ಸಮಗ್ರ ಸುದ್ದಿ

ಎಸ್‌ಐಆರ್ ಕುರಿತ ಸ್ವೀಪ್ ಕಾರ್ಯಕ್ರಮಕ್ಕಾಗಿ ಪಾಲಿಕೆವಾರು ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ: ಮಹೇಶ್ವರ್ ರಾವ್

Share

ಬೆಂಗಳೂರು:ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಕುರಿತ ಸ್ವೀಪ್ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಪಾಲಿಕೆವಾರು ನೋಡಲ್ ಅಧಿಕಾರಿಗಳನ್ನು ನಿಯೋಜಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಬಿಎ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026 ಕುರಿತು ಸ್ವೀಪ್ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಇಂದು ನಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ವ್ಯಾಪಕ ಸ್ವೀಪ್ ಚಟುವಟಿಕೆಗಳನ್ನು ಕೈಗೊಂಡು ಮತದಾರರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಜೂನ್ 30 ರಿಂದ ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆ ಭೇಟಿ ನೀಡಲಿದ್ದು, ಎಲ್ಲಾ ಬಿಎಲ್.ಓ ಗಳು‌ ಕಡ್ಡಾಯವಾಗಿ ಗುರುತಿನ ಚೀಟಿಯೊಂದಿಗೆ ಮನೆ-ಮನೆ ಭೇಟಿ ನೀಡಲು ಸೂಚಿಸಿದರು‌.

ಸಾಮಾಜಿಕ ಜಾಲತಾಣಗಳು ಹಾಗೂ ವೆಬ್‌ಸೈಟ್‌ಗಳ ಮೂಲಕ ಎಸ್‌ಐಆರ್ ಕುರಿತು ನಿಖರ ಮಾಹಿತಿಯನ್ನು ನೀಡಬೇಕು. ಪಾಡ್‌ಕಾಸ್ಟ್, ಫೋನ್-ಇನ್ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಮೇಲ್ವಿಚಾರಣೆಗಾಗಿ ನೋಡಲ್ ಅಧಿಕಾರಿ ನಿಯೋಜನೆ:

ಸ್ವೀಪ್ ಚಟುವಟಿಕೆಗಳಿಗಾಗಿ ಪಾಲಿಕೆವಾರು ನೋಡಲ್ ಅಧಿಕಾರಿಗಳನ್ನು ನೇಮಿಸಿ, ಪ್ರತಿದಿನದ ಪ್ರಗತಿ ವರದಿಯನ್ನು ಸಲ್ಲಿಸಬೇಕು. ಜೊತೆಗೆ, ಪಾಲಿಕೆಗಳಲ್ಲಿ ನಡೆಯುವ ಸ್ವೀಪ್ ಚಟುವಟಿಕೆಗಳ ಮೇಲ್ವಿಚಾರಣೆಗಾಗಿ ಜಿಬಿಎ ಮಟ್ಟದಲ್ಲಿ ಒಬ್ಬ ನೋಡಲ್ ಅಧಿಕಾರಿಯನ್ನು ನಿಯೋಜಿಸಿ, ಜೂನ್ 30ರವರೆಗೆ ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸೂಚಿಸಲಾಯಿತು.

ರಾಜ್ಯ (ಮುಖ್ಯ ಚುನಾವಣಾಧಿಕಾರಿ-ಕರ್ನಾಟಕ) ಸ್ವೀಪ್ ನೋಡಲ್ ಅಧಿಕಾರಿ ವಸ್ತ್ರದ್ ಅವರು ಮಾತನಾಡಿ, ಎಸ್‌ಐಆರ್ ಕುರಿತು ಮತದಾರ ನೋಂದಣಾಧಿಕಾರಿಗಳು, ಬಿಎಲ್‌ಒಗಳು ಸೇರಿದಂತೆ ಎಲ್ಲ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದ್ದು, ನಿಗದಿತ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ ಎಂದರು. ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆಗಳನ್ನು ನಡೆಸಿ ಎಸ್‌ಐಆರ್ ಕುರಿತು ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ ಎಂದು ತಿಳಿಸಿದರು.

ಎಸ್‌ಐಆರ್‌ಗೆ ಸಂಬಂಧಿಸಿದ ನಿಖರ ಮಾಹಿತಿಯನ್ನು ಚುನಾವಣಾ ಆಯೋಗದ ಕಚೇರಿಯಿಂದಲೇ ಬಿಡುಗಡೆ ಮಾಡಲಾಗುವುದು. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು, ಆಕಾಶವಾಣಿ, ದೂರದರ್ಶನ ಹಾಗೂ ಇಲಾಖೆಯ ವೆಬ್‌ಸೈಟ್‌ಗಳ ಮೂಲಕ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು ಎಂದು ತಿಳಿಸಿದರು.

ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ:

ನಗರದಲ್ಲಿ ಪಾಲಿಕೆವಾರು ಜಾಗೃತಿ ರ‍್ಯಾಲಿಗಳು, ಮ್ಯಾರಥಾನ್, ಸೈಕ್ಲೋಥಾನ್, ಟ್ರೈಸೈಕಲ್ ಜಾಥಾ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಬೇಕು. ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು, ನರ್ಸಿಂಗ್ ಕಾಲೇಜುಗಳು, ಕ್ಲಬ್‌ಗಳು ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ನಾಮಫಲಕಗಳು ಹಾಗೂ ಘೋಷಣೆಗಳ ಮೂಲಕ ನಾಗರಿಕರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ವಿಶೇಷ ಚಟುವಟಿಕೆಗಳನ್ನು ಹಮ್ಮಿಕೊಳ್ಳಿ:

ಹಿರಿಯ ನಾಗರಿಕರು, ದಿವ್ಯಾಂಗರು, ಮಹಿಳಾ ಮತದಾರರು, ಆದಿವಾಸಿ ಸಮುದಾಯಗಳು, ವಲಸೆ ಜನರು, ನಿರಾಶ್ರಿತರು ಹಾಗೂ ದುರ್ಬಲ ವರ್ಗಗಳು, ಸೇವಾ ಮತದಾರರು ಮತ್ತು ಅವರ ಕುಟುಂಬ ಸದಸ್ಯರನ್ನು ತಲುಪುವ ಉದ್ದೇಶದಿಂದ ವಿಶೇಷ ಜಾಗೃತಿ ಹಾಗೂ ತಲುಪುವಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲ ವರ್ಗಗಳ ಸಕ್ರಿಯ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ವೆಬ್‌ಸೈಟ್‌ನಲ್ಲಿ ಮಾಹಿತಿ ಅಪ್‌ಲೋಡ್ ಮಾಡಿ:

ಸ್ವೀಪ್ ಚಟುವಟಿಕೆಗಳಿಗೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳ ಛಾಯಾಚಿತ್ರಗಳು ಹಾಗೂ ವಿಡಿಯೊಗಳನ್ನು CEOSVEEP.KARNATAKA.GOV.IN ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿ, ಮಾಹಿತಿಯನ್ನು ನಿರಂತರವಾಗಿ ನವೀಕರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.

ವಿಐಪಿಗಳ ಪಟ್ಟಿ ಸಿದ್ಧಪಡಿಸಿ:

ನಗರದ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ಸಿನಿಮಾ ರಂಗದ ಗಣ್ಯರು, ನ್ಯಾಯಾಧೀಶರು, ಕ್ರೀಡಾಪಟುಗಳು, ಮಾಧ್ಯಮ ಪ್ರತಿನಿಧಿಗಳು ಹಾಗೂ ಪ್ರಶಸ್ತಿ ಪುರಸ್ಕೃತರನ್ನು ಒಳಗೊಂಡ ವಿವಿಐಪಿಗಳ ಪಟ್ಟಿಯನ್ನು ಸಿದ್ಧಪಡಿಸಿ, ಅವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಆಯುಕ್ತರಾದ ಪೊಮ್ಮಲ್ ಸುನೀಲ್ ಕುಮಾರ್, ಜಗದೀಶ್, ರಮೇಶ್ ಕೆ.ಎನ್., ರಮೇಶ್ ಡಿ.ಎಸ್., ಡಾ. ರಾಜೇಂದ್ರ ಕೆ.ವಿ., ಅಪರ ಆಯುಕ್ತರು, ಮತದಾರ ನೋಂದಣಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page