ಸಮಗ್ರ ಸುದ್ದಿ

ಸಕಲ ಸಿದ್ಧತೆಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ ದಸರಾ ಮಹೋತ್ಸವ : ಡಿಸಿಎಂ ಜಿ.ಪರಮೇಶ್ವರ

Share

ಬೆಂಗಳೂರು: ನಾಡಿನ ಪರಂಪರೆ, ಸಂಸ್ಕೃತಿ, ಇತಿಹಾಸವನ್ನು ಪ್ರತಿಬಿಂಬಿಸುವ ನಾಡಹಬ್ಬ ಮೈಸೂರು ದಸರಾ ಕಾರ್ಯಕ್ರಮವನ್ನು ಈ ಬಾರಿ ಹೆಚ್ಚು ವಿಜೃಂಭಣೆಯಿಂದ ಆಚರಿಸೋಣ ಎಂದು ಉಪಮುಖ್ಯಮಂತ್ರಿಗಳಾದ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ʼನಾಡಹಬ್ಬ ಮೈಸೂರು ದಸರಾ ಮಹೋತ್ಸವ -2026ʼ ಆಚರಣೆ ಸಂಬಂಧ ನಡೆದ ಪೂರ್ವಭಾವಿ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದರು.

ಮೈಸೂರು ದಸರಾ ಸುಮ್ಮನೆ ನಡೆಯುವ ಯಾವುದೋ ಸಾಮಾನ್ಯ ಉತ್ಸವವಲ್ಲ. ಪ್ರತಿ ವರ್ಷಕ್ಕೊಮ್ಮೆ ದೇವಸ್ಥಾನಗಳಲ್ಲಿ ನಡೆಯುವ ರಥೋತ್ಸವ ಅಥವಾ ಪೂಜೆಯೂ ಅಲ್ಲ‌. ಇದು ನಾಡಿನ ಪರಂಪರೆ, ಸಂಸ್ಕೃತಿ, ಇತಿಹಾಸವನ್ನು ಪ್ರತಿಬಿಂಬಿಸುವಂತಹ ಕಾರ್ಯಕ್ರಮ. ನಾಡಿನಲ್ಲಿ ಬರಗಾಲದ ಛಾಯೆಯಿದ್ದರೂ, ನಮ್ಮ ನಾಡಹಬ್ಬ ಆಚರಣೆ ಯಾವುದೇ ಸಮಸ್ಯೆಯಾಗದಂತೆ ವಿಜೃಂಭಣೆಯಿಂದ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳೋಣ ಎಂದು ತಿಳಿಸಿದರು.

ಹಿಂದೆ ಮೈಸೂರು ಮಹಾರಾಜರು ಅಂಬಾರಿ ಮೇಲೆ ಮೆರವಣಿಗೆ ಬರುತ್ತಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆ ಬಂದ ಹಿನ್ನೆಲೆಯಲ್ಲಿ ಅದನ್ನು ಇಂದು ನೋಡಲು ಸಾಧ್ಯವಿಲ್ಲ‌. ನಾಡಿನ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪ್ರತಿಬಿಂಬಿಸುವ ಕೆಲಸ ಮಾಡಬೇಕು ಎಂದರು.

ವಿಜಯನಗರ ಅರಸರ ಕಾಲದಲ್ಲಿ ಮಹಾನವಮಿ ಹಬ್ಬ ಎಂದು ಆಚರಣೆ ಮಾಡಲಾಗುತ್ತಿತ್ತು. ಸಮಾಜದಲ್ಲಿನ ಕೆಟ್ಟದ್ದನ್ನು ನಿರ್ಮೂಲನೆ ಮಾಡಿರುವ ಮತ್ತು ಯಾವುದಾದರೂ ಯುದ್ಧದಲ್ಲಿ ರಾಜ್ಯವನ್ನು ಗೆದ್ದಿರುವ ಬಗ್ಗೆ ವಿಜಯೋತ್ಸವ ಆಚರಿಸಲಾಗುತ್ತಿತ್ತು. ತದನಂತರ ಮೈಸೂರು ಒಡೆಯರ್ ಸಂಸ್ಥಾನ 400 ವರ್ಷ ದಸರಾ ನಡೆಸಿಕೊಂಡು ಬಂದಿದೆ. ಇದನ್ನು ಸರಳವಾಗಿ ಆಚರಣೆ ಮಾಡುವುದು ಬೇಡ‌. ಸರಳವಾಗಿ ಆಚರಿಸುವ ಅವಶ್ಯಕತೆಯೂ ಇಲ್ಲ. ಈ ಬಗ್ಗೆ ಮುಖ್ಯಮಂತ್ರಿಯವರು ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದರು.

ಕಳೆದ ವರ್ಷ ಮೈಸೂರು ದಸರಾಕ್ಕೆ 25 ಲಕ್ಷಕ್ಕೂ ಹೆಚ್ಚು ಜನ ಭೇಟಿ ನೀಡಿದ್ದಾರೆ. ನಾನು ನಾಲ್ಕೈದು ಬಾರಿ ಗೃಹ ಸಚಿವನಾಗಿ ಜವಾಬ್ದಾರಿ‌ ನಿರ್ವಹಿಸಿದ್ದೇನೆ. ಪ್ರತಿದಿನ ಅಲ್ಲಿನ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆಯುತ್ತಿದ್ದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸಲಿಲ್ಲ. ಕಳೆದ ವರ್ಷ ಹೆಚ್ಚಿನ ಜನ ಆಗಮಿಸಿದ್ದರು. ಜಿಲ್ಲಾಡಳಿತ ಉತ್ತಮವಾಗಿ ಅಯೋಜನೆ ಮಾಡಿಕೊಟ್ಟಿದೆ. ಇದಕ್ಕೆ ಜನಪ್ರತಿನಿಧಿಗಳು ಸಹಕರಿಸಿರುವುದಾಗಿ ವಿವರಿಸಿದರು.

ಈಗ ಮುಖ್ಯಮಂತ್ರಿ ಡಿ.ಕೆ‌.ಶಿವಕುಮಾರ್ ಅವರು ಹೊಸ ಚಿಂತನೆಯೊಂದಿಗೆ ಅಧಿಕಾರ ವಹಿಸಿಕೊಂಡಿದ್ದಾರೆ‌. ರಾಜ್ಯದಲ್ಲಿ 16 ರಿಂದ 30 ವರ್ಷದೊಳಗಿನ 1.9 ಕೋಟಿ ಯುವಕರಿದ್ದಾರೆ‌. ಇವರಿಗೆ ನಮ್ಮ ಪರಂಪರೆ, ಸಂಸ್ಕೃತಿ, ಇತಿಹಾಸದ ಬಗ್ಗೆ ಸಂದೇಶ ನೀಡಬೇಕಲ್ಲವೇ? ಮೈಸೂರಿನ ಇತಿಹಾಸ ಪ್ರತಿಬಿಂಬಿಸುವ ವಸ್ತುಪ್ರದರ್ಶನವನ್ನು ನಡೆಸಬೇಕು. ಮೈಸೂರಿನ ಪರಂಪರೆಯನ್ನು ಸಾರುವ ದೀಪಾಲಂಕಾರ ಮಾಡಬೇಕು ಎಂದು ಸಲಹೆ ನೀಡಿದರು.

ಮೈಸೂರು ದಸರಾವನ್ನು ವಿಶ್ವಮಟ್ಟಕ್ಕೆ ಪ್ರಚುರಪಡಿಸುವ ಕೆಲಸವಾಗಬೇಕು. ಹೆಚ್ಚು ಪ್ರವಾಸಿಗರನ್ನು ಹೆಚ್ಚು ಸೆಳೆಯುವ ಪ್ರಯತ್ನ ಮಾಡಬೇಕು‌. ವಿದೇಶಿ ಪ್ರವಾಸಿಗರಿಗಾಗಿ ಮೈಸೂರು ಮಹಾರಾಜರು ಮೆಟ್ರೋಪೋಲೋ ಹೋಟೆಲ್ ಕಟ್ಟಿದ್ದರು‌. ಆ ಪ್ರಮಾಣದಲ್ಲಿ ಇಂದು ವಿದೇಶಿಗರು ಬರುತ್ತಿಲ್ಲ. ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ನಮ್ಮ ಪರಂಪರೆ ವಿಶ್ವಕ್ಕೆ ತಿಳಿಸಬೇಕು ಎಂದು ಸೂಚಿಸಿದರು.

ದಸರಾ ಕ್ರೀಡೆ ಯಶಸ್ವಿಯಾಗಿ ನಡೆಸುವ ಬಗ್ಗೆ ಚಿಂತಿಸಬೇಕು. ನಾವೆಲ್ಲ ದಸರಾ ಕ್ರೀಡೆಯಿಂದ ಗುರುತಿಸಿಕೊಂಡವರು. ಕ್ರೀಡೆಗಳು ತಾಲ್ಲೂಕು ಮಟ್ಟದಿಂದ ಪ್ರಾರಂಭವಾಗುತ್ತಿತ್ತು. ಯುವಕರಿಗೆ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸಿ, ಅವರಿಗೆ ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದರು.

ಕರ್ನಾಟಕವನ್ನು ಪರಿಣಾಮಕಾರಿಯಾಗಿ ಹೆಚ್ಚು ವಿಜೃಂಭಣೆಯಿಂದ ಪ್ರತಿಬಿಂಬಿಸಬೇಕು ಎಂಬ ಪರಿಕಲ್ಪನೆ ಮುಖ್ಯಮಂತ್ರಿಯವರಿಗಿದೆ. ಯುವ ದಸರಾವನ್ನು ಇನ್ನೂ ಹೆಚ್ಚು ಅರ್ಥಪೂರ್ಣವಾಗಿ ನಡೆಸಲು ವ್ಯವಸ್ಥೆ ಕೈಗೊಳ್ಳಬೇಕು ಎಂದರು.

ದಸರಾ ಆಚರಣೆ ಮೈಸೂರಿಗೆ ಸೀಮಿತವಾಗುವುದು ಬೇಡ. ಎಲ್ಲ ಕಡೆ ನಮ್ಮ ಪರಂಪರೆಯನ್ನು ಪ್ರತಿಬಿಂಬಿಸುವ ಕೆಲಸ ಆಗಬೇಕು. ಚಾಮರಾಜನಗರ, ಶ್ರೀರಂಗಪಟ್ಟಣ, ಮಡಿಕೇರಿ ಮತ್ತು ಮಂಗಳೂರಿನಲ್ಲಿ ದಸರಾ ಆಚರಿಸಲಾಗುತ್ತಿದೆ‌. ಕಳೆದ ಎರಡು ವರ್ಷದಿಂದ ತುಮಕೂರಿನಲ್ಲಿ ಆಚರಿಸಲಾಗುತ್ತಿದೆ. ಬೇರೆ ಜಿಲ್ಲೆಗಳಲ್ಲಿಯೂ ದಸರಾ ಆಚರಿಸುವುದು ಆಗಬೇಕು. ಆಯಾ ಜಿಲ್ಲೆಯ ಸಂಸ್ಕೃತಿ, ಕಲೆ, ಸಾಹಿತ್ಯದ ಬಗ್ಗೆ ಸ್ಥಳೀಯರಿಗೆ ತಿಳಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.

ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಳ್ಳಬೇಕು ಎಂಬ ಶಾಸಕರುಗಳ ಮಾತಿಗೆ ಪ್ರತಿಕ್ರಿಯಿಸಿದ ಡಿಸಿಎಂ, ಪ್ಯಾರೀಸ್, ರೋಮ್ ನಗರಗಳಲ್ಲಿ ಕಟ್ಟಡಗಳನ್ನು ಉತ್ತಮವಾಗಿ ಕಾಪಾಡಿಕೊಂಡಿದ್ದಾರೆ. ನಮ್ಮಲ್ಲೂ ಆ ಕೆಲಸ ಆಗಬೇಕು. ಕೋರ್ಟ್‌ನಲ್ಲಿ ಇರುವ ಕೇಸ್ ವಾದ ಮಾಡಿ, ಬಗೆಹರಿಸಬೇಕು. ಅಲ್ಲಿಯವರೆಗೂ ಹಾಳಾಗಲು ಬಿಡಬಾರದು ಎಂದು ಸೂಚಿಸಿದರು.

ದೇಶದಲ್ಲಿ ಎಲ್ಲಿಯೂ ದಸರಾ ಆಚರಣೆ ದೊಡ್ಡ ಮಟ್ಟದಲ್ಲಿ ನಡೆಯುವುದಿಲ್ಲ‌. ಮೈಸೂರಿನಲ್ಲಿ ಮಾತ್ರ ಹೆಚ್ಚು ಅರ್ಥಪೂರ್ಣವಾಗಿ ನಡೆಯುತ್ತದೆ. ಎಲ್ಲರನ್ನು ಒಟ್ಟಾಗಿಸಿಕೊಂಡು ಮತ್ತಷ್ಟು ಉತ್ತಮವಾಗಿ ದಸರಾ ಆಚರಿಸೋಣ. ಇತಿಹಾಸ ಇರುವ ನಾಡಹಬ್ಬವನ್ನು ವಿಜೃಂಭಣೆಯಿಂದ ಆಚರಿಸೋಣ ಎಂದು ತಿಳಿಸಿದರು.

ಸಚಿವರಾದ ಕೆ.ಜೆ.ಜಾರ್ಜ್, ಪ್ರಿಯಾಂಕ್ ಖರ್ಗೆ, ಡಾ. ಯತೀಂದ್ರ ಸಿದ್ದರಾಮಯ್ಯ, ಮೈಸೂರು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಶಾಸಕರುಗಳು, ಸರ್ಕಾರದ ಮುಖ್ಯಕಾರ್ಯದರ್ಶಿಗಳಾದ ಶಾಲಿನಿ ರಜನೀಶ್ ಸೇರಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು‌.


Share

You cannot copy content of this page