ಸಮಗ್ರ ಸುದ್ದಿ

2024ರಲ್ಲಿ ನಡೆದಿದ್ದ ಸ್ಪರ್ಧಾತ್ಮಕ ಪರೀಕ್ಷೆ ಅಂತಿಮ ಪಟ್ಟಿ ಪ್ರಕಟಿಸಿ:ಈಶ್ವರ ಖಂಡ್ರೆ | ಕೆಪಿಎಸ್.ಸಿ. 150 ಪಿಡಿಓ ನೇಮಕಾತಿ ಶೀಘ್ರ ಪೂರ್ಣಗೊಳಿಸಲು ಸೂಚನೆ

Share

ಬೆಂಗಳೂರು: ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) 150 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಕರ್ನಾಟಕ ಲೋಕ ಸೇವಾ ಆಯೋಗದ ಕಾರ್ಯದರ್ಶಿಗಳಿಗೆ ತಿಳಿಸಿದ್ದಾರೆ.

ಕೆಪಿಎಸ್.ಸಿ. ಕಾರ್ಯದರ್ಶಿಗೆ ಕಳಿಸಿರುವ ಲಿಖಿತ ಸೂಚನೆಯಲ್ಲಿ ಅವರು, ಗ್ರಾಮೀಣ ಪ್ರದೇಶದ ಪ್ರಗತಿಯಲ್ಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದ್ದು, ಕಲ್ಯಾಣ ಕರ್ನಾಟಕ ವೃಂದದಲ್ಲಿ 97 ಹಾಗೂ ಉಳಿಕೆ ವೃಂದದಲ್ಲಿ 150 ಪಂಚಾಯ್ತಿ ಅಧಿಕಾರಿಗಳ ಹುದ್ದೆಗಳ ಭರ್ತಿಗೆ 2024ರಲ್ಲಿ ಅಧಿಸೂಚನೆ ಆಗಿದ್ದರೂ ಅಂತಿಮ ಪಟ್ಟಿ ಪ್ರಕಟಿಸದಿರುವ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಹಳ್ಳಿಗಳ ಆತ್ಮ ಗ್ರಾಮಗಳಲ್ಲಿದ್ದು, ಹಳ್ಳಿಗಳ ಅಭಿವೃದ್ಧಿಯಾದಾಗ ಮಾತ್ರವೇ ದೇಶದ ಅಭಿವೃದ್ಧಿ ಸಾಧ್ಯ ಎಂಬ ಮಹಾತ್ಮಾ ಗಾಂಧೀ ಅವರ ಮಾತುಗಳನ್ನು ಉಲ್ಲೇಖಿಸಿರುವ ಈಶ್ವರ ಖಂಡ್ರೆ, ಪಿಡಿಓಗಳ ನೇರ ನೇಮಕಾತಿ ಪ್ರಕ್ರಿಯೆ ನಡೆಸುವ ಸಂಬಂಧ ಕೆ.ಪಿ.ಎಸ್.ಸಿಗೆ 2024ರ ಮಾರ್ಚ್ 14ರಂದು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಸರ್ಕಾರ, ನೇಮಕಾತಿಯ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಮಾಡುವ ತೀರ್ಮಾನವನ್ನು ಕೈಗೊಂಡ ಹಿನ್ನೆಲೆಯಲ್ಲಿ 2024ರ ಸೆಪ್ಟೆಂಬರ್ 17ರಂದು ತಿದ್ದುಪಡಿ ಅಧಿಸೂಚನೆ ಹೊರಡಿಸಲಾಗಿದ್ದು, ಕಲ್ಯಾಣ ಕರ್ನಾಟಕ ವೃಂದದ 97 ಹುದ್ದೆಗಳಿಗೆ 2024 ನವೆಂಬರ್ 16 ಮತ್ತು 17ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಅಂತಿಮ ಆಯ್ಕೆ ಪಟ್ಟಿಯನ್ನು 2026ರ ಫೆಬ್ರವರಿ 20ರಂದು ಪ್ರಕಟಿಸಲಾಗಿರುತ್ತದೆ.
ಆದರೆ, ಉಳಿಕೆ ವೃಂದದ 150 ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು 2024ರ ಡಿಸೆಂಬರ್ 07 ಮತ್ತು 8ರಂದು ನಡೆಸಿದ್ದರೂ ಈವರೆಗೆ ಅಂತಿಮ ಪಟ್ಟಿ ಪ್ರಕಟಿಸಲಾಗಿರುವುದಿಲ್ಲ. ಹೀಗಾಗಿ ಕೂಡಲೇ ಅಂತಿಮ ಪಟ್ಟಿ ಪ್ರಕಟಿಸಿ ಎಂದು ತಿಳಿಸಿದ್ದಾರೆ.

ನೇಮಕಾತಿಯಲ್ಲಿನ ಈ ವಿಳಂಬದಿಂದಾಗಿ ಗ್ರಾಮೀಣಾಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅಡ್ಡಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಈಶ್ವರ ಖಂಡ್ರೆ ತಿಳಿಸಿದ್ದಾರೆ.


Share

You cannot copy content of this page