ಶಿಕ್ಷಣ / ಉದ್ಯೋಗ

ಸರ್ಕಾರಿ ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ

Share

ಬೆಂಗಳೂರು:ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು 2026-27ನೇ ಶೈಕ್ಷಣಿಕ ಸಾಲಿಗೆ ಇಲಾಖಾ ವ್ಯಾಪ್ತಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು, ಸರ್ಕಾರಿ ಪಾಲಿಟೆಕ್ನಿಕ್‍ಗಳು ಹಾಗೂ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಲ್ಲಿ ಖಾಲಿ ಇರುವ ಬೋಧನಾ ಕಾರ್ಯಭಾರಕ್ಕನುಗುಣವಾಗಿ ಅತಿಥಿ ಉಪನ್ಯಾಸಕರನ್ನು ಆನ್‍ಲೈನ್ ಕೌನ್ಸಿಲಿಂಗ್ ಮೂಲಕ ಆಯ್ಕೆ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ಪ್ರಾಂಶುಪಾಲರ ಮುಖಾಂತರ ಆನ್‍ಲೈನ್‍ನಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಲು ಅಥವಾ ಈಗಾಗಲೇ ಸಲ್ಲಿಸಿರುವ ಅರ್ಜಿಯನ್ನು ಎಡಿಟ್ ಮಾಡಲು ಜುಲೈ 15, 2026 ರಿಂದ ಅವಕಾಶ ಕಲ್ಪಿಸಲಾಗಿದೆ.

ಅರ್ಜಿ ಸಲ್ಲಿಕೆ / ತಿದ್ದುಪಡಿ ಮಾಡಲು ಪ್ರಾರಂಭದ ದಿನಾಂಕ: 15.07.2026, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21.07.2026, ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಣೆ: 24.07.2026, ಅಂತಿಮ ಮೆರಿಟ್ ಪಟ್ಟಿ ಪ್ರಕಟಣೆ: 28.07.2026, ಸಂಸ್ಥೆ ಆಯ್ಕೆ ಕೌನ್ಸಿಲಿಂಗ್ ದಿನಾಂಕ: 29.07.2026 ರಿಂದ 31.07.2026 ರವರೆಗೆ ನಡೆಯಲಿದೆ.

ಆಯ್ಕೆ ಮಾನದಂಡಗಳು:
ಅತಿಥಿ ಉಪನ್ಯಾಸಕರ ಆಯ್ಕೆಯನ್ನು ಒಟ್ಟು 100 ಅಂಕಗಳ ಮೆರಿಟ್ ಆಧಾರದ ಮೇಲೆ ಮಾಡಲಾಗುತ್ತದೆ.

ವಿದ್ಯಾರ್ಹತೆ (ಗರಿಷ್ಠ 30 ಅಂಕಗಳು):ಎಐಸಿಟಿಇ ನಿಯಮಗಳನ್ವಯ ಪದವಿಯಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳ 30% ಅನ್ನು ಪರಿಗಣಿಸಲಾಗುತ್ತದೆ.

ಹೆಚ್ಚುವರಿ ವಿದ್ಯಾರ್ಹತೆ (ಗರಿಷ್ಠ 22 ಅಂಕಗಳು): ಇಂಜಿನಿಯರಿಂಗ್ ಅಥವಾ ಸೈನ್ಸ್ & ಹ್ಯುಮಾನಿಟೀಸ್ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ/ಎಂ.ಫಿಲ್ (10 ಅಂಕಗಳು) ಹಾಗೂ ಪಿಹೆಚ್.ಡಿ ಹೊಂದಿದ್ದಲ್ಲಿ ಹೆಚ್ಚುವರಿ 12 ಅಂಕಗಳನ್ನು ನೀಡಲಾಗುತ್ತದೆ.

ಸೇವಾನುಭವ (ಗರಿಷ್ಠ 48 ಅಂಕಗಳು): ಹಿಂದಿನ ವರ್ಷಗಳಲ್ಲಿ ಸರ್ಕಾರಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಪ್ರತಿ ಶೈಕ್ಷಣಿಕ ವರ್ಷಕ್ಕೆ (ಕನಿಷ್ಠ 8 ತಿಂಗಳು) 3 ಅಂಕಗಳಂತೆ ಗರಿಷ್ಠ 16 ವರ್ಷಗಳ ಸೇವೆಗೆ ಅಂಕಗಳನ್ನು ನೀಡಲಾಗುತ್ತದೆ. ಅರ್ಹ ವಿಕಲಚೇತನ ಅಭ್ಯರ್ಥಿಗಳಿಗೆ ಹೆಚ್ಚುವರಿಯಾಗಿ 10 ಅಂಕಗಳನ್ನು ನೀಡಲಾಗುವುದು.

ಮುಖ್ಯ ಷರತ್ತುಗಳು ಹಾಗೂ ಸೌಲಭ್ಯಗಳು:

ಎಐಸಿಟಿಇ ನಿಯಮ ಕಡ್ಡಾಯ: ಎಐಸಿಟಿಇ ನಿಗಧಿಪಡಿಸಿದ ನಿಯಮಿತ ವಿದ್ಯಾರ್ಹತೆ ಹೊಂದಿರದ ಅಭ್ಯರ್ಥಿಗಳ ನೇಮಕಾತಿಯನ್ನು ಸಂಪೂರ್ಣವಾಗಿ ನಿಬರ್ಂಧಿಸಲಾಗಿದೆ.

ಮಹಿಳಾ ಅಭ್ಯರ್ಥಿಗಳಿಗೆ ವಿಶೇಷ ಸೌಲಭ್ಯ: ಇಲಾಖೆಯ ನಿಯಮಾವಳಿಗಳ ಪ್ರಕಾರ ಆಯ್ಕೆಯಾಗುವ ಮಹಿಳಾ ಅತಿಥಿ ಉಪನ್ಯಾಸಕಿಯರಿಗೆ ಗರಿಷ್ಠ 90 ದಿನಗಳ ವೇತನ ಸಹಿತ ಹೆರಿಗೆ ರಜೆ (Maternity Leave) ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಏಕ ಅರ್ಜಿ ನಿಯಮ: ಅಭ್ಯರ್ಥಿಗಳು 01 ವಿಷಯಕ್ಕೆ ಕೇವಲ ಒಂದೇ ಅರ್ಜಿಯನ್ನು ಸಲ್ಲಿಸಬೇಕು. ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿದರೆ ಅದನ್ನು ತಿರಸ್ಕರಿಸಲಾಗುವುದು.

ಹಾಜರಾತಿ: ನೇಮಕಗೊಂಡ ಉಪನ್ಯಾಸಕರು ಬಯೋಮೆಟ್ರಿಕ್ ಹಾಜರಾತಿ (AEBAS) ಪಾಲಿಸುವುದು ಕಡ್ಡಾಯವಾಗಿದ್ದು, ತಿಂಗಳಿಗೆ 1 ದಿನದ ಸಾಂದರ್ಭಿಕ ರಜೆ ಮಾತ್ರ ಲಭ್ಯವಿರುತ್ತದೆ.

ಆಸಕ್ತ ಅಭ್ಯರ್ಥಿಗಳು ತಮ್ಮ ಮೂಲ ದಾಖಲಾತಿಗಳೊಂದಿಗೆ ಹತ್ತಿರದ ಸರ್ಕಾರಿ ಇಂಜಿನಿಯರಿಂಗ್/ಪಾಲಿಟೆಕ್ನಿಕ್ ಕಾಲೇಜುಗಳ ಪ್ರಾಂಶುಪಾಲರನ್ನು ಸಂಪರ್ಕಿಸಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್‍ಸೈಟ್  https://dtek.karnataka.gov.in ಅನ್ನು ವೀಕ್ಷಿಸಲು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share

You cannot copy content of this page