ಬೆಂಗಳೂರು: ರಾಜ್ಯದಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜೂನ್ 21 ರಂದು ಬೆಳಗ್ಗೆ 07 ಗಂಟೆಗೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ.ಖಾದರ್ ಅವರು ತಿಳಿಸಿದರು.
ಇಂದು ಬೆಂಗಳೂರಿನ ಆರೋಗ್ಯಸೌಧದಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಅವರು, ಈ ವರ್ಷ ‘ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ’ ಎಂಬ ಘೋಷವಾಕ್ಯದಡಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ದೇಹ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ ಹೆಚ್ಚು ಆರೋಗ್ಯದಾಯಕ ಜೀವನ ರೂಪಿಸಿಕೊಳ್ಳಲು ಯೋಗ ಒಂದು ಅತ್ಯುತ್ತಮ ವಿಧಾನವಾಗಿದೆ. ಯೋಗವು ಋಷಿಮುನಿಗಳು ವಿಶ್ವಕ್ಕೆ ಕೊಟ್ಟ ಕೊಡುಗೆ. ಯೋಗಾಭ್ಯಾಸದಿಂದ ಆಹಾರ ಪದ್ಧತಿ ಬದಲಾವಣೆ, ವ್ಯಕ್ತಿತ್ವ ವಿಕಸನ, ಜೀವನ ಶೈಲಿ ಬದಲಾವಣೆ ಸಾಧ್ಯ. ಯೋಗವನ್ನು ಶಾಶ್ವತವಾಗಿ ಅಭ್ಯಸಿಸಿ ಪ್ರೇರಣೆ ಮತ್ತು ಪ್ರೋತ್ಸಾಹಕ್ಕೆ ಈ ಯೋಗ ದಿನವನ್ನು ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಆಗಮಿಸಲಿದ್ದಾರೆ. ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್, ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ, ವಿಧಾನಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ. ಶಿವಾಜಿನಗರ ವಿಧಾನಸಭೆ ಶಾಸಕರಾದ ರಿಜ್ವಾನ್ ಅರ್ಷದ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಚಂದನವನದ ನಟ – ನಟಿಯರು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಯೋಗ ಕಾರ್ಯಕ್ರಮದಲ್ಲಿ ಮೊದಲ 40 ನಿಮಿಷಗಳ ಕಾಲ ಗಣ್ಯರು ಹಾಗೂ ಸಾರ್ವಜನಿಕರು ಒಟ್ಟಾಗಿ ಯೋಗಾಸನ ನೆರವೇರಿಸಲಿದ್ದು, ಸುಮಾರು 2000 ಯೋಗ ಸಾಧಕರು ಭಾಗವಹಿಸುವ ನಿರೀಕ್ಷೆಯಿದೆ. ರಾಜ್ಯಾದ್ಯಂತ ನಡೆಯುವ ವಿವಿಧ ಯೋಗ ದಿನಾಚರಣೆ ಕಾರ್ಯಕ್ರಮಗಳಲ್ಲಿ ಒಟ್ಟಾರೆ 10 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
‘ನಿತ್ಯ ಯೋಗ’ ಯೋಜನೆ ಮತ್ತು ವಿಶೇಷ ಕಾರ್ಯಕ್ರಮಗಳು:
ಯೋಗವನ್ನು ಕೇವಲ ಒಂದು ದಿನದ ಆಚರಣೆಯಾಗಿಸದೇ ನಿತ್ಯೋತ್ಸವವಾಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಆಯುಷ್ ಇಲಾಖೆಯು ಹಲವು ವಿನೂತನ ಕ್ರಮಗಳನ್ನು ಕೈಗೊಂಡಿದೆ.
365 ದಿನಗಳ ‘ನಿತ್ಯ ಯೋಗ’: ಎಲ್ಲಾ ಆಯುಷ್ ಸಂಸ್ಥೆಗಳು ಮತ್ತು ಗ್ರಾಮೀಣ ಭಾಗದ ಆಯುಷ್ಮಾನ್ ಆರೋಗ್ಯ ಕೇಂದ್ರಗಳಲ್ಲಿ ವರ್ಷದ 365 ದಿನಗಳೂ ನಿರಂತರವಾಗಿ ಯೋಗಾಭ್ಯಾಸ ನಡೆಸಲು ‘ನಿತ್ಯ ಯೋಗ’ ಕಾರ್ಯಕ್ರಮ ರೂಪಿಸಲಾಗಿದೆ. ಇದು ಗ್ರಾಮೀಣ ಜನರು, ಮಹಿಳೆಯರು, ಮಕ್ಕಳು ಹಾಗೂ ವೃದ್ಧರಿಗೆ ವಿಶೇಷವಾಗಿ ನೆರವಾಗಲಿದೆ.
ಮೈಸೂರು ಯೋಗ ಹಬ್: ಕಳೆದ ವರ್ಷ ಘೋಷಿಸಿದಂತೆ ‘ಮೈಸೂರು ಯೋಗ ಹಬ್’ ಕಾರ್ಯಕ್ರಮ ಈಗಾಗಲೇ ಯಶಸ್ವಿಯಾಗಿ ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ಇದನ್ನು ರಾಜ್ಯದ ಇತರೆ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಶಾಲಾ ಮಕ್ಕಳಿಗಾಗಿ ಸ್ಪರ್ಧೆಗಳು: 1,000 ಸರ್ಕಾರಿ ಶಾಲೆಗಳಲ್ಲಿ ನಿರಂತರ ಯೋಗ ಪ್ರಚಾರ ಹಮ್ಮಿಕೊಳ್ಳಲಾಗಿದ್ದು, ಯೋಗ ಕ್ವಿಜ್, ರಂಗೋಲಿ, ಪ್ರಬಂಧ, ಚಿತ್ರಪಟ ಹಾಗೂ ಪತಂಜಲಿ ಯೋಗ ಸೂತ್ರ ಪಾರಾಯಣದಂತಹ ಸ್ಪರ್ಧೆಗಳಲ್ಲಿ 25,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.
ಸಾಮಾಜಿಕ ಜಾಲತಾಣ ಸ್ಪರ್ಧೆ: ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ ಮೈಸೂರಿನ ಸಹಯೋಗದಲ್ಲಿ ನಡೆಸಲಾದ ಡಿಜಿಟಲ್ ಯೋಗ ಸ್ಪರ್ಧೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿ ಯುವಜನತೆಯನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.
ಯೋಗ ದಿನಾಚರಣೆಯ ಮುಂದುವರಿದ ಭಾಗವಾಗಿ ಜುಲೈ ತಿಂಗಳಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಉಪಸ್ಥಿತಿಯಲ್ಲಿ ಮೂರು ಪ್ರಮುಖ ವೈಜ್ಞಾನಿಕ ವಿಚಾರಸಂಕಿರಣಗಳನ್ನು ಆಯೋಜಿಸಲಾಗಿದೆ.
ಜುಲೈ ಮೊದಲ ವಾರದಲ್ಲಿ ‘ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ’ ಕುರಿತು ರಾಷ್ಟ್ರೀಯ ವಿಚಾರಸಂಕೀರ್ಣವನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ‘ವಿಜ್ಞಾನ ಯೋಗ’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗುವುದು.
ಜುಲೈ ಎರಡನೇ ವಾರ ಮೈಸೂರಿನ ಪ್ರಸಿದ್ಧ ಶ್ರೀ ಜಯದೇವ ಹೃದ್ರೋಗ ಸಂಸ್ಥೆ ಮತ್ತು ಆಸ್ಪತ್ರೆಯ ಸಭಾಂಗಣದಲ್ಲಿ ಕಾರ್ಡಿಯೋ ಯೋಗ ವಿಶೇಷ ವಿಚಾರಸಂಕೀರ್ಣ ಹಮ್ಮಿಕೊಳ್ಳಲಾಗಿದೆ.
ಜುಲೈ ಮೂರನೇ ವಾರ ಬೆಂಗಳೂರಿನ ಪ್ರಸಿದ್ಧ ಕಿದ್ವಾಯಿ ಆಸ್ಪತ್ರೆಯ ಸಭಾಂಗಣದಲ್ಲಿ ಕ್ಯಾನ್ಸರ್ ಮತ್ತು ಯೋಗದ ಕುರಿತಾದ ಕಾರ್ಸಿನೋ ಯೋಗ ವಿಚಾರಸಂಕೀರ್ಣ ನಡೆಸಲಾಗುವುದು.
“ಮನೆ-ಮನೆಗೂ ಯೋಗ, ಎಲ್ಲರಿಗೂ ಯೋಗ” ಎಂಬ ದೃಷ್ಟಿಕೋನದೊಂದಿಗೆ ಗ್ರಾಮಾಂತರ ಪ್ರದೇಶಗಳಲ್ಲೂ ಯೋಗದ ಅರಿವು ಮೂಡಿಸಿ, ‘ಎಲ್ಲೆಡೆಯೂ ಆರೋಗ್ಯ’ದ ಕನಸನ್ನು ಸಾಕಾರಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರು ತಿಳಿಸಿದರು.
ಮೆಟ್ರೋ ವಿಶೇಷ ಸಂಚಾರ:
ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಆಗಮಿಸುವವರಿಗೆ ಭಾನುವಾರ ಬೆಳಿಗ್ಗೆ 5.00 ಗಂಟೆಯಿಂದ ಮೆಟ್ರೋ ಸಂಚರಿಸಲಿದೆ ಎಂದು ತಿಳಿಸಿದರು.
ಇದೇ ವೇಳೆ ಯೋಗ ದಿನಾಚರಣೆಯಲ್ಲಿ ಭಾಗವಹಿಸುವವರಿಗೆ ನೀಡಲಾಗುವ ಡಿಜಿಟಲ್ ಸರ್ಟಿಫಿಕೆಟ್ ಹಾಗೂ ಪ್ರತಿ ದಿನ ಯೋಗ ಕುರಿತ ಬ್ರೋಚರ್ ಗಳನ್ನು ಬಿಡುಗಡೆಗೊಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಿತ್ವಿಕ್ ರಂಜನಂ ಪಾಂಡೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ಗುರುದತ್ತ ಹೆಗಡೆ, ಆಯುಷ್ ಇಲಾಖೆ ಆಯುಕ್ತರಾದ ಡಾ. ಸುನೀಲ್ ಪಂವಾರ್, ಆಕಾಶವಾಣಿ ಉಪ ಮಹಾನಿರ್ದೇಶಕರಾದ ಕೆ.ಪಿ.ಸಂಜೀವ್ ಉಪಸ್ಥಿತರಿದ್ದರು.
