ಸಮಗ್ರ ಸುದ್ದಿ

‘ಯೋಗಾ’ರೋಗ್ಯದಲ್ಲಿ ವಿಶ್ವಕ್ಕೇ ಪ್ರೇರಣೆಯಾಗಿದೆ ಭಾರತ; ಪ್ರಲ್ಹಾದ್ ಜೋಶಿ

Share

ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಭಾಗಿಯಾಗಿ ಪ್ರೇರಣೆಯಾದರು.

ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಆಯೋಜಿಸಿದ್ಧ ಅಂತರಾಷ್ಟ್ರೀಯ ಯೋಗ ದಿನಾಚರಣೆ ವೇಳೆ ಯೋಗಾಸನ ಮಾಡಿದ ಸಚಿವರು, ‘ಆರೋಗ್ಯಕರ ಜೀವನಕ್ಕೆ ಯೋಗ ಒಂದೊಳ್ಳೆ ಸಾಧನ”ವೆಂದು ಪ್ರತಿಪಾದಿಸಿದರು.

‎”ಯೋಗಃ ಕರ್ಮಸು ಕೌಶಲಮ್” ಎನ್ನುವಂತೆ ಕೆಲಸದಲ್ಲಿ ನಿಪುಣತೆಯೇ ಯೋಗವಾಗಿದೆ. ಯೋಗ ಕೇವಲ ದೈಹಿಕ ವ್ಯಾಯಾಮ, ಕಸರತ್ತಲ್ಲ, ಬದಲಿಗೆ ನಮ್ಮ ದೇಹ, ಮನಸ್ಸು ಮತ್ತು ಆತ್ಮದ ಸಮ್ಮಿಲನದ ದಿವ್ಯ ಪ್ರಕ್ರಿಯೆಯಾಗಿದೆ ಎಂದು ಹೇಳಿದರು.

ಜೂನ್ 21 ಪ್ರಕೃತಿ ದೃಷ್ಟಿಯಿಂದಲೂ ಅತ್ಯಂತ ವಿಶೇಷವಾದ ದಿನ. ವರ್ಷದ ಅತ್ಯಂತ ದೀರ್ಘವಾದ ಹಗಲಿನ ದಿನವಾಗಿದೆ. ಮಾತ್ರವಲ್ಲ ಬೇಸಿಗೆ ಆಯನ ಸಂಕ್ರಾಂತಿಯ (Summer Solstice) ಪರ್ವಕಾಲವಾಗಿದೆ. ಆದಿಶಿವನು ಸಪ್ತರ್ಷಿಗಳಿಗೆ ಯೋಗ ಜ್ಞಾನವನ್ನು ಧಾರೆ ಎರೆಯಲು ಆರಂಭಿಸಿದರೆಂಬ ಐತಿಹ್ಯವಿರುವ ಈ ಪವಿತ್ರ ದಿನದಂದೇ ‘ಅಂತಾರಾಷ್ಟ್ರೀಯ ಯೋಗ ದಿನಾಚರಣೆ’ಗೆ ಭಾರತ ವಿಶ್ವಕ್ಕೇ ಪ್ರೇರಣೆಯಾಗಿದೆ ಎಂದರು.

‎ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದ ಫಲವಾಗಿ ನಮ್ಮ ಪ್ರಾಚೀನ ಕಾಲದ ಯೋಗ ಪದ್ಧತಿ ಇಂದು ಒಂದು ಜಾಗತಿಕ ಜನಾಂದೋಲನವಾಗಿ ರೂಪುಗೊಂಡಿರುವುದು ಹೆಮ್ಮೆಯ ಸಂಗತಿ. ಮೋದಿ ಅವರ ಮಹತ್ವಾಕಾಂಕ್ಷೆಯಂತೆ ವಿಶ್ವದ 195 ದೇಶಗಳು ‘ಅಂತರಾಷ್ಟ್ರೀಯ ಯೋಗ ದಿನ’ವನ್ನು ಆಚರಿಸುತ್ತಿವೆ ಮತ್ತು ಕೋಟ್ಯಂತರ ಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದೆ ಎಂದು ಹೇಳಿದರು.

‎ಈ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು “ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ” ಧ್ಯೇಯವಾಕ್ಯದೊಂದಿಗೆ ಆಚರಿಸುತ್ತಿದ್ದು, ಶಾರೀರಿಕ ಸದೃಢರಾಗಿ ಸಕ್ರಿಯ ಜೀವನ ನಡೆಸಲು ಯೋಗ ಸಂಜೀವಿನಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕರಾದ ಅಭಯ ಪಾಟೀಲ್, ಮೇಯರ್ ಪ್ರೀತಿ ಕಾಮಕರ, ಉಪ ಮೇಯರ್ ಹನುಮಂತ ಕೊಂಗಲ, ‎ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಆಯುಕ್ತರಾದ ಬೊರಸೆ ಭೂಷಣ್ ಗುಲಾಬರಾವ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ರಾಹುಲ್ ಶಿಂದೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಹಾಗೂ ಜಿಲ್ಲಾ ಆಯುಷ್ ಅಧಿಕಾರಿ ಡಾ.ಶ್ರೀಕಾಂತ್ ಸುಣಧೋಳಿ ಹಾಗೂ ಯೋಗಪಟುಗಳು ಉಪಸ್ಥಿತರಿದ್ದರು.


Share

You cannot copy content of this page