ಬೆಂಗಳೂರು: ಕರ್ನಾಟಕವನ್ನು ದೇಶದ ಹೂಡಿಕೆ ಸ್ನೇಹಿ ಪ್ರವಾಸೋದ್ಯಮ ರಾಜ್ಯವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಪ್ರವಾಸೋದ್ಯಮ ನೀತಿಗಳನ್ನು ಮತ್ತಷ್ಟು ಸರಳೀಕರಿಸುತ್ತಿದ್ದು, ಖಾಸಗಿ ಹೂಡಿಕೆದಾರರಿಗೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ನಗರದಲ್ಲಿ ಆರಂಭವಾದ ಮೂರು ದಿನಗಳ 26ನೇ ಇಂಡಿಯನ್ ಇಂಟರ್‌ನ್ಯಾಷನಲ್ ಟ್ರಾವೆಲ್ ಮಾರ್ಟ್ (IITM–2026) ಉದ್ಘಾಟಿಸಿ ಅವರು ಮಾತನಾಡಿದರು.
ಈ ಬಾರಿ ಐಐಟಿಎಂನಲ್ಲಿ 850ಕ್ಕೂ ಹೆಚ್ಚು ಪ್ರವಾಸೋದ್ಯಮ ವಲಯದ ಪ್ರತಿನಿಧಿಗಳು, 16 ರಾಜ್ಯಗಳಿಂದ ಆಗಮಿಸಿದ ಪ್ರವಾಸೋದ್ಯಮ ಸಂಸ್ಥೆಗಳು ಹಾಗೂ 26ಕ್ಕೂ ಹೆಚ್ಚು ವಿದೇಶಿ ಪ್ರವಾಸೋದ್ಯಮ ಸಂಸ್ಥೆಗಳು ಭಾಗವಹಿಸಿದ್ದು, ದೇಶೀಯ ಹಾಗೂ ಜಾಗತಿಕ ಪ್ರವಾಸೋದ್ಯಮ ಕ್ಷೇತ್ರದ ನಡುವೆ ಬೃಹತ್ ಬಿ2ಬಿ (Business-to-Business) ಸಭೆಗಳು ನಡೆಯುತ್ತಿವೆ. ಇಂತಹ ವೇದಿಕೆಗಳು ಕರ್ನಾಟಕದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಜಗತ್ತಿನ ಮುಂದೆ ಪರಿಚಯಿಸುವುದರ ಜೊತೆಗೆ ಹೊಸ ಹೂಡಿಕೆ ಹಾಗೂ ಉದ್ಯಮ ಸಹಭಾಗಿತ್ವಕ್ಕೆ ದಾರಿ ಮಾಡಿಕೊಡಲಿವೆ ಎಂದು ಸಚಿವರು ಹೇಳಿದರು.
“ಕರ್ನಾಟಕದಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಖಾಸಗಿ ಹೂಡಿಕೆ ಅಗತ್ಯವಿದೆ. ಅದಕ್ಕಾಗಿ ಸರ್ಕಾರ ಪ್ರವಾಸೋದ್ಯಮ ನೀತಿಗಳನ್ನು ಮತ್ತಷ್ಟು ಸರಳೀಕರಿಸುತ್ತಿದೆ. ಸಬ್ಸಿಡಿಗಳು, ಏಕಗವಾಕ್ಷಿ ಮಂಜೂರಾತಿ ವ್ಯವಸ್ಥೆ ಹಾಗೂ ವಿವಿಧ ಪ್ರೋತ್ಸಾಹಕಗಳ ಮೂಲಕ ಹೂಡಿಕೆದಾರರಿಗೆ ಅನುಕೂಲಕರ ವಾತಾವರಣ ನಿರ್ಮಿಸಲಾಗುತ್ತಿದೆ. ನೀವು ರೆಸಾರ್ಟ್ ನಿರ್ಮಿಸಲು ಬಯಸಿದರೂ, ಸಾಹಸ ಕ್ರೀಡಾ ಸೌಲಭ್ಯ ಸ್ಥಾಪಿಸಲು ಮುಂದಾದರೂ ಅಥವಾ ಕ್ರೂಸ್ ಸೇವೆ ಆರಂಭಿಸಲು ಉದ್ದೇಶಿಸಿದ್ದರೂ ಸರ್ಕಾರ ನಿಮ್ಮೊಂದಿಗೆ ನಿಲ್ಲಲಿದೆ. ಅನಗತ್ಯ ಆಡಳಿತಾತ್ಮಕ ಅಡೆತಡೆಗಳಿಲ್ಲದೆ ಕರ್ನಾಟಕದಲ್ಲಿ ಹೂಡಿಕೆ ಮಾಡಿ ಉದ್ಯಮ ನಡೆಸುವ ಅವಕಾಶವನ್ನು ಕಲ್ಪಿಸುವುದು ನಮ್ಮ ಬದ್ಧತೆಯಾಗಿದೆ,” ಎಂದರು.
ಕರ್ನಾಟಕವು ಪರಂಪರೆ, ಪ್ರಕೃತಿ, ವನ್ಯಜೀವಿ, ಕರಾವಳಿ, ಆಧ್ಯಾತ್ಮಿಕ, ವೆಲ್‌ನೆಸ್ ಹಾಗೂ ಸಾಹಸ ಪ್ರವಾಸೋದ್ಯಮ ಸೇರಿದಂತೆ ವೈವಿಧ್ಯಮಯ ಪ್ರವಾಸೋದ್ಯಮ ಸಂಪನ್ಮೂಲಗಳನ್ನು ಹೊಂದಿರುವ ರಾಜ್ಯವಾಗಿದೆ. ಈ ಸಾಮರ್ಥ್ಯವನ್ನು ಜಾಗತಿಕ ಮಾರುಕಟ್ಟೆಯಲ್ಲಿ ಪರಿಣಾಮಕಾರಿಯಾಗಿ ಪರಿಚಯಿಸಲು ಸರ್ಕಾರ ನಿರಂತರವಾಗಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ರೋಡ್‌ಶೋಗಳು, ಟ್ರಾವೆಲ್ ಮಾರ್ಟ್‌ಗಳು ಹಾಗೂ ಹೂಡಿಕೆದಾರರ ಸಮಾವೇಶಗಳನ್ನು ಆಯೋಜಿಸುತ್ತಿದೆ ಎಂದು ಸಚಿವರು ತಿಳಿಸಿದರು.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಸಂಪರ್ಕ ವ್ಯವಸ್ಥೆ ಸುಧಾರಣೆ, ಪ್ರವಾಸಿಗರಿಗೆ ಗುಣಮಟ್ಟದ ಸೇವೆ ಹಾಗೂ ಹೂಡಿಕೆ ಸ್ನೇಹಿ ಪರಿಸರ ನಿರ್ಮಾಣಕ್ಕೆ ಸರ್ಕಾರ ಆದ್ಯತೆ ನೀಡುತ್ತಿದ್ದು, ‘ಬ್ರ್ಯಾಂಡ್ ಕರ್ನಾಟಕ’ ಹಾಗೂ ‘ಒನ್ ಸ್ಟೇಟ್, ಮೆನಿ ವರ್ಲ್ಡ್ಸ್’ ಪರಿಕಲ್ಪನೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಸರ್ಕಾರ ಮತ್ತು ಖಾಸಗಿ ವಲಯದ ಸಹಯೋಗವೇ ಕರ್ನಾಟಕದ ಪ್ರವಾಸೋದ್ಯಮ ಬೆಳವಣಿಗೆಯ ಪ್ರಮುಖ ಶಕ್ತಿಯಾಗಿದ್ದು, ಹೂಡಿಕೆದಾರರು, ಪ್ರವಾಸೋದ್ಯಮ ಉದ್ಯಮಿಗಳು ಹಾಗೂ ಪ್ರವಾಸ ಸಂಸ್ಥೆಗಳು ರಾಜ್ಯದ ಬೆಳವಣಿಗೆಯ ಪಾಲುದಾರರಾಗುವಂತೆ ಸಚಿವರು ಕರೆ ನೀಡಿದರು.
ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿಗಳಾದ ಡಾ ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಪ್ರವಾಸೋದ್ಯಮವು ಕೇವಲ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸುವ ಕ್ಷೇತ್ರವಲ್ಲ; ಅದು ಉದ್ಯೋಗ, ಹೂಡಿಕೆ ಮತ್ತು ಸ್ಥಳೀಯ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಚಾಲಕವಾಗಿದೆ. ಆದ್ದರಿಂದ ಹೂಡಿಕೆದಾರರು, ಪ್ರವಾಸೋದ್ಯಮ ಉದ್ಯಮ ಮತ್ತು ಸರ್ಕಾರದ ನಡುವೆ ಬಲವಾದ ಸಹಭಾಗಿತ್ವ ನಿರ್ಮಿಸುವ ಮೂಲಕ ಕರ್ನಾಟಕವನ್ನು ದೇಶದ ಅತ್ಯಂತ ಆಕರ್ಷಕ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಸಾದ್ ಪಿ.ಆರ್., ಜಂಗಲ್ ಲಾಡ್ಜ್ಸ್ ಅಂಡ್ ರೆಸಾರ್ಟ್ಸ್ ವ್ಯವಸ್ಥಾಪಕ ನಿರ್ದೇಶಕ ಶಿವರಾಂ ಬಾಬು, ಕರ್ನಾಟಕ ಪ್ರವಾಸೋದ್ಯಮ ಸೊಸೈಟಿಯ ಅಧ್ಯಕ್ಷರಾದ ಕೆ. ಶ್ಯಾಮರಾಜು ಸೇರಿದಂತೆ ಪ್ರವಾಸೋದ್ಯಮ ವಲಯದ ಗಣ್ಯರು ಉಪಸ್ಥಿತರಿದ್ದರು.
