ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಮತದಾರರು ಭರ್ತಿ ಮಾಡಿದ ಗಣತಿ ನಮೂನೆಗಳನ್ನು ಕೂಡಲೇ ಹಿಂತಿರುಗಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ನಾಗರಿಕರಲ್ಲಿ ಮನವಿ ಮಾಡಿದರು.
ಜಿಬಿಎ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್.) ಸಂಬಂಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿರುವ 1,03,88,363 ಮತದಾರರಿಗೆ ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ತೆರಳಿ ಶೇ.100ರಷ್ಟು ಗಣತಿ ನಮೂನೆಗಳನ್ನು ವಿತರಿಸಿದ್ದಾರೆ. ಈ ಪೈಕಿ ಇದುವರೆಗೆ 50,19,442 (48.32%) ಮತದಾರರ ವಿವರಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಉಳಿದ ಮತದಾರರು ಸಹ ಭರ್ತಿ ಮಾಡಿದ ನಮೂನೆಗಳನ್ನು ಕೂಡಲೇ ಬಿಎಲ್‌ಒ ಅಥವಾ ಸೌಲಭ್ಯ ಕೇಂದ್ರಗಳಿಗೆ ಸಲ್ಲಿಸುವಂತೆ ಮನವಿ ಮಾಡಿದರು.
ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಮತದಾರರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸಾರ್ವಜನಿಕರು ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ, ಸಹಿ ಮಾಡಿದ ಗಣತಿ ನಮೂನೆಗಳನ್ನು ಯಾವುದೇ ವಿಳಂಬವಿಲ್ಲದೆ ಹಿಂತಿರುಗಿಸಬೇಕು. ಗಣತಿ ನಮೂನೆಗಳನ್ನು ಸಲ್ಲಿಸಲು ಆಗಸ್ಟ್ 8 ರವರೆಗೆ ಅವಕಾಶವಿದ್ದು, ಡಿಜಿಟಲೀಕರಣ ಕಾರ್ಯವನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕಿರುವುದರಿಂದ ಸಾರ್ವಜನಿಕರು ತುರ್ತಾಗಿ ನಮೂನೆಗಳನ್ನು ಬಿಎಲ್‌ಒಗಳಿಗೆ ಸಲ್ಲಿಸಬೇಕು ಎಂದು ಕೋರಿದರು.
ಗಣತಿ ನಮೂನೆಗಳನ್ನು ಹಿಂತಿರುಗಿಸದಿದ್ದಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕೈಬಿಡುವ ಸಾಧ್ಯತೆಯೂ ಇದೆ. ಮತದಾರರ ಅನುಕೂಲಕ್ಕಾಗಿ ಬೂತ್ ಮಟ್ಟದ ಕೇಂದ್ರಗಳು ಹಾಗೂ ಮತದಾರರ ಸೌಲಭ್ಯ ಕೇಂದ್ರಗಳನ್ನು ತೆರೆಯಲಾಗಿದ್ದು, ಅಲ್ಲಿಯೂ ನಮೂನೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.
ಒಂದು ಗಣತಿ ನಮೂನೆಯನ್ನು ಆನ್‌ಲೈನ್ ಮೂಲಕ ಡಿಜಿಟಲೀಕರಣ ಮಾಡಲು ಸರಿಸುಮಾರು 4ರಿಂದ 5 ನಿಮಿಷಗಳ ಕಾಲಾವಕಾಶ ಬೇಕಾಗುತ್ತದೆ. ಕೆಲವು ಮತಗಟ್ಟೆಗಳಲ್ಲಿ ಕಡಿಮೆ ಸಂಖ್ಯೆಯ ಗಣತಿ ನಮೂನೆಗಳು ಹಿಂದಿರುಗಿರುವುದನ್ನು ಗುರುತಿಸಿ, ಆ ಪ್ರದೇಶಗಳಿಗೆ ಬೂತ್ ಮಟ್ಟದ ಅಧಿಕಾರಿಗಳು ಮತ್ತೊಮ್ಮೆ ಭೇಟಿ ನೀಡಿ, ಮತದಾರರು ಗೈರುಹಾಜರಾಗಿರುವುದು, ಸ್ಥಳಾಂತರಗೊಂಡಿರುವುದು, ಮೃತಪಟ್ಟಿರುವುದು ಅಥವಾ ನಕಲು ದಾಖಲೆಗಳಿರುವ(ASDDO) ಕುರಿತು ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಕರಡು ಪ್ರಕಟವಾದ ಬಳಿಕ ನಮೂನೆ-6 ಮೂಲಕ ಅರ್ಜಿ ಸಲ್ಲಿಸಿ:
ವಿಶೇಷ ಸಮಗ್ರ ಪರಿಷ್ಕರಣೆಯ ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ, ತಮ್ಮ ಹೆಸರು ಕರಡು ಪಟ್ಟಿಯಲ್ಲಿ ಸೇರಿರುವುದನ್ನು ಮತದಾರರು ಖಚಿತಪಡಿಸಿಕೊಳ್ಳಬೇಕು. ಸ್ಥಳಾಂತರಗೊಂಡಿರುವ ಅಥವಾ ಕರಡು ಪಟ್ಟಿಯಲ್ಲಿ ಹೆಸರು ಇಲ್ಲದ ಮತದಾರರು ನಮೂನೆ-6 ರ ಮೂಲಕ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಹೊಸ ವಿಳಾಸದಲ್ಲಿ ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಆಟೋಗಳ ಮೂಲಕ ಜಾಗೃತಿ ಮೂಡಿಸಿ:
ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಎಲ್ಲ ಮತದಾರರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಹಾಗೂ ಭರ್ತಿ ಮಾಡಿದ ಗಣತಿ ನಮೂನೆಗಳನ್ನು ಕೂಡಲೇ ಹಿಂತಿರುಗಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು, ಎಲ್ಲಾ ನಗರ ಪಾಲಿಕೆಗಳಲ್ಲಿ ಧ್ವನಿವರ್ಧಕ ಹೊಂದಿದ ಆಟೋಗಳ ಮೂಲಕ ಜಾಗೃತಿ ಅಭಿಯಾನ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎಸ್.ಐ.ಆರ್. ಪ್ರಕ್ರಿಯೆಯ ವೇಳಾಪಟ್ಟಿ:
ಆಗಸ್ಟ್ 8, 2026 – ಬಿಎಲ್‌ಒಗಳ ಮನೆ-ಮನೆ ಭೇಟಿ ಹಾಗೂ ಗಣತಿ ನಮೂನೆ ಸಲ್ಲಿಸಲು ಕೊನೆಯ ದಿನ.
*ಆಗಸ್ಟ್ 17, 2026 – ಕರಡು ಮತದಾರರ ಪಟ್ಟಿ ಪ್ರಕಟ.
*ಆಗಸ್ಟ್ 17, 2026 ರಿಂದ ಸೆಪ್ಟೆಂಬರ್ 16, 2026– ಆಕ್ಷೇಪಣೆ ಮತ್ತು ಹಕ್ಕು-ದಾವೆ ಸಲ್ಲಿಸಲು ಅವಕಾಶ.
*ಅಕ್ಟೋಬರ್ 19, 2026 – ಅಂತಿಮ ಮತದಾರರ ಪಟ್ಟಿ ಪ್ರಕಟ.
ಸಭೆಯಲ್ಲಿ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಕೆ.ಎನ್., ಜಿ. ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ಜಗದೀಶ್ ನಾಯ್ಕ್, ಚುನಾವಣಾ ವಿಭಾಗದ ಜಂಟಿ ಆಯುಕ್ತ ವಿಜಯ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
