ಸಮಗ್ರ ಸುದ್ದಿ

ಶಿಕ್ಷಣವೇ ಶೋಷಿತ ಸಮುದಾಯಗಳ ಏಳಿಗೆಗೆ ಮೊದಲ ಮೆಟ್ಟಿಲು: ಸಚಿವ ಡಾ. ಯತೀಂದ್ರ ಸಿದ್ಧರಾಮಯ್ಯ

Share

ಬೆಂಗಳೂರು: “ಸಮಾಜದಲ್ಲಿ ಶೋಷಿತ ಮತ್ತು ಹಿಂದುಳಿದ ವರ್ಗಗಳ ಜನರು ಮುನ್ನೆಲೆಗೆ ಬರಲು ಶಿಕ್ಷಣವೇ ಏಕೈಕ ಅಸ್ತ್ರ. ವಿದ್ಯೆ ಹಾಗೂ ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ. ಕಷ್ಟಪಟ್ಟು ಅಭ್ಯಾಸ ಮಾಡುವ ಪ್ರತಿಯೊಬ್ಬರಿಗೂ ವಿದ್ಯೆ ಒಲಿಯುತ್ತದೆ,” ಎಂದು ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ಧರಾಮಯ್ಯ ಅವರು ಪ್ರತಿಪಾದಿಸಿದರು.

​ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಹೊಸದುರ್ಗ ಶಾಖಾಮಠದ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಿದ ‘ಪ್ರತಿಭಾ ಪುರಸ್ಕಾರ – 2026’ ಕಾರ್ಯಕ್ರಮವನ್ನು ಉದ್ಘಾಟಿಸಿ, ಎಸ್‌ಎಸ್‌ಎಲ್‌ಸಿ, ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕನಕಶ್ರೀ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಬಾಬಾಸಾಹೇಬ್ ಅಂಬೇಡ್ಕರ್ ಅವರ “ಶಿಕ್ಷಣದ ಹಾಲು ಕುಡಿದವರು ಗರ್ಜಿಸಲೇಬೇಕು” ಎಂಬ ಮಾತನ್ನು ಸ್ಮರಿಸಿದ ಸಚಿವರು , ಶಿಕ್ಷಣವು ಕೇವಲ ಜೀವನೋಪಾಯಕ್ಕಷ್ಟೇ ಸೀಮಿತವಾಗಿರದೆ, ಜಾಗೃತಿ ಮತ್ತು ಹಕ್ಕುಗಳ ಹೋರಾಟಕ್ಕೆ ದಾರಿದೀಪವಾಗಿದೆ ಎಂದರು.

ನಮ್ಮ ಸಮುದಾಯದ ಯುವಜನರು ಕೇವಲ ಮೂಲಭೂತ ಶಿಕ್ಷಣಕ್ಕೆ ತೃಪ್ತರಾಗದೆ ಉನ್ನತ ಶಿಕ್ಷಣ ಪಡೆಯಬೇಕು. ರಾಜಕೀಯ, ಐಎಎಸ್, ಕೆಎಎಸ್, ನ್ಯಾಯಾಂಗ, ಮಾಧ್ಯಮ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಮಟ್ಟಕ್ಕೆ ಬೆಳೆಯಬೇಕು ಎಂದು ಕರೆ ನೀಡಿದರು.

ಕಾಗಿನೆಲೆ ಸಂಸ್ಥಾನದ ಶಾಖಾಮಠಗಳು ಸಮುದಾಯದ ಹಿತರಕ್ಷಣೆಗೆ ಸದಾ ಮುಂದಿರುತ್ತವೆ. ಶಿಕ್ಷಣ ಸಂಸ್ಥೆಗಳು, ವಸತಿ ನಿಲಯಗಳನ್ನು ಸ್ಥಾಪಿಸಿ, ಶೈಕ್ಷಣಿಕ ಪ್ರಗತಿಗೆ ನಿರಂತರವಾಗಿ ಶ್ರಮಿಸುತ್ತಿವೆ. ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹಾಗೂ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಅವರು ಸಮುದಾಯದ ಹಕ್ಕುಗಳ ಹೋರಾಟದಲ್ಲಿ ಮುಂಚೂಣಿಯಲ್ಲಿರುತ್ತಾರೆ ಎಂದು ಶ್ಲಾಘಿಸಿದರು.

ನನ್ನ ತಂದೆ , ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಎರಡು ಬಾರಿ ರಾಜ್ಯದ ಚುಕ್ಕಾಣಿ ಹಿಡಿಯಲು ಹಿಂದುಳಿದ ವರ್ಗಗಳ, ಅದರಲ್ಲೂ ಮುಖ್ಯವಾಗಿ ನಮ್ಮ ಸಮುದಾಯದ ಗಟ್ಟಿ ಬೆಂಬಲವೇ ಕಾರಣ. ಅದೇ ರೀತಿ ನನ್ನ ರಾಜಕೀಯ ಬೆಳವಣಿಗೆ ಹಾಗೂ ಸಚಿವ ಸ್ಥಾನಕ್ಕೂ ಸಮುದಾಯದ ಆಶೀರ್ವಾದವೇ ಕಾರಣವಾಗಿದೆ. ಸಮುದಾಯದ ಪ್ರಗತಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.

ಸಭಾಂಗಣವು ಜನಸಂದಣಿಯಿಂದ ಭರ್ತಿಯಾಗಿದ್ದು, ಅನೇಕರು ನಿಂತುಕೊಂಡು ಹಾಗೂ ನೆಲದ ಮೇಲೆ ಕುಳಿತು ಭಾಷಣ ಆಲಿಸಿದ್ದು ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿಗೆ ಸಾಕ್ಷಿಯಾಯಿತು.

ಸಚಿವರು ಶ್ರೀ ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿಯವರಿಗೆ ವೇದಿಕೆಯಲ್ಲಿ ಗೌರವ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಸುಮಾರು 1300 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ಎಂ. ರೇವಣ್ಣ, ಕೆ.ಆರ್.ನಗರ ಶಾಸಕ ಡಿ.ರವಿಶಂಕರ್, ವಿಧಾನ ಪರಿಷತ್ ಸದಸ್ಯ ಮಳವಳ್ಳಿ ಶಿವಣ್ಣ, ನಿಕೇತ್‌ರಾಜ್ ಮೌರ್ಯ, ಅಂತಾರಾಷ್ಟ್ರೀಯ ದೇಹದಾರ್ಢ್ಯಪಟು ಸಿನಿಮಾ ನಟ, ರವಿ, ಇನ್‌ಸೈಟ್ ಐಎಎಸ್ ಅಕಾಡೆಮಿಯ ಜಿ.ಬಿ. ವಿನಯ್‌ಕುಮಾರ್, ಮಾಜಿ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ, ಕಾಗಿನೆಲೆ ಗುರುಪೀಠದ ಕಾರ್ಯದರ್ಶಿ ಮಂಜಪ್ಪ ಮಾಗೋದಿ, ಮತ್ತಿತರರು ಉಪಸ್ಥಿತರಿದ್ದರು.


Share

You cannot copy content of this page