ಬೆಂಗಳೂರು:ರಾಜ್ಯದಲ್ಲಿ ರೈತರಿಗೆ ಹಗಲು ವೇಳೆಯಲ್ಲಿ ಗುಣಮಟ್ಟದ ವಿದ್ಯುತ್ ಪೂರೈಕೆಯನ್ನು ಖಾತ್ರಿಪಡಿಸುವ ಮಹತ್ವಾಕಾಂಕ್ಷೆ ಯೋಜನೆ ‘ಪಿಎಂ ಕುಸುಮ್-ಸಿ’ ಅನುಷ್ಠಾನವನ್ನು ಮತ್ತಷ್ಟು ಚುರುಕುಗೊಳಿಸುವಂತೆ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಬೆಸ್ಕಾಂ ಕಾರ್ಪೋರೇಟ್ ಕಚೇರಿ ಬೆಳಕು ಭವನದಲ್ಲಿ ಮಂಗಳವಾರ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರು, ಕೃಷಿ ಫೀಡರ್ ಗಳನ್ನು ಸೌರೀಕರಣಗೊಳಿಸುವ ಕುಸುಮ್- ಸಿ ಯೋಜನೆಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಎಲ್ಲಾ ಎಸ್ಕಾಂಗಳು, ಕೆಆರ್‌ಇಡಿಎಲ್ ಹಾಗೂ ಅನುಷ್ಠಾನ ಸಂಸ್ಥೆಗಳಿಗೆ ಸೂಚಿಸಿದರು. ಅಲ್ಲದೆ, ಯೋಜನೆಗಳಿಗೆ ಭೂಮಿ ಗುರುತಿಸುವಿಕೆ, ಒಪ್ಪಂದಗಳ ಅನುಷ್ಠಾನ ಹಾಗೂ ಕಾಮಗಾರಿಗಳ ಆರಂಭ ಸೇರಿದಂತೆ ಇತರ ಪ್ರಮುಖ ಕಾರ್ಯಗಳನ್ನು ತ್ವರಿತಗೊಳಿಸುವಂತೆ ನಿರ್ದೇಶಿಸಿದರು.
“ಕೆಪಿಟಿಸಿಎಲ್, ಎಸ್ಕಾಂಗಳು, ಕೆಆರ್‌ಇಡಿಎಲ್, ಸಿಇಐಜಿ ಹಾಗೂ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಸ್ಥೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವ ಜತೆಗೆ ಆಡಳಿತಾತ್ಮಕ ಅಡೆತಡೆಗಳನ್ನು ನಿವಾರಿಸಿ, ನಿಗದಿತ ಅವಧಿಯೊಳಗೆ ಯೋಜನೆಗಳನ್ನು ಪೂರ್ಣಗೊಳಿಸಬೇಕು. ಇದರಿಂದ ವಿದ್ಯುತ್ ಕೊರತೆ ನೀಗುವ ಜತೆಗೆ ರೈತರಿಗೆ ಹಗಲಿನ ವೇಳೆಯೇ ಗುಣಮಟ್ಟದ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ,” ಎಂದು ಹೇಳಿದರು.
“ಫೀಡರ್ ಮಟ್ಟದ ಸೌರೀಕರಣ ಯೋಜನೆಯಾದ ಕುಸುಮ್-ಸಿ ಯೋಜನೆಯಡಿ ಒಟ್ಟು ಗುರಿಯ ಪೈಕಿ 2,767 ಮೆಗಾವ್ಯಾಟ್ ಸಾಮರ್ಥ್ಯದ 439 ಯೋಜನೆಗಳಿಗೆ ಈಗಾಗಲೇ ಗುತ್ತಿಗೆ ನೀಡಿ, ಒಪ್ಪಂದಗಳನ್ನು ಕಾರ್ಯಗತಗೊಳಿಸಲಾಗಿದೆ. ಇದರಲ್ಲಿ 540 ಮೆಗಾವಾಟ್ ಸಾಮರ್ಥ್ಯದ ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದ 2,227 ಮೆಗಾವಾಟ್ ಸಾಮರ್ಥ್ಯದ ಯೋಜನೆಗಳ ಅನುಷ್ಠಾನ ಪ್ರಗತಿಯಲ್ಲಿದೆ,” ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ, ಕೆಆರ್‌ಇಡಿಎಲ್ ವ್ಯವಸ್ಥಾಪಕ ನಿರ್ದೇಶಕಿ ದಿವ್ಯ ಪ್ರಭು, ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಇತರ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರು ಆನ್‌ಲೈನ್ ಮೂಲಕ ಸಭೆಯಲ್ಲಿ ಭಾಗಿಯಾಗಿ ಮಾಹಿತಿ ನೀಡಿದರು.
ಕೋಟ್
“ಕುಸುಮ್-ಸಿ ಯೋಜನೆಯು ಕರ್ನಾಟಕದ ಕೃಷಿ ಕ್ಷೇತ್ರಕ್ಕೆ ವರದಾನವಾಗಿದೆ. ಕೃಷಿ ಫೀಡರ್‌ಗಳ ಸೌರೀಕರಣದ ಮೂಲಕ ರೈತರಿಗೆ ಹಗಲಿನ ವೇಳೆಯೇ ಗುಣಟಮಟ್ಟದ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸುವುದರ ಜತೆಗೆ ವಿದ್ಯುತ್ ವಲಯದ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲಿದೆ. ಮುಖ್ಯವಾಗಿ ಇದು ಶುದ್ಧ ಇಂಧನ ಬಳಕೆಯನ್ನ ಈ ಯೋಜನೆಯು ಉತ್ತೇಜಿಸುತ್ತದೆ. ನಿಗದಿತ ಅವಧಿಯೊಳಗೆ ಯೋಜನೆಯನ್ನು ಅನುಷ್ಠಾನದ ಗುರಿ ಸಾಧಿಸಲು ಎಲ್ಲಾ ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಲಿವೆ.”
ಕೆ.ಜೆ. ಜಾರ್ಜ್, ಇಂಧನ ಹಾಗೂ ಪ್ರವಾಸೋದ್ಯಮ ಸಚಿವರು
“ಕುಸುಮ್-ಸಿ ಯೋಜನೆಯ ಯಶಸ್ಸಿಗೆ ಕಾಲಬದ್ಧವಾಗಿ ಅನುಷ್ಠಾನ ಬಹಳ ಮುಖ್ಯ. ಭೂಮಿ ಲಭ್ಯತೆ, ಕಾನೂನುಬದ್ಧ ಅನುಮತಿಗಳು, ಒಪ್ಪಂದಗಳ ಅನುಷ್ಠಾನ ಹಾಗೂ ಯೋಜನಾ ಕಾಮಗಾರಿಗಳು ಏಕಕಾಲದಲ್ಲಿ ಮುಂದುವರಿಯಬೇಕು. ಎಲ್ಲಾ ಸಂಬಂಧಿತ ಸಂಸ್ಥೆಗಳು ಅಡೆತಡೆಗಳನ್ನು ನಿವಾರಿಸಿ, ಸಮನ್ವಯ ಸಾಧಿಸಬೇಕು. ಬಾಕಿ ಉಳಿದಿರುವ ಕಾಮಗಾರಿಗಳನ್ನು ಯಾವುದೇ ವಿಳಂಬವಿಲ್ಲದೆ ಪೂರ್ಣಗೊಳಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ”
ಗೌರವ್ ಗುಪ್ತ, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ
“ಕುಸುಮ್-ಸಿ ಯೋಜನೆಯನ್ನು ನಿಗದಿತ ಅವಧಿಯೊಳಗೆ ಅನುಷ್ಠಾನಗೊಳಿಸಲು ಬೆಸ್ಕಾಂ ಬದ್ಧವಾಗಿದೆ. ಭೂಮಿ ಗುರುತಿಸುವಿಕೆ ಹಾಗೂ ಗ್ರಿಡ್ ಸಂಪರ್ಕ ಕಾರ್ಯದ ಮೂಲಕ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ನಿಟ್ಟನಲ್ಲಿ ಕ್ಷೇತ್ರಮಟ್ಟದ ಅಧಿಕಾರಿಗಳು ಅನುಷ್ಠಾನ ಸಂಸ್ಥೆಗಳೊಂದಿಗೆ ನಿಕಟ ಸಮನ್ವಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಯೋಜನೆಯು ಕೃಷಿಕರಿಗೆ ವಿದ್ಯುತ್ ಪೂರೈಕೆಯ ಗುಣಮಟ್ಟವನ್ನು ಗಣನೀಯವಾಗಿ ಹೆಚ್ಚಿಸುವುದರ ಜತೆಗೆ ವಿತರಣಾ ಜಾಲದಲ್ಲಿ ನವೀಕರಿಸಬಹುದಾದ ಇಂಧನದ ಪಾಲನ್ನು ಹೆಚ್ಚಿಸಲಿದೆ.”
ಡಾ.ಎನ್. ಶಿವಶಂಕರ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ
