಬಹು ದೊಡ್ಡ ಪ್ರಮಾಣದಲ್ಲಿ ಈ ವಿಮಾ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ ಯೋಜನೆಯ ಮೂಲಕ ಕೈಗಾರಿಕೆ ಮತ್ತು ಉತ್ಪಾದನ ಕ್ಷೇತ್ರಕ್ಕೆ ನರೇಂದ್ರ ಮೋದಿ ಅವರು ಬಹುದೊಡ್ಡ ಕೊಡುಗೆ ನೀಡಿದ್ದಾರೆ. 2047ರ ವೇಳೆಗೆ ಭಾರತವನ್ನು ವಿಕಸಿತ ಭಾರತವನ್ನಾಗಿ ಪರಿವರ್ತಿಸುವ ಮಹಾನ್ ಕನಸನ್ನು ಪ್ರಧಾನಿಗಳು ಹೊಂದಿದ್ದು, ಅವರ ಕನಸು ನನಸಾಗುವ ನಿಟ್ಟಿನಲ್ಲಿ ನಾವೆಲ್ಲರೂ ಅವಿರತವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಸಚಿವ ಕುಮಾರಸ್ವಾಮಿ ಅವರು ನುಡಿದರು.

ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯ ಜೊತೆಗೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಜಿಲ್ಲೆಯ ಬಹುತೇಕ ಹಿರಿಯ ನಾಯಕರು, ಅಸಂಖ್ಯಾತ ಕಾರ್ಯಕರ್ತರು ಭಾಗಿಯಾಗಿದ್ದರು.


Share

You cannot copy content of this page