ಸಮಗ್ರ ಸುದ್ದಿ

ಪತ್ರಕರ್ತರು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು-ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

Share

ಬೆಂಗಳೂರು : ಪತ್ರಕರ್ತರು ಏನೇ ವೈಯಕ್ತಿಕ ಭಾವನೆಗಳಿದ್ದರೂ, ಪತ್ರಿಕೆಯಲ್ಲಿ ಬರೆಯುವಾಗ ಮತ್ತು ಸಮಾಜಕ್ಕೆ ವಿಚಾರಗಳನ್ನು ತಿಳಿಸುವಾಗ ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಸಮಾಜಕ್ಕೆ ಒಳಿತಾಗುವಂತೆ ಕೆಲಸ ಮಾಡಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಸಲಹೆ ನೀಡಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಗಾಂಧಿ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಂತೆ ಪತ್ರಿಕಾರಂಗವೂ ಪ್ರಜಾಪ್ರಭುತ್ವದ ನಾಲ್ಕನೇ ಕಂಬವಾಗಿದೆ. ಯಾರು ಏನೇ ತಪ್ಪು ಮಾಡಿದರೂ ಅದನ್ನು ವಿಮರ್ಶೆ ಮಾಡಿ, ಸಮಾಜವನ್ನು ಬದಲಾಯಿಸುವ ಮತ್ತು ತಪ್ಪುಗಳನ್ನು ಸರಿಪಡಿಸುವ ದೊಡ್ಡ ಅವಕಾಶ ಹಾಗೂ ಶಕ್ತಿ ಇರುವುದು ಕೇವಲ ಪತ್ರಿಕಾರಂಗಕ್ಕೆ ಮಾತ್ರ. ಆದರೆ ಇದೆ ಮಾಧ್ಯಮಗಳಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಸುಳ್ಳು ಸುದ್ದಿಗಳ (ಫೇಕ್ ನ್ಯೂಸ್) ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದರು.

ಇಂದು ಬೆಳಿಗ್ಗೆ ನಾನು ಸಾಮಾನ್ಯ ತಪಾಸಣೆಗಾಗಿ (Routine Check-up) ಆಸ್ಪತ್ರೆಗೆ ಹೋಗಿದ್ದೆ. ಆದರೆ ಟಿವಿ ವಾಹಿನಿಗಳಲ್ಲಿ ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂಬ ಸುಳ್ಳು ಸುದ್ದಿ ಬಿತ್ತರಿಸುತ್ತಿದ್ದಾರೆ ಎಂದು ಹೇಳಿದರು. ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸದೆ, ಕೇವಲ ಟಿಆರ್.ಪಿ ಅಥವಾ ಸ್ಪರ್ಧೆಯ ಆತುರದಲ್ಲಿ ನಿಮಿಷಕ್ಕೊಂದು ಮೆಸೇಜ್ ಹಾಕುವ ಪ್ರವೃತ್ತಿ ಸರಿಯಲ್ಲ. ಇದು ಬೇರೆಯವರ ಘನತೆಗೆ ಧಕ್ಕೆ ತರುತ್ತದೆ. ಹೀಗಾಗಿ ಸತ್ಯವನ್ನು ಬರೆಯುವುದು, ಸತ್ಯವನ್ನು ನುಡಿಯುವುದು ಮತ್ತು ಸತ್ಯಕ್ಕೆ ಗೌರವ ನೀಡುವುದು ಪತ್ರಿಕೋದ್ಯಮದ ಮೊದಲ ಕರ್ತವ್ಯವಾಗಬೇಕು ಎಂದು ಅವರು ಮಾಧ್ಯಮದವರಿಗೆ ತಿಳಿ ಹೇಳಿದರು.

ಮನುಷ್ಯ ತಪ್ಪು ಮಾಡುವುದು ಸಹಜ, ನಾನು ಕೂಡ ತಪ್ಪು ಮಾಡಿದರೆ ಅದನ್ನು ತಿಳಿಸಿ. ಆದರೆ ಸುಳ್ಳು ಸುದ್ದಿಗಳನ್ನು ಪ್ರಕಟಿಸುವುದು ಮತ್ತು ಪ್ರಸಾರ ಮಾಡಬೇಡಿ. ಸುದ್ದಿ ಪ್ರಕಟವಾಗುವವರೆಗೆ ಅದು ಪತ್ರಕರ್ತರದ್ದಾಗಿರುತ್ತದೆ. ಪ್ರಕಟವಾದ ನಂತರ ಅದು ಸಮಾಜದ ಆಸ್ತಿಯಾಗುತ್ತದೆ. ಆದ್ದರಿಂದ ಪ್ರತಿಯೊಂದು ಸುದ್ದಿಯಲ್ಲೂ ಸತ್ಯ ಮತ್ತು ಪ್ರಾಮಾಣಿಕತೆ ಇರಬೇಕು ಎಂದು ಮುಖ್ಯಮಂತ್ರಿಗಳು ಕಿವಿಮಾತು ಹೇಳಿದರು.

ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಅನೇಕ ಮಹನೀಯರು ಪತ್ರಕರ್ತರಾಗಿ ಪತ್ರಿಕಾ ವೃತ್ತಿಯ ಘನತೆಯನ್ನು ಹೆಚ್ಚಿಸಿದ್ದಾರೆ. ಆ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಜೊತೆಗೆ ಮಾಧ್ಯಮಗಳ ಮೇಲಿರುವ ಸಾರ್ವಜನಿಕ ಗೌರವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಅವರು ಪತ್ರಕರ್ತರಿಗೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕರು ಮತ್ತು ಮಾಜಿ ಸಚಿವರಾದ ದಿನೇಶ್ ಆರ್ ಗುಂಡೂರಾವ್ ಅವರು ಮಾತನಾಡಿ, ಮಾಧ್ಯಮ ರಂಗದಲ್ಲಿ ಡಿಜಿಟಲೀಕರಣದ ಪ್ರಭಾವದಿಂದ ಮಾಹಿತಿ ವಿನಿಮಯಕ್ಕೆ ಹೆಚ್ಚಿನ ವೇಗ ದೊರೆತಿದೆ. ಆದರೆ, ಪ್ರಸ್ತುತ ದಿನಗಳಲ್ಲಿ ಯಾವುದು ನೈಜ ಸುದ್ದಿ ಮತ್ತು ಯಾವುದು ಸುಳ್ಳು ಸುದ್ದಿ (ಫೇಕ್ ನ್ಯೂಸ್) ಎಂದು ವಿಶ್ಲೇಷಿಸುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಸಾರ್ವಜನಿಕರಲ್ಲಿ ಸುದ್ದಿಯ ಇಡೀ ವರದಿಯನ್ನು ಓದುವ ತಾಳ್ಮೆ ಕಡಿಮೆಯಾಗುತ್ತಿದ್ದು, ಕೇವಲ ಮುಖ್ಯಾಂಶಗಳನ್ನು (ಹೆಡ್ ಲೈನ್ಸ್) ನೋಡಿಯೇ ಅರ್ಥೈಸಿಕೊಂಡು, ತಕ್ಷಣವೇ ಪ್ರತಿಕ್ರಿಯಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದು ಪತ್ರಿಕೋದ್ಯಮದ ವಸ್ತುನಿಷ್ಠತೆ ಮತ್ತು ಗುಣಮಟ್ಟದ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಸಂಸ್ಥೆಗಳು ದೊಡ್ಡ ಉದ್ಯಮಿಗಳು ಹಾಗೂ ಕಾರ್ಪೊರೇಟ್ ವಲಯದ ಹಿಡಿತಕ್ಕೆ ಸಿಲುಕುತ್ತಿರುವುದರಿಂದ ಪತ್ರಿಕೋದ್ಯಮದಲ್ಲಿ ಪಾರದರ್ಶಕತೆ ಕಣ್ಮರೆಯಾಗುತ್ತಿದೆ. ಪತ್ರಕರ್ತರು ಯಾವುದೇ ಭಯ-ಭೀತಿ ಇಲ್ಲದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ವಾತಾವರಣ ನಿರ್ಮಾಣವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರು, ಲೋಕಮಾನ್ಯ ತಿಲಕ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರಂತಹ ಮಹನೀಯರು ಪತ್ರಿಕೋದ್ಯಮದ ಮೂಲಕವೇ ಜನಜಾಗೃತಿ ಮೂಡಿಸಿದ್ದರು. ಅದೇ ಹಾದಿಯಲ್ಲಿ ಇಂದಿನ ಮಾಧ್ಯಮಗಳೂ ಸಾಗಬೇಕಿದೆ. ಕರ್ನಾಟಕ ಪತ್ರಿಕಾ ಅಕಾಡೆಮಿಯು ಪತ್ರಕರ್ತರ ಹಿತರಕ್ಷಣೆ, ವೃತ್ತಿಪರ ಕೌಶಲ್ಯ ಅಭಿವೃದ್ಧಿ ಹಾಗೂ ಮಾಧ್ಯಮ ಕ್ಷೇತ್ರದ ಸುಧಾರಣೆಗೆ ಅಗತ್ಯವಿರುವ ಎಲ್ಲಾ ರೀತಿಯ ಪ್ರೋತ್ಸಾಹ ಮತ್ತು ಸಹಕಾರವನ್ನು ನೀಡುತ್ತಿದೆ ಎಂದು ಶ್ಲಾಘಿಸಿದರು.

“ಡಿಜಿಟಲ್ ಯುಗದಲ್ಲಿ ನಿಜ ಪತ್ರಕರ್ತರು ಯಾರು?” ಎಂಬ ವಿಷಯದ ಕುರಿತು ಮಾತನಾಡಿದ ಹಿರಿಯ ಪತ್ರಕರ್ತರಾದ ಅಬ್ಬುಸ್ಸಲಾಂ ಪುತ್ತಿಗೆ ಅವರು, ಹೊಸತನವನ್ನು ಯಾರು ಆವಿಷ್ಕರಿಸುತ್ತಾರೋ ಮತ್ತು ಸ್ವೀಕರಿಸುತ್ತಾರೋ ಅವರು ಜಗತ್ತನ್ನು ಆಳುತ್ತಾರೆ. “ಇಂದಿನ ಡಿಜಿಟಲ್ ಯುಗವು ಮುದ್ರಣ ಮಾಧ್ಯಮಕ್ಕೆ ಶತ್ರುವಲ್ಲ, ಬದಲಿಗೆ ಅದೊಂದು ವರದಾನವಾಗಿದೆ” ಎಂದು ಅವರು ಅಭಿಪ್ರಾಯಪಟ್ಟರು.

ಹಿಂದೆ ಪತ್ರಿಕೆಯನ್ನು ಓದಲು ಎರಡು ಕೈಗಳ ಅಗತ್ಯವಿತ್ತು. ಆದರೆ ಇಂದು ಅದೇ ಪತ್ರಿಕೆಯನ್ನು ತಂತ್ರಜ್ಞಾನದ ನೆರವಿನಿಂದ ಕೇವಲ ಒಂದೇ ಕೈಯಲ್ಲಿ, ಮೊಬೈಲ್ ಸ್ಕ್ರೀನ್ ಗಳ ಮೂಲಕ ಓದಬಹುದಾಗಿದೆ. ಕೇವಲ ಒಂದು ಲಕ್ಷ ಮುದ್ರಿತ ಪ್ರತಿಗಳ ಮೂಲಕ ಒಂದು ಲಕ್ಷ ಜನರನ್ನು ತಲುಪುತ್ತಿದ್ದ ಪತ್ರಿಕೆಗಳು, ಇಂದು ಹೊಸ ತಂತ್ರಜ್ಞಾನದಿಂದಾಗಿ ಕೋಟ್ಯಂತರ ಜನರನ್ನು ತಲುಪುತ್ತಿವೆ. ಹಾಗಾಗಿ, ಮುದ್ರಣ ಮಾಧ್ಯಮದವರು ಡಿಜಿಟಲ್ ಯುಗದ ಬಲಿಪಶುಗಳಲ್ಲ, ಅದರ ಫಲಾನುಭವಿಗಳು ಎಂದು ಸ್ಪಷ್ಟಪಡಿಸಿದರು.

ಹಿಂದೆ ರೇಡಿಯೋ ಬಂದಾಗ ಮುದ್ರಣ ಮಾಧ್ಯಮ ಮುಗಿಯಿತು ಅಂದುಕೊಂಡಿದ್ದರು. ಆ ಬಳಿಕ ಟಿವಿ ಬಂದಾಗಲೂ ಪತ್ರಿಕೋದ್ಯಮದ ಆಯುಷ್ಯ ಮುಗಿಯಿತು ಎಂದೇ ವಿಶ್ಲೇಷಿಸಲಾಗಿತ್ತು. ಆದರೆ ಇಂದು ಟಿವಿ ಮಾಧ್ಯಮವೇ ಕೊನೆಯ ಹಂತ ತಲುಪುತ್ತಿರುವಂತೆ ಕಾಣುತ್ತಿದೆ, ರೇಡಿಯೋ ಯುಗವೂ ಮರೆಯಾಗಿದೆ. ಆದರೆ ಮುದ್ರಿತ ಪತ್ರಿಕೆ ಮಾತ್ರ ಇಂದಿಗೂ ಅತ್ಯಂತ ಶಕ್ತಿಶಾಲಿಯಾಗಿ, ಸಜೀವವಾಗಿ ಉಳಿದುಕೊಂಡಿದೆ. ಜಪಾನ್ ಅಂತಹ ತಂತ್ರಜ್ಞಾನದ ಮುಂಚೂಣಿ ದೇಶದಲ್ಲೂ ಇಂದಿಗೂ ಮುದ್ರಿತ ಪತ್ರಿಕೆಗಳಿಗೆ ಗಣನೀಯ ಪ್ರಮಾಣದ ಬೇಡಿಕೆ ಇದೆ.

ಸಾಧನಗಳು ಅಥವಾ ತಂತ್ರಜ್ಞಾನಗಳು ಎಷ್ಟೇ ಬದಲಾದರೂ ಪತ್ರಕರ್ತನ ಮೌಲ್ಯಗಳು ಮತ್ತು ಸಮಾಜದ ಬಗೆಗಿನ ಬದ್ಧತೆಗಳು ಬದಲಾಗುವುದಿಲ್ಲ. ಮುದ್ರಣ ಯುಗ, ಡಿಜಿಟಲ್ ಯುಗ ಅಥವಾ ಮುಂಬರಲಿರುವ ಎಐ ಯುಗ ಯಾವುದಾದರೂ ಇರಲಿ; ವಿಶ್ವಾಸಾರ್ಹ ಮಾಹಿತಿ ನೀಡುವುದು, ಸದ್ವಿಚಾರಗಳನ್ನು ಪ್ರಸಾರ ಮಾಡುವುದು ಮತ್ತು ಸಮಾಜವನ್ನು ಜಾಗೃತ ಸ್ಥಿತಿಯಲ್ಲಿಡುವುದು ಪತ್ರಕರ್ತರ ಮುಖ್ಯ ಕರ್ತವ್ಯವಾಗಿದೆ ಎಂದರು.

ತೆಲಂಗಾಣ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಕೆ. ಶ್ರೀನಿವಾಸ ರೆಡ್ಡಿ ಅವರು ಮಾತನಾಡಿ ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳು ಗಡಿಗಳಿಂದ ಬೇರ್ಪಟ್ಟಿದ್ದರೂ ಮಾಧ್ಯಮ ಸಂಸ್ಥೆಗಳಿಗಿರುವ ಸಮಸ್ಯೆ, ಸವಾಲುಗಳಿಂದ ಒಂದಾಗಿವೆ. ಪ್ರಾದೇಶಿಕ ಅಕಾಡೆಮಿಗಳು ಸ್ಥಳೀಯ ಭಾಷೆಗೆ ಆದ್ಯತೆ ನೀಡಬೇಕು. ಕರ್ನಾಟಕ ಪತ್ರಿಕಾ ದಿನಾಚರಣೆ ಆಚರಿಸಿದಂತೆ ನಮ್ಮಲ್ಲೂ ತೆಲುಗು ಪತ್ರಿಕಾ ದಿನಾಚರಣೆಯನ್ನೂ ಆಚರಿಸುವ ಅಗತ್ಯವಿದೆ ಎಂದು ಆಶಿಸಿದರು.

ಡಿಜಿಟಲ್ ಯುಗ ಮಾಧ್ಯಮ ಕ್ಷೇತ್ರದಲ್ಲಿ ಮಾಹಿತಿ ಕ್ರಾಂತಿಯನ್ನೇ ಉಂಟುಮಾಡಿದೆ. ಆದರೆ ಇದರೊಂದಿಗೆ ಬಿಕ್ಕಟ್ಟನ್ನೂ ಸೃಷ್ಟಿಸಿದೆ. ಬಹುತೇಕ ಮಾಧ್ಯಮಗಳು ರಾಜಿ ಮಾಡಿಕೊಂಡಿರುವ ಈ ಹೊತ್ತಿನಲ್ಲಿ ಮೋಸದಿಂದ ಹಣ ಗಳಿಸುವ ದೊಡ್ಡ ಸಂಸ್ಥೆಗಳ ವಿರುದ್ಧ ಹೋರಾಡುತ್ತಿದ್ದೇವೆ. ಈ ಪ್ರತಿಕೂಲ ವಾತಾವರಣದಲ್ಲಿ ಯಾರು ನಿಜವಾದ ಪತ್ರಕರ್ತ ಎಂಬ ಪ್ರಶ್ನೆಯನ್ನು ನಾವು ಕೇಳಬೇಕಿದೆ. ಡಿಜಿಟಲ್ ಲೋಕದ ಆಡಳಿತವನ್ನು ನೇರ ಹಾಗೂ ಸಾಂಸ್ಥಿಕವಾಗಿ ವಿರೋಧಿಸಲು ಇಚ್ಚಿಸುವವರನ್ನು ನೈಜ ಪತ್ರಕರ್ತ ಎಂದು ಮರು ವಾಖ್ಯಾನಿಸಬಹುದಾಗಿದೆ. ಇನ್ನು ರೋಚಕ ಸುದ್ದಿಗಳಿಗೆ ಮಹತ್ವ ನೀಡುತ್ತಿರುವ ಮಾಧ್ಯಮಗಳು, ಸತ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದೆ ಎಂದು ಅವರು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಮಾಧ್ಯಮ ಅಕಾಡೆಮಿಯ ವಾರ್ಷಿಕ ವರದಿ ಹಾಗೂ, ‘ಭಾರತೀಯ ಪತ್ರಿಕೋದ್ಯಮʼ ಎಂಬ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಪತ್ರಿಕಾ ಕ್ಷೇತ್ರದ ವಿವಿಧ ವಿಷಯಗಳಲ್ಲಿ ಸಂಶೋಧನೆ ನಡೆಸಿ ಮಾಧ್ಯಮ ಅಕಾಡೆಮಿಗೆ ವರದಿ ಸಲ್ಲಿಸಿದ ಮಾಧ್ಯಮ ಪ್ರತಿನಿಧಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು. ಹಾಗೆಯೇ ಹಿಂದುಳಿದ ವರ್ಗದ ಮಾಧ್ಯಮ ಪ್ರತಿನಿಧಿಗಳಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಲ್ಯಾಪ್ ಟಾಪ್ ಮತ್ತು ಕ್ಯಾಮರಾ ಒಳಗೊಂಡ ಮೀಡಿಯಾ ಕಿಟ್ ಅನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಆಯೇಶಾ ಖಾನಂ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ್ ಬಿಳಿಮಲೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಎಂ.ಎನ್. ಅನುಚೇತ್, ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರಾದ ವೂಡೇ ಪಿ.ಕೃಷ್ಣ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷರಾದ ಡಾ. ಆರ್. ಪೂರ್ಣಿಮಾ, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿಗಳಾದ ಸಹನಾ. ಎಂ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಜಿ.ಸಿ.ಲೋಕೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ ಡೊಳ್ಳಿನ್, ಉಪನಿರ್ದೇಶಕರಾದ ಗುರುನಾಥ ಕಡಬೂರ ಅವರು ಸೇರಿದಂತೆ ಹಿರಿಯ ಪತ್ರಕರ್ತರು ಉಪಸ್ಥಿತರಿದ್ದರು.


Share

You cannot copy content of this page