ಕಲಬುರಗಿ: ಕಲಬುರಗಿಯನ್ನು ಸ್ಮಾರ್ಟ್ ನಗರದ ಜೊತೆಗೆ ಸುಸ್ಥಿರ ಹಾಗೂ ಸಮಗ್ರ ಅಭಿವೃದ್ಧಿ ಹೊಂದಿದ ನಗರವನ್ನಾಗಿ ರೂಪಿಸುವ ಸಂಕಲ್ಪ ಮಾಡಲಾಗಿದೆ. ನಗರದ ಅಭಿವೃದ್ಧಿಗಾಗಿ ನೂತನ ನೀಲನಕ್ಷೆ ಸಿದ್ಧಪಡಿಸಲಾಗಿದ್ದು, ವಿದೇಶಿ ಬಂಡವಾಳ ಆಕರ್ಷಣೆ, ಉದ್ಯೋಗ ಸೃಷ್ಟಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಗೃಹ, ಐಟಿ-ಬಿಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ಗಂಜ್ ಪ್ರದೇಶದಲ್ಲಿರುವ ನಗರೇಶ್ವರ ಶಾಲಾ ಆವರಣದಲ್ಲಿ 71ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಇತ್ತೀಚೆಗೆ ರಾಜ್ಯ ಸರ್ಕಾರದ ವತಿಯಿಂದ ದಸರಾ ಮಹೋತ್ಸವಕ್ಕೆ 40ಕ್ಕೂ ಹೆಚ್ಚು ವಿದೇಶಿ ರಾಯಭಾರಿಗಳನ್ನು ಆಹ್ವಾನಿಸಲಾಗಿತ್ತು. ಈ ಸಂದರ್ಭದಲ್ಲಿ ಅವರೊಂದಿಗೆ ಸಂವಾದ ನಡೆಸುವ ಅವಕಾಶ ದೊರೆತಿತ್ತು. ಕರ್ನಾಟಕದ ಕಲೆ, ಸಾಹಿತ್ಯ, ಆಹಾರ ಮತ್ತು ಸಂಸ್ಕೃತಿಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡ ಭಾಷೆಗೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ ಎಂಬುದನ್ನು ತಿಳಿದು ವಿದೇಶಿ ಪ್ರತಿನಿಧಿಗಳು ಅಚ್ಚರಿ ವ್ಯಕ್ತಪಡಿಸಿದರು. ಕನ್ನಡದ ಸಾಹಿತ್ಯ ಪರಂಪರೆ, ರಾಜ್ಯದ ಇತಿಹಾಸ ಹಾಗೂ ವೈವಿಧ್ಯತೆಯ ಬಗ್ಗೆ ತಿಳಿದುಕೊಂಡು ಸಂತಸಪಟ್ಟರು ಎಂದು ಹೇಳಿದರು.
ಕನ್ನಡ ಕೇವಲ ಭಾಷೆಯಲ್ಲ, ಅದು ಭಾವನೆ, ಇತಿಹಾಸ, ವಿಚಾರ ಮತ್ತು ಆಚಾರಗಳ ಸಂಗಮವಾಗಿದೆ. ಜನಪದ, ದಾಸ, ಜೈನ, ನವೋದಯ, ನವ್ಯ ಹಾಗೂ ಬಂಡಾಯ ಸಾಹಿತ್ಯ ಸೇರಿದಂತೆ ವೈವಿಧ್ಯಮಯ ಸಾಹಿತ್ಯ ಪರಂಪರೆಯನ್ನು ಕನ್ನಡ ಹೊಂದಿದೆ. ಇಂತಹ ಶ್ರೀಮಂತ ಮತ್ತು ವೈವಿಧ್ಯಮಯ ಸಾಹಿತ್ಯ ಪರಂಪರೆ ಮತ್ತೊಂದು ಭಾಷೆಯಲ್ಲಿ ಕಾಣುವುದು ಅಪರೂಪ ಎಂದರು.
ಕರ್ನಾಟಕದ ವೈವಿಧ್ಯತೆಯನ್ನು ವಿವರಿಸಿದ ಅವರು, ಮಲೆನಾಡಿನ ಜನರಿಗೆ ಇದು ಹಸಿರಿನ ಸಿರಿ, ಕಲ್ಯಾಣ ಕರ್ನಾಟಕದ ಜನರಿಗೆ ತೊಗರಿಯ ಕಣಜ ಹಾಗೂ ಸೂಫಿ ಸಂತರ ನಾಡು, ಮಂಡ್ಯ ಭಾಗದವರಿಗೆ ರೇಷ್ಮೆ ಮತ್ತು ಹಾಲಿನ ನಾಡು, ಕರಾವಳಿ ಭಾಗದವರಿಗೆ ವಿಭಿನ್ನ ಸಂಸ್ಕೃತಿಯ ನೆಲೆ. ಸಾಹಿತಿಗಳಿಗೆ ಕಲೆ ಮತ್ತು ಸಾಂಸ್ಕೃತಿಕ ನಾಡು, ಬಸವಣ್ಣನವರ ಅನುಯಾಯಿಗಳಿಗೆ ಸಮಾನತೆಯ ಸಂದೇಶ ಸಾರಿದ ನೆಲ, ವಿಶ್ವದ ಜನರಿಗೆ ಜ್ಞಾನದ ನಾಡು, ಯುವಜನರಿಗೆ ಅವಕಾಶಗಳ ನಾಡು ಹಾಗೂ ವಿದೇಶಿಯರಿಗೆ ಮಾನವ ಸಂಪನ್ಮೂಲದ ಕೇಂದ್ರವಾಗಿದೆ. ಹೀಗಾಗಿ ಕರ್ನಾಟಕವು ರಾಷ್ಟ್ರದ ಆರ್ಥಿಕ ಪ್ರಗತಿಗೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.
ಯುವಜನರಿಗೆ ಅಗತ್ಯವಿರುವ ನೀತಿ-ನಿಯಮಗಳನ್ನು ರೂಪಿಸಿ, ಅವರ ಭವಿಷ್ಯಕ್ಕೆ ಅವಕಾಶಗಳನ್ನು ಕಲ್ಪಿಸುವ ಸಾಮರ್ಥ್ಯ ಕರ್ನಾಟಕಕ್ಕಿದೆ. ಯುವಜನರೇ ನಾಡಿನ ನಿಜವಾದ ಆಸ್ತಿ. ಕಲಬುರಗಿಯ ಅಭಿವೃದ್ಧಿಯಾಗಬೇಕಾದರೆ ಯುವಕರಿಗೆ ಗುಣಮಟ್ಟದ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳನ್ನು ಕಲ್ಪಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದರು.
ಕಲಬುರಗಿ ನಗರಕ್ಕೆ ಮಾಸ್ಟರ್ ಪ್ಲ್ಯಾನ್:
ಕಲಬುರಗಿಯ ಸಮಗ್ರ ಅಭಿವೃದ್ಧಿಗಾಗಿ ಕಳೆದ ವರ್ಷವೇ ನೂತನ ನೀಲನಕ್ಷೆ ರೂಪಿಸುವುದಾಗಿ ಘೋಷಿಸಿದ್ದೆ. ಇದೀಗ ನಗರಕ್ಕೆ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಲಾಗಿದ್ದು, ಸ್ಮಾರ್ಟ್ ಸಿಟಿ ಮಾದರಿಯಲ್ಲಿ ವಿದೇಶಿ ಬಂಡವಾಳ ಆಕರ್ಷಿಸುವುದು, ಉದ್ಯೋಗ ಸೃಷ್ಟಿಸುವುದು ಹಾಗೂ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಈ ಅಭಿವೃದ್ಧಿ ಯೋಜನೆಗಳ ಫಲಿತಾಂಶ ಕಣ್ಣಿಗೆ ಕಾಣುವಂತಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಯುವಕರಿಗೆ ನೆರವಾಗುವ ಉದ್ದೇಶದಿಂದ ಈಗಾಗಲೇ ಪ್ರಬುದ್ಧ ಅಕಾಡೆಮಿ ಸ್ಥಾಪಿಸಲಾಗಿದೆ. ಇದರ ಜೊತೆಗೆ ವಿಭಿನ್ನ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಉದ್ದೇಶದಿಂದ ಕಲಬುರಗಿ ನೆಕ್ಸ್ಟ್ ಫೌಂಡೇಶನ್ ಸ್ಥಾಪಿಸಲಾಗಿದೆ. ಖಾಸಗಿ ಸಹಭಾಗಿತ್ವದ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಹೇಗೆ ಪರಿಣಾಮಕಾರಿಯಾಗಿ ಕೈಗೊಳ್ಳಬಹುದು ಎಂಬುದಕ್ಕೆ ಈ ಸಂಸ್ಥೆ ಮಾದರಿಯಾಗಲಿದೆ ಎಂದರು.
ಇತ್ತೀಚೆಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅಪ್ಪ ಕೆರೆಯನ್ನು ಉದ್ಘಾಟಿಸಿದ್ದು, ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಪ್ರಯತ್ನಕ್ಕೆ ಇದು ಉತ್ತಮ ಉದಾಹರಣೆಯಾಗಿದೆ. ಕಲಬುರಗಿ ನೆಕ್ಸ್ಟ್ ಫೌಂಡೇಶನ್ ಮೂಲಕ ನಗರದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಕಲಬುರಗಿಯನ್ನು ಸ್ಮಾರ್ಟ್ ನಗರದ ಜೊತೆಗೆ ಸುಸ್ಥಿರ ನಗರವನ್ನಾಗಿ ರೂಪಿಸುವ ಹೊಣೆಗಾರಿಕೆ ಪ್ರತಿಯೊಬ್ಬ ನಾಗರಿಕರ ಮೇಲಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕದ ಆರ್ಥಿಕ ಪ್ರಗತಿಗೆ ಆದ್ಯತೆ:
ಕಲ್ಯಾಣ ಕರ್ನಾಟಕದ ಆರ್ಥಿಕ ಚೈತನ್ಯ ಹೆಚ್ಚಿಸುವ ಉದ್ದೇಶದಿಂದ ಕಳೆದ ಸೆಪ್ಟೆಂಬರ್ 17ರಂದು ಮುಖ್ಯಮಂತ್ರಿ ಅವರು ಕಲ್ಯಾಣ ಕರ್ನಾಟಕ ಎಕನಾಮಿಕ್ ಮಿಷನ್ ಘೋಷಿಸಿದ್ದಾರೆ. ರಾಜ್ಯದ ಒಟ್ಟು ಜಿಡಿಪಿಗೆ ಬೆಂಗಳೂರು ಸುಮಾರು ಶೇ. 40ರಷ್ಟು ಕೊಡುಗೆ ನೀಡುತ್ತಿದ್ದರೆ, ಕಲಬುರಗಿ ಜಿಲ್ಲೆಯ ಕೊಡುಗೆ ಶೇ. 1.9ರಷ್ಟಿದೆ. ಈ ಪ್ರಮಾಣವನ್ನು ಹೆಚ್ಚಿಸುವುದು ನಮ್ಮ ಗುರಿಯಾಗಿದೆ. ಉದ್ಯೋಗ ಸೃಷ್ಟಿ ಹೆಚ್ಚಾದಂತೆ ಜನರ ತಲಾ ಆದಾಯ ಹಾಗೂ ಜಿಲ್ಲೆಯ ಜಿಡಿಪಿಯೂ ಹೆಚ್ಚಾಗಲಿದೆ ಎಂದು ತಿಳಿಸಿದರು.
ಎಲೆಕ್ಟ್ರಾನಿಕ್ಸ್, ಟೆಕ್ಸ್ಟೈಲ್ಸ್ ಹಾಗೂ ಕಲ್ಯಾಣ ಕರ್ನಾಟಕ ಬಯೋ ಎಕನಾಮಿಕ್ ಮಿಷನ್ ಮೂಲಕ ಈ ಭಾಗದ ಆರ್ಥಿಕ ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ. ತಂತ್ರಜ್ಞಾನವನ್ನು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಬಳಸಿಕೊಳ್ಳುವುದು, ಸ್ಥಳೀಯ ಉತ್ಪನ್ನಗಳಾದ ಕಲಬುರಗಿ ತೊಗರಿ ಹಾಗೂ ಕಮಲಾಪುರ ಬಾಳೆಹಣ್ಣಿಗೆ ಹೆಚ್ಚಿನ ಮಾರುಕಟ್ಟೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ನಾಡಿನ ಸಾಹಿತ್ಯ, ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಇಂದಿನ ಮಕ್ಕಳು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು. ಇದಕ್ಕೆ ಪೂರಕವಾದ ವಾತಾವರಣ ನಿರ್ಮಿಸುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ವರ್ಷಕ್ಕೊಮ್ಮೆ ರಾಜ್ಯೋತ್ಸವ ಆಚರಿಸಿ ನಾಡಿನ ಪರಂಪರೆಯನ್ನು ಸ್ಮರಿಸುವುದಕ್ಕೆ ಮಾತ್ರ ಸೀಮಿತವಾಗದೆ, ಆ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವಾಗಬೇಕು ಎಂದು ಹೇಳಿದರು.
ಕಲಬುರಗಿಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಈ ಕಾರ್ಯ ಕೇವಲ ಜನಪ್ರತಿನಿಧಿಗಳ ಜವಾಬ್ದಾರಿಯಾಗದೆ ಅಧಿಕಾರಿಗಳು, ಶಿಕ್ಷಕರು, ಪತ್ರಕರ್ತರು ಹಾಗೂ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಸಾಗಬೇಕು. ಯುವಜನರನ್ನು ಸಂಘಟಿಸಿ, ಅವರಲ್ಲಿ ಕೌಶಲ್ಯ ಮತ್ತು ಸಾಮರ್ಥ್ಯ ಬೆಳೆಸುವ ಮೂಲಕ ಅಭಿವೃದ್ಧಿಯ ಪಯಣದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಶಶೀಲ್ ನಮೋಶಿ, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ, ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್, ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಶ್ರವಣಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಸಂಕನೂರ, ಕೆಕೆಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಬಿ. ಸುಶೀಲಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
