ನವದೆಹಲಿ: ನವೀಕರಿಸಬಹುದಾದ ಇಂಧನ ವಲಯದಲ್ಲಿ ಅಂತರಾಷ್ಟ್ರೀಯ ಸಹಕಾರವನ್ನು ಮತ್ತಷ್ಟು ಬಲಪಡಿಸುವ ದಿಸೆಯಲ್ಲಿ ದೆಹಲಿಯಲ್ಲಿ ನ.2ರಿಂದ 5ರವರೆಗೆ ಭಾರತ ʼನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ (BRESE)2026ʼ ಆಯೋಜಿಸಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ದೆಹಲಿಯಲ್ಲಿ ಗುರುವಾರ BRESE-2026ರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಚಿವರು, ʼBRESE 2026ʼ ಶೃಂಗಸಭೆ ಇದೇ ಮೊದಲ ಬಾರಿಗೆ ಮೂರು ಪ್ರಮುಖ ನವೀಕರಿಸಬಹುದಾದ ಇಂಧನ ಕಾರ್ಯಕ್ರಮಗಳನ್ನು ಒಂದೇ ವೇದಿಕೆಯಡಿ ತರಲಿದೆ ಎಂದರು.
ನವದೆಹಲಿಯ ಭಾರತ್ ಮಂಟಪದಲ್ಲಿ ನವೆಂಬರ್ ಮೊದಲ ವಾರದಲ್ಲೇ ನಿರಂತರ ನಾಲ್ಕು ದಿನಗಳ ಕಾಲ ಜರುಗಲಿರುವ ʼನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ (BRESE)ʼಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಭಾರತದಲ್ಲಿ ನಡೆಯುತ್ತಿರುವ ಈ ಐತಿಹಾಸಿಕ ಶೃಂಗಸಭೆಯು ಜಾಗತಿಕ ಮಟ್ಟದಲ್ಲಿ ಹೊಸ ಹೊಸ ಪಾಲುದಾರಿಕೆಗಳನ್ನು ಬೆಳೆಸುತ್ತದೆ. ಹೆಚ್ಚು ಹೆಚ್ಚು ಹೂಡಿಕೆಗಳನ್ನು ಆಕರ್ಷಿಸುವ ಜತೆಗೆ ನವೀಕರಿಸಬಹುದಾದ ಇಂಧನ ವಲಯದಲ್ಲಿ ನಾವೀನ್ಯತೆಯನ್ನು ಉತ್ತೇಜಿಸುತ್ತದೆ ಮತ್ತು ಮತ್ತಷ್ಟು ಅಂತರಾಷ್ಟ್ರೀಯ ಸಹಕಾರವನ್ನು ಬಲಪಡಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
BRESE 2026 ಶೃಂಗಸಭೆ ಜತೆಗೆ ಅಂತರಾಷ್ಟ್ರೀಯ ಸೌರ ಒಕ್ಕೂಟ (ISA) ಅಸೆಂಬ್ಲಿಯ 9ನೇ ಅಧಿವೇಶನ ಮತ್ತು ಹಸಿರು ಹೈಡ್ರೋಜನ್ ಕುರಿತ 4ನೇ ಅಂತರಾಷ್ಟ್ರೀಯ ಸಮ್ಮೇಳನ (ICGH) ಸಹ ನಡೆಯಲಿದ್ದು, ಪ್ರಧಾನಿ ಚಾಲನೆ ನೀಡಲಿದ್ದಾರೆ ಎಂದರು.
34 ಹೊಸ ರಾಷ್ಟ್ರಗಳಿಗೆ ಆಹ್ವಾನ:ಈ ಶೃಂಗಸಭೆಯನ್ನು ನಿಜವಾದ ಜಾಗತಿಕ ದೃಷ್ಟಿಕೋನದೊಂದಿಗೆ ವಿನ್ಯಾಸಗೊಳಿಸಲಾಗಿದೆ. 34 ಹೊಸ ದೇಶಗಳಿಗೆ ಆಹ್ವಾನ ನೀಡಲಾಗುತ್ತಿದೆ. ಅಂತರಾಷ್ಟ್ರೀಯ ಸೌರ ಒಕ್ಕೂಟ 128 ದೇಶಗಳನ್ನು ಆಹ್ವಾನಿಸಿದೆ. ಇದು ಜಾಗತಿಕವಾಗಿ ನವೀಕರಿಸಬಹುದಾದ ಇಂಧನ ಸಮುದಾಯವನ್ನು ಒಗ್ಗೂಡಿಸಲು ಅನುವು ಮಾಡಿಕೊಟ್ಟಿದೆ ಎಂದು ಅಭಿಪ್ರಾಯಿಸಿದರು.
ಶೃಂಗಸಭೆಯು ನವೀಕರಿಸಬಹುದಾದ ಇಂಧನ ವಲಯದ ಬೆಳವಣಿಗೆ, ಉದಯೋನ್ಮುಖ ಅವಕಾಶಗಳು ಮತ್ತು ಶುದ್ಧ ಇಂಧನ ಪರಿವರ್ತನೆಯನ್ನು ಮುನ್ನಡೆಸುವಲ್ಲಿ ಜಾಗತಿಕ ಸಹಯೋಗಕ್ಕೆ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಶೀಘ್ರದಲ್ಲೇ 300 GW ಹೆಗ್ಗುರುತು: ಭಾರತ ಶೀಘ್ರದಲ್ಲೇ 300 GW ಸ್ಥಾಪಿತ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯದ ಹೆಗ್ಗುರುತನ್ನು ದಾಟಲಿದೆ. ಅಂತೆಯೇ ಪ್ರಧಾನಮಂತ್ರಿ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ ಸದ್ಯದಲ್ಲೇ 50 ಲಕ್ಷ ಫಲಾನುಭವಿಗಳನ್ನು ದಾಟುವ ನಿರೀಕ್ಷೆಯಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಮಾಹಿತಿ ನೀಡಿದರು.
ಇದೇ ವೇಳೆ ಸಚಿವರು, ʼBRESE 2026ʼರ ಅಧಿಕೃತ ಲೋಗೋ ‘ಊರ್ಜಾ ಚಕ್ರ’ವನ್ನು ಅನಾವರಣಗೊಳಿಸಿದರು ಮತ್ತು ಶೃಂಗಸಭೆಗಾಗಿ ಅಧಿಕೃತ ಡಿಜಿಟಲ್ ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್ ಸಹ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ನವೀಕರಿಸಬಹುದಾದ ಇಂಧನ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೊ ನಾಯಕ್, ಭಾರತದ ನವೀಕರಿಸಬಹುದಾದ ಇಂಧನ ಪರಿವರ್ತನೆ ದೇಶಾದ್ಯಂತದ ಎಲ್ಲಾ ರಾಜ್ಯಗಳ ಸಾಮೂಹಿಕ ಪ್ರಯತ್ನದಿಂದ ಸಾಧ್ಯವಾಗುತ್ತಿದೆ ಎಂದು ಹೇಳಿದರು.
ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಸಂತೋಷ್ ಕುಮಾರ್ ಸಾರಂಗಿ ಮಾತನಾಡಿ, ಇಂಧನ ಪರಿವರ್ತನೆ ಮುಂದಿನ ಹಂತವು ಹೈಬ್ರಿಡ್ ನವೀಕರಿಸಬಹುದಾದ ಇಂಧನ ಯೋಜನೆಗಳು, ಬ್ಯಾಟರಿ ಶಕ್ತಿ ಸಂಗ್ರಹ ವ್ಯವಸ್ಥೆ, ತೇಲುವ ಸೌರಶಕ್ತಿ, ಕೃಷಿ ವೋಲ್ಟೇಜ್ ಮತ್ತು ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಮೂಲಕ ಸಾಮರ್ಥ್ಯ ಬಲಪಡಿಸುವತ್ತ ಗಮನಹರಿಸುತ್ತದೆ ಎಂದರು.
ʼಭಾರತ್ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ (BRESE) 2026ʼ ಸರ್ಕಾರಗಳು, ಕೈಗಾರಿಕೆಗಳು, ಹೂಡಿಕೆದಾರರು, ನಾವೀನ್ಯಕಾರರು ಮತ್ತು ಅಂತರಾಷ್ಟ್ರೀಯ ಪಾಲುದಾರರಿಗೆ ಹೂಡಿಕೆ, ತಂತ್ರಜ್ಞಾನ ಪಾಲುದಾರಿಕೆ ಮತ್ತು ಶುದ್ಧ ಇಂಧನದಲ್ಲಿ ಸಹಯೋಗವನ್ನು ವೇಗಗೊಳಿಸಲು ಸಾಮಾನ್ಯ ವೇದಿಕೆಯನ್ನು ಒದಗಿಸುತ್ತದೆ ಎಂದು ಹೇಳಿದರು.
