ಬೆಂಗಳೂರು :ರಾಜ್ಯದ ಗ್ರಾಮೀಣ ಭಾಗದ ಆರ್ಥಿಕ ಪ್ರಗತಿ ಮತ್ತು ಕೃಷಿ ವಲಯದ ಆಧುನೀಕರಣಕ್ಕೆ ಸರ್ಕಾರ ಮತ್ತು ನಬಾರ್ಡ್ ನೀಡುತ್ತಿರುವ ಕೊಡುಗೆ ಅಪಾರವಾಗಿದೆ. ಮುಂಬರುವ ದಿನಗಳಲ್ಲಿ ಈ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದ್ದು, ಹೆಚ್ಚಿನ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲಾಗುವುದು. ಭವಿಷ್ಯದಲ್ಲಿ ರಾಜ್ಯ ಸರ್ಕಾರದೊಂದಿಗೆ ಮತ್ತಷ್ಟು ನಾವೀನ್ಯತಾ ಯೋಜನೆಗಳಲ್ಲಿ ಕೈಜೋಡಿಸುವಂತೆ ಹಣಕಾಸು ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ರಿತೇಶ್ ಕುಮಾರ್ ಸಿಂಗ್ ಅವರು ಕರೆ ನೀಡಿದರು.
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) 45 ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಬಾರ್ಡ್ ಹಾಗೂ ರಾಜ್ಯ ಸರ್ಕಾರದ ನಡುವಿನ 25 ವರ್ಷಗಳ ಸುದೀರ್ಘ ಮತ್ತು ಯಶಸ್ವಿ ಪಾಲುದಾರಿಕೆಯನ್ನು ಸ್ಮರಿಸಿದರು.
ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿ ಅಡಿಯಲ್ಲಿ ಪ್ರಸ್ತುತ ಇರುವ ರೂ.2,000 ಕೋಟಿ ಅನುದಾನವನ್ನು ರೂ.3,000 ಕೋಟಿಗೆ ಹೆಚ್ಚಿಸಲು ಉದ್ದೇಶಿಸಲಾಗಿದ್ದು, ಈ ನಿಟ್ಟಿನಲ್ಲಿ ನಬಾರ್ಡ್ ಹಾಗೂ ಹಣಕಾಸು ಇಲಾಖೆ ಜಂಟಿಯಾಗಿ ಶ್ರಮಿಸುತ್ತಿವೆ.
ಕೇವಲ ಸಾಂಪ್ರದಾಯಿಕ ಸರ್ಕಾರಿ ಯೋಜನೆಗಳಿಗೆ ಸೀಮಿತವಾಗದೆ, ಕೆ.ಐ.ಎ.ಡಿ.ಬಿ ನಂತಹ ವಿವಿಧ ಸರ್ಕಾರಿ ಸಂಸ್ಥೆಗಳ ಮೂಲಕ ವಾಣಿಜ್ಯಿಕವಾಗಿ ಲಾಭದಾಯಕ ಹಾಗೂ ಸುಸ್ಥಿರ ಯೋಜನೆಗಳಿಗೆ ನಬಾರ್ಡ್ ನೆರವು ನೀಡುತ್ತಿರುವುದು ಶ್ಲಾಘನೀಯ ಎಂದರು.
ಕೇವಲ ವೈಯಕ್ತಿಕ ಬುದ್ಧಿವಂತಿಕೆಗಿಂತ ಒಟ್ಟಾಗಿ ಕೆಲಸ ಮಾಡುವ ತಂಡದ ಮನೋಭಾವ ಮತ್ತು ಪರಸ್ಪರ ಸಹಯೋಗ ಪ್ರಸ್ತುತ ದಿನಗಳಲ್ಲಿ ಅತ್ಯಂತ ಪ್ರಮುಖವಾಗಿದೆ ಎಂದು ಅಭಿಪ್ರಾಯಪಟ್ಟರು.
ಗ್ರಾಮೀಣ ಮಟ್ಟದಲ್ಲಿ ಮಹಿಳಾ ರೈತರ ಕೊಡುಗೆ ಹಾಗೂ ರಾಜ್ಯದ ಸವಾರ್ಂಗೀಣ ಅಭಿವೃದ್ಧಿಯಲ್ಲಿ ನಬಾರ್ಡ್ ಸಂಸ್ಥೆಯ ಪಾತ್ರ ಮಹತ್ವದ್ದಾಗಿದೆ. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಮಹಿಳಾ ರೈತರ ಸಾಧನೆ ಹಾಗೂ ಗ್ರಾಮೀಣ ಆರ್ಥಿಕತೆಯಲ್ಲಿ ಅವರ ಸಕ್ರಿಯ ಪಾತ್ರವನ್ನು ಗುರುತಿಸಿ, ನಬಾರ್ಡ್ ಆಡಳಿತ ಮಂಡಳಿಗೆ ಧನ್ಯವಾದಗಳನ್ನು ತಿಳಿಸಿದರು.
ಪ್ರಾದೇಶಿಕ ಸಹಕಾರ ಸಂಘದ ನಿಬಂಧಕ ಎಂ.ವಿ. ವೆಂಕಟೇಶ್ ಅವರು ಮಾತನಾಡಿ, ಗ್ರಾಮೀಣ ಕೃಷಿ, ಗ್ರಾಮೀಣ ಏಳಿಗೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಂಸ್ಥೆಗಳನ್ನು ಬಲಪಡಿಸುವಲ್ಲಿ ನಬಾರ್ಡ್ ಮಹತ್ವದ ಕೊಡುಗೆ ನೀಡುತ್ತಿದೆ. ನಬಾರ್ಡ್ ಸಂಸ್ಥೆಯು ಕೃಷಿ ಮತ್ತು ಸಹಕಾರ ಇಲಾಖೆಗೆ ಒಂದು ರೀತಿಯಲ್ಲಿ ಸ್ನೇಹಿತ, ತತ್ವಜ್ಞಾನಿ ಮತ್ತು ಮಾರ್ಗದರ್ಶಕ ಇದ್ದಂತೆ ಎಂದು ಬಣ್ಣಿಸುತ್ತಾ, ನಬಾರ್ಡ್ ಸಾಲ ವಿತರಣೆ, ಎಫ್‍ಪಿಒ, ಜೆಎಲ್‍ಜಿ ಹಾಗೂ ಸ್ವಸಹಾಯ ಗುಂಪುಗಳ ಪೆÇ್ರೀತ್ಸಾಹದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.
ದೇಶದ ಪಶ್ಚಿಮ ಭಾಗಗಳಾದ ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಕೇರಳ ಮತ್ತು ತಮಿಳುನಾಡುಗಳಲ್ಲಿ ಸಹಕಾರ ವಲಯವು ಪ್ರಬಲವಾಗಿ ಬೆಳೆದಿದೆ. ಜಿಡಿಪಿ ಬೆಳವಣಿಗೆಯು ಸಹಕಾರ ವಲಯದ ಅಭಿವೃದ್ಧಿಗೆ ಪೂರಕವಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣಕ್ಕಾಗಿ ಇಆರ್‍ಪಿ ಮಾಡ್ಯೂಲ್ ಅಳವಡಿಕೆಯಿಂದ ಹಿಡಿದು ತಂತ್ರಜ್ಞಾನದ ಬಳಕೆಯವರೆಗೆ ನಬಾರ್ಡ್ ನೆರವಾಗುತ್ತಿದೆ. ಕರ್ನಾಟಕದಾದ್ಯಂತ ಸುಮಾರು 250 ಪ್ಯಾಕ್ಸ್ ಸಂಘಗಳಲ್ಲಿ 25 ಕ್ಕೂ ಹೆಚ್ಚು ವಿಭಿನ್ನ ಸೇವೆಗಳನ್ನು ಒದಗಿಸುವ ಮೂಲಕ ವೈವಿಧ್ಯೀಕರಣಕ್ಕೆ ಚಾಲನೆ ನೀಡಲಾಗಿದೆ. ಉಡುಪಿ ಜಿಲ್ಲೆಯ ಕೋಟಾದಲ್ಲಿರುವ ಪ್ಯಾಕ್ಸ್ ಸಂಸ್ಥೆಯು ಸುಮಾರು 1000 ಕೋಟಿ ರೂ.ಗಳ ವಹಿವಾಟು ನಡೆಸುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದರು.
ರೈತರಿಗೆ ಬೆಳೆ ಬೆಳೆಯುವುದು ತಿಳಿದಿದೆ, ಆದರೆ ಮಾರುಕಟ್ಟೆ ಕಂಡುಕೊಳ್ಳುವುದು ಮತ್ತು ಮೌಲ್ಯವರ್ಧನೆ ಮಾಡುವುದು ಸವಾಲಿನ ಕೆಲಸವಾಗಿದೆ. ಇದಕ್ಕಾಗಿ ಸಿಎಫ್‍ಟಿಆರ್‍ಐ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ರೈತರ ಸಮಗ್ರ ಅಭಿವೃದ್ಧಿಗಾಗಿ ಉತ್ಪಾದನಾ ವೆಚ್ಚ ಕಡಿಮೆಯಾಗಬೇಕು ಮತ್ತು ಲಾಭಾಂಶ ಹೆಚ್ಚಾಗಬೇಕು. ಇದಕ್ಕೆ ಮೌಲ್ಯವರ್ಧನೆ ಮತ್ತು ಉತ್ಪನ್ನಗಳ ಶೆಲ್ಫ್ ಲೈಫ್ ಹೆಚ್ಚಿಸುವುದು ಅಗತ್ಯ. ಈ ನಿಟ್ಟಿನಲ್ಲಿ ನಬಾರ್ಡ್ ಪ್ರಮುಖ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.
ರಾಜಸ್ಥಾನವನ್ನು ಹೊರತುಪಡಿಸಿದರೆ ಕರ್ನಾಟಕವು ದೇಶದಲ್ಲೇ ಎರಡನೇ ಅತಿ ಹೆಚ್ಚು ಬರಪೀಡಿತ ಪ್ರದೇಶಗಳನ್ನು ಹೊಂದಿರುವ ರಾಜ್ಯವಾಗಿದೆ. ಇಂತಹ ಪ್ರದೇಶಗಳಲ್ಲಿ ಜಲಾನಯನ ಅಭಿವೃದ್ಧಿಗಾಗಿ ‘ರಿವಾರ್ಡ್’ ಯೋಜನೆಯ ಮೂಲಕ ನಬಾರ್ಡ್ ಮಹತ್ವದ ಕೊಡುಗೆ ನೀಡುತ್ತಿದೆ. ಗ್ರಾಮೀಣ ಭಾರತದ ಅಭಿವೃದ್ಧಿ, ಆರ್ಥಿಕ ಭದ್ರತೆ ಮತ್ತು ವಿಕಸಿತ ಭಾರತದ ಕನಸನ್ನು ನನಸು ಮಾಡಲು ನಬಾರ್ಡ್ ಅತ್ಯುತ್ತಮ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಶ್ರಮಿಸುತ್ತಿದೆ. ಪ್ರತಿಯೊಂದು ಗ್ರಾಮೀಣ ಕುಟುಂಬದ ಆದಾಯ ಹೆಚ್ಚಿಸಲು ಇದು ಪ್ರೇರಕ ಶಕ್ತಿಯಾಗಿದೆ ಎಂದು ತಿಳಿಸಿದರು.
ನಬಾರ್ಡ್ ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಡಾ.ಸುರೇಂದ್ರ ಬಾಬು ಅವರು ಮಾತನಾಡಿ, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಕಳೆದ ನಾಲ್ಕು ದಶಕಗಳಲ್ಲಿ ಗ್ರಾಮೀಣಾಭಿವೃದ್ಧಿ, ಕೃಷಿ ವಲಯಕ್ಕೆ ಬ್ಯಾಂಕ್ ಉತ್ತಮ ಕೊಡುಗೆಯನ್ನು ನೀಡಿದೆ. ನಬಾರ್ಡ್ ತನ್ನ ಆರಂಭಿಕ ಅವಧಿಯಲ್ಲಿ 4,519 ಕೋಟಿ ರೂ.ಗಳ ಬ್ಯಾಲೆನ್ಸ್ ಶೀಟ್ ಗಾತ್ರವನ್ನು ಹೊಂದಿತ್ತು, ಇದು ಈಗ 11 ಟ್ರಿಲಿಯನ್ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದರು.
ಕಳೆದ ಸಾಲಿನಲ್ಲಿ ರಾಜ್ಯದ ವಿವಿಧ ಬ್ಯಾಂಕ್‍ಗಳಿಗೆ 32,517 ಕೋಟಿ ರೂಪಾಯಿಗಳ ಹಣಕಾಸಿನ ನೆರವು ನೀಡಲಾಗಿದೆ. ಇದರಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 4,700 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ನಬಾರ್ಡ್‍ನ ಬೆಂಬಲದೊಂದಿಗೆ ರಾಜ್ಯದಲ್ಲಿ 46,000 ಕಿ.ಮೀ ಗ್ರಾಮೀಣ ರಸ್ತೆಗಳು ಮತ್ತು ಸುಮಾರು 59,000 ಮೀಟರ್‍ಗಳಷ್ಟು ಗ್ರಾಮೀಣ ಸೇತುವೆಗಳ ನಿರ್ಮಾಣವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿರುವ 6,300ಕ್ಕೂ ಹೆಚ್ಚು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಡಿಜಿಟಲೀಕರಣಗೊಳಿಸುವ ಮೂಲಕ ಅವುಗಳ ದಕ್ಷತೆಯನ್ನು ಹೆಚ್ಚಿಸಲಾಗುತ್ತಿದೆ. ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಬಯೋಗ್ಯಾಸ್ ಘಟಕಗಳು, ಹಾಗೂ ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸೌರ ಮತ್ತು ಪವನ ವಿದ್ಯುತ್ ಯೋಜನೆಗಳಿಗೆ ನಬಾರ್ಡ್ ವಿಶೇಷ ಆದ್ಯತೆ ನೀಡಿದೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೃಷಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಉತ್ತೇಜನ ನೀಡಲಾಗುತ್ತಿದ್ದು, ಇದಕ್ಕಾಗಿ ಈಗಾಗಲೇ ಐದು ಘಟಕಗಳನ್ನು ಉದ್ಘಾಟಿಸಲಾಗಿದೆ. ಗ್ರಾಮೀಣ ಜನತೆಯ ಬದುಕು ಹಸನಾಗಿಸಲು ಮತ್ತು ಆರ್ಥಿಕತೆಯನ್ನು ಬಲಪಡಿಸಲು ಬ್ಯಾಂಕ್ ತನ್ನ ಬದ್ಧತೆಯನ್ನು ಮುಂದುವರಿಸಲಿದೆ. ಕೃಷಿ, ನೀರಾವರಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ನಬಾರ್ಡ್ ಜಾರಿಗೆ ತಂದಿರುವ ಯೋಜನೆಗಳು ಗ್ರಾಮೀಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಿವೆ ಎಂದರು.
ಸಿಎಫ್‍ಟಿಆರ್‍ಐ ಸಂಸ್ಥೆಯ ನಿರ್ದೇಶಕ ಡಾ. ಗಿರಿಧರ್ ಪರ್ವತಮ್ ಅವರು ಮಾತನಾಡಿ, ಕೃಷಿ ತಂತ್ರಜ್ಞಾನ ಹಾಗೂ ಗ್ರಾಮೀಣ ಹಣಕಾಸು ಕ್ಷೇತ್ರದ ಎರಡು ದೈತ್ಯ ಸಂಸ್ಥೆಗಳಾದ ಸಿಎಫ್‍ಟಿಆರ್‍ಐ ಮತ್ತು ನಬಾರ್ಡ್ ಕೈಜೋಡಿಸಿದ್ದು, ಗ್ರಾಮೀಣ ಭಾಗದ ಆರ್ಥಿಕ ಸಬಲೀಕರಣಕ್ಕೆ ಹೊಸ ಮುನ್ನುಡಿ ಬರೆದಿವೆ. ನಬಾರ್ಡ್‍ನ 45ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಮೈಸೂರಿನ ಸಿಎಫ್‍ಟಿಆರ್‍ಐ ಆವರಣದಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಈ ಮಹತ್ವದ ಮೈತ್ರಿಯ ಕುರಿತು ಘೋಷಿಸಲಾಯಿತು. ಈ ಐತಿಹಾಸಿಕ ಒಪ್ಪಂದವು ಕೃಷಿ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಗೆ ಕಾರಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಬಾರ್ಡ್ ಗ್ರಾಮೀಣ ಉದ್ಯಮಗಳಿಗೆ ಅಗತ್ಯವಿರುವ ಆರ್ಥಿಕ ನೆರವು ನೀಡಿದರೆ, ಸಿಎಫ್‍ಟಿಆರ್‍ಐ ಅದಕ್ಕೆ ಪೂರಕವಾದ ವೈಜ್ಞಾನಿಕ ಮತ್ತು ತಾಂತ್ರಿಕ ಪರಿಹಾರಗಳನ್ನು ಒದಗಿಸಲಿದೆ. ಈ ಹಣಕಾಸು ಮತ್ತು ತಂತ್ರಜ್ಞಾನದ ಸಮ್ಮಿಲನವು ಕೃಷಿ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲಿದೆ ಎಂದರು.
ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ‘ರೈತರ ತರಬೇತಿ ಮತ್ತು ಕೃಷಿ ಸಂಸ್ಕಾರ ಕೇಂದ್ರ’ ಯೋಜನೆಯು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಂಸದರ ನಿಧಿ ನೆರವಿನೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ನಬಾರ್ಡ್ ಮತ್ತು ಸಿಎಫ್‍ಟಿಆರ್‍ಐ ಜಂಟಿಯಾಗಿ ಇಲ್ಲಿನ ರೈತ ಉತ್ಪಾದಕ ಸಂಸ್ಥೆಗಳಿಗೆ ತಾಂತ್ರಿಕ ನೆರವು, ಆಧುನಿಕ ಯಂತ್ರೋಪಕರಣ ಹಾಗೂ ತರಬೇತಿ ನೀಡುತ್ತಿವೆ.
ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಕೃಷಿ ಉತ್ಪನ್ನಗಳನ್ನು ಬೆಳೆಯುವ ದೇಶಗಳಲ್ಲಿ ಒಂದಾಗಿದ್ದರೂ, ಮೌಲ್ಯವರ್ಧನೆ ಮತ್ತು ಸಂಸ್ಕರಣೆಯ ಕೊರತೆಯಿಂದಾಗಿ ಸಾಕಷ್ಟು ನಷ್ಟ ಉಂಟಾಗುತ್ತಿದೆ. ಪ್ರಸ್ತುತ ಆಹಾರ ಸಂಸ್ಕರಣಾ ವಲಯವು ದೇಶದ ಜಿಡಿಪಿಗೆ ಶೇ. 12.9 ರಷ್ಟು ಕೊಡುಗೆ ನೀಡುತ್ತಿದ್ದು, ಇದನ್ನು ಮತ್ತಷ್ಟು ಹೆಚ್ಚಿಸಲು ಸಿಎಫ್‍ಟಿಆರ್‍ಐ ಅಭಿವೃದ್ಧಿಪಡಿಸಿರುವ ಶೇ. 75 ಕ್ಕೂ ಹೆಚ್ಚು ಗ್ರಾಮೀಣ ಕೇಂದ್ರಿತ ತಂತ್ರಜ್ಞಾನಗಳು ಸಹಕಾರಿಯಾಗಲಿವೆ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಆಹಾರ ತಂತ್ರಜ್ಞಾನ ಮತ್ತು ಸಂಸ್ಕರಣೆಯನ್ನು ಉತ್ತೇಜಿಸಲು ನಬಾರ್ಡ್ ಕರ್ನಾಟಕದ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಡಾ ಸುರೇಂದ್ರ ಬಾಬು ಮತ್ತು ಮೈಸೂರಿನ ಸಿಎಫ್‍ಟಿಆರ್‍ಐ ಸಂಸ್ಥೆಯ ನಿರ್ದೇಶಕರಾದ ಡಾ. ಗಿರಿಧರ್ ಪರ್ವತಂ ಅವರು ಪರಸ್ಪರ ತಿಳುವಳಿಕಾ ಒಡಂಬಡಿಕೆ ಮಾಡಿಕೊಂಡರು.
ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ನಬಾರ್ಡ್‍ನ ಕೌಶಲ್ಯಾಭಿವೃದ್ಧಿ ಉಪಕ್ರಮವಾದ ‘ಗ್ರಾಮೋದ್ಯಮ’ ಕುರಿತ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಅಲ್ಲದೆ, ಹವಾಮಾನ ಬದಲಾವಣೆ ತಡೆಗೆ ನಬಾರ್ಡ್ ಕೈಗೊಂಡಿರುವ ಉಪಕ್ರಮಗಳ ಕುರಿತಾದ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು.
ಕರ್ನಾಟಕದ ಸಹಕಾರ ವಲಯದಲ್ಲಿ ನಬಾರ್ಡ್ ಪಾತ್ರ ಮತ್ತು ಕೃಷಿ ಮತ್ತು ಪೂರಕ ಚಟುವಟಿಕೆಗಳ ಹೂಡಿಕೆ ವೆಚ್ಚದ ಕೈಪಿಡಿಗಳನ್ನು ಬಿಡುಗಡೆ ಮಾಡಲಾಯಿತು.
ಸಮಾರಂಭದಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಪ್ರಗತಿಪರ ಮಹಿಳಾ ರೈತರನ್ನು ಮತ್ತು ಅತ್ಯುತ್ತಮ ಸಾಧನೆ ಮಾಡಿದ ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಆರ್ಥಿಕ ಸುಧಾರಣೆಗಳ ಇಲಾಖೆ ಕಾರ್ಯದರ್ಶಿ ಡಾ. ವಿಶಾಲ್ ಆರ್., ಆರ್‍ಬಿಐ ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ಕಾಯಾ ತ್ರಿಪಾಠಿ, ಎಸ್ ಬಿ ಐ ಮುಖ್ಯ ವ್ಯವಸ್ಥಾಪಕರಾದ ಜೂಹಿ ಸ್ಮಿತಾ ಸಿನ್ಹಾ, ನಬಾರ್ಡ್ ಜನರಲ್ ಮ್ಯಾನೇಜರ್ ಡಾ. ಅಶುತೋಷ್ ಕುಮಾರ್, ನಬಾರ್ಡ್ ಉಪ ಪ್ರಧಾನ ವ್ಯವಸ್ಥಾಪಕಿ ಶ್ರೀಮತಿ ತರನ್ನುಮ್ ಅಜ್ಮಿ ಸೇರಿದಂತೆ ಹಿರಿಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
