ಬೆಂಗಳೂರು : ರಾಜ್ಯದ ವಿದ್ಯುತ್ ಪ್ರಸರಣ ಜಾಲದ ಡಿಜಿಟಲ್ ಭದ್ರತೆಯನ್ನು ಮತ್ತಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆದಿರುವ ‘ಝೀರೋ ಟ್ರಸ್ಟ್ ಸೈಬರ್ ಸೆಕ್ಯುರಿಟಿ ಆರ್ಕಿಟೆಕ್ಚರ್’ ಅನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದೆ. ಇದರೊಂದಿಗೆ, ಈ ಅತ್ಯಾಧುನಿಕ ಸೈಬರ್ ಭದ್ರತಾ ವ್ಯವಸ್ಥೆಯನ್ನು ಅಳವಡಿಸಿಕೊಂಡ ದೇಶದ ಮೊದಲ ರಾಜ್ಯ ವಿದ್ಯುತ್ ಪ್ರಸರಣ ನಿಗಮ ಎಂಬ ಹೆಗ್ಗಳಿಕೆಗೆ ಕೆಪಿಟಿಸಿಎಲ್ ಪಾತ್ರವಾಗಿದೆ.
ರಾಜ್ಯದ ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನು ಸೈಬರ್ ದಾಳಿಗಳಿಂದ ರಕ್ಷಿಸುವ ನಿಟ್ಟಿನಲ್ಲಿ ಈ ಸೈಬರ್ ಸೆಕ್ಯೂರಿಟಿಯನ್ನು ಅಳವಡಿಸಿಕೊಂಡಿದೆ. ಕೆಪಿಟಿಸಿಎಲ್‌ನ ಡಿಜಿಟಲ್ ರೂಪಾಂತರದಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ಕಾರ್ಯಾಚರಣೆ, ಎಂಜಿನಿಯರಿಂಗ್, ಹಣಕಾಸು ಹಾಗೂ ಆಡಳಿತ ವ್ಯವಸ್ಥೆಗಳನ್ನು ಅತ್ಯಾಧುನಿಕ ಭದ್ರತಾ ಚೌಕಟ್ಟಿನಡಿ ತರಲಿದೆ.
ಪ್ರಸ್ತುತ ಕೆಪಿಟಿಸಿಎಲ್‌ನ ಕೇಂದ್ರ ಕಚೇರಿ, ಉಪಕೇಂದ್ರಗಳು, ಕಾರ್ಯಾಚರಣಾ ಕೇಂದ್ರಗಳು, ಕ್ಷೇತ್ರ ಮಟ್ಟದ ಕಚೇರಿಗಳು ಹಾಗೂ ದೂರದ ಕಾರ್ಯ ವ್ಯವಸ್ಥೆಯಲ್ಲಿ 3,000ಕ್ಕೂ ಹೆಚ್ಚು ಬಳಕೆದಾರರು ವಿವಿಧ ಡಿಜಿಟಲ್ ಸೇವೆಗಳನ್ನು ಬಳಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವೇಗವಾಗಿ ವಿಸ್ತರಿಸುತ್ತಿರುವ ಡಿಜಿಟಲ್ ಮೂಲಸೌಕರ್ಯವನ್ನು ಸುರಕ್ಷಿತಗೊಳಿಸಲು ಜಾಗತಿಕ ಮಟ್ಟದ ಹೊಸ ತಲೆಮಾರಿನ ಸೈಬರ್ ಭದ್ರತಾ ವ್ಯವಸ್ಥೆಯ ಅಗತ್ಯತೆ ಕಂಡುಬಂದಿತ್ತು.
ಸಾಂಪ್ರದಾಯಿಕ ನೆಟ್‌ವರ್ಕ್ ಭದ್ರತಾ ವ್ಯವಸ್ಥೆಗಳಿಗಿಂತ ಭಿನ್ನವಾಗಿ, ‘Never Trust, Always Verify’ ಎಂಬ ತತ್ವದ ಮೇಲೆ ಕಾರ್ಯನಿರ್ವಹಿಸುವ ಝೀರೋ ಟ್ರಸ್ಟ್ ಮಾದರಿಯಲ್ಲಿ, ಪ್ರತಿಯೊಬ್ಬ ಬಳಕೆದಾರ, ಸಾಧನ ಹಾಗೂ ಆಕ್ಸೆಸ್ ವಿನಂತಿಯನ್ನು ನಿರಂತರವಾಗಿ ಗುರುತು, ಸಾಧನದ ಸ್ಥಿತಿ, ಬಳಕೆದಾರರಿಗೆ ನೀಡಲಾಗಿರುವ ಅನುಮತಿ ಮತ್ತು ಅದರಿಂದಾಗುವ ಅಪಾಯದ ಮಟ್ಟವನ್ನು ಪರಿಶೀಲಿಸಿದ ಬಳಿಕವೇ ಯಾವುದೇ ಅಪ್ಲಿಕೇಶನ್ ಅಥವಾ ವ್ಯವಸ್ಥೆಗೆ ಅಕ್ಸೆಸ್ ನೀಡಲಾಗುತ್ತದೆ.
ಈ ಯೋಜನೆಯಡಿ ಕೆಪಿಟಿಸಿಎಲ್ ಸುಮಾರು 3,000 ಎಂಟರ್‌ಪ್ರೈಸ್ ಬಳಕೆದಾರರಿಗಾಗಿ Zscaler ಸಂಸ್ಥೆಯ ಕ್ಲೌಡ್ ಆಧಾರಿತ ‘Zero Trust Exchange’ ವೇದಿಕೆಯನ್ನು ಅಳವಡಿಸಿಕೊಂಡಿದೆ. ಈ ತಂತ್ರಜ್ಞಾನದ ಮೂಲಕ ಪಬ್ಲಿಕ್ ಇಂಟರ್‌ನೆಟ್‌ಗೆ ಪ್ರಮುಖ ಮಾಹಿತಿಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡದೆ, ಅಧಿಕೃತ ಬಳಕೆದಾರರಿಗೆ ಮಾತ್ರ ಸುರಕ್ಷಿತ ಹಾಗೂ ಸುಲಭ ಪ್ರವೇಶವನ್ನು ಒದಗಿಸಲಾಗುತ್ತದೆ. ಇದರಿಂದ ಸಾಂಪ್ರದಾಯಿಕ VPN ಆಧಾರಿತ ವ್ಯವಸ್ಥೆಗಳಲ್ಲಿ ಕಂಡುಬರುವ ಭದ್ರತಾ ಲೋಪಗಳನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗಲಿದೆ.
ಈ ಹೊಸ ಸೈಬರ್ ಭದ್ರತಾ ವ್ಯವಸ್ಥೆಯು ಫಿಶಿಂಗ್, ರ್ಯಾನ್ಸಮ್‌ವೇರ್ (Ransomware), ಮಾಲ್‌ವೇರ್ (Malware), ಪಾಸ್‌ವರ್ಡ್ ಕಳವು, ಅನಧಿಕೃತ ಅಕ್ಸೆಸ್ ಹಾಗೂ ದತ್ತಾಂಶ ಸೋರಿಕೆಯಂತಹ ಸೈಬರ್ ಅಪಾಯಗಳಿಂದ ಕೆಪಿಟಿಸಿಎಲ್‌ನ ಪ್ರಮುಖ ಮೂಲಸೌಕರ್ಯಗಳಿಗೆ ರಕ್ಷಣೆ ಒದಗಿಸುತ್ತದೆ. ನಿರಂತರ ದೃಢೀಕರಣ, ಕನಿಷ್ಠ ಪ್ರವೇಶ ಹಕ್ಕು (Least Privilege Access) ಹಾಗೂ ಕೇಂದ್ರೀಕೃತ ಭದ್ರತಾ ಮೇಲ್ವಿಚಾರಣೆಯ ಮೂಲಕ ಸಂಭಾವ್ಯ ಸೈಬರ್ ಬೆದರಿಕೆಗಳನ್ನು ತ್ವರಿತವಾಗಿ ಪತ್ತೆಹಚ್ಚಿ ಪರಿಣಾಮಕಾರಿಯಾಗಿ ನಿರ್ವಹಿಸಲು ಈ ವ್ಯವಸ್ಥೆ ನೆರವಾಗಲಿದೆ.
ರಾಜ್ಯದ ವಿದ್ಯುತ್ ಬೇಡಿಕೆಯ ನಿರಂತರ ಏರಿಕೆ ಹಾಗೂ ಗ್ರಿಡ್ ಆಧುನೀಕರಣದ ಕ್ರಮಗಳಿಗೆ ಪೂರಕವಾಗಿ, ಸುರಕ್ಷಿತ ಹಾಗೂ ಭವಿಷ್ಯಕ್ಕೆ ಸಜ್ಜಾದ ಡಿಜಿಟಲ್ ವಿದ್ಯುತ್ ಪ್ರಸರಣ ಜಾಲವನ್ನು ನಿರ್ಮಿಸುವ ಕೆಪಿಟಿಸಿಎಲ್‌ನ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಇಂಧನ ಮತ್ತು ಪ್ರವಾಸೋದ್ಯಮ ಸಚಿವರಾದ ಕೆ.ಜೆ. ಜಾರ್ಜ್, “ಕರ್ನಾಟಕದಲ್ಲಿ ವಿದ್ಯುತ್ ಮೂಲಸೌಕರ್ಯವನ್ನು ಆಧುನೀಕರಿಸುತ್ತಿರುವ ಈ ಸಂದರ್ಭದಲ್ಲಿ, ಸೈಬರ್ ಭದ್ರತೆಯೂ ಭೌತಿಕ ವಿದ್ಯುತ್ ಜಾಲದಷ್ಟೇ ಮಹತ್ವದ್ದಾಗಿದೆ. ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆದಿರುವ ಝೀರೋ ಟ್ರಸ್ಟ್ ಸೈಬರ್ ಭದ್ರತಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೂಲಕ ಕೆಪಿಟಿಸಿಎಲ್ ದೇಶದಲ್ಲೇ ಮಾದರಿಯಾಗಿದೆ. ನಾಗರಿಕರು, ಕೈಗಾರಿಕೆಗಳು ಹಾಗೂ ಸಾರ್ವಜನಿಕ ಸಂಸ್ಥೆಗಳಿಗೆ ವಿಶ್ವಾಸಾರ್ಹ ವಿದ್ಯುತ್ ಪೂರೈಕೆ ನೀಡಲು ಸುರಕ್ಷಿತ ಡಿಜಿಟಲ್ ಪರಿಸರ ಅತ್ಯಗತ್ಯ. ಈ ಉಪಕ್ರಮವು ತಂತ್ರಜ್ಞಾನ ಆಧಾರಿತ ಇಂಧನ ಕ್ಷೇತ್ರದಲ್ಲಿ ಕರ್ನಾಟಕವನ್ನು ಮತ್ತಷ್ಟು ಮುಂಚೂಣಿಗೆ ಕೊಂಡೊಯ್ಯಲಿದೆ.”
ಕೆಪಿಟಿಸಿಎಲ್, ವ್ಯವಸ್ಥಾಪಕ ನಿರ್ದೇಶಕರಾದ ಡಾ. ವಿ. ರಾಮ್ ಪ್ರಸಾತ್ ಮನೋಹರ್, “ಡಿಜಿಟಲ್ ವ್ಯವಸ್ಥೆಯ ಸಮಪರ್ಕ ಅಲವಡಿಕೆಗೆ ಡಿಜಿಟಲ್ ವಿಶ್ವಾಸ ಬಹಳ ಅತ್ಯಗತ್ಯ. ಝೀರೋ ಟ್ರಸ್ಟ್ ಸೈಬರ್ ಭದ್ರತಾ ವ್ಯವಸ್ಥೆಯ ಅಳವಡಿಕೆ ಮೂಲಕ ಕೆಪಿಟಿಸಿಎಲ್ ತನ್ನ ಸೈಬರ್ ಭದ್ರತಾ ಕಾರ್ಯತಂತ್ರದಲ್ಲಿ ಅಮೂಲಾಗ್ರ ಬದಲಾವಣೆಯನ್ನು ತಂದಿದೆ. ನೆಟ್‌ವರ್ಕ್‌ನೊಳಗಿನ ಯಾರನ್ನೂ ಸುಲಭವಾಗಿ ನಂಬುವ ಬದಲು, ಪ್ರತಿಯೊಬ್ಬ ಬಳಕೆದಾರ, ಪ್ರತಿಯೊಂದು ಸಾಧನ ಹಾಗೂ ಪ್ರತಿಯೊಂದು ವ್ಯವಹಾರವನ್ನು ನಿರಂತರವಾಗಿ ಪರಿಶೀಲಿಸಿದ ಬಳಿಕವೇ ಆಕ್ಸೆಸ್ ನೀಡಲಾಗುತ್ತದೆ. ಈ ವ್ಯವಸ್ಥೆಯು ನಮ್ಮ ಮಹತ್ವದ ವಿದ್ಯುತ್ ಮೂಲಸೌಕರ್ಯಗಳಿಗೆ ಡಿಜಿಟಲ್ ರಕ್ಷಣೆ ಒದಗಿಸುವುದರ ಜೊತೆಗೆ, ಇಂಟಲಿಜೆಂಟ್, ಸಂಪರ್ಕಿತ ಹಾಗೂ ಭವಿಷ್ಯಕ್ಕೆ ಸಜ್ಜಾದ ವಿದ್ಯುತ್ ಗ್ರಿಡ್ ನಿರ್ಮಾಣಕ್ಕೆ ಭದ್ರ ಅಡಿಪಾಯವಾಗಲಿದೆ” ಎಂದು ಹೇಳಿದ್ದಾರೆ.
