ಸಮಗ್ರ ಸುದ್ದಿ

ಕೃತಕ ಬುದ್ಧಿಮತ್ತೆ ಆಧಾರಿತ ‘ಪ್ರಬುದ್ಧ ಆಡಳಿತ’ದತ್ತ ಕರ್ನಾಟಕ: ಸಚಿವ ಪ್ರಿಯಾಂಕ್‌ ಖರ್ಗೆ

Share

ಬೆಂಗಳೂರು: ರಾಜ್ಯ ಸರ್ಕಾರವು ಪ್ರಬುದ್ಧ ಇ-ಆಡಳಿತದ ಮುಂದಿನ ಹಂತವಾದ ಕೃತಕ ಬುದ್ಧಿಮತ್ತೆ (AI) ಆಧಾರಿತ *
ಆಡಳಿತ’ದತ್ತ (Intelligence Governance – IG)** ಹೆಜ್ಜೆ ಇಡುತ್ತಿದೆ. ಭವಿಷ್ಯದ ಅಗತ್ಯಗಳಿಗನುಗುಣವಾಗಿ ಎಐ ಕೌಶಲಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ತಂತ್ರಜ್ಞಾನ ವಲಯದೊಂದಿಗೆ ಸಹ-ಸೃಷ್ಟಿ (Co-creation) ಸಹಭಾಗಿತ್ವವನ್ನು ಹೊಂದುವುದಕ್ಕೆ ಸರ್ಕಾರ ಆದ್ಯತೆ ನೀಡಿದೆ ಎಂದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಆಂಥ್ರೊಪಿಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಿ ಐರಿನಾ ಘೋಷ್‌ ಅವರು ಸಚಿವರನ್ನು ಭೇಟಿ ಮಾಡಿ, ಕರ್ನಾಟಕದ ಎಐ ಮುನ್ನೋಟ ಹಾಗೂ ಜಾಗತಿಕ ಸಹಕಾರದ ಅವಕಾಶಗಳ ಕುರಿತು ಚರ್ಚಿಸಿದ ಸಂದರ್ಭದಲ್ಲಿ ಅವರು ಈ ವಿಷಯ ಹಂಚಿಕೊಂಡಿದ್ದಾರೆ.

ಎಐ ತಂತ್ರಜ್ಞಾನವನ್ನು ಬಳಸಿಕೊಂಡು ಹೆಚ್ಚು ಸ್ಪಂದನಶೀಲ, ದಕ್ಷ ಹಾಗೂ ನಾಗರಿಕ ಕೇಂದ್ರಿತ ವ್ಯವಸ್ಥೆಗಳನ್ನು ನಿರ್ಮಿಸುವ ಮೂಲಕ ಕರ್ನಾಟಕವನ್ನು ಡಿಜಿಟಲ್ ಆಡಳಿತದಲ್ಲಿ ಮುಂಚೂಣಿಗೆ ತರುವ ಕುರಿತು ಉಭಯ ನಾಯಕರು ಸಮಾಲೋಚನೆ ನಡೆಸಿದರು.

ಸಚಿವ ಪ್ರಿಯಾಂಕ್ ಖರ್ಗೆ ಅವರು, ರಾಜ್ಯದ ಕೃತಕ ಬುದ್ಧಿಮತ್ತೆ ದೂರದೃಷ್ಟಿಯು ಅತ್ಯಾಧುನಿಕ ಸಾಮರ್ಥ್ಯಗಳ ವೃದ್ಧಿ, ನಮ್ಮ ನವೋದ್ಯಮ (Startup) ಪರಿಸರದ ಬಲವರ್ಧನೆ ಹಾಗೂ ಸಾರ್ವಜನಿಕ ಸೇವೆಗಳನ್ನು ಸುಧಾರಿಸಲು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದರ ಮೇಲೆ ಕೇಂದ್ರೀಕೃತವಾಗಿದೆ. ಆಂಥ್ರೊಪಿಕ್‌ ಸಂಸ್ಥೆಯೊಂದಿಗಿನ ಈ ಸಮಾಲೋಚನೆಯು ಕೌಶಲ ಅಭಿವೃದ್ಧಿ, ಸಂಶೋಧನೆ ಹಾಗೂ ಎಐ ಆಧಾರಿತ ಆಡಳಿತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅರ್ಥಪೂರ್ಣ ಸಹಭಾಗಿತ್ವಕ್ಕೆ ದಾರಿ ಮಾಡಿಕೊಟ್ಟಿದೆ. ಇದು ದೀರ್ಘಾವಧಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಕಾಯುವ ಸುಸ್ಥಿರ ಮಾದರಿಗಳನ್ನು ರೂಪಿಸಲು ನೆರವಾಗಲಿದೆ ಎಂದು ತಿಳಿಸಿದ್ದಾರೆ.

** ಸಮಾಲೋಚನೆಯ ಪ್ರಮುಖ ಮುಖ್ಯಾಂಶಗಳು:**

  • ದತ್ತಾಂಶ ಆಧಾರಿತ ಬುದ್ಧಿವಂತ ಆಡಳಿತ: ಆಧುನಿಕ ತಂತ್ರಜ್ಞಾನ ಮತ್ತು ಎಐ ಬಳಸಿ, ಲಭ್ಯವಿರುವ ನಿಖರವಾದ ದತ್ತಾಂಶಗಳ (Data) ಆಧಾರದ ಮೇಲೆ ಕ್ಷಿಪ್ರ ನಿರ್ಧಾರ ಕೈಗೊಳ್ಳುವ ಮತ್ತು ನಾಗರಿಕರಿಗೆ ತ್ವರಿತವಾಗಿ ಸೇವೆಗಳನ್ನು ಒದಗಿಸುವ ವ್ಯವಸ್ಥೆ ರೂಪಿಸುವುದು.
  • ನಾವೀನ್ಯತೆ ಪರಿಸರಕ್ಕೆ ಉತ್ತೇಜನ:

ರಾಜ್ಯದಲ್ಲಿ ಕೃತಕ ಬುದ್ಧಿಮತ್ತೆ ಸಂಶೋಧನೆ, ನವೋದ್ಯಮ ಹಾಗೂ ಉದ್ಯಮಶೀಲತೆಯನ್ನು ಮತ್ತಷ್ಟು ಬಲಪಡಿಸಲು ‘ಶ್ರೇಷ್ಠತಾ ಕೇಂದ್ರಗಳು’ (CoE) ಮತ್ತು ಇನ್‌ಕ್ಯುಬೇಟರ್‌ಗಳನ್ನು ಸ್ಥಾಪಿಸುವ ಸಾಧ್ಯತೆಗಳ ಪರಿಶೀಲನೆ.

  • ಸಾರ್ವಜನಿಕ ಹಿತರಕ್ಷಣೆ ಮತ್ತು ದತ್ತಾಂಶ ಬಳಕೆ:

ಸಾರ್ವಜನಿಕ ವಲಯದಲ್ಲಿ ಈಗಾಗಲೇ ಇರುವ ದತ್ತಾಂಶಗಳನ್ನು ಜನರ ಹಿತ ರಕ್ಷಣೆಗೆ ಮತ್ತು ನಾಗರಿಕ ಸೇವೆಗಳನ್ನು ಇನ್ನಷ್ಟು ಜನಸ್ನೇಹಿಯಾಗಿಸಲು ಎಐ ಮೂಲಕ ಮರುರೂಪಿಸುವುದು.

  • ಡೀಪ್‌ಟೆಕ್ ಮತ್ತು ಸಹ-ಸೃಷ್ಟಿ ಸಹಯೋಗ:

ಮಾರ್ಗದರ್ಶನ (Mentorship) ಹಾಗೂ ಸಹ-ಸೃಷ್ಟಿ ಮಾದರಿಯ ಮೂಲಕ ರಾಜ್ಯದ ಡೀಪ್‌ಟೆಕ್ ನವೋದ್ಯಮಗಳು ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳ (GCC) ನಡುವೆ ಬಲವಾದ ಸಹಯೋಗ ಏರ್ಪಡಿಸುವುದು.
ಸರ್ಕಾರ ಹಾಗೂ ಜಾಗತಿಕ ತಂತ್ರಜ್ಞಾನ ಕಂಪನಿಗಳು ಒಟ್ಟಾಗಿ ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಹೊಸ ಉತ್ಪನ್ನ, ಸೇವೆ ಅಥವಾ ಪರಿಹಾರಗಳನ್ನು ಜಂಟಿಯಾಗಿ ರೂಪಿಸುವ (Co-creation) ನಿಟ್ಟಿನಲ್ಲಿ ಈ ಸಭೆಯು ಮಹತ್ವದ ಮೈಲಿಗಲ್ಲಾಗಿದೆ.

ಈ ಉನ್ನತ ಮಟ್ಟದ ಸಭೆಯಲ್ಲಿ ಕರ್ನಾಟಕ ನಾವೀನ್ಯತೆ ಹಾಗೂ ತಂತ್ರಜ್ಞಾನ ಸೊಸೈಟಿ (KITS) ವ್ಯವಸ್ಥಾಪಕ ನಿರ್ದೇಶಕ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಉಪಸ್ಥಿತರಿದ್ದರು.


Share

You cannot copy content of this page