ಬೆಂಗಳೂರು : ಕ್ರೀಡೆಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ರಾಜ್ಯ ಸರ್ಕಾರ ಸುಮಾರು 34 ಸ್ಟೋರ್ಟ್ಸ್ ಹಾಸ್ಟೆಲ್‌ಗಳನ್ನು ನಡೆಸುತ್ತಿದೆ. ಒಟ್ಟು ಪ್ರಸ್ತುತ ಸಂದರ್ಭದಲ್ಲಿ 2,300 ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಇಲ್ಲಿ ವಿದ್ಯಾನಗರದಲ್ಲಿ ಅಥ್ಲೆಟಿಕ್ಸ್, ಫುಟ್ಬಾಲ್, ವಾಲಿಬಾಲ್, ಜಿಮ್ನೇಶಿಯಂ ಮೊದಲಾದ ಕ್ರೀಡೆಗಳಿಗೆ ತರಬೇತಿ ಕೊಡುತ್ತಿದ್ದಾರೆ. ಅದೇ ರೀತಿ ಬೇರೆ ಕೇಂದ್ರಗಳಲ್ಲಿ ಬೇರೆ ಬೇರೆ ಕ್ರೀಡೆಗಳಿಗೆ ತರಬೇತಿ ಕೊಡುತ್ತಿದ್ದಾರೆ ಎಂದು ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಕ್ರೀಡಾ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಹೇಳಿದರು.
ಇಂದು ಚಿಕ್ಕಜಾಲದ ವಿದ್ಯಾನಗರದಲ್ಲಿರುವ ಶ್ರೀ ಜಯಪ್ರಕಾಶ್ ನಾರಾಯಣ್ ರಾಷ್ಟ್ರೀಯ ಯುವ ತರಬೇತಿ ಕೇಂದ್ರಕ್ಕೆ (ವಿದ್ಯಾನಗರ ಕ್ರೀಡಾ ಶಾಲೆ) ಭೇಟಿ ನೀಡಿ, ಕ್ರೀಡಾಂಗಣ ಹಾಗೂ ವಿದ್ಯಾರ್ಥಿ ನಿಲಯದ ಮೂಲಸೌಕರ್ಯವನ್ನು ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಒಟ್ಟಾರೆ ರಾಜ್ಯದ ದೃಷ್ಟಿಯಿಂದ, ರಾಷ್ಟ್ರದ ದೃಷ್ಟಿಯಿಂದ ಕ್ರೀಡಾಪಟುಗಳನ್ನು ತಯಾರು ಮಾಡುವುದಕ್ಕೆ, ಪ್ರೋತ್ಸಾಹ ನೀಡುವುದಕ್ಕೆ ಸರ್ಕಾರ ಕ್ರೀಡೆ ಮತ್ತು ಯುವ ಸಬಲೀಕರಣ ಎಂಬ ಇಲಾಖೆಯನ್ನೇ ಮಾಡಿದೆ. ಆ ಇಲಾಖೆಯ ವತಿಯಿಂದ ಇವತ್ತು ಹೆಚ್ಚೆಚ್ಚು ಕ್ರೀಡಾಪಟುಗಳನ್ನು ತಯಾರು ಮಾಡುವುದಕ್ಕೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಕೊಡುತ್ತೇವೆ. ರಾಷ್ಟ್ರಮಟ್ಟದಲ್ಲಿ ಖೇಲೋ ಇಂಡಿಯಾ ಎಂಬ ಯೋಜನೆಯನ್ನು ಮಾಡಿ ಇಡೀ ದೇಶದ ಎಲ್ಲಾ ರಾಜ್ಯಗಳಲ್ಲಿ ಕ್ರೀಡಾಪಟುಗಳನ್ನು ತಯಾರುಮಾಡುವುದಕ್ಕೆ ಹಣ, ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುತ್ತಿದ್ದಾರೆ ಎಂದು ತಿಳಿಸಿದರು.
ಇಡೀ ದೇಶದ ದೃಷ್ಟಿಯಿಂದ ನಮ್ಮ ಮಕ್ಕಳು ಕೂಡ ರಾಷ್ಟ್ರೀಯ – ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಪದಕಗಳನ್ನು ತೆಗೆದುಕೊಂಡು ಬರಬೇಕೆಂಬುದು ನಮ್ಮ ಉದ್ದೇಶವಾಗಿದೆ. ಈಗಾಗಲೇ ಕಾಮನ್‌ವೆಲ್ತ್ ಕ್ರೀಡಾಕೂಟ ನಡೆಯುತ್ತಿದೆ. ಈಗ ಏಷ್ಯನ್ ಗೇಮ್ಸ್ 2024-25 ಜಪಾನ್‌ನಲ್ಲಿ ನಡೆಯುತ್ತಿದೆ. ಅಲ್ಲಿಗೆಲ್ಲ ನಮ್ಮ ಮಕ್ಕಳು ಹೋಗಿ ಭಾಗವಹಿಸಬೇಕು ಎಂಬುದು ನಮ್ಮ ಆಶಯ ಎಂದರು.
ಕ್ರೀಡೆ ಜೀವನದಲ್ಲಿ ಶಿಸ್ತನ್ನು ಕಲಿಸುತ್ತದೆ. ಜೀವನದಲ್ಲಿ ಸೋಲು ಗೆಲುವನ್ನು ಎದುರಿಸುವುದನ್ನು ಕಲಿಸಿಕೊಡುತ್ತದೆ. ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಮುಖ್ಯ ಎಂಬುದು ಒಲಂಪಿಕ್ಸ್ ಮೋಟೋ. ಹೀಗಿರುವಾಗ ಎಲ್ಲರೂ ಗೆಲ್ಲಲು ಆಗುವುದಿಲ್ಲ. ಕೆಲವು ಸಂದರ್ಭದಲ್ಲಿ ಸೋಲುತ್ತೇವೆ. ಕೆಲವು ಸಂದರ್ಭದಲ್ಲಿ ಗೆಲ್ಲುತ್ತೇವೆ. ಸೋತಂತಹ ಸಂದರ್ಭದಲ್ಲಿ ನಿರಾಶೆ ಆಗುವುದಿಲ್ಲ. ಆಗಬಾರದು ಕೂಡ. ಸೋಲನ್ನು ಜೀವನದಲ್ಲಿ ನಾವು ಯಾವ ರೀತಿ ಎದುರಿಸಬೇಕು ಎಂಬುದನ್ನು ಕಲಿಯಬೇಕು ಎಂದು ವಿವರಿಸಿದರು.
ಅನೇಕ ಸಂದರ್ಭದಲ್ಲಿ ಜೀವನದಲ್ಲಿ ನಾವು ಸೋಲುತ್ತೇವೆ. ಆಗ ನಾವು ಅದನ್ನು ಕ್ರೀಡಾ ಮನೋಭಾವದಿಂದ ತೆಗೆದುಕೊಳ್ಳಬೇಕು. ಯಾವುದೇ ಸಂದರ್ಭದಲ್ಲೂ ಕೂಡ ಕ್ರೀಡೆ ಎನ್ನುವುದು ಮನಸನ್ನೇ ಬದಲಾವಣೆ ಮಾಡುತ್ತದೆ. ಅದಕ್ಕೆ ನಮ್ಮ ಸರ್ಕಾರ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದೆ ಎಂದರು.
ನಾನು ಕ್ರೀಡಾ ಸಚಿವನಾಗಿ ಇಲ್ಲಿಗೆ ಬಂದಿದ್ದೇನೆ. ಈ ಸೌಲಭ್ಯಗಳನ್ನೆಲ್ಲ ನೋಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಗುಣಮಟ್ಟವನ್ನು ಹೇಗೆ ಉತ್ತಮಪಡಿಸಬಹುದು ಎಂದು ನೋಡುವ ಉದ್ದೇಶದಿಂದ ಬಂದಿದ್ದೇನೆ. ಬಹಳ ಒಳ್ಳೆಯ ಸೌಲಭ್ಯ ಒದಗಿಸಿದ್ದಾರೆ. ಗುಣಮಟ್ಟ ಇನ್ನೂ ಸ್ವಲ್ಪ ಹೆಚ್ಚಾದರೆ ಮಕ್ಕಳಿಗೆ ತರಬೇತಿ ಕೊಡುವುದಕ್ಕೆ, ಅವರು ಕಲಿಯುವುದಕ್ಕೆ ಚೆನ್ನಾಗಿ ಆಗುತ್ತದೆ. ಸ್ಪರ್ಧಾತ್ಮಕ ಮನೋಭಾವ ಬರುತ್ತದೆ ಎಂದು ಅವರು ತಿಳಿಸಿದರು.
ನಮ್ಮ ಮಕ್ಕಳನ್ನು ಹೆಚ್ಚೆಚ್ಚು ಸ್ಪರ್ಧೆಗಳಿಗೆ ಕಳುಹಿಸಬೇಕು. ಅದಕ್ಕಾಗಿಯೇ ನಮ್ಮ ಇಲಾಖೆಯಲ್ಲಿ ಅನೇಕ ಅಧಿಕಾರಿಗಳಿದ್ದಾರೆ. ಅವರೆಲ್ಲ ವಿವಿಧ ಕಾರ್ಯಕ್ರಮಗಳನ್ನು ಮಾಡಿ, ಅತ್ಯುತ್ತಮ ಕೋಚ್‌ಗಳನ್ನು ನೇಮಕ ಮಾಡಿ, ಅವಕಾಶ ಮಾಡಿಕೊಡಬೇಕು. ಆ ದೃಷ್ಟಿಯಲ್ಲಿ ನಾವು ಕೆಲಸ ಮಾಡುತ್ತೇವೆ. ಉದಾಹರಣೆಗೆ ನಮ್ಮಲ್ಲಿ 23 ಕಡೆ ಸಿಂಥೆಟಿಕ್ ಟ್ರಾಕ್ ಹಾಕಿದ್ದಾರೆ. ನಾವೆಲ್ಲ ಅಥ್ಲಿಟಿಕ್ಸ್ ಆಗಿರುವಾಗ ಕಂಠೀರವ ಕ್ರೀಡಾಂಗಣದಲ್ಲಿ ಸಿಂಥೆಟಿಕ್ಸ್ ಇರಲಿಲ್ಲ. ಆಗ ಸಿಂಡರ್‌ಟ್ರಾಕ್ ಇತ್ತು. ದೆಹಲಿಯಲ್ಲಿ ಬಿಟ್ಟರೆ ಬೇರೆ ಎಲ್ಲೂ ಇರಲಿಲ್ಲ. ಇವತ್ತು ಜಿಲ್ಲಾ ಮಟ್ಟದಲ್ಲೂ ಸಿಂಥೆಟಿಕ್ಸ್ ಇದೆ. ಹೆಚ್ಚಿನ ಅವಕಾಶಗಳಿವೆ. ಈ ಪ್ರತಿಭೆಗಳು ವಿದ್ಯಾಭ್ಯಾಸವನ್ನು ಲೆಕ್ಕಿಸದೆ ಕ್ರೀಡೆಯಲ್ಲಿ ತೊಡಗಿಕೊಂಡಿದ್ದಾರೆ. ತಮ್ಮ ಪ್ರತಿಭೆ ಮತ್ತು ಪರಿಶ್ರಮದ ಮೂಲಕ ಕ್ರೀಡೆಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಕ್ರೀಡಾಳುಗಳು ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದಾರೆ. ಅವರಿಗೆ ಒಳಿತಾಗಲಿ ಎಂದು ಹಾರೈಸಿದರು.
ರಾಜ್ಯದಲ್ಲಿ ಕ್ರೀಡೆ & ಕ್ರೀಡಾಳುಗಳಿಗೆ ಅಗತ್ಯ ಪ್ರೋತ್ಸಾಹ ನೀಡುವ ಸಲುವಾಗಿ ಕಂಠೀರವ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಮೂಲಸೌಕರ್ಯಗಳನ್ನು ಸೃಷ್ಟಿಸಲು ನಮ್ಮ ಸರ್ಕಾರ ಚಿಂತನೆ ನಡೆಸಿದೆ. 2030ರಲ್ಲಿ ಕಾಮನ್ ವೆಲ್ತ್ ಗೇಮ್ಸ್ ಅಹಮದಾಬಾದ್ ನಲ್ಲಿ ಜರಗುವುದರಿಂದ ನಮ್ಮ ರಾಜ್ಯದಲ್ಲೂ ಕ್ರೀಡಾ ಮೂಲಸೌಕರ್ಯವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಿದರೆ ನಾವು ಕೂಡ ಕಾಮನ್ ವೆಲ್ತ್ ಗೇಮ್ಸ್ ನ ವಿವಿಧ ಕ್ರೀಡೆಗಳ ಆತಿಥ್ಯ ವಹಿಸಲು ಸಾಧ್ಯವಾಗಬಹುದು ಎಂದು ಯೋಚಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಕ್ರೀಡಾ ಪ್ರತಿಭೆಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯ & ಪೋಷಣೆಯ ಬಗ್ಗೆ ನಿಗಾ ವಹಿಸುವ ಸಲುವಾಗಿ ಪೌಷ್ಟಿಕ ಆಹಾರವನ್ನು ಒದಗಿಸಲು ಮತ್ತು ಪೌಷ್ಟಿಕ ಆಹಾರದ ಪೂರೈಕೆಯನ್ನು ನೋಡಿಕೊಳ್ಳಲು ಪೌಷ್ಟಿಕತಜ್ಞರನ್ನು ನೇಮಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು. ಅದರಂತೆ ಮುಂದಿನ ದಿನಗಳಲ್ಲಿ ತರಬೇತುದಾರರು ಇತರ ಸಿಬ್ಬಂದಿ ಸೇರಿದಂತೆ ಕ್ರೀಡಾಳುಗಳ ಬೆಳವಣಿಗೆಗೆ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಾನು ಕ್ರೀಡಾಪಟುವಾಗಿದ್ದವನು. 100 ಮೀಟರ್ ಓಟವನ್ನು 10.9 ಸೆಕೆಂಡುಗಳಲ್ಲಿ ಓಡಿದ ದಾಖಲೆ ಇದೆ. ಫುಟ್ಬಾಲ್ ಆಟಗಾರನಾಗಿದ್ದೆ. ಆಸ್ಟ್ರೇಲಿಯಾದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಅಡಿಲೇಡ್ ವಿಶ್ವವಿದ್ಯಾಲಯದ ಪದವಿಧದರ ತಂಡವನ್ನು ಪ್ರತಿನಿಧಿಸಿದ್ದೇನೆ. ಕ್ರೀಡಾಸಕ್ತಿ ನನ್ನ ರಕ್ತದಲ್ಲೇ ಇದೆ. ಹೀಗಾಗಿ ಕ್ರೀಡೆಯ ಬಗ್ಗೆ ಅಪಾರ ಒಲವನ್ನು ಹೊಂದಿದ್ದೇನೆ ಎಂದು ತಾವು ಕ್ರೀಡಾಪಟುವಾಗಿದ್ದ ದಿನಗಳನ್ನು ಮೆಲುಕು ಹಾಕಿದರು.
ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ನವೀನ್ ರಾಜ್ ಸಿಂಗ್, ಕ್ರೀಡಾ ಆಯುಕ್ತರಾದ ಎಂ.ಎನ್.ಅನುಚೇತ್, ಜಯಪ್ರಕಾಶ್ ನಾರಾಯಣ್ ರಾಷ್ಟ್ರೀಯ ಯುವ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕರಾದ ಎಂ.ಟಿ.ಮಂಜುನಾಥ್ ಸ್ವಾಮಿ ಮುಂತಾದವರು ಇದ್ದರು.
