ಸಮಗ್ರ ಸುದ್ದಿ

ಮಿಮ್ಸ್ ನಲ್ಲಿ ನೂತನ ಲಿಫ್ಟ್, ಶೌಚಾಲಯ ಬ್ಲಾಕ್, ಮಕ್ಕಳ ಆಟದ ವಲಯ ಉದ್ಘಾಟಿಸಿದ ಹೆಚ್.ಡಿ.ಕುಮಾರಸ್ವಾಮಿ

Share

ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಮಿಮ್ಸ್) ಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅತ್ಯಾಧುನಿಕ ಲಿಫ್ಟ್, ನೂತನ ಶೌಚಾಲಯ ಬ್ಲಾಕ್, ಮಕ್ಕಳ ಚಿಕಿತ್ಸಾ ವಿಭಾಗದ ಕಟ್ಟಡದ ಮೇಲ್ಚಾವಣಿ ನವೀಕರಣ, ಮಕ್ಕಳ ಆಟದ ವಲಯ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಜಿಲ್ಲೆಯ ಜನತೆಗೆ ಸಮರ್ಪಿಸಿದರು.

ಕೇಂದ್ರ ಸರಕಾರದ ಬೃಹತ್ ಕೈಗಾರಿಕೆ ಸಚಿವಾಲಯದ ಅಧೀನದಲ್ಲಿರುವ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ವತಿಯಿಂದ ನೀಡಿರುವ ₹1.5 ಕೋಟಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಅನುದಾನದಲ್ಲಿ ಇವಿಷ್ಟು ಜನೋಪಕಾರಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, ಅಲ್ಲಾ ಯೋಜನೆಗಳನ್ನು ಸಚಿವರು ಜನಸೇವೆಗೆ ಮುಕ್ತಗೊಳಿಸಿದರು.

ಈ ಬಗ್ಗೆ ಮಾತನಾಡಿದ ಕೇಂದ್ರ ಸಚಿವರು; ಜಿಲ್ಲಾಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುವವರಿಗೆ ಬಹಳಷ್ಟು ಅನುಕೂಲವಾಗಲಿದೆ. ಆಸ್ಪತ್ರೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಕ್ರಮ ವಹಿಸಲಾಗುವುದು ಎಂದರು.

ಹಾಗೆಯೇ ಕೇಂದ್ರ ಸರ್ಕಾರವು15ನೇ ಹಣಕಾಸು ಆಯೋಗದ ಅನುದಾನದಲ್ಲಿ ₹1.17 ಕೋಟಿ ಅನುದಾನದಲ್ಲಿ ಮಂಡ್ಯ ನಗರಸಭೆಗೆ ನೀಡಲಾಗಿರುವ ಚಾರ್ಸಿ ಸ್ಲೀಪಿಂಗ್ ಮೌಂಟೆಡ್ ವಾಹನಕ್ಕೆ ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರು ಹಸಿರು ನಿಶಾನೆ ತೋರಿಸಿದರು.

ಸ್ವಚ್ಛ ಭಾರತ, ಸ್ವಚ್ಧ ಮಂಡ್ಯ ಅನ್ನುವ ಉದ್ದೇಶದೊಂದಿಗೆ ಈ ಉಪಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಮಂಡ್ಯದ ಸೌಂದರ್ಯ ಮತ್ತಷ್ಟು ಇಮ್ಮಿಡಿಸಲಿ ಎನ್ನುವುದು ನನ್ನ ಆಶಯ. ಪ್ರಧಾನಿಗಳಾದ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ ಮಂಡ್ಯವನ್ನು ಸ್ವಚ್ಛ, ಸುಂದರ ನಗರವನ್ನಾಗಿ ರೂಪಿಸಲು ನಾವು ಬದ್ಧರಾಗಿದ್ದೇವೆ ಎಂದು ಸಚಿವರು ಹೇಳಿದರು.

ಜಿಲ್ಲೆಯಲ್ಲಿ ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸುವುದು ಹಾಗೂ ಆಸ್ಪತ್ರೆಗಳ ಮೂಲಸೌಕರ್ಯಗಳನ್ನು ಹೆಚ್ಚು ಮುತುವರ್ಜಿ ವಹಿಸಿದ್ದೇವೆ. ಪ್ರಧಾನಿಗಳಾದ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ, ಕಳೆದ 12 ವರ್ಷಗಳ ಅವರ ಜನಪರ ಆಡಳಿತದಲ್ಲಿ ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ನಿರ್ಮಾಣ ಮತ್ತು ಸುಧಾರಣೆಗೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಗತ್ತಿನಲ್ಲಿಯೇ ಅತಿದೊಡ್ಡ ಆರೋಗ್ಯ ವಿಮಾ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ. ಆರೋಗ್ಯವಂತ ಮತ್ತು ಸಶಕ್ತ ಭಾರತ ನಿರ್ಮಾಣಕ್ಕೆ ಕೇಂದ್ರವು ಬದ್ಧವಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.


Share

You cannot copy content of this page