ಸಮಗ್ರ ಸುದ್ದಿ

ವಿಶೇಷ ಸಮಗ್ರ ಪರಿಷ್ಕರಣೆ (SIR) ಹಿನ್ನೆಲೆ: ಜುಲೈ 4ರಂದು ನಡೆಯಬೇಕಿದ್ದ “ನನ್ನ ಇ-ಖಾತಾ, ನನ್ನ ಹಕ್ಕು” ಅಭಿಯಾನ ರದ್ದು – ಮಹೇಶ್ವರ್ ರಾವ್

Share

ಬೆಂಗಳೂರು:ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಜುಲೈ 4, 2026 (ಶನಿವಾರ) ರಂದು ನಡೆಯಬೇಕಿದ್ದ “ನನ್ನ ಇ-ಖಾತಾ, ನನ್ನ ಹಕ್ಕು” ಅಭಿಯಾನವನ್ನು ರದ್ದುಪಡಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ತಿಳಿಸಿದರು.

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕಂದಾಯ ಅಧಿಕಾರಿಗಳು ಮತದಾರ ನೋಂದಣಾಧಿಕಾರಿಗಳಾಗಿ (ERO), ಸಹಾಯಕ ಕಂದಾಯ ಅಧಿಕಾರಿಗಳು (ARO) ಸಹಾಯಕ ಮತದಾರ ನೋಂದಣಾಧಿಕಾರಿಗಳಾಗಿ ಹಾಗೂ ಕಂದಾಯ ಮೌಲ್ಯ ಮಾಪಕರು(Assesors ), ಕಂದಾಯ ಪರಿವೀಕ್ಷಕರು (RI) ಮತ್ತು ಕಂದಾಯ ವಸೂಲಿಗಾರರು (TI) ಬಿಎಲ್‌ಒಗಳ (BLO) ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆದ್ದರಿಂದ, ಖಾತಾ ಅಭಿಯಾನ ನಡೆಸುವುದು ಅಸಾಧ್ಯವಾಗಿದ್ದು, ಇ-ಖಾತಾ ಅರ್ಜಿಗಳ ನೋಂದಣಿ, ತಿದ್ದುಪಡಿ, ಅರ್ಜಿಗಳ ಸ್ಥಿತಿಗತಿ ಪರಿಶೀಲನೆ ಹಾಗೂ ಇತರೆ ಇ-ಖಾತಾ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿ ಶನಿವಾರ ಆಯೋಜಿಸಲಾಗುತ್ತಿರುವ “ನನ್ನ ಇ-ಖಾತಾ, ನನ್ನ ಹಕ್ಕು” ಅಭಿಯಾನ ಜುಲೈ 4ರಂದು ನಡೆಯುವುದಿಲ್ಲ ಎಂದು ಸಾರ್ವಜನಿಕರಿಗೆ ತಿಳಿಸಲಾಗಿದೆ.

ಅಭಿಯಾನವನ್ನು ಪುನರಾರಂಭಿಸುವ ದಿನಾಂಕವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು. ನಾಗರಿಕರಿಗೆ ತ್ವರಿತ, ಪಾರದರ್ಶಕ ಹಾಗೂ ಗುಣಮಟ್ಟದ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬದ್ಧವಾಗಿದ್ದು, ಇ-ಖಾತಾ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಲು ಅಗತ್ಯ ಕ್ರಮಗಳನ್ನು ಮುಂದುವರಿಸಲಿದೆ.


Share

You cannot copy content of this page