ಸಮಗ್ರ ಸುದ್ದಿ

ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ರೈತರ ಆರ್ಥಿಕ ಸ್ಥಿತಿ ಸುಧಾರಣೆ: ಹೆಚ್.ಡಿ. ಕುಮಾರಸ್ವಾಮಿ |9.44 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ₹18,800 ಕೋಟಿ ವರ್ಗಾವಣೆ

Share

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಹನ್ನೆರಡು ವರ್ಷಗಳ ಆಡಳಿತಾವಧಿಯಲ್ಲಿ ಕೃಷಿಕರ ಆರ್ಥಿಕ ಪರಿಸ್ಥಿತಿ ಗಣನೀಯ ಮಟ್ಟದಲ್ಲಿ ಸುಧಾರಿಸಿದೆ. ಅದಕ್ಕೆ ಕಿಸಾನ್ ಸಮ್ಮಾನ ಯೋಜನೆಯ ಕೊಡುಗೆಯೂ ಇದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.

ಬೆಂಗಳೂರಿನ ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (Indian Institute of Horticultural Research-IIHR) ಯಲ್ಲಿ ‘ಪಿಎಂ-ಕಿಸಾನ್’ ಯೋಜನೆಯ 23ನೇ ಕಂತಿನ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಗಾವಣೆ ಮಾಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೇಂದ್ರ ಸಚಿವರು ಮಾತನಾಡಿದರು.

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಾರಕೇಶ್ವರದಲ್ಲಿ ನಡೆದ ನಡೆದ ಈ ಮುಖ್ಯ ಕಾರ್ಯಕ್ರಮಕ್ಕೆ ಸಚಿವ ಕುಮಾರಸ್ವಾಮಿ ಅವರು ವರ್ಚುಯಲ್ ವೇದಿಕೆ ಮೂಲಕ ಹಾಜರಾಗಿದ್ದರು.

ಮುಂದುವರಿದು ಮಾತನಾಡಿದ ಸಚಿವ ಕುಮಾರಸ್ವಾಮಿ ಅವರು, ಪಿಎಂ ಕಿಸಾನ್ ಯೋಜನೆಯ ಮೂಲಕ ಪ್ರಧಾನಿಗಳು ರೈತ ಸಮುದಾಯಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಈ ಯೋಜನೆಯ 23ನೇ ಕಂತಿನ ₹18,800 ಕೋಟಿ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಬಿತ್ತನೆ ಸಂದರ್ಭದಲ್ಲಿ ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಖರೀದಿಗೆ ಈ ಹಣವು ನೆರವಿಗೆ ಬರುತ್ತದೆ ಎಂದು ಹೇಳಿದರು.

ಯಾವುದೇ ರೀತಿಯ ಮಧ್ಯವರ್ತಿಗಳು ಇಲ್ಲದ, ಸೋರಿಕೆ ಇಲ್ಲದ ರೀತಿಯಲ್ಲಿ ಹಣವನ್ನು ರೈತರ ಖಾತೆಗಳಿಗೆ ನೇರ ವರ್ಗಾವಣೆ ಆಗಿದೆ. 9.44 ಕೋಟಿ ರೈತರಿಗೆ ತಲಾ ₹2,000 ಜಮೆ ಆಗಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ದೇಶಕ್ಕೆ ಅನ್ನ ನೀಡುವ ಅನ್ನದಾತನ ಸಬಲೀಕರಣ ಆಗದಿದ್ದರೆ ಅಭಿವೃದ್ಧಿಗೆ ಅರ್ಥವಿರುವುದಿಲ್ಲ. ಕಳೆದ ಹನ್ನೆರಡು ವರ್ಷಗಳಲ್ಲಿ ಇಂತಹ ವಿರೋಧಾಭಾಸಗಳಿಗೆ ತಿಲಾಂಜಲಿ ಇಟ್ಟು ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಕಲ್ಯಾಣಕ್ಕಾಗಿ ದುಡಿಯುತ್ತಿದ್ದಾರೆ ಎಂದು ಸಚಿವರು ಒತ್ತಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದಿಂದ ಹಣವನ್ನು ವರ್ಗಾವಣೆ ಮಾಡಿದ್ದಾರೆ. ರಾಜ್ಯದಲ್ಲಿ ಹೆಸರಘಟ್ಟದ ತೋಟಗಾರಿಕೆ ಸಂಸ್ಥೆಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಅರ್ಥಪೂರ್ಣ. ಅನೇಕ ತಳಿಗಳ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿರುವ ಈ ಸಂಸ್ಥೆ ಜಾಗತಿಕವಾಗಿ ಹೆಸರು ಮಾಡಿದೆ. ಇಲ್ಲಿನ ತಳಿಗಳನ್ನು ಸಾಮಾನ್ಯ ರೈತರು ಕೂಡ ಬೆಳೆಯಬೇಕು. ಆ ಮೂಲಕ ಅನ್ನದಾತರು ಹೆಚ್ಚೆಚ್ಚು ಲಾಭ ಗಳಿಸಬೇಕು ಎಂದು ಸಚಿವರು ನುಡಿದರು.

2026-27ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಬೃಹತ್ ಪ್ರಮಾಣದ ಅನುದಾನ ನೀಡಲಾಗಿದೆ. ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ರಸಗೊಬ್ಬರಗಳು ಸಕಾಲಕ್ಕೆ ದೊರೆಯುವಂತೆ ಮಾಡುವ ಸರ್ಕಾರದ ಕ್ರಮ ವಹಿಸಿದೆ. ದೇಶೀಯ ಉತ್ಪಾದನೆಗೆ ಬೆಂಬಲ ನೀಡುವುದು ಮತ್ತು ಪೋಷಕಾಂಶಗಳ ಸಮತೋಲಿತ ಬಳಕೆಯನ್ನು ಉತ್ತೇಜಿಸುವುದು ಕೇಂದ್ರದ ಮುಖ್ಯ ಉದ್ದೇಶವಾಗಿದೆ ಎಂದು ಬೃಹತ್ ಕೈಗಾರಿಕೆ ಸಚಿವರು ಹೇಳಿದರು.

ಸಭೆಯಲ್ಲಿ ಭಾರತೀಯ ತೋಟರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಟಿ.ಕೆ. ಬೆಹೆರಾ, ಸಂಸ್ಥೆಯ ಯೋಜನಾ ನಿರ್ದೇಶಕ ಪ್ರಕಾಶ್ ಪಾಟೀಲ ಸೇರಿದಂತೆ ಅನೇಕ ಕೃಷಿ ವಿಜ್ಞಾನಿಗಳು, ರೈತರು, ಅಧಿಕಾರಿಗಳು ಉಪಸ್ತಿತರಿದ್ದರು.


Share

You cannot copy content of this page