ಸಮಗ್ರ ಸುದ್ದಿ

ತಪ್ಪು ಮಾಹಿತಿ, ನಕಲಿ ಸುದ್ದಿಗಳು ಹಾಗೂ ದ್ವೇಷ ಭಾಷಣ ನಿಯಂತ್ರಣಕ್ಕೆ ಸರ್ಕಾರ–ಡಿಜಿಟಲ್ ವೇದಿಕೆಗಳ ಸಮನ್ವಯ: ಸಚಿವ ಪ್ರಿಯಾಂಕ್ ಖರ್ಗೆ

Share


ಬೆಂಗಳೂರು: ಸಾರ್ವಜನಿಕ ಆಡಳಿತ, ಸಾರ್ವಜನಿಕ ಸುರಕ್ಷತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ನೇರ ಪರಿಣಾಮ ಬೀರುವ ತಪ್ಪು ಮಾಹಿತಿ (Misinformation), ನಕಲಿ ಸುದ್ದಿಗಳು (Fake News) ಮತ್ತು ದ್ವೇಷ ಭಾಷಣ (Hate Speech) ನಿಯಂತ್ರಿಸಲು ರಾಜ್ಯ ಸರ್ಕಾರ ಸಮಗ್ರ ಹಾಗೂ ಸಹಯೋಗದ ಚೌಕಟ್ಟನ್ನು ರೂಪಿಸುತ್ತಿದೆ ಎಂದು ಗೃಹ, ಐಟಿ-ಬಿಟಿ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.


ಈ ಸಂಬಂಧ ಈಚೆಗೆ ಇಂಟರ್‌ನೆಟ್ ಅಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ (IAMAI) ಪ್ರತಿನಿಧಿಗಳು ಹಾಗೂ ಪ್ರಮುಖ ಸಾಮಾಜಿಕ ಜಾಲತಾಣ ಮತ್ತು ಡಿಜಿಟಲ್ ವೇದಿಕೆಗಳ ಪ್ರತಿನಿಧಿಗಳೊಂದಿಗೆ ಮಹತ್ವದ ಸಮಾಲೋಚನಾ ಸಭೆ ನಡೆಸಲಾಯಿತು.

ಸಭೆಯಲ್ಲಿ ಜವಾಬ್ದಾರಿಯುತ ಡಿಜಿಟಲ್ ಪರಿಸರ ನಿರ್ಮಾಣಕ್ಕೆ ಸರ್ಕಾರ ಮತ್ತು ಡಿಜಿಟಲ್ ವೇದಿಕೆಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸುವ ಅಗತ್ಯವನ್ನು ಒತ್ತಿ ಹೇಳಲಾಯಿತು. ತಪ್ಪು ಮಾಹಿತಿ ಹಾಗೂ ಸಮಾಜದ ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡುವ ಆನ್‌ಲೈನ್ ವಿಷಯಗಳನ್ನು ತ್ವರಿತವಾಗಿ ಗುರುತಿಸಿ, ಸೂಕ್ತ ಕ್ರಮ ಕೈಗೊಳ್ಳುವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಸಮಗ್ರ ಚರ್ಚೆ ನಡೆಯಿತು.
ಈ ನಿಟ್ಟಿನಲ್ಲಿ ಸರ್ಕಾರದ ಮಾಹಿತಿ ದುರ್ಬಳಕೆ ತಡೆ ಘಟಕ’ (Information Disorder Tackling Unit) ಹಾಗೂ ವಿವಿಧ ಸಾಮಾಜಿಕ ಜಾಲತಾಣಗಳ ನಡುವೆ ವಿಶೇಷ ಸಂಪರ್ಕ ಅಧಿಕಾರಿಗಳನ್ನು (Dedicated Points of Contact) ನೇಮಕ ಮಾಡುವುದಕ್ಕೂ, ತುರ್ತು ಪ್ರತಿಕ್ರಿಯೆಗಾಗಿ (Rapid Response) ವಿಶೇಷ ಸಂವಹನ ವ್ಯವಸ್ಥೆಯನ್ನು ರೂಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಈ ಮಾಹಿತಿ ದುರ್ಬಳಕೆ ತಡೆ ಘಟಕ’ವನ್ನು ಐಟಿ-ಬಿಟಿ ಮತ್ತು ಗೃಹ ಇಲಾಖೆಗಳು ಜಂಟಿಯಾಗಿ ಮುನ್ನಡೆಸಲಿದ್ದು, ಹಾನಿಕಾರಕ ಆನ್‌ಲೈನ್ ವಿಷಯಗಳ ಕುರಿತು ವೇಗವಾಗಿ ಸಮನ್ವಯ ಸಾಧಿಸಲು, ಸಮಯೋಚಿತ ಕ್ರಮ ಕೈಗೊಳ್ಳಲು ಹಾಗೂ ಪರಿಣಾಮಕಾರಿ ಪ್ರತಿಕ್ರಿಯೆ ನೀಡಲು ಈ ವ್ಯವಸ್ಥೆ ನೆರವಾಗಲಿದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಸರ್ಕಾರ, ಡಿಜಿಟಲ್ ವೇದಿಕೆಗಳು ಹಾಗೂ ಸಂಬಂಧಿತ ಸಂಸ್ಥೆಗಳ ನಡುವಿನ ನಿರಂತರ ಸಹಯೋಗದ ಮೂಲಕ ಸುರಕ್ಷಿತ, ಪಾರದರ್ಶಕ ಮತ್ತು ಜವಾಬ್ದಾರಿಯುತ ಡಿಜಿಟಲ್ ಪರಿಸರ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.


Share

You cannot copy content of this page