ಸಮಗ್ರ ಸುದ್ದಿ

ಮೆದುಳಿನಲ್ಲಿ ಅಸಹಜ ದ್ರವ ಶೇಖರಣೆಯಿಂದ ತಲೆ ವಿಸ್ತಾರವಾಗುವ (ದೊಡ್ಡದಾಗುವ) ‘ಹೈಡ್ರೋಸೆಫಾಲಸ್’ ಸಮಸ್ಯೆಯಿಂದ ಬಳಲುತ್ತಿದ್ದ 9 ತಿಂಗಳ ಅನಾಥ ಮಗುವಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಸಂಕೀರ್ಣ ಚಿಕಿತ್ಸೆ

Share

ಬೆಂಗಳೂರು: ಮೆದುಳಿನಲ್ಲಿ ಅಸಹಜ ದ್ರವ ಶೇಖರಣೆಯಿಂದ ತಲೆ ವಿಸ್ತಾರವಾಗುವ (ದೊಡ್ಡದಾಗುವ) ‘ಹೈಡ್ರೋಸೆಫಾಲಸ್’ (Hydrocephalus) ಗಂಭೀರ ಸಮಸ್ಯೆ ಕಾರಣದಿಂದ ಅನಾಥಶ್ರಮ ಸೇರಿದ್ದ 9 ತಿಂಗಳ ಮಗುವಿಗೆ ಹೆಣ್ಣೂರು ರಸ್ತೆಯ ಸ್ಪರ್ಶ್ ಆಸ್ಪತ್ರೆಯಲ್ಲಿ ಅತ್ಯಂತ ಸಂಕೀರ್ಣ ಹಾಗೂ ಅಪಾಯಕಾರಿ ಮೆದುಳಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ ಮಗುವಿಗೆ ಮರುಜೀವ ನೀಡಲಾಗಿದೆ.

ಅಸಹಜವಾದ ದೊಡ್ಡ ತಲೆಯೊಂದಿಗೆ ಜನಿಸಿದ ಈ ಮಗುವಿನ ಸ್ಥಿತಿಯು ದಿನಕಳೆದಂತೆ ಉಲ್ಬಣಗೊಳ್ಳುತ್ತಾ ಹೋಯಿತು. ಇದರಿಂದ ಕೌಟುಂಬಿಕ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಈ ಮಗು ಅನಾಥಾಶ್ರಮವೊಂದರ ಪಾಲನೆಗೆ ಸೇರಿತ್ತು. ಅನಾಥಾಶ್ರಮದವರು ಮಗುವಿನ ಮುಂದಿನ ಚಿಕಿತ್ಸೆಗಾಗಿ ವಿಶೇಷ ವೈದ್ಯಕೀಯ ನೆರವು ಕೋರಿ ಆಸ್ಪತ್ರೆಯನ್ನು ಸಂಪರ್ಕಿಸಿದ್ದರು.

ಆಕೆಯ ತಲೆಯ ಸುತ್ತಳತೆಯು ಸುಮಾರು 100 ಸೆಂ.ಮೀ ವರೆಗೆ ಬೆಳೆದಿದ್ದರಿಂದ, ಮಗುವಿಗೆ ಕೂರಲು, ಹೊರಳಾಡಲು, ಮುಕ್ತವಾಗಿ ಚಲಿಸಲು ಅಥವಾ ಆ ವಯಸ್ಸಿಗೆ ತಕ್ಕ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ತೀವ್ರ ಅಡಚಣೆಯಾಗಿತ್ತು. ಇಷ್ಟೆಲ್ಲಾ ಸವಾಲುಗಳಿದ್ದರೂ, ಮಗು ಬಹಳ ಚುರುಕಾಗಿತ್ತು ಹಾಗೂ ಧ್ವನಿ, ಸ್ಪರ್ಶ ಮತ್ತು ಆರೈಕೆಗೆ ಸ್ಪಂದಿಸುತ್ತಿತ್ತು.

ತಲೆಯ ಗಾತ್ರ ಮತ್ತು ತೂಕ ಹೆಚ್ಚಾದಂತೆ ಮಗುವಿನ ಚಲನೆ ಸಂಪೂರ್ಣವಾಗಿ ಸ್ಥಗಿತಗೊಂಡಿತು. ತಲೆಯನ್ನು ಆರಾಮದಾಯಕವಾಗಿ ಅತ್ತಿಂದಿತ್ತ ತಿರುಗಿಸಲು ಸಾಧ್ಯವಾಗದ ಕಾರಣ ಆಕೆಯ ನೆತ್ತಿಯ ಚರ್ಮದ ಮೇಲೆ ‘ಪ್ರೆಶರ್ ಸೋರ್ಸ್’ (ಒತ್ತಡದ ಹುಣ್ಣುಗಳು) ಕಾಣಿಸಿಕೊಳ್ಳಲಾರಂಭಿಸಿದವು. ಆ ಕ್ಷಣದಲ್ಲಿ ಮಗುವಿಗೆ ತುರ್ತು ಮತ್ತು ವಿಶೇಷವಾದ ಮೆದುಳಿನ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂಬುದು ಖಚಿತವಾಗಿತ್ತು.
ಸಂಪೂರ್ಣ ತಪಾಸಣೆ ನಂತರ, ಹೆಣ್ಣೂರು ರಸ್ತೆಯ ಸ್ಪರ್ಶ್ ಆಸ್ಪತ್ರೆಯ ಮಲ್ಟಿಡಿಸಿಪ್ಲಿನರಿ ವೈದ್ಯರ ತಂಡವು ಈ ಪ್ರಕರಣವನ್ನು ಕೈಗೆತ್ತಿಕೊಂಡಿತು. ಮಗುವಿನ ಎಳೆಯ ವಯಸ್ಸು, ಹೈಡ್ರೋಸೆಫಾಲಸ್‌ನ ತೀವ್ರತೆ ಮತ್ತು ಅದರಿಂದುಂಟಾಗುವ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು, ಶಸ್ತ್ರಚಿಕಿತ್ಸೆಗೆ ಅತ್ಯಂತ ನಿಖರವಾದ ಹೊಂದಾಣಿಕೆ ಮತ್ತು ನಿರಂತರ ಮೇಲ್ವಿಚಾರಣೆಯ ಅಗತ್ಯವಿತ್ತು.

ಕೇವಲ ವೈದ್ಯಕೀಯ ಸಮಸ್ಯೆಗೆ ಚಿಕಿತ್ಸೆ ನೀಡುವುದು ಮಾತ್ರ ವೈದ್ಯರ ಉದ್ದೇಶವಾಗಿರಲಿಲ್ಲ; ಬದಲಾಗಿ ಮಗುವಿನ ನೋವನ್ನು ಶಮನಗೊಳಿಸಿ, ಆಕೆಗೆ ಆರಾಮದಾಯಕ ಅನುಭವ ನೀಡುವುದು, ಚಲನೆಯನ್ನು ಸುಧಾರಿಸುವುದು ಮತ್ತು ಮಗುವಿನ ಬೆಳವಣಿಗೆಯ ಹಂತಗಳನ್ನು ತಲುಪಲು ಉತ್ತಮ ಅವಕಾಶವನ್ನು ಕಲ್ಪಿಸುವುದು ಗುರಿಯಾಗಿತ್ತು. ಇಲ್ಲಿನ ಆರ್ಥಿಕ ತೊಂದರೆಗಳನ್ನು ಅರ್ಥಮಾಡಿಕೊಂಡ ಆಸ್ಪತ್ರೆಯು, ಚಿಕಿತ್ಸಾ ವೆಚ್ಚವು ಮಗುವಿನ ಆರೈಕೆಗೆ ಯಾವುದೇ ರೀತಿಯಲ್ಲೂ ಅಡ್ಡಿಯಾಗದಂತೆ ನೋಡಿಕೊಳ್ಳಲು ಸಂಪೂರ್ಣ ಪ್ರಯತ್ನವನ್ನು ಮಾಡಿತು.

ಈ ಪ್ರಕರಣದ ಕುರಿತು ಮಾತನಾಡಿದ ಹೆಣ್ಣೂರು ರಸ್ತೆ ಸ್ಪರ್ಶ್ ಆಸ್ಪತ್ರೆಯ ಪೀಡಿಯಾಟ್ರಿಕ್ ನ್ಯೂರಾಲಜಿ ವಿಭಾಗದ ಹಿರಿಯ ಕನ್ಸಲ್ಟೆಂಟ್ ಡಾ. ಆನ್ ಆಗ್ನೆಸ್ ಮ್ಯಾಥ್ಯೂ, “ಮಗುವಿನ ಆರೋಗ್ಯ ಸ್ಥಿತಿಯು ಎಷ್ಟರಮಟ್ಟಿಗೆ ಹದಗೆಟ್ಟಿತ್ತೆಂದರೆ, ಅಪಾಯವಿದ್ದರೂ ಸಹ ಶಸ್ತ್ರಚಿಕಿತ್ಸೆ ಮಾಡುವುದು ಒಂದೇ ನಮ್ಮ ಮುಂದಿದ್ದ ಆಯ್ಕೆಯಾಗಿತ್ತು. ಈ ಅತಿ-ಅಪಾಯಕಾರಿ (high-risk) ಶಸ್ತ್ರಚಿಕಿತ್ಸೆಗೆ ಬಹಳ ಎಚ್ಚರಿಕೆಯ ಯೋಜನೆ ಮತ್ತು ನಿಖರತೆಯ ಅಗತ್ಯವಿತ್ತು. ಮಗುವಿನ ವೈದ್ಯಕೀಯ ಸಮಸ್ಯೆಗೆ ಚಿಕಿತ್ಸೆ ನೀಡುವುದಷ್ಟೇ ಅಲ್ಲದೆ, ಆಕೆಗೆ ಆರೋಗ್ಯಕರ ಭವಿಷ್ಯ ಮತ್ತು ಉತ್ತಮ ಜೀವನವನ್ನು ನೀಡುವ ಅವಕಾಶವನ್ನು ಕಲ್ಪಿಸುವುದು ನಮ್ಮ ಗುರಿಯಾಗಿತ್ತು,” ಎಂದು ವಿವರಿಸಿದರು.

ಸಂಕೀರ್ಣ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಹೆಣ್ಣೂರು ಸ್ಪರ್ಶ್ ಆಸ್ಪತ್ರೆಯ ಸಿದ್ಧತೆಯ ಕುರಿತು ಮಾತನಾಡಿದ ಆಸ್ಪತ್ರೆಯ ಕ್ಲಸ್ಟರ್ ಸಿಒಒ ಕರ್ನಲ್ ರಾಹುಲ್ ತಿವಾರಿ, “ಸ್ಪರ್ಶ್ ಆಸ್ಪತ್ರೆಗಳ ವೈದ್ಯಕೀಯ ಪರಿಣತಿ, ಸಿದ್ಧತೆ ಮತ್ತು ವಿವಿಧ ವಿಭಾಗಗಳ ತಜ್ಞರ (multidisciplinary) ಬಲವನ್ನು ಇಂತಹ ಪ್ರಕರಣಗಳು ಪ್ರತಿಬಿಂಬಿಸುತ್ತವೆ. ಎಲ್ಲಾ ವಯೋಮಾನದ, ಸಂಕೀರ್ಣ ವೈದ್ಯಕೀಯ ಅಗತ್ಯಗಳಿರುವ ರೋಗಿಗಳಿಗೆ ಅತ್ಯಾಧುನಿಕ ಹಾಗೂ ಸಹಾನುಭೂತಿಯುಳ್ಳ ಆರೈಕೆಯನ್ನು ಒದಗಿಸುವುದೇ ನಮ್ಮ ಪ್ರಮುಖ ಉದ್ದೇಶವಾಗಿದೆ,” ಎಂದು ಹೇಳಿದರು.


Share

You cannot copy content of this page