ಸಮಗ್ರ ಸುದ್ದಿ

ದೇಶಾದ್ಯಂತ 1275 ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ|ಅಮೃತ್ ಭಾರತ್ ಯೋಜನೆಯಲ್ಲಿ ನವೀಕರಣಗೊಂಡ ಅಳ್ನಾವರ ರೈಲು ನಿಲ್ದಾಣ ಲೋಕಾರ್ಪಣೆ

Share

ಅಳ್ನಾವರ: ದೇಶಾದ್ಯಂತ ಒಟ್ಟು 1275 ರೈಲ್ವೆ ನಿಲ್ದಾಣಗಳನ್ನು ಅಮೃತ್ ಭಾರತ್ ಯೋಜನೆಯಡಿ ಮೇಲ್ದರ್ಜೆಗೇರಿಸಲು ಯೋಜನೆ ರೂಪಿಸಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮಾಹಿತಿ ನೀಡಿದರು.

ಅಮೃತ್ ಭಾರತ ಯೋಜನೆಯಡಿ ಅತ್ಯಾಧುನಿಕವಾಗಿ ನವೀಕರಣಗೊಂಡ ನೈರುತ್ಯ ರೈಲ್ವೆ ವಲಯದ ಅಳ್ನಾವರ ರೈಲ್ವೆ ನಿಲ್ದಾಣ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದ ಸಚಿವರು, ಅಮೃತ್ ಭಾರತ್ ರೈಲು ನಿಲ್ದಾಣಗಳ ಯೋಜನೆ ಭಾಗವಾಗಿ ಈಗಾಗಲೇ 261 ನಿಲ್ದಾಣಗಳನ್ನು ಜಾಗತಿಕ ಗುಣಮಟ್ಟಕ್ಕೆ ತಕ್ಕಂತೆ ಅಭಿವೃದ್ಧಿಪಡಿಸಿದೆ ಎಂದು ಹೇಳಿದರು.

ರಾಜ್ಯದಲ್ಲಿನ ನಾಲ್ಕು ರೈಲು ನಿಲ್ದಾಣಗಳು ಸೇರಿದಂತೆ ದೇಶದ ಒಟ್ಟಾರೆ 75 ಅಮೃತ್ ಭಾರತ ರೈಲ್ವೆ ನಿಲ್ದಾಣಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿರುವುದು ಭಾರತದ ವೇಗದ ಬೆಳವಣಿಗೆಗೆ ನಿದರ್ಶನವಾಗಿದೆ ಎಂದು ಜೋಶಿ ಬಣ್ಣಿಸಿದರು.

ದೇಶದ 75 ರೈಲ್ವೆ ನಿಲ್ದಾಣಗಳನ್ನು ಪ್ರಧಾನಿ ಅವರು ಪಂಜಾಬ್‌ನ ಜಲಂಧರ್ ಕಂಟೋನ್‌ಮೆಂಟ್ ರೈಲ್ವೆ ನಿಲ್ದಾಣದಲ್ಲಿ ವರ್ಚುವಲ್‌ ಕಾರ್ಯಕ್ರಮದ ಮೂಲಕ ಲೋಕಾರ್ಪಣೆ ಮಾಡಿದ್ದು, ರೈಲ್ವೆ ವಲಯಕ್ಕೆ ಉತ್ತೇಜನ ನೀಡುತ್ತ ದೇಶವನ್ನು ಅಭಿವೃದ್ಧಿ ಪರ್ವದತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.

ಕರ್ನಾಟಕದ ಅಳ್ನಾವರ, ಬಾದಾಮಿ, ಕೊಪ್ಪಳ, ಬಂಟ್ವಾಳ ರೈಲ್ವೆ ನಿಲ್ದಾಣಗಳು ಇಂದು ಅಮೃತ್ ಭಾರತ ಯೋಜನೆಯಡಿ ಪುನರಾಭಿವೃದ್ಧಿಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಸುರಕ್ಷಿತ, ಸುಸ್ಥಿರ ಸಂಚಾರ ವ್ಯವಸ್ಥೆಯನ್ನು ಬಲಪಡಿಸಿದ್ದಾರೆ ಎಂದರು.

ಅಳ್ನಾವರ ನಿಲ್ದಾಣಕ್ಕೆ ₹17.20 ಕೋಟಿ: ಅಮೃತ್ ಸ್ಟೇಷನ್ ಯೋಜನೆಯಡಿ ಅಳ್ನಾವರ ರೈಲು ನಿಲ್ದಾಣವನ್ನು ‎₹17.20 ಕೋಟಿ ವೆಚ್ಚದಲ್ಲಿ ಪುನರಾಭಿವೃದ್ಧಿಗೊಳಿಸಿದ್ದು, ಹೊಸ ಬುಕಿಂಗ್ ಕೇಂದ್ರ, ಅತ್ಯಾಧುನಿಕ ನಿರೀಕ್ಷಣಾ ಸಭಾಂಗಣ, ನವೀಕರಿಸಿದ ಶೌಚಾಲಯಗಳು, ಪ್ಲಾಟ್‌ಫಾರ್ಮ್‌ 1 ಮತ್ತು 2ಕ್ಕೆ ನೂತನ ಶೆಲ್ಟರ್‌ಗಳು, ಸುಧಾರಿತ ಪಾರ್ಕಿಂಗ್ ಹಾಗೂ ಸಂಚಾರ ವ್ಯವಸ್ಥೆ, ಆಕರ್ಷಕ ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿದೆ.

₹7 ಕೋಟಿ ವೆಚ್ಚದ 12 ಮೀಟರ್ ಪಾದಚಾರಿ ಮೇಲ್ಸೇತುವೆ, ಎರಡು ಲಿಫ್ಟ್‌ಗಳು, LED ಮಾಹಿತಿ ಫಲಕ, PA ಸಿಸ್ಟಮ್ ಹಾಗೂ ಆಧುನಿಕ ಬೆಳಕಿನ ವ್ಯವಸ್ಥೆಗಳನ್ನು ಕಲ್ಪಿಸುವ ಮೂಲಕ ಅಳ್ನಾವರ ನಿಲ್ದಾಣಕ್ಕೆ ಜಾಗತಿಕ ಸ್ಪರ್ಶ ನೀಡಲಾಗಿದೆ ಎಂದರು.

ನಮ್ಮ ರಾಜ್ಯದ 4 ಪ್ರಮುಖ ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ, ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರಿಗೆ ರಾಜ್ಯದ ಜನರ ಪರವಾಗಿ ಅನಂತ ಧನ್ಯವಾದಗಳನ್ನು ಅರ್ಪಿಸಿದರು ಸಚಿವ ಪ್ರಲ್ಹಾದ ಜೋಶಿ.

ಈ ಸಂದರ್ಭದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಸಭಾಪತಿ ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ, ರೈಲ್ವೆ ಇಲಾಖೆ ಜನರಲ್ ಮ್ಯಾನೇಜರ್ ಪಿ. ಅನಂತ, ಜಿಲ್ಲಾಧಿಕಾರಿ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.


Share

You cannot copy content of this page