ಸಮಗ್ರ ಸುದ್ದಿ

ಅಬಕಾರಿ ಸನ್ನದುಗಳು ಇ-ಹರಾಜು ಅಧಿಸೂಚನೆ ಪ್ರಕಟ

Share

ಬೆಂಗಳೂರು:2025-26 ರ ಆಯವ್ಯಯ ಘೋಷಣೆಯಂತೆ ರಾಜ್ಯ ಸರ್ಕಾರವು ಖಾಲಿ ಅಥವಾ ಲಭ್ಯವಿರುವ ಮದ್ಯದ ಸನ್ನದುಗಳನ್ನು ಪಾರದರ್ಶಕ ಎಲೆಕ್ಟ್ರಾನಿಕ್ ಹರಾಜಿನ ಮೂಲಕ ಹಂಚಿಕೆ ಮಾಡಿ, ಹೆಚ್ಚುವರಿ ರಾಜಸ್ವ ಸಂಗ್ರಹಣೆ ಮಾಡುವ ನಿರೀಕ್ಷಿಸಿದೆ ಎಂದು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ,ಅಬಕಾರಿ ಇಲಾಖೆಯು ಅಬಕಾರಿ ನಿಯಮಗಳಿಗೆ ಅಗತ್ಯ ತಿದ್ದುಪಡಿಗಳನ್ನು ತಂದು, ಒಟ್ಟಾರೆ 579 ಸನ್ನದುಗಳನ್ನು ಎಲೆಕ್ಟ್ರಾನಿಕ್ ಇ-ಹರಾಜು ಮೂಲಕ ಹಂಚಿಕೆ ಮಾಡಲು ಸರ್ಕಾರವು ಇಂದು ಅಧಿಸೂಚನೆ ಹೊರಡಿಸಿದೆ.

ಸ್ಥಗಿತಗೊಂಡಿರುವ ಮತ್ತು ಹಂಚಿಕೆಯಾಗದೇ ಇರುವ ಸಿಎಲ್-2‌ ಮತ್ತು ಸಿಎಲ್(11-ಸಿ) ಸನ್ನದುಗಳನ್ನು ಸಿಎಲ್(2-ಎ) ಎಂದು ಮತ್ತು ಸ್ಥಗಿತಗೊಂಡಿರುವ ಸಿಎಲ್-9‌ ಸನ್ನದುಗಳನ್ನು ಸಿಎಲ್(9-ಎ) ಎಂದು ವರ್ಗೀಕರಿಸಿ 569 ಸನ್ನದುಗಳ ಪೈಕಿ ಹರಾಜು ಪ್ರಕ್ರಿಯೆಗೆ 483 ಸಿಎಲ್(2-ಎ) ಮತ್ತು 96 ಸಿಎಲ್(9-ಎ) ಸನ್ನದುಗಳನ್ನು ಇ-ಹರಾಜಿಗೆ ಪ್ರಕಟಿಸಲಾಗಿದೆ.

ಸರ್ಕಾರವು ಸಿಎಲ್(2-ಎ) ಮತ್ತು ಸಿಎಲ್(9-ಎ) ಸನ್ನದುಗಳನ್ನು ಇ-ಹರಾಜಿನಲ್ಲಿ ಹರಾಜು ಮಾಡುವ ಸಂಬಂಧ ಪರಿಶಿಷ್ಟ ಜಾತಿ-ಎ ವರ್ಗದವರಿಗೆ ಶೇ.5.25 ರಷ್ಟು, ಪರಿಶಿಷ್ಟ ಜಾತಿ-ಬಿ ವರ್ಗದವರಿಗೆ ಶೇ. 5.25 ರಷ್ಟು, ಪರಿಶಿಷ್ಟ ಜಾತಿ-ಸಿ ವರ್ಗದವರಿಗೆ ಶೇ.4.50 ರಷ್ಟು ಮತ್ತು ಪರಿಶಿಷ್ಟ ಪಂಗಡ ವರ್ಗದವರಿಗೆ ಶೇ. 3 ರಷ್ಟು ಮೀಸಲಾತಿಯನ್ನು ಕಲ್ಪಿಸಿದೆ.

ಇ-ಹರಾಜನ್ನು ಭಾರತ ಸರ್ಕಾರ ಸ್ವಾಮ್ಯದ ಸಂಸ್ಥೆಯಾದ ಎಂಎಸ್‌ಟಿಸಿ ಲಿಮಿಟೆಡ್‌ನ ಇ-ಪೋರ್ಟಲ್‌ನಲ್ಲಿ ನಡೆಸಲಾಗುತ್ತದೆ. ಇ-ಹರಾಜಿನ ವೇಳಾಪಟ್ಟಿಯ ವಿವರಗಳು ಕರ್ನಾಟಕ ರಾಜ್ಯ ಅಬಕಾರಿ ಇಲಾಖೆಯ ಪೋರ್ಟಲ್ https://stateexcise.karnataka.gov.in ಮತ್ತು ಇ-ಹರಾಜು ವೇದಿಕೆ MSTC ಯ ಪೋರ್ಟಲ್ https://www.mstcecommerce.com ನಲ್ಲಿ ಲಭ್ಯವಿರುತ್ತದೆ.

ಇ-ಹರಾಜಿನ ವೇಳಾಪಟ್ಟಿ:

ಬಿಡ್‌ದಾರರ ನೋಂದಣಿಯು ಜುಲೈ 3 ರಿಂದ ಪ್ರಾರಂಭವಾಗಲಿದೆ.

ಸಂಭಾವ್ಯ ಬಿಡ್‌ದಾರರಿಗೆ ಹಾಗೂ ಜಿಲ್ಲಾ ಇ-ಹರಾಜು ನೋಡಲ್‌ ಅಧಿಕಾರಿಗಳಿಗೆ ಜುಲೈ
06 ರಿಂದ 14 ರವರೆಗೆ ತರಬೇತಿ ಆಯೋಜಿಸಲಾಗಿದೆ. ನೇರ ಹರಾಜು (Live Bidding)ಜುಲೈ 24 ರಿಂದ 31ರವರೆಗೆ ಜರುಗಲಿದೆ.

ಬಿಡ್‌ದಾರರು ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಮತ್ತು ಅವರ ವ್ಯಾಲೆಟ್‌ನಲ್ಲಿ ಪಾವತಿಯನ್ನು ಆನ್‌ಲೈನ್‌ನಲ್ಲಿ ದೃಢೀಕರಿಸಿದ ನಂತರವೇ ಆನ್‌ಲೈನ್ ಹರಾಜಿನಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

ಬಿಡ್ಡರ್‌ಗಳು ತಾವು ಭಾಗವಹಿಸಲು ಬಯಸುವ ನಿರ್ದಿಷ್ಟ ಸ್ಲಾಟ್‌ನ ಹರಾಜು ಪ್ರಾರಂಭವಾಗುವ 48 ಗಂಟೆಗಳ ಮೊದಲು ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ. ನೆಟ್‌ವರ್ಕ್ ವೈಫಲ್ಯ ಮತ್ತು ಇತರ ತಾಂತ್ರಿಕ ಸಮಸ್ಯೆಗಳ ಸಂದರ್ಭದಲ್ಲಿ ಯಾವುದೇ ವಿಳಂಬವನ್ನು ತಪ್ಪಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಬಿಡ್ಡರ್‌ಗಳು ಈ ಸಲಹೆಗಳನ್ನು ಪಾಲಿಸಲು ಸೂಚಿಸಲಾಗಿದೆ.
ಆದಾಗ್ಯೂ, ಬಿಡ್ಡರ್‌ಗಳು ಆಯಾ ಸ್ಲಾಟ್‌ಗಳ ನಿಗದಿತ ಇ-ಹರಾಜಿಗೆ ಎರಡು ಕೆಲಸದ ದಿನಗಳ ಮೊದಲು ನೋಂದಾಯಿಸಿಕೊಳ್ಳಬಹುದು.
ಅಬಕಾರಿ ಆಯುಕ್ತರು ಹೊರಡಿಸುವ ತರಬೇತಿ ವೇಳಾಪಟ್ಟಿಯನ್ನು ಅಬಕಾರಿ ಇಲಾಖೆಯ ವೆಬ್‌ಸೈಟ್ https://stateexcise.karnataka.gov.in ಮತ್ತು MSTC ಇ-ಹರಾಜು ಪೋರ್ಟಲ್ https://www.mstcecommerce.com ನಲ್ಲಿ ಪ್ರಕಟಿಸಲಾಗುತ್ತದೆ.
ಆಸಕ್ತ ಬಿಡ್‌ದಾರರುಗಳು ಬಿಡ್ಡಿಂಗ್ ಪ್ರಾರಂಭವಾಗುವ ಮೊದಲೇ MSTC ಲಿಮಿಟೆಡ್‌ನ ಇ-ಹರಾಜು ವೇದಿಕೆ https://www.mstcecommerce.com ಪೋರ್ಟಲ್‌ನಲ್ಲಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.
ಇ-ಹರಾಜಿನಲ್ಲಿ ಯಾವುದೇ ವ್ಯಕ್ತಿ/ಏಕವ್ಯಕ್ತಿ ಮಾಲೀಕತ್ವ ಅಥವಾ ಭಾರತದ ಕಾನೂನುಗಳ ಅಡಿಯಲ್ಲಿ ನೋಂದಾಯಿಸಲಾದ ಟ್ರಸ್ಟ್/ಸೊಸೈಟಿ/ ಪಾಲುದಾರಿಕೆ ಸಂಸ್ಥೆ/ಸೀಮಿತ ಪಾಲುದಾರಿಕೆ ಒಡಂಬಡಿಕೆ (LLP)/ ಕಂಪನಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಬಿಡ್‌ದಾರರು ಒಂದು ಬಾರಿ ನೊಂದಣಿ ಶುಲ್ಕ ರೂ. 1,000/- ಗಳನ್ನು ಮತ್ತು ಅನ್ವಯವಾಗುವ ಜಿಎಸ್‌ಟಿಯನ್ನು ಆನ್‌ಲೈನ್‌ನಲ್ಲಿ ಪಾವತಿಸಬೇಕು. ಪ್ರತಿ ಸನ್ನದಿನ ಅರ್ಜಿಗೆ ಶುಲ್ಕ ರೂ. 50,000/- (ಐವತ್ತು ಸಾವಿರ ಮಾತ್ರ) ಆಗಿರುತ್ತದೆ, ಇದನ್ನು ಮರುಪಾವತಿಸಲಾಗುವುದಿಲ್ಲ (Non-Refundable). ಬಿಡ್‌ದಾರರು ಒಂದಕ್ಕಿಂತ ಹೆಚ್ಚು ಸನ್ನದುಗಳಿಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುತ್ತದೆ. ಅಂದರೆ, ಒಂದು ಸನ್ನದಿಗಾಗಿ ಒಂದು ಅರ್ಜಿಯಂತೆ ಪ್ರತಿ ಅರ್ಜಿಗೆ ಪ್ರತ್ಯೇಕ ಅರ್ಜಿ ಶುಲ್ಕ ಮತ್ತು ಪ್ರತ್ಯೇಕ ಮುಂಗಡ ಠೇವಣಿ ಮೊತ್ತ (EMD) ಪಾವತಿಗೆ ಒಳಪಟ್ಟಿರುತ್ತದೆ. ಆನ್‌ಲೈನ್‌ ಮೂಲಕ ವ್ಯಾಲೆಟ್‌ (Wallet) ಗೆ ಹಣ ಪಾವತಿಯನ್ನು ಮಾಡಲು ಬಿಡ್‌ದಾರರಿಗೆ ಅವಕಾಶವನ್ನು ಕಲ್ಪಿಸಲಾಗಿರುತ್ತದೆ.

ಬಿಡ್‌ದಾರರ ವ್ಯಾಲೆಟ್‌ (Wallet) ನಿಂದ ಅರ್ಜಿ ಶುಲ್ಕ ಮತ್ತು ಮುಂಗಡ ಠೇವಣಿ ಮೊತ್ತ (EMD) ಮೊತ್ತವನ್ನು ನೈಜ ಸಮಯದಲ್ಲಿ ಕ್ರಿಯಾತ್ಮಕವಾಗಿ (Dynamic) ಆಗಿ ಹೊಂದಿಸಲು ಅವಕಾಶ ಇರುತ್ತದೆ. ಮುಂಗಡ ಠೇವಣಿ ಮೊತ್ತವು (EMD) ಸನ್ನದಿನ ಮೂಲ ಬೆಲೆಯ ಶೇ. 2 ಆಗಿದ್ದು, ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ಆನ್‌ಲೈನ್‌ ಮೂಲಕ ಮುಂಗಡ ಠೇವಣಿ ಮೊತ್ತವನ್ನು (EMD) ಪಾವತಿಸಬೇಕು.

ಪ್ರತಿ ಸನ್ನದಿನ ಬಿಡ್, ಸನ್ನದಿನ ಮೂಲ ಬೆಲೆಯಿಂದ ಪ್ರಾರಂಭವಾಗುತ್ತದೆ. ಬಿಡ್‌ದಾರರು ಪ್ರತಿ ಬಿಡ್‌ಗೆ ರೂ. 2 ಲಕ್ಷ ಅಥವಾ ಅದರ ಗುಣಾಕಾರದ ಹೆಚ್ಚಳಕ್ಕೆ ಬಿಡ್ ಮಾಡಬೇಕು (Multiples of 2 lakhs). ಇ-ಹರಾಜಿನಲ್ಲಿ ಯಶಸ್ವಿ ಬಿಡ್‌ ಮಾಡಿರುವ ಬಿಡ್‌ದಾರರನ್ನು (H-1) ಆಯ್ಕೆಯನ್ನು ಆನ್‌ಲೈನ್ ಮೂಲಕ ಮಾಡಲಾಗುತ್ತದೆ.

ಗೆಲ್ಲುವ‌ ಬಿಡ್ ಮೌಲ್ಯವನ್ನು ಬಿಡ್‌ ಮಾಡಿದ ಬಿಡ್‌ದಾರರು ವಿನ್ನಿಂಗ್‌ ಬಿಡ್‌ದಾರರು (‘ಯಶಸ್ವಿ ಬಿಡ್ಡರ್’) (H-1) ಆಗುತ್ತಾರೆ. ಯಶಸ್ವಿ ಬಿಡ್‌ದಾರರಿಗೆ ಇ-ಮೇಲ್‌ ಮೂಲಕ ತಾತ್ಕಾಲಿಕ ಸೂಚನಾ ಪತ್ರ (Provisional Intimation Letter) ನ್ನು ರವಾನಿಸಲಾಗುತ್ತದೆ. ವಿನ್ನಿಂಗ್‌ ಬಿಡ್‌ದಾರರು (ಯಶಸ್ವಿ ಬಿಡ್ಡರ್- H-1) ಗೆಲ್ಲುವ‌ ಬಿಡ್ ಮೊತ್ತದ 0.42% ಮತ್ತು ಅನ್ವಯವಾಗುವ ಜಿ.ಎಸ್.ಟಿ ಹಣವನ್ನು ವಹಿವಾಟು ಶುಲ್ಕವಾಗಿ ತಾತ್ಕಾಲಿಕ ಸೂಚನೆಯ ಪತ್ರ ತಲುಪಿದ 07 ಕೆಲಸದ ದಿನದೊಳಗಾಗಿ MSTC ಲಿಮಿಟೆಡ್‌ಗೆ https://www.mstcecommerce.com ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ಪಾವತಿಸಬೇಕು.

ಯಶಸ್ವಿ ಬಿಡ್ದಾರರು H-1, ಅಗಸ್ಟ್ 3 ರಿಂದ 11 ರ ಒಳಗಾಗಿ ವೆಬ್‌ಲಿಂಕ್‌ URL: https://ksbclonline.karnataka.gov.in/EXCISE-ERP/#/auth/signin ಮೂಲಕ ಆನ್‌ಲೈನ್‌ನಲ್ಲಿ ಗೆಲ್ಲುವ‌ ಬಿಡ್ ಮೊತ್ತದ ಕನಿಷ್ಠ ಶೇ.50ಅನ್ನು ಕಡ್ಡಾಯವಾಗಿ ಪಾವತಿಸಬೇಕು. ಒಂದು ವೇಳೆ ಯಶಸ್ವಿ ಬಿಡ್‌ದಾರರು (H-1) ಬಿಡ್‌ನ ಸಂಪೂರ್ಣ ಹಣವನ್ನು ಪಾವತಿ ಮಾಡಲು ಇಚ್ಚಿಸಿದ್ದಲ್ಲಿ ಪಾವತಿಸಲು ಅವಕಾಶವಿರುತ್ತದೆ.

MSTC ವಹಿವಾಟು ಶುಲ್ಕ ಮತ್ತು ಗೆಲ್ಲುವ‌ ಬಿಡ್ ಮೌಲ್ಯದ ಕನಿಷ್ಠ ಶೇ.50 ಪಾವತಿಸಿದ ನಂತರ ಅಪರ ಆಯುಕ್ತರು(ಕೇಂದ್ರಸ್ಥಾನ ಮತ್ತು ತಪಾಸಣೆ), ರಾಜ್ಯ ಅಬಕಾರಿ ಇಲಾಖೆ ಇವರು ಅಂಗೀಕಾರ ಪತ್ರ (LOA) ನೀಡುತ್ತಾರೆ. ಅಂಗೀಕಾರ ಪತ್ರ (LOA) ಪಡೆದ ನಂತರ, H1 ಬಿಡ್‌ದಾರರುಗಳು ಅಬಕಾರಿ ಸೇವೆಗಳ ವೆಬ್‌ಸೈಟ್ https://ksbclonline.karnataka.gov.in/EXCISE-ERP/#/auth/signin ಗೆ ಲಾಗಿನ್ ಆಗುವ ಮೂಲಕ ಸನ್ನದಿಗಾಗಿ, ಅಬಕಾರಿ ಕಾಯ್ದೆ/ನಿಯಮಗಳನ್ವಯ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಗೆಲ್ಲುವ ಬಿಡ್‌ ಮೊತ್ತದ ಉಳಿದ ಹಣವನ್ನು ಅಕ್ಟೋಬರ್ 31 ರಂದು ಅಥವಾ ಅದಕ್ಕೂ ಮೊದಲು https://ksbclonline.karnataka.gov.in/EXCISE-ERP/#/auth/signin ಗೆ ಲಾಗಿನ್ ಆಗುವ ಮೂಲಕ ಪಾವತಿಸತಕದ್ದು. ಮುಂಗಡ ಠೇವಣಿ ಮೊತ್ತ (EMD) ವನ್ನು ಅಂತಿಮ ಕಂತಿನಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತದೆ.
ಹರಾಜಿಗೆ ಒಳಪಡಿಸಿದ ಪ್ರತಿ ಸನ್ನದನ್ನು ಒಟ್ಟು 5 ವರ್ಷದ ಅವಧಿಗೆ, ಅಂದರೆ 2026-27 ರಿಂದ 2030-31 ರವರೆಗೆ ನೀಡಲಾಗುವುದು.

ಯಶಸ್ವಿ ಬಿಡ್‌ದಾರರು H-1 ಮೊದಲ ಅಬಕಾರಿ ವರ್ಷಕ್ಕೆ ಸನ್ನದು ಶುಲ್ಕ ಪಾವತಿಯಿಂದ ವಿನಾಯಿತಿ ಹೊಂದಿರುತ್ತಾರೆ. ಆದಾಗ್ಯೂ, H-1 ಬಿಡ್‌ದಾರರು ಮುಂದಿನ 04 ವರ್ಷಗಳ ಅವಧಿಗೆ ಪ್ರತಿ ವರ್ಷ ವಾರ್ಷಿಕ ಸನ್ನದು ಶುಲ್ಕ ಮತ್ತು ಹೆಚ್ಚುವರಿ ಸನ್ನದು ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ.
ಇ-ಹರಾಜು ಅಧಿಸೂಚನೆ ಮತ್ತು ಬಿಡ್ಡಿಂಗ್‌ಗಾಗಿ ನೋಂದಾಯಿಸಿಕೊಳ್ಳುವ ವಿಧಾನವು ಅಬಕಾರಿ ಇಲಾಖೆಯ https://stateexcise.karnataka.gov.in ರಲ್ಲಿ ಮತ್ತು MSTC ಇ-ಹರಾಜು ಪೋರ್ಟಲ್ https://www.mstcecommerce.com. ನಲ್ಲಿ ಲಭ್ಯವಿರುತ್ತದೆ ಎಂದು ಅಬಕಾರಿ ಆಯುಕ್ತರಾದ ಆರ್.ವೆಂಕಟೇಶಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share

You cannot copy content of this page