ಬೆಂಗಳೂರು: ಉಪ ಮುಖ್ಯಮಂತ್ರಿಗಳು, ಕಂದಾಯ ಮತ್ತು ಕ್ರೀಡಾ ಸಚಿವರಾದ ಡಾ. ಜಿ. ಪರಮೇಶ್ವರ್ ಅವರನ್ನು ಸದಾಶಿವನಗರದ ಗೃಹ ಕಚೇರಿಯಲ್ಲಿ ಗ್ಲೋಬಲ್ ಚೆಸ್ ಲೀಗ್ ನಿಯೋಗವು ಇಂದು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿತು.
ವಿಶ್ವದ ಅತಿದೊಡ್ಡ ಚೆಸ್ ಲೀಗ್ ಆಗಿರುವ ಗ್ಲೋಬಲ್ ಚೆಸ್ ಲೀಗ್‌ನ 4ನೇ ಆವೃತ್ತಿಯನ್ನು ಬೆಂಗಳೂರಿನಲ್ಲಿ ಆಯೋಜಿಸಲು ಉತ್ಸುಕತೆ ವ್ಯಕ್ತಪಡಿಸಿದ ನಿಯೋಗವು, ಈ ಸಂಬಂಧ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಕಾರವನ್ನು ಕೋರಿತು. ಈ ಕುರಿತು ಸುದೀರ್ಘ ಮಾತುಕತೆ ನಡೆಯಿತು.
ವಿಶ್ವಮಟ್ಟದ ಕ್ರೀಡಾಕೂಟಗಳಿಗೆ ಬೆಂಗಳೂರು ಆತಿಥ್ಯ ವಹಿಸುವ ಮೂಲಕ ರಾಜ್ಯದ ಕ್ರೀಡಾ ಕ್ಷೇತ್ರಕ್ಕೆ ಹೊಸ ಉತ್ತೇಜನ ದೊರೆಯಲಿದ್ದು, ಇಂತಹ ಪ್ರತಿಷ್ಠಿತ ಕಾರ್ಯಕ್ರಮಗಳಿಗೆ ಸರ್ಕಾರ ಅಗತ್ಯ ಸಹಕಾರ ನೀಡಲು ಬದ್ಧವಾಗಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ಈ ಸಂದರ್ಭದಲ್ಲಿ ಗ್ಲೋಬಲ್ ಚೆಸ್ ಲೀಗ್‌ನ ಸಿಇಒ ಗೌರವ್ ರಕ್ಷಿತ್, ಅಂತರರಾಷ್ಟ್ರೀಯ ಚೆಸ್ ಆಟಗಾರ ಪ್ರಚುರ ಪಿ.ಪಿ. ಸೇರಿದಂತೆ ನಿಯೋಗದ ಸದಸ್ಯರು ಉಪಸ್ಥಿತರಿದ್ದರು.
