ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಹಂಗಾಮು ಆರಂಭವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಸಮರ್ಪಕವಾಗಿ ಪೂರೈಸಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ನಡೆದ ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಮೀನುಗಾರಿಕೆ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಕೃತಿ ವೈಪರೀತ್ಯಗಳಾದ ಅತಿವೃಷ್ಟಿ ಮತ್ತು ಅನಾವೃಷ್ಟಿ ಎರಡನ್ನೂ ಎದುರಿಸಲು ಇಲಾಖೆಗಳು ಸರ್ವ ಸನ್ನದ್ಧವಾಗಿರಬೇಕು ಮತ್ತು ಬರ ಪರಿಸ್ಥಿತಿಯನ್ನು ನಿಭಾಯಿಸಲು ತುರ್ತು ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಡ್ಡಿ ರಹಿತ ಸಾಲ ದುರುಪಯೋಗಕ್ಕೆ ಬ್ರೇಕ್:
ಸಹಕಾರ ಇಲಾಖೆಯಡಿ ಕಾಸ್ಕಾರ್ಡ್ ಬ್ಯಾಂಕ್‌ಗಳು ನೀಡುವ 5 ಲಕ್ಷ ರೂಪಾಯಿವರೆಗಿನ ಬಡ್ಡಿ ರಹಿತ ಸಾಲದ ಸೌಲಭ್ಯವು ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಬ್ಯಾಂಕಿನವರೇ ತಮಗೆ ಬೇಕಾದವರ ಹೆಸರಿನಲ್ಲಿ ಸಾಲ ಪಡೆದು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ. ರೈತರಿಗೆ ಯಾವುದೇ ಕಾರಣಕ್ಕೂ ವಂಚನೆಯಾಗಬಾರದು. ಈ ಅಕ್ರಮಕ್ಕೆ ತಕ್ಷಣವೇ ಕಟ್ಟುನಿಟ್ಟಿನ ಬ್ರೇಕ್ ಹಾಕಿ, ಅಗತ್ಯವಿರುವ ನಿಜವಾದ ರೈತರಿಗೆ ಸಾಲ ಸಿಗುವಂತೆ ನೋಡಿಕೊಳ್ಳಬೇಕು ಎಂದು ಸಿಎಂ ಎಚ್ಚರಿಕೆ ನೀಡಿದರು.
ಕೃಷಿ ಹೊಂಡಗಳಿಗೆ ಬೇಲಿ ನಿರ್ಮಾಣ:
ಇತ್ತೀಚಿನ ದಿನಗಳಲ್ಲಿ ಕೃಷಿ ಹೊಂಡಗಳಿಗೆ ಬಿದ್ದು ಜನರು ಮತ್ತು ಜಾನುವಾರುಗಳು ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದನ್ನು ತಡೆಯಲು ಕೃಷಿ ಹೊಂಡಗಳಿಗೆ ಕಡ್ಡಾಯವಾಗಿ ಬೇಲಿ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಇದಕ್ಕೆ ಬೇಕಾಗುವ ಆರ್ಥಿಕ ನೆರವಿನ ಬಗ್ಗೆ ಸೂಕ್ತ ಯೋಜನೆ ರೂಪಿಸಿ ಚರ್ಚಿಸಬೇಕು. ಕೃಷಿ ಇಲಾಖೆ ಅಧೀನದಲ್ಲಿರುವ ಐದು ನಿಗಮ-ಮಂಡಳಿಗಳ ಸ್ಥಿತಿಗತಿ ಹಾಗೂ ರಾಜ್ಯದಲ್ಲಿರುವ ಕೋಲ್ಡ್ ಸ್ಟೋರೇಜ್ ಮತ್ತು ಗೋದಾಮುಗಳ ಪಟ್ಟಿಯನ್ನು ಒಳಗೊಂಡ ಸಮಗ್ರ ವರದಿ ನೀಡುವಂತೆ ಅವರು ಆದೇಶಿಸಿದರು.
ತಂತ್ರಜ್ಞಾನ ಮತ್ತು ಸೆಕೆಂಡರಿ ಕೃಷಿಗೆ ಒತ್ತು:
ರೈತರ ಆದಾಯವನ್ನು ದ್ವಿಗುಣಗೊಳಿಸಲು ಪ್ರಾಥಮಿಕ ಕೃಷಿಯ ಜೊತೆಗೆ ಸೆಕೆಂಡರಿ ಕೃಷಿ (ಉಪ ಕಸುಬುಗಳು) ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಕೃಷಿಯಲ್ಲಿ ಡ್ರೋನ್, ಕೃತಕ ಬುದ್ಧಿಮತ್ತೆ (AI) ನಂತಹ ಆಧುನಿಕ ತಂತ್ರಜ್ಞಾನಗಳನ್ನು ರೈತರಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು. ಇತರೆ ರಾಜ್ಯಗಳಲ್ಲಿರುವ ಯಶಸ್ವಿ ಕೃಷಿ ಮಾದರಿಗಳನ್ನು ಅಧ್ಯಯನ ಮಾಡಿ, ನಮ್ಮ ರಾಜ್ಯದ ಕೃಷಿ ಸಂಸ್ಕೃತಿಗೆ ಅನುಗುಣವಾಗಿ ಅಳವಡಿಸಿಕೊಳ್ಳಬೇಕು. ಹಾಗೆಯೇ ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.
ರಫ್ತು ಉತ್ತೇಜನ ಮತ್ತು ಮಾವು ಬೆಳೆಗಾರರಿಗೆ ಪರಿಹಾರ:
ರಾಜ್ಯದಿಂದ ಕೃಷಿ ಉತ್ಪನ್ನಗಳ ರಫ್ತು ಹೆಚ್ಚಿಸಲು ಮತ್ತು ರಫ್ತು ಉತ್ತೇಜನಕ್ಕೆ ಹೊಸ ಯೋಜನೆಗಳನ್ನು ರೂಪಿಸಲು ಸರ್ಕಾರದ ಆರ್ಥಿಕ ಸಲಹೆಗಾರರಾದ ಎಲ್.ಕೆ. ಅತೀಕ್ ಹಾಗೂ ಎಸಿಎಸ್ ತುಷಾರ ಗಿರಿನಾಥ್ ಅವರಿಗೆ ಸಿಎಂ ಸೂಚಿಸಿದರು. ಈ ವರ್ಷ ರಾಜ್ಯದಲ್ಲಿ ಸುಮಾರು 1,068 ಕೋಟಿ ರೂ. ಮೌಲ್ಯದ ಮಾವು ಬೆಳೆ ನಾಶವಾಗಿದ್ದು, ನಿಯಮಾವಳಿಗಳ ಪ್ರಕಾರ ಶೇ. 25 ರಷ್ಟು (229 ಕೋಟಿ ರೂ.) ಪರಿಹಾರವನ್ನು ಮಾವು ಬೆಳೆಗಾರರಿಗೆ ತಲುಪಿಸಬೇಕು. ಇದರಲ್ಲಿ ರಾಜ್ಯ ಸರ್ಕಾರ 114 ಕೋಟಿ ರೂ. ಹಾಗೂ ಕೇಂದ್ರ ಸರ್ಕಾರ 115 ಕೋಟಿ ರೂ. ನಷ್ಟ ಭರಿಸಬೇಕಾಗಿದ್ದು, ರೈತರಿಗೆ ಕಾನೂನುಬದ್ಧವಾಗಿ ಪರಿಹಾರ ಸಿಗುವಂತೆ ನೋಡಿಕೊಳ್ಳಲು ಸೂಚಿಸಿದರು. ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗಳ ಜಾರಿ ಕುರಿತು ವರದಿ ಪಡೆದು, ಕೇಂದ್ರದಿಂದ ಬರಬೇಕಾದ ಅನುದಾನಕ್ಕಾಗಿ ಒಟ್ಟಾಗಿ ಒತ್ತಡ ಹೇರೋಣ ಎಂದರು.
ಎಪಿಎಂಸಿ ಆಸ್ತಿ ರಕ್ಷಣೆ:
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (APMC) ಜಾಗಗಳು ಅತಿಕ್ರಮಣವಾಗದಂತೆ ಕಾಂಪೌಂಡ್ ನಿರ್ಮಿಸಿ ಸುರಕ್ಷತೆ ಒದಗಿಸಬೇಕು. ಎಪಿಎಂಸಿಗಳು ರೈತರ ಬಳಕೆಗೆ ಸರಿಯಾಗಿ ಸಿಗುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ ಹಾಗೂ ಆವರ್ತ ನಿಧಿಯನ್ನು (Revolving Fund) ಸದ್ಬಳಕೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
