ಬೆಂಗಳೂರು:ಡಿ.ಕೆ.ಶಿವಕುಮಾರ್ ಅವರು ಇನ್ನು ಕೇವಲ ಒಂದೂವರೆ ವರ್ಷ ಮುಖ್ಯಮಂತ್ರಿಯಾಗಿ ಇರುತ್ತಾರೆ. ಆದ್ದರಿಂದ ಬಿಡದಿ ಟೌನ್‌ಶಿಪ್ ಯೋಜನೆಯನ್ನು ಜಾರಿ ಮಾಡಲು ಅವರಿಗೆ ಸಾಧ್ಯವಾಗುವುದಿಲ್ಲ. ರೈತರ ಬೇಡಿಕೆಯನ್ನು ಪರಿಗಣಿಸಿ ಈ ಯೋಜನೆ ಕೈ ಬಿಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ಬಿಡದಿ ಟೌನ್‌ಶಿಪ್ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ರೈತರು ಹಾಗೂ ಹಾಲು ಉತ್ಪಾದಕರನ್ನು ಪ್ರತಿಪಕ್ಷ ನಾಯಕ ಆರ್.ಅಶೋಕ ಭೇಟಿ ಮಾಡಿ ಅಹವಾಲುಗಳನ್ನು ಆಲಿಸಿದರು.
ಬಳಿಕ ಮಾತನಾಡಿದ ಅವರು, ನಾನು ರಾಜಕೀಯ ಬದುಕಿನಲ್ಲಿ ಅನೇಕ ಕಡೆ ಪ್ರವಾಸ ಮಾಡಿದ್ದೇನೆ. ಆದರೆ ಬಿಡದಿಯಲ್ಲಿರುವಷ್ಟು ಹಸಿರು ಭೂಮಿ ಎಲ್ಲೂ ಇಲ್ಲ. ಈ ಭಾಗದಲ್ಲಿ ಬೆಳೆಗೆ ಸೂಕ್ತವಲ್ಲದ ಒಂದಿಂಚು ಭೂಮಿಯೂ ಇಲ್ಲ. ಹಾಲು ಉತ್ಪಾದಕ ಕೇಂದ್ರಕ್ಕೆ ಹೋದಾಗ ಪ್ರತಿ ದಿನ 6 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ ಹಾಗೂ ವರ್ಷಕ್ಕೆ 25 ಕೋಟಿ ರೂ. ವಹಿವಾಟು ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿ ವರ್ಷ 25 ಕೋಟಿ ರೂ. ರೈತರಿಗೆ ನೀಡುತ್ತಾರೆಯೇ? ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಹಾಲಿಗೆ ಸಹಾಯಧನ ನೀಡಿದ್ದರು. ಈಗ ಪರಿಹಾರ ನೀಡುತ್ತಾರೆಯೇ ಎಂದು ಪ್ರಶ್ನೆ ಮಾಡಿದರು.
ಈ ಭಾಗದಲ್ಲಿ ರೇಷ್ಮೆಗೆ ಸಂಬಂಧಿಸಿದ ವಹಿವಾಟಿನಿಂದ 35 ಕೋಟಿ ರೂ. ಆದಾಯ ಬರುತ್ತಿದೆ. ರೇಷ್ಮೆಗೆ ಹುಳಕ್ಕೆ ಬೇಕಾದ ಸೊಪ್ಪನ್ನು ವಿದೇಶದಿಂದ ತರಿಸಲು ಸಾಧ್ಯವಿಲ್ಲ. ರೇಷ್ಮೆಗೂಡುಗಳನ್ನು ಒಡೆದು ಏನು ಮಾಡಬೇಕೆಂದು ಸರ್ಕಾರವೇ ತಿಳಿಸಬೇಕು. ಇಲ್ಲಿ ಲಕ್ಷಾಂತರ ಹಸುಗಳಿದ್ದು, ಅವುಗಳನ್ನು ಕಸಾಯಿಖಾನೆಗೆ ಕಳಿಸಬೇಕೆ? ಅವುಗಳಿಗೆ ಮೇವು ಎಲ್ಲಿಂದ ಬರುತ್ತದೆ? 2 ಕೋಟಿ ರೂ. ಕೊಡುತ್ತೇನೆ ಎಂದು ಸುಲಭವಾಗಿ ಹೇಳುತ್ತಾರೆ. ಆದರೆ ಆ ಹಣವನ್ನು ಪಡೆದು ರೈತರು ಎಲ್ಲಿಗೆ ಹೋಗಬೇಕು? ಅದೇ ಹಣದಲ್ಲಿ ರೈತರಿಗೆ ಮರಳಿ ಭೂಮಿ ಪಡೆಯಲು ಸಾಧ್ಯವಿಲ್ಲ.
ತಲೆಮಾರುಗಳಿಂದ ಬಂದ ಆಸ್ತಿಯನ್ನು ಈಗಿನ ಪೀಳಿಗೆ ಜನರು ಹಾಳು ಮಾಡಲು ಬಯಸುವುದಿಲ್ಲ. ಬಿಡದಿಯ ರೈತರು ನಿವೇಶನ ಬೇಕೆಂದು ಅರ್ಜಿ ಹಾಕಿದ್ದಾರೆಯೇ? ನಿವೇಶನಗಳನ್ನು ರಚಿಸಿ ಯಾರಿಗೆ ಕೊಡಲಾಗುತ್ತದೆ? ಯಾವುದೋ ರಾಜ್ಯದಿಂದ ಬರುವ ಜನರಿಗೆ ಈ ನಿವೇಶನಗಳನ್ನು ನೀಡಲಾಗುತ್ತದೆ. ಯಾರಿಗೋ ನೀಡಲು ಇಲ್ಲಿನ ರೈತರು ಬೀದಿಪಾಲಾಗಬೇಕಾಗುತ್ತದೆ ಎಂದರು.
ರಾಹುಲ್ ಗಾಂಧಿ ಬಂದು ನೋಡಲಿ
ಜಾಲಹಳ್ಳಿಯಲ್ಲಿ ನನ್ನ ಕುಟುಂಬದ 65 ಎಕರೆ ಜಮೀನನ್ನು 65,000 ರೂ. ಗೆ ನೀಡಲಾಯಿತು. ಆ ಹಣದಲ್ಲಿ ನಯಾಪೈಸೆಯೂ ಉಳಿದಿಲ್ಲ. ಎಲ್ಲ ರೈತರ ಬದುಕು ಹೀಗೆಯೇ ಆಗುತ್ತದೆ. ಕನಕಪುರಕ್ಕೆ ಹೋದ ಡಿ.ಕೆ.ಶಿವಕುಮಾರ್, ಯಾರೂ ಜಮೀನು ಮಾರಾಟ ಮಾಡಬೇಡಿ ಎಂದು ಹೇಳಿದ್ದರು. ಆದರೆ ಬಿಡದಿಯ ಜಮೀನನ್ನು ಜನರು ಮಾರಾಟ ಮಾಡಬೇಕು ಎನ್ನುತ್ತಾರೆ. ಅಂಡಮಾನ್-ನಿಕೋಬಾರ್‌ಗೆ ಹೋದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪರಿಸರ ನಾಶದ ಬಗ್ಗೆ ಮಾತಾಡಿದ್ದಾರೆ. ಅವರದ್ದೇ ಕಾಂಗ್ರೆಸ್ ಸರ್ಕಾರ ಬಿಡದಿಯಲ್ಲಿ ಕೃಷಿಭೂಮಿಯನ್ನು ನಾಶ ಮಾಡುತ್ತಿದೆ. ಇದನ್ನು ರಾಹುಲ್ ಗಾಂಧಿ ಬಂದು ನೋಡಬೇಕು ಎಂದರು.
ಕೇಂದ್ರ ಸರ್ಕಾರದ ನಿಕೋಬಾರ್ ಯೋಜನೆಯಲ್ಲಿ ಪರಿಸರ ಉಳಿಸಬೇಕೆಂದು ಸಿಎಂ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದು, ಈ ಯೋಜನೆ ಅಗತ್ಯವಿಲ್ಲ ಎಂದಿದ್ದಾರೆ. ಆದರೆ ಬಿಡದಿಯಲ್ಲಿ ಕೃಷಿ ಭೂಮಿ ಹಾಳು ಮಾಡುತ್ತಿದ್ದಾರೆ. ಇಲ್ಲಿ 6 ಲಕ್ಷ ತೆಂಗು ಅಡಿಕೆ ಮರಗಳಿವೆ. ಮಾವು, ಸಪೋಟ, ರೇಷ್ಮೆ, ಬಾಳೆ ಮೊದಲಾದ ಬೆಳೆಗಳಿವೆ. ಇದರಲ್ಲಿ ರೈತರ ಬದುಕೇ ಇದೆ ಎಂದರು.
ಎಚ್.ಡಿ.ಕುಮಾರಸ್ವಾಮಿ ಅವರನ್ನು ಅನುಸರಿಸುವ ಸಿಎಂ ಡಿ.ಕೆ.ಶಿವಕುಮಾರ್, ಈಗಲೂ ಅವರನ್ನೇ ಅನುಸರಿಸಬೇಕು. ಬಿ.ಎಸ್.ಯಡಿಯೂರಪ್ಪನವರು ಲೇಔಟ್ ಮಾಡಲ್ಲ ಎಂದು ರೈತರಿಗೆ ಭರವಸೆ ನೀಡಿದ್ದರು. ನಂತರ ಸದಾನಂದಗೌಡ, ಜಗದೀಶ ಶೆಟ್ಟರ್, ಕುಮಾರಸ್ವಾಮಿ ಹೀಗೆ ಯಾವುದೇ ಮುಖ್ಯಮಂತ್ರಿಗಳು ಈ ಯೋಜನೆಗೆ ಒಪ್ಪಿಗೆ ನೀಡಲಿಲ್ಲ. ಬೆಂಗಳೂರಿನಲ್ಲಿ ಸರ್ಕಾರಿ ಸಂಸ್ಥೆಗಳಿಂದ ರಚಿಸಿದ 8 ಲಕ್ಷ ನಿವೇಶನಗಳು ಹಾಗೂ 10 ಲಕ್ಷ ಫ್ಲ್ಯಾಟ್‌ಗಳು ಖಾಲಿ ಇವೆ. ಖಾಸಗಿಯದ್ದರೂ ಸೇರಿದಂತೆ ಒಟ್ಟು 20 ಲಕ್ಷ ಫ್ಲ್ಯಾಟ್ ಆಗುತ್ತದೆ. ಕೆಂಪೇಗೌಡ ಲೇಔಟ್, ಶಿವರಾಮ ಕಾರಂತ ಲೇಔಟ್‌ನಲ್ಲಿ ನಿವೇಶನಗಳು ಇನ್ನೂ ಖಾಲಿ ಇವೆ ಎಂದರು.
ಮುಂದೆ ಬಿಜೆಪಿ-ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಆಗ ಯೋಜನೆಯನ್ನು ರದ್ದು ಮಾಡುತ್ತೇವೆ. ಈ ಯೋಜನೆ ಜಾರಿಯಾಗಲು ಈಗಲೂ ಅವಕಾಶ ನೀಡುವುದಿಲ್ಲ ಎಂದರು.
