ಸಮಗ್ರ ಸುದ್ದಿ

ಕರ್ನಾಟಕದಲ್ಲಿ ‘ಕರ್ತವ್ಯ’ ಕ್ರಾಂತಿ: ಆಡಳಿತ ಸುಧಾರಣೆಗೆ ಸ್ವದೇಶಿ ಎಐ ತಂತ್ರಜ್ಞಾನದ ಹೊಸ ಹೆಜ್ಜೆ

Share

ಬೆಂಗಳೂರು:ರಾಜ್ಯ ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರವು ತನ್ನ ಅಧಿಕಾರಿ ಮತ್ತು ಸಿಬ್ಬಂದಿಗಳಿಗಾಗಿ ‘ಕರ್ತವ್ಯ’ (KAAMS – Karnataka Advanced Attendance Management System) ಎಂಬ ನೂತನ ಮುಂದುವರಿದ ಹಾಜರಾತಿ ನಿರ್ವಹಣಾ ತಂತ್ರಜ್ಞಾನವನ್ನು ಜಾರಿಗೆ ತಂದಿದೆ.

ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಇಲಾಖಾ ಕಾರ್ಯದರ್ಶಿಗಳೊಂದಿಗೆ ನಡೆಸಿದ ಮೊದಲ ಸಭೆಯಲ್ಲೇ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳು ಕಚೇರಿ ವೇಳೆಯಲ್ಲಿ ಕಡ್ಡಾಯವಾಗಿ 100% ಹಾಜರಿರಬೇಕು ಮತ್ತು ಸಾರ್ವಜನಿಕರ ಕುಂದುಕೊರತೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಖಡಕ್ ಸೂಚನೆ ನೀಡಿದ್ದರು.
ಈ ಹಿಂದೆ ಜಾರಿಯಲ್ಲಿದ್ದ ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಉದ್ಯೋಗಿಗಳು ಕೇವಲ ಡಿಜಿಟಲ್ ಸಹಿ ಮಾಡಿ ಕಚೇರಿಯಿಂದ ಗೈರಾಗುವ ಸಾಧ್ಯತೆಗಳಿದ್ದವು. ಈ ದೋಷವನ್ನು ನಿವಾರಿಸಲು, ಉದ್ಯೋಗಿಗಳ ಭೌತಿಕ ಉಪಸ್ಥಿತಿ ಮತ್ತು ಕಚೇರಿಯ ಭೌಗೋಳಿಕ ಸ್ಥಳವನ್ನು (Geographical Location) ನಿಖರವಾಗಿ ಪತ್ತೆಹಚ್ಚುವ ಈ ಹೊಸ ವ್ಯವಸ್ಥೆಯನ್ನು ರೂಪಿಸಲಾಗಿದೆ.

ಸಂಪೂರ್ಣ “ಮೇಡ್-ಇನ್-ಕರ್ನಾಟಕ” ಆವಿಷ್ಕಾರ:

ಯಾವುದೇ ಬಾಹ್ಯ ಖಾಸಗಿ ತಂತ್ರಜ್ಞಾನ ಸಂಸ್ಥೆಗಳ ನೆರವಿಲ್ಲದೆ, ಸಂಪೂರ್ಣವಾಗಿ ಸರ್ಕಾರದ ಪರಿಸರ ವ್ಯವಸ್ಥೆಯಲ್ಲೇ “ಕರ್ತವ್ಯ” ಸಾಫ್ಟ್‍ವೇರ್ ಅನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ) ಉಸ್ತುವಾರಿಯಲ್ಲಿ, ಸೆಂಟರ್ ಫಾರ್ ಇ-ಗವರ್ನೆನ್ಸ್ (CeG) ಮತ್ತು ಕರ್ನಾಟಕ ಎಐ ಸೆಲ್ (Karnataka AI Cell) ಜಂಟಿಯಾಗಿ ಇದನ್ನು ಸಿದ್ಧಪಡಿಸಿವೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ವೆಂಡರ್ ವೆಚ್ಚ ಉಳಿತಾಯವಾಗಿದ್ದು, ದತ್ತಾಂಶ ಸುರಕ್ಷತೆ ಮತ್ತು ಸ್ವಾಯತ್ತತೆ ಹೆಚ್ಚಾಗಿದೆ. ಕರ್ನಾಟಕದ ಈ ಯಶಸ್ವಿ ಮಾದರಿಯನ್ನು ದೇಶದ ಇತರೆ ರಾಜ್ಯಗಳೂ ಅಳವಡಿಸಿಕೊಳ್ಳಬಹುದಾಗಿದೆ.

ತಂತ್ರಜ್ಞಾನದ ಪ್ರಮುಖ ವೈಶಿಷ್ಟ್ಯಗಳು:

ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಮುಖ ಗುರುತಿಸುವಿಕೆ – ವಂಚನೆಯ ಹಾಜರಾತಿಯನ್ನು ತಡೆಯಲು ಲೈವ್‍ನೆಸ್ ಡಿಟೆಕ್ಷನ್ (Liveness Detection)  ತಂತ್ರಜ್ಞಾನದೊಂದಿಗೆ ಎಐ ಫೇಶಿಯಲ್ ರೆಕಗ್ನಿಷನ್ ಬಳಸಲಾಗಿದೆ.
ಜಿಯೋಫೆನ್ಸಿಂಗ್ (Geofencing) – ಜಿಐಎಸ್ ತಂತ್ರಜ್ಞಾನದ ಮೂಲಕ ಉದ್ಯೋಗಿ ತನ್ನ ಕಚೇರಿಯ ನಿಗದಿತ ಪರಿಧಿಯೊಳಗೆ ಇದ್ದಾಗ ಮಾತ್ರ ಹಾಜರಾತಿ ದಾಖಲಿಸಲು ಸಾಧ್ಯವಾಗುತ್ತದೆ.

**ಸಂಯೋಜಿತ ಡೇಟಾಬೇಸ್ **- ಇದನ್ನು ಆಧಾರ್ ಇ-ಕೆವೈಸಿ ಮತ್ತು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (ಹೆಚ್‍ಆರ್‍ಎಂಎಸ್) ಯೊಂದಿಗೆ ಸಂಯೋಜಿಸಲಾಗಿದೆ.
ಮೊಬೈಲ್ ಆಪ್ ಮತ್ತು ರಜೆ ನಿರ್ವಹಣೆ – ಆಂಡ್ರಾಯ್ಡ್ ಮತ್ತು ಐಒಎಸ್ ಆಪ್‍ಗಳ ಮೂಲಕ ಹಾಜರಾತಿ, ರಜೆ ಮತ್ತು ಅಧಿಕೃತ ಹೊರಗಿನ ಕೆಲಸದ (OOD) ವಿವರಗಳನ್ನು ದಾಖಲಿಸುವ ಸೌಲಭ್ಯವಿದೆ.

ಇಲಾಖೆಗಳಲ್ಲಿ ದಾಖಲೆ ವೇಗದ ಅನುಷ್ಠಾನ:

ಮುಖ್ಯಮಂತ್ರಿಗಳ ಕಟ್ಟುನಿಟ್ಟಿನ ಆದೇಶದ ಬೆನ್ನಲ್ಲೇ ಈ ತಂತ್ರಜ್ಞಾನವು ಇಲಾಖೆಗಳಲ್ಲಿ ಅತ್ಯಂತ ವೇಗವಾಗಿ ಅನುಷ್ಠಾನಗೊಳ್ಳುತ್ತಿದೆ.

ಪ್ರಸ್ತುತ 42 ಇಲಾಖೆಗಳ 4,78,522 ನೌಕರರನ್ನು ಈ ವ್ಯವಸ್ಥೆಗೆ ಒಳಪಡಿಸಲಾಗಿದ್ದು, ಈ ಪೈಕಿ 3.01 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ಕೇವಲ ಒಂದೇ ವಾರದಲ್ಲಿ ನೋಂದಣಿ ಪ್ರಕ್ರಿಯೆಯಲ್ಲಿ ಶೇಕಡಾ 25 ರಷ್ಟು ಅಭೂತಪೂರ್ವ ಪ್ರಗತಿ ಕಂಡುಬಂದಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆಗಳಲ್ಲಿ ಪ್ರಾಯೋಗಿಕವಾಗಿ ಯಶಸ್ವಿಯಾದ ನಂತರ, ಶಾಲಾ ಶಿಕ್ಷಣ ಇಲಾಖೆಯ ಸಿಬ್ಬಂದಿ ಇದನ್ನು ಸಕ್ರಿಯವಾಗಿ ಬಳಸುತ್ತಿದ್ದಾರೆ. ಇನ್ನುಳಿದ ಹಲವು ಇಲಾಖೆಗಳು ಈಗಾಗಲೇ ಶೇಕಡಾ 90 ಕ್ಕಿಂತ ಹೆಚ್ಚು ನೋಂದಣಿ ಮೈಲಿಗಲ್ಲನ್ನು ದಾಟಿವೆ.

ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳು ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು/ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ದಿನನಿತ್ಯ ಈ ವ್ಯವಸ್ಥೆಯ ಡ್ಯಾಶ್‍ಬೋರ್ಡ್ ಅನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಕಚೇರಿ ಅವಧಿಯಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ ಸಿಗದಿರುವ ಬಗ್ಗೆ ನಾಗರಿಕರು ನೀಡುವ ಪ್ರತಿಕ್ರಿಯೆ ಈ ಸುಶಾಸನದ ಗುರಿಯನ್ನು ತಲುಪಲು ಪ್ರಮುಖ ಪಾತ್ರ ವಹಿಸಲಿದೆ.

ಸಾರ್ವಜನಿಕರಿಗೆ ಸಿಗಲಿದೆ ಉತ್ತಮ ಸೇವೆ:

ಸಾಂಪ್ರದಾಯಿಕ ಬಯೋಮೆಟ್ರಿಕ್ ವ್ಯವಸ್ಥೆಯ ಕ್ಯೂ ನಿಲ್ಲುವ ಜಂಜಾಟದಿಂದ ನೌಕರರಿಗೆ ಮುಕ್ತಿ ಸಿಕ್ಕಿದ್ದು, ಸರ್ಕಾರಿ ನೌಕರರ ಸಂಘಟನೆಗಳಿಂದಲೂ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಚೇರಿಗಳಲ್ಲಿ ಅಧಿಕಾರಿಗಳ ಲಭ್ಯತೆ ಹೆಚ್ಚಾಗುವುದರಿಂದ ಸಾರ್ವಜನಿಕರಿಗೆ ಸರ್ಕಾರದ ಸೇವೆಗಳು ಇನ್ನು ಮುಂದೆ ತಡವಿಲ್ಲದೆ, ಅತ್ಯಂತ ಸುಲಭವಾಗಿ ಸಿಗಲಿವೆ ಎಂದು ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share

You cannot copy content of this page