ಬೆಂಗಳೂರು: ರಾಜ್ಯದಲ್ಲಿ ಮಹತ್ವಾಕಾಂಕ್ಷಿ ‘ಅನ್ನಭಾಗ್ಯ’ ಗ್ಯಾರಂಟಿ ಯೋಜನೆಯ ಮೂಲಕ ಹಸಿವು ಮುಕ್ತ ಕರ್ನಾಟಕವನ್ನು ನಿರ್ಮಿಸುವುದು ನಮ್ಮ ಸರ್ಕಾರದ ದೃಢ ಸಂಕಲ್ಪವಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಪ್ರಕಟಿಸಿದ್ದಾರೆ.
ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮುಂಭಾಗದಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖೆಯ ಬಲವರ್ಧನೆ ಹಾಗೂ ಗ್ರಾಹಕರ ಹಿತರಕ್ಷಣೆಗಾಗಿ ಹಮ್ಮಿಕೊಳ್ಳಲಾಗುವ ತಪಾಸಣಾ ಕಾರ್ಯಗಳಿಗಾಗಿ 17 ನೂತನ ಜಾಗೃತಿ ವಾಹನಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಸಚಿವರು ಚಾಲನೆ ನೀಡಿದರು.
ಬಳಿಕ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಯುವ ಶಕ್ತಿ ಉದ್ಯೋಗ ಸಬಲೀಕರಣ ನೇಮಕಾತಿ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಚಿವರು, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ (KFCSC) ನೂತನವಾಗಿ ಆಯ್ಕೆಯಾದ 376 ಸಿಬ್ಬಂದಿಗೆ ನೇಮಕಾತಿ ಪತ್ರಗಳನ್ನು ಅಧಿಕೃತವಾಗಿ ವಿತರಿಸಿ ಮಾತನಾಡಿದರು. ಕಳೆದ ಮೂರು ವರ್ಷಗಳಲ್ಲಿ ಆಹಾರ ಭದ್ರತೆ, ಅನ್ನಭಾಗ್ಯ ಯೋಜನೆ, ಕನಿಷ್ಠ ಬೆಂಬಲ ಬೆಲೆ (MSP) ಅಡಿ ರೈತರಿಂದ ಧಾನ್ಯ ಖರೀದಿ, ಡಿಜಿಟಲ್ ಆಡಳಿತ ಹಾಗೂ ಕಾಳಸಂತೆ ನಿಯಂತ್ರಣದ ಮೂಲಕ ರಾಜ್ಯದ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಬಲಿಷ್ಠ ಹಾಗೂ ಪಾರದರ್ಶಕಗೊಳಿಸಲಾಗಿದೆ ಎಂದು ಅವರು ವಿವರಿಸಿದರು.
ಬೃಹತ್ ಆಹಾರ ಭದ್ರತೆ ಮತ್ತು ಅನ್ನಭಾಗ್ಯ ಯೋಜನೆ:
ರಾಜ್ಯದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು (NFSA) ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದ್ದು, ಒಟ್ಟಾರೆ ಕರ್ನಾಟಕದ ಶೇ. 65.96 ರಷ್ಟು ಜನಸಂಖ್ಯೆ ಇದರ ವ್ಯಾಪ್ತಿಗೆ ಒಳಪಟ್ಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಒಟ್ಟು 1.25 ಕೋಟಿಗೂ ಅಧಿಕ ಪಡಿತರ ಚೀಟಿಗಳ ಮೂಲಕ ಒಟ್ಟು 4.45 ಕೋಟಿಗೂ ಹೆಚ್ಚು ಫಲಾನುಭವಿಗಳು ಸೌಲಭ್ಯ ಪಡೆಯುತ್ತಿದ್ದಾರೆ. 2023ರಲ್ಲಿ ಕೇಂದ್ರದಿಂದ ಹೆಚ್ಚುವರಿ ಅಕ್ಕಿ ಲಭ್ಯವಾಗದ ಕಾರಣ ಜುಲೈ 2023 ರಿಂದ ಡಿಸೆಂಬರ್ 2024 ರವರೆಗೆ 72.02 ಕೋಟಿ ಫಲಾನುಭವಿಗಳಿಗೆ ₹11,561.05 ಕೋಟಿ ಹಣವನ್ನು ನೇರ ನಗದು ವರ್ಗಾವಣೆ (DBT) ಮೂಲಕ ಜಮೆ ಮಾಡಲಾಗಿದೆ. ಇನ್ನು ಫೆಬ್ರವರಿ 2025 ರಿಂದ ನೇರವಾಗಿ ಪ್ರತಿ ತಿಂಗಳು ಪ್ರತಿ ವ್ಯಕ್ತಿಗೆ ಹೆಚ್ಚುವರಿ 5 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿದ್ದು, ಇದಕ್ಕಾಗಿ ಎಫ್‌ಸಿಐನಿಂದ ಪ್ರತಿ ತಿಂಗಳು ಸುಮಾರು 2.10 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಸಲಾಗುತ್ತಿದೆ.
ಸ್ಮಾರ್ಟ್ ಪಿಡಿಎಸ್ ಹಾಗೂ ತಂತ್ರಜ್ಞಾನ ಆಧಾರಿತ ನಿಗಾ:
ಪಡಿತರ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ‘ಸ್ಮಾರ್ಟ್ ಪಿಡಿಎಸ್’ ಅಡಿ ಇ-ಪಾಸ್ ಯಂತ್ರ ಹಾಗೂ ಎಲೆಕ್ಟ್ರಾನಿಕ್ ತೂಕದ ಯಂತ್ರಗಳ ಅಳವಡಿಕೆಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅಕ್ರಮ ಸಾಗಾಣಿಕೆ ತಡೆಯಲು ವಾಹನಗಳಿಗೆ ಜಿಪಿಎಸ್, ಗೋದಾಮುಗಳಿಗೆ ಸಿಸಿಟಿವಿ ಹಾಗೂ ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್ ಸ್ಥಾಪಿಸಲಾಗುತ್ತಿದೆ. ಇನ್ನು 2026-27ನೇ ಸಾಲಿನ ಆಯವ್ಯಯದ ಘೋಷಣೆಯಂತೆ ಚಿಲ್ಲರೆ ಮತ್ತು ಸಗಟುದಾರರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲು ‘FIST’ ಅಪ್ಲಿಕೇಶನ್ ಜಾರಿಗೆ ತರಲಾಗಿದೆ.
ರೈತರ ಹಿತರಕ್ಷಣೆ (MSP) ಮತ್ತು ಕಾಳಸಂತೆ ತಡೆ:
2025-26ನೇ ಸಾಲಿನಲ್ಲಿ ₹4,422.17 ಕೋಟಿ ಮೊತ್ತದ ರಾಗಿ, ಜೋಳ ಹಾಗೂ ಭತ್ತವನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಿ 2.89 ಲಕ್ಷಕ್ಕೂ ಅಧಿಕ ರೈತರಿಗೆ ನ್ಯಾಯಯುತ ಬೆಲೆ ಒದಗಿಸಲಾಗಿದೆ. ಕೇಂದ್ರದಿಂದ ಬರಬೇಕಿದ್ದ ಎಂಎಸ್‌ಪಿ ಮರುಪಾವತಿಯಲ್ಲಿ ಈ ವರ್ಷ ₹190.10 ಕೋಟಿ ಬಿಡುಗಡೆಯಾಗಿದೆ. ಇದೇ ವೇಳೆ ಕಾಳಸಂತೆಕೋರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಕಳೆದ 3 ವರ್ಷಗಳಲ್ಲಿ 1,497 ಎಫ್‌ಐಆರ್‌ಗಳನ್ನು ದಾಖಲಿಸಿ, ₹49.38 ಕೋಟಿ ಮೌಲ್ಯದ 2.86 ಲಕ್ಷ ಕ್ವಿಂಟಲ್ ಆಹಾರಧಾನ್ಯ ವಶಪಡಿಸಿಕೊಳ್ಳಲಾಗಿದೆ.
ಪ್ರತಿ ಕ್ವಿಂಟಾಲ್ ಗೆ ಬೆಂಬಲ ಬೆಲೆ ವಿವರ:
2025-26 ನೇ ಸಾಲಿನಲ್ಲಿ ರಾಗಿಗೆ ₹4,886, 2026-27ನೇ ಸಾಲಿನಲ್ಲಿ ₹5,205, 2025-26 ನೇ ಸಾಲಿನಲ್ಲಿ ಜೋಳ ₹3,699, 2026-27ನೇ ಸಾಲಿನಲ್ಲಿ ₹4,023, 2025-26 ನೇ ಸಾಲಿನಲ್ಲಿ ಭತ್ತ ₹2,375, 2026-27ನೇ ₹2,461 ಬೆಂಬಲ ಬೆಲೆ ನೀಡಲಾಗಿದೆ.
₹50 ಕೋಟಿ ವೆಚ್ಚದ ‘ಆಹಾರಸೌಧ’ ಮತ್ತು ಇಲಾಖೆ ಬಲವರ್ಧನೆ:
ಇಲಾಖೆಯ ಎಲ್ಲಾ ಕಚೇರಿಗಳನ್ನು ಒಂದೇ ಸೂರಿನಡಿ ತರಲು ಸುಮಾರು ₹50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ‘ಆಹಾರಸೌಧ’ದ ಕಾಮಗಾರಿ ಶೇ.50 ರಷ್ಟು ಪೂರ್ಣಗೊಂಡಿದೆ. ಕಾನೂನು ಮಾಪನಶಾಸ್ತ್ರ ಇಲಾಖೆಯನ್ನು ಪುನರ್‌ರಚಿಸಲಾಗಿದ್ದು, ಇಲಾಖೆಯು 2025-26ರಲ್ಲಿ ₹90.09 ಕೋಟಿ ರಾಜಸ್ವ ಸಂಗ್ರಹಿಸಿದೆ. ಮತ್ತೊಂದೆಡೆ, ನಿರುದ್ಯೋಗಿ ಯುವಕ-ಯುವತಿಯರಿಗೆ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ಪರಿಶಿಷ್ಟ ಜಾತಿಯ ಒಳಮೀಸಲಾತಿ ಉಪವರ್ಗೀಕರಣದ ಅನ್ವಯ 3,888 ಹೊಸ ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಆಹಾರ ಭದ್ರತೆ, ರೈತರ ಹಿತಾಸಕ್ತಿ ಹಾಗೂ ತಂತ್ರಜ್ಞಾನ ಆಧಾರಿತ ಪಾರದರ್ಶಕ ಆಡಳಿತಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ನೂತನವಾಗಿ ಸೇರ್ಪಡೆಯಾಗಿರುವ 376 ಸಿಬ್ಬಂದಿಯಿಂದ ಇಲಾಖೆಯ ಕಾರ್ಯಕ್ಷಮತೆ ಮತ್ತಷ್ಟು ವೃದ್ಧಿಯಾಗಲಿದ್ದು, ಸಾರ್ವಜನಿಕರಿಗೆ ಇನ್ನಷ್ಟು ತ್ವರಿತ ಮತ್ತು ಗುಣಮಟ್ಟದ ಸೇವೆ ದೊರೆಯಲಿದೆ ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಹಾರ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಕನಗವಲ್ಲಿ, ಆಯುಕ್ತರಾದ ರವಿಕುಮಾರ್, ನಿಗಮದ ನಿರ್ದೇಶಕರಾದ ಜಗದೀಶ್, ಉಪಾಧ್ಯಕ್ಷರಾದ ಊರಬಾಗಿಲು ಶ್ರೀನಿವಾಸ್, ಪ್ರಧಾನ ವ್ಯವಸ್ಥಾಪಕರಾದ ಮಂಜುನಾಥ್ ಹಾಗೂ ಸಚಿವರ ಆಪ್ತ ಕಾರ್ಯದರ್ಶಿ ಡಾ. ಹೆಚ್. ನಟರಾಜ್ ಸೇರಿದಂತೆ ನಿಗಮದ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
