ಪಶ್ಚಿಮ ಬಂಗಾಳ: ವಾರ್ಷಿಕ 300 ದಶಲಕ್ಷ ಟನ್ ಉಕ್ಕನ್ನು ದೇಶಿಯವಾಗಿ ಉತ್ಪಾದಿಸುವ ಗುರಿಯೊಂದಿಗೆ ಪಶ್ಚಿಮ ಬಂಗಾಳದ ಬರ್ನ್‌ಪುರದ ಉಕ್ಕು ಕಾರ್ಖಾನೆಗೆ ಭೇಟಿ ನೀಡಿದ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು; ಜಾಗತಿಕ ಉಕ್ಕು ವಲಯದಲ್ಲಿ ಭಾರತದ ಸ್ಥಾನವು ಮತ್ತಷ್ಟು ವಿಸ್ತೃತವಾಗಿ ಬೆಳೆಯುತ್ತಿದೆ ಎಂದು ಹೇಳಿದರು.
ಈ ಇಸ್ಕೋ (IISCO) ಉಕ್ಕು ಕಾರ್ಖಾನೆಗೆ ಮೂರು ದಿನಗಳ ತಮ್ಮ ಭೇಟಿಯನ್ನು ಭಾನುವಾರ ಆರಂಭಿಸಿದ ಕೇಂದ್ರ ಸಚಿವರು; ಇಡೀ ಸ್ಥಾವರವನ್ನು ವ್ಯಾಪಕವಾಗಿ ಪರಿಶೀಲನೆ ನಡೆಸಿದರು.
ಭಾರತೀಯ ಉಕ್ಕು ಪ್ರಾಧಿಕಾರ (SAIL) ಅಡಿಯಲ್ಲಿ ಬರುವ ದೇಶದ ಅತ್ಯಂತ ಹಳೆಯ ಮತ್ತು ಮಹತ್ವದ ಸಂಯೋಜಿತ ಉಕ್ಕು ಸ್ಥಾವರಗಳಲ್ಲಿ ಇಸ್ಕೋ ಒಂದಾಗಿದ್ದು, ತಮ್ಮ ಭೇಟಿಯ ಸಂದರ್ಭದಲ್ಲಿ ಸಚಿವರು ಈಗಾಗಲೇ ಚಾಲ್ತಿಯಲ್ಲಿರುವ ವಿಸ್ತರಣಾ ಯೋಜನೆಗಳು, ಉತ್ಪಾದನಾ ಸೌಲಭ್ಯಗಳು, ಮೂಲಸೌಕರ್ಯ, ಸುಸ್ಥಿರತೆಗೆ ಸಂಬಂಧಿತ ಉಪಕ್ರಮಗಳು ಇತ್ಯಾದಿಗಳ ಬಗ್ಗೆ ಆಡಳಿತ ಮಂಡಳಿಯಿಂದ ಮಾಹಿತಿ ಪಡೆದುಕೊಂಡರು.
ಭಾರತವು ಉಕ್ಕು ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೊಂದಿರುವ ದೂರದೃಷ್ಟಿಗೆ ಅನುಗುಣವಾಗಿ ಕಾರ್ಖಾನೆಯ ಉತ್ಪಾದನೆಯನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಸಚಿವರು ಆಡಳಿತ ಮಂಡಳಿಯೊಂದಿಗೆ ಮಹತ್ವದ ಮಾತುಕತೆ ನಡೆಸಿದರು.
ಇಸ್ಕೊ ಸ್ಥಾವರವನ್ನು ಸಚಿವರು ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಉಕ್ಕು ಪ್ರಾಧಿಕಾರದ (SAIL) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಕುಮಾರ್ ಪಾಂಡಾ, ಇಸ್ಕೊ ಕಾರ್ಖಾನೆಯ ನಿರ್ದೇಶಕರು, ಇತರೆ ನಿರ್ದೇಶಕರು ಮತ್ತು ಇನ್ನಿತರ ಹಿರಿಯ ಅಧಿಕಾರಿಗಳು ಜತೆಯಲ್ಲಿದ್ದರು.
ಈ ಕಾರ್ಖಾನೆಯ ಉತ್ಪಾದನಾ ಸಾಮರ್ಥ್ಯ ವೃದ್ಧಿ ಉಪಕ್ರಮಗಳಲ್ಲಿ ಒಂದಾದ *
COB-12 (ಸ್ಟ್ಯಾಂಪ್ ಚಾರ್ಜ್ ಕೋಕ್ ಓವನ್ ಬ್ಯಾಟರಿ) ಯೋಜನೆಯನ್ನು ಸಚಿವರು ಪರಿಶೀಲಿಸಿದರು. ಬ್ಯಾಟರಿ ಪ್ರಾಪರ್, ಕೋಕ್ ಡ್ರೈ ಕೂಲಿಂಗ್ ಪ್ಲಾಂಟ್ (CDQ), ಉಪ ಉತ್ಪನ್ನಗಳ ಘಟಕ ಸೇರಿದಂತೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿದರು ಕೇಂದ್ರ ಸಚಿವರು.
‘ಜಾಗತಿಕ ಉಕ್ಕಿನ ಶಕ್ತಿ ಕೇಂದ್ರವಾಗುವತ್ತ ಭಾರತದ ನಾಗಾಲೋಟದಲ್ಲಿ ಮುನ್ನಡೆಯುತ್ತಿದ್ದು, ರಾಷ್ಟ್ರದ ಎಲ್ಲಾ ಉಕ್ಕು ಕಾರ್ಖಾನೆಗಳ ಉತ್ಪಾದನಾ ಸಾಮರ್ಥ್ಯವನ್ನು ವೃದ್ಧಿಸುವುದು ಹಾಗೂ ತಾಂತ್ರಿಕವಾಗಿ ಇಸ್ಕೊ ಸೇರಿದಂತೆ ಉಳಿದೆಲ್ಲ ಕೇಂದ್ರ ಸರಕಾರಿ ಸ್ವಾಮ್ಯದ ಘಟಕಗಳನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.
ತಮ್ಮ ಭೇಟಿಯ ಭಾಗವಾಗಿ, ಕುಮಾರಸ್ವಾಮಿ ಅವರು ಇಸ್ಕೋದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ 84000 ಘನ ಮೀಟರ್ ಸಂಗ್ರಹ ಸಾಮರ್ಥ್ಯದೊಂದಿಗೆ ನೀರು ಪೂರೈಕೆ ಮಾಡುವ ವಿಸ್ತರಣಾ ಯೋಜನೆಯನ್ನು ಉದ್ಘಾಟಿಸಿದರು.
ಈ ಸಂಯೋಜಿತ ವ್ಯವಸ್ಥೆಯು ಹೊಸದಾಗಿ ನಿರ್ಮಿಸಲಾದ ಬೂಸ್ಟರ್ ಪಂಪ್ ಹೌಸ್, COB-10 ಗಾಗಿ ಮೀಸಲಾದ ಪಂಪ್ ಹೌಸ್ ಮತ್ತು ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಪ್ರಕ್ರಿಯೆ ನೀರಿನ ಪಂಪ್ ಹೌಸ್ ಅನ್ನು ಒಳಗೊಂಡಿದೆ ಎಂದು ಅಧಿಕಾರಿಗಳು ಸಚಿವರಿಗೆ ತಿಳಿಸಿದರು. ಇದು ನೀರಿನ ಸಂರಕ್ಷಣೆಯನ್ನು ಗರಿಷ್ಠಗೊಳಿಸಲು, ನಷ್ಟವನ್ನು ಕಡಿಮೆ ಮಾಡಲು ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಗಮನಾರ್ಹವಾಗಿ ಸುಧಾರಿಸಲು ಕ್ಲೋಸ್ಡ್-ಲೂಪ್ ನೀರಿನ ಪರಿಚಲನೆ ವ್ಯವಸ್ಥೆಯನ್ನು ಸ್ಥಾಪಿಸುತ್ತದೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಸಚಿವರು ಬ್ಲಾಸ್ಟ್ ಫರ್ನೇಸ್ (ಕುಲುಮೆ) ಅನ್ನು ಪರಿಶೀಲಿಸಿದರು ಮತ್ತು ಅದರ ಕಾರ್ಯಾಚರಣೆಯ ಕಾರ್ಯಕ್ಷಮತೆ, ಉತ್ಪಾದನಾ ಸಾಮರ್ಥ್ಯ ಮತ್ತು ಸದ್ಯಕ್ಕೆ ನಡೆಯುತ್ತಿರುವ ಆಧುನೀಕರಣ ಉಪಕ್ರಮಗಳನ್ನು ಪರಿಶೀಲಿಸಿದರು. ಹಾಗೆಯೇ, ಸ್ಥಾವರವು 2025-26ನೇ ಹಣಕಾಸು ವರ್ಷದಲ್ಲಿ 2.9 ದಶಲಕ್ಷ ಟನ್ ಹಾಟ್ ಮೆಟಲ್ ಉತ್ಪಾದನೆಯ ಗುರಿಯನ್ನು ಸಾಧಿಸಿದೆ ಎಂದು ಅಧಿಕಾರಿಗಳು ಸಚಿವರಿಗೆ ತಿಳಿಸಿದರು.
ಕಾರ್ಖಾನೆ ಪರಿಶೀಲನೆ ನಂತರ ಕೇಂದ್ರ ಸಚಿವರು ಉಕ್ಕು ಸ್ಥಾವರದ ಒಟ್ಟಾರೆ ಕಾರ್ಯಕ್ಷಮತೆಯ ಕುರಿತು ಸಮಗ್ರ ಪರಿಶೀಲನಾ ಸಭೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಉತ್ಪಾದನಾ ಕಾರ್ಯಕ್ಷಮತೆ, ಕಾರ್ಯಾಚರಣೆಯ ದಕ್ಷತೆ, ಆಧುನೀಕರಣ ಯೋಜನೆಗಳು, ಸಾಮರ್ಥ್ಯ ವಿಸ್ತರಣೆ, ಸುಸ್ಥಿರತೆಯ ಉಪಕ್ರಮಗಳು, ಬಂಡವಾಳ ವೆಚ್ಚ, ತಂತ್ರಜ್ಞಾನ ಸುಧಾರಣೆ ಇತ್ಯಾದಿ ಅಂಶಗಳ ಬಗ್ಗೆ ಸಚಿವರು ಚರ್ಚೆನಡೆಸಿದರು.
ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರು ಪಶ್ಚಿಮ ಬಂಗಾಳದ ಕೈಗಾರಿಕೆ ಖಾತೆ ಸಚಿವ ಅಗ್ನಿಮಿತ್ರ ಪಾಲ್ ಅವರೊಂದಿಗೆ ಉಕ್ಕು ವಲಯದ ಅಭಿವೃದ್ಧಿ ಬಗ್ಗೆ ಚರ್ಚಿಸಿದರು. ಅಲ್ಲದೆ, ಈ ವಲಯದ ಬಲವರ್ಧನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಉತ್ತಮ ಸಮನ್ವಯ ಅಗತ್ಯವಿರುತ್ತದೆ ಎಂದು ಕೇಂದ್ರ ಸಚಿವರು ಪ್ರತಿಪಾದಿಸಿದರು.
