ಹಾವೇರಿ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಮತ್ತು ಪುನರ್ ರಚಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ (RWBCIS) ಅಡಿಯಲ್ಲಿ ಸಾಲ ಪಡೆಯದ ರೈತರಿಗೆ (Non-Loanee Farmers) ಕಡ್ಡಾಯಗೊಳಿಸಲಾಗಿರುವ ‘ಸ್ವಯಂ ಘೋಷಣಾ ಪತ್ರ’ ಸಲ್ಲಿಕೆ ಆದೇಶಕ್ಕೆ ರೈತರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಈ ನಿಯಮವನ್ನು ಸಡಿಲಿಸುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು ವಿನಂತಿಸಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ವಿಮಾ ವಿಭಾಗದ ಹೆಚ್ಚುವರಿ ಆಯುಕ್ತರು ಡಿಸೆಂಬರ್ 30, 2025 ರಂದು ಹೊರಡಿಸಿರುವ ಆದೇಶದ ಪ್ರಕಾರ, ಸಾಲ ಪಡೆಯದ ರೈತರು ಬೆಳೆ ವಿಮೆ ನೋಂದಣಿ ಮಾಡಿಕೊಳ್ಳುವಾಗ ತಮ್ಮ ಜಮೀನಿಗೆ ಯಾವುದೇ ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಅಥವಾ ಯಾವುದೇ ಹಣಕಾಸು ಸಂಸ್ಥೆಗಳಿಂದ (ವಾಣಿಜ್ಯ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಅಥವಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು) ಸಕ್ರಿಯ ಕೃಷಿ ಸಾಲ ಪಡೆದಿಲ್ಲ ಎಂಬುದನ್ನು ಖಚಿತಪಡಿಸಲು ಕಡ್ಡಾಯವಾಗಿ ಸ್ವಯಂ ಘೋಷಣಾ ಪತ್ರವನ್ನು ನೀಡಬೇಕಾಗಿದೆ. ಈ ಆದೇಶದನ್ವಯ ಸಾಮಾನ್ಯ ಸೇವಾ ಕೇಂದ್ರಗಳು (CSCs) ಮತ್ತು ಗ್ರಾಮ್ ಒನ್ ಕೇಂದ್ರಗಳಿಗೆ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ.
ಈ ಹೊಸ ನಿಯಮದಿಂದಾಗಿ ಹಾವೇರಿ ಜಿಲ್ಲೆಯ ರೈತರು ತೀವ್ರ ತೊಂದರೆ ಹಾಗೂ ಗೊಂದಲಕ್ಕೆ ಒಳಗಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ರೈತರಿಂದ ಮನವಿಗಳು ಸಲ್ಲಿಕೆಯಾಗಿವೆ. ರೈತರು ಎದುರಿಸುತ್ತಿರುವ ಈ ಗಂಭೀರ ಸಮಸ್ಯೆಯನ್ನು ಮನಗಂಡು, ಕೇಂದ್ರ ಸರ್ಕಾರವು ತಕ್ಷಣವೇ ಮಧ್ಯಪ್ರವೇಶಿಸಿ ಈ ನಿಯಮವನ್ನು ಸಡಿಲಗೊಳಿಸಬೇಕು ಮತ್ತು ರೈತರಿಗೆ ನೆರವಾಗಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸಚಿವರನ್ನು ಪತ್ರದ ಮೂಲಕ ಮನವಿ ಮಾಡಿದ್ದಾರೆ.
