ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆಯಿಂದ ಜಲ ವಿದ್ಯುತ್ ಉತ್ಪಾದನೆ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಶಾಖೋತ್ಪನ್ನ ಕೇಂದ್ರಗಳಲ್ಲಿ ವಿದ್ಯುತ್ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಜುಲೈ ತಿಂಗಳಲ್ಲಿ ಪ್ರತಿನಿತ್ಯ ಸರಾಸರಿ 84.34 ದಶಲಕ್ಷ ಯೂನಿಟ್ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ರಾಜ್ಯದಲ್ಲಿ ಜಲ ವಿದ್ಯುತ್ ಮತ್ತು ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಸ್ಥಾವರಗಳನ್ನು ನಿರ್ವಹಿಸುತ್ತಿದ್ದು, ಜಲಾಶಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳನ್ನು ಸುಸ್ಥಿತಿಯಲ್ಲಿಟ್ಟು ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಉತ್ಪಾದನೆಯನ್ನು ಪ್ರತಿನಿತ್ಯ 100 ದಶಲಕ್ಷ ಯೂನಿಟ್ ಗೆ ಹೆಚ್ಚಿಸಲು ಕ್ರಮ ವಹಿಸಲಾಗುತ್ತಿದೆ.
ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್ ಅವರು ವಿದ್ಯುತ್ ಉತ್ಪಾದನೆ ಕುರಿತಂತೆ ಈಗಾಗಲೇ ಕೆಪಿಸಿಎಲ್ ನ ಪ್ರಗತಿ ಪರಿಶೀಲನೆ ನಡೆಸಿದ್ದು, ಬೇಡಿಕೆಗೆ ತಕ್ಕಂತೆ ವಿದ್ಯುತ್ ಉತ್ಪಾದಿಸಲು ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.
ಈ ಬಾರಿ ಮಳೆಗಾಲದಲ್ಲಿ, ಅದರಲ್ಲೂ ಮುಖ್ಯವಾಗಿ ಜುಲೈ ತಿಂಗಳಲ್ಲಿ ರಾಜ್ಯದ ಮೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಅಗತ್ಯ ಕಲ್ಲಿದ್ದಲು ಪೂರೈಕೆ ಜತೆಗೆ ವಿದ್ಯುತ್ ಉತ್ಪಾದನೆಯಲ್ಲೂ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದಾಗಿ ಪ್ರತಿನಿತ್ಯ ಸರಾಸರಿ 84.34 ದಶಲಕ್ಷ ಯೂನಿಟ್ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ನಿತ್ಯ ಸರಾಸರಿ 54.47 ದಶಲಕ್ಷ ಯೂನಿಟ್ ಉತ್ಪಾದನೆ ಮಾಡಲಾಗಿತ್ತು.
ಜಲ ವಿದ್ಯುತ್ ಉತ್ಪಾದನೆ ಕುಂಠಿತವಾಗಿರುವ ಕಾರಣ ಪೂರೈಕೆಗೆ ಸಮಸ್ಯೆಯಾಗದಂತೆ ಮುಕ್ತ ಮಾರುಕಟ್ಟೆಯಿಂದ ವಿದ್ಯುತ್ ಖರೀದಿಸಬೇಕಾಗುತ್ತದೆ. ಇದರಿಂದ ಸರ್ಕಾರದ ಬೊಕ್ಕಸದ ಮೇಲೆ ಹೊರೆ ಬೀಳುತ್ತದೆ. ಇದನ್ನು ತಪ್ಪಿಸಿ ರಾಜ್ಯದಲ್ಲೇ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಲು ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳನ್ನು ಸನ್ನದ್ಧಗೊಳಿಸಲಾಗಿದೆ.
ಶಾಖೋತ್ಪನ್ನ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಪ್ರಮಾಣ:
ಈ ವರ್ಷದ ಜುಲೈ ತಿಂಗಳಲ್ಲಿ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ ಜುಲೈ ತಿಂಗಳಲ್ಲಿ ಸರಾಸರಿ 24.45 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಕಳೆದ ವರ್ಷದ ಜುಲೈ ತಿಂಗಳಲ್ಲಿ ಸರಾಸರಿ 13.12 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿತ್ತು.
ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ 33.64 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಸರಾಸರಿ 25.35 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗಿತ್ತು.
ಯರಮರಸ್ ಶಾಖೋತ್ಪನ್ನ ಸ್ಥಾವರದಲ್ಲಿ ಸರಾಸರಿ26.25 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಸರಾಸರಿ 16 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿತ್ತು.
ಕಲ್ಲಿದ್ದಲು ಸಂಗ್ರಹ ಹೆಚ್ಚಳ:
ಶಾಖೋತ್ಪನ್ನ ಕೇಂದ್ರಗಳಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡಲು ಕಲ್ಲಿದ್ದಲು ಸಂಗ್ರಹ ಹೆಚ್ಚಿಸುವ ನಿಟ್ಟಿನಲ್ಲಿ ಈಗಾಗಲೇ ಕ್ರಮ ವಹಿಸಲಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ 12 ದಿನಕ್ಕೆ ಬೇಕಾಗುವ ಕಲ್ಲಿದ್ದಲು ಸಂಗ್ರಹವಿತ್ತು. ಜುಲೈ ತಿಂಗಳಲ್ಲಿ 15 ದಿನಕ್ಕೆ ಬೇಕಾಗುವ ಕಲ್ಲಿದ್ದಲು ಸಂಗ್ರಹವಾಗಿದೆ. ಜತೆಗೆ ಕಲ್ಲಿದ್ದಲು ಸಂಗ್ರಹವನ್ನು 20 ದಿನಕ್ಕೆ ಬೇಕಾಗುವಷ್ಟು ಹೆಚ್ಚಿಸಲು ಕ್ರಮ ವಹಿಸಲಾಗುತ್ತಿದ್ದು, ದಿನಕ್ಕೆ 17ರಿಂದ 18 ರೇಕ್ ಕಲ್ಲಿದ್ದಲು ತರಿಸಿಕೊಳ್ಳಲಾಗುತ್ತಿದೆ.
ಮಳೆ ಕೊರತೆಯಿಂದ ಜಲ ವಿದ್ಯುತ್ ಉತ್ಪಾದನೆ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಹೆಚ್ಚಿಸಲಾಗಿದೆ. ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿರುವುದರ ಜತೆಗೆ ಹೆಚ್ಚುವರಿ ಕಲ್ಲಿದ್ದಲು ಸಂಗ್ರಹಿಸಲಾಗುತ್ತಿದೆ. ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಹೆಚ್ಚಿಸುವ ಮೂಲಕ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಲಾಗುತ್ತಿದೆ.
–ಕೆ.ಜೆ.ಜಾರ್ಜ್, ಇಂಧನ ಮತ್ತು ಪ್ರವಾಸೋದ್ಯಮ ಸಚಿವರು
ಮುಖ್ಯಮಂತ್ರಿಗಳು ಹಾಗೂ ಇಂಧನ ಸಚಿವರ ಸೂಚನೆಯಂತೆ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಿ ಜಲ ವಿದ್ಯುತ್ ಕೊರೆತೆಯನ್ನು ನೀಗಿಸಲು ಮತ್ತು ಸಮರ್ಪಕ ವಿದ್ಯುತ್ ಪೂರೈಕೆಗೆ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಪ್ರತಿನಿತ್ಯ 100 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಲು ಸ್ಥಾವರಗಳನ್ನು ಶೇ. 100ರಷ್ಟು ಸನ್ನದ್ಧಗೊಳಿಸಲಾಗುತ್ತಿದೆ.
–ರಾಜೇಂದ್ರ ಚೋಳನ್ ಪಿ., ವ್ಯವಸ್ಥಾಪಕ ನಿರ್ದೇಶಕರು, ಕೆಪಿಸಿಎಲ್
