ಸಮಗ್ರ ಸುದ್ದಿ

ದೇಶಾದ್ಯಂತ ಕೃಷಿ, ಆಹಾರ ಲಭ್ಯತೆ, ಬೆಲೆ ಸ್ಥಿರತೆ ಮೇಲೆ ನಿಗಾ ವಹಿಸಲು ಸಚಿವ ಪ್ರಲ್ಹಾದ ಜೋಶಿ ಸಲಹೆ

Share

ನವದೆಹಲಿ: ದೇಶದಲ್ಲಿ ಕೃಷಿ, ಆಹಾರ ಧಾನ್ಯ ಮತ್ತು ಬೆಲೆ ಸ್ಥಿರತೆ ಮೇಲೆ ಎಲ್ ನಿನೋ ಪರಿಣಾಮ ಎದುರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೋಮವಾರ ಮಹತ್ವದ ಸಭೆ ನಡೆಸಿತು.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಹಾರ ಇಲಾಖೆ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಎಲ್ ನಿನೋ ಪರಿಣಾಮ ಬಗ್ಗೆ ಗಂಭೀರ ಚರ್ಚೆ ನಡೆಸಲಾಯಿತು.

ದೇಶಾದ್ಯಂತ ಕೃಷಿ, ಆಹಾರ ಲಭ್ಯತೆ ಮತ್ತು ಬೆಲೆ ಸ್ಥಿರತೆ ಮೇಲಾಗುವ ಎಲ್ ನಿನೊ ಸಂಭಾವ್ಯ ಪರಿಣಾಮದ ಕುರಿತು ಪರಿಶೀಲನೆ ನಡೆಸಿದ ಸಚಿವ ಜೋಶಿ, ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.

ದೇಶಾದ್ಯಂತ ಎಲ್ಲೂ ಆಹಾರ ಧಾನ್ಯ ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಬಾರದು. ಮತ್ತು ಹೆಚ್ಚಿನ ದಾಸ್ತಾನು ಸಂಗ್ರಹದ ಮೇಲೆ ನಿಗಾ ವಹಿಸಬೇಕು. ಬೆಲೆ ಸ್ಥಿರತೆ ಕಾಪಾಡಿಕೊಳ್ಳಬೇಕು. ಆಹಾರ ಧಾನ್ಯ ಖರೀದಿಯಲ್ಲಿ ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆ – ತೊಡಕು ಎದುರಾಗದಂತೆ ಜಾಗೃತೆ ವಹಿಸಬೇಕು ಎಂದು ಪ್ರಲ್ಹಾದ ಜೋಶಿ ಸಲಹೆ ನೀಡಿದರು.

ಬೆಳೆ ಮತ್ತು ಬೇಡಿಕೆಗೆ ಅನುಗುಣವಾಗಿ ಆಹಾರ ಧಾನ್ಯ, ಅಗತ್ಯ ಸರಕುಗಳ ಖರೀದಿ ಲಭ್ಯತೆ ಬಗ್ಗೆ ಮಾಹಿತಿ ಪಡೆದ ಸಚಿವರು, ದೇಶಾದ್ಯಂತ ಪ್ರಮುಖವಾಗಿ ಆಹಾರ ಭದ್ರತೆ ಕಾಪಾಡಲು, ಗ್ರಾಹಕರ ಹಿತಾಸಕ್ತಿ ರಕ್ಷಿಸಲು ಹಾಗೂ ಅಗತ್ಯ ವಸ್ತುಗಳ ಸಾಕಷ್ಟು ಲಭ್ಯತೆಗೆ ಒತ್ತು ನೀಡಬೇಕು ಎಂದು ಹೇಳಿದರು.

ದೇಶಾದ್ಯಂತ ಅಗತ್ಯ ಸರಕುಗಳ ಸಾಕಷ್ಟು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳೊಂದಿಗೆ ನಿಕಟ ಸಮನ್ವಯ ಸಾಧಿಸಬೇಕು. ಸಕಾಲಿಕವಾಗಿ ಮಧ್ಯಸ್ಥಿಕೆ ವಹಿಸುವುದು ಮತ್ತು ಪೂರ್ವಭಾವಿ ಯೋಜನೆ ಕೈಗೆತ್ತಿಕೊಳ್ಳುವ ಬಗ್ಗೆ ಸಹ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆ ನಡೆಸಿದರು.


Share

You cannot copy content of this page