ಸಮಗ್ರ ಸುದ್ದಿ

​ಸಾಮಾನ್ಯ ಜನರಿಗೆ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಸೇವೆ ದೊರಕಲು ಆರೋಗ್ಯ ಕ್ಷೇತ್ರದಲ್ಲಿ ಸಮಗ್ರ ಸುಧಾರಣೆ ಅಗತ್ಯ:ಬಸವರಾಜ ಬೊಮ್ಮಾಯಿ

Share

​ಬೆಂಗಳೂರು: ಸಾಮಾನ್ಯ ಜನರಿಗೆ ಸುಲಭವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಸೇವೆ ತಲುಪಿಸಲು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಸಮಗ್ರ ಸುಧಾರಣೆಗಳ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಪ್ರತಿಪಾದಿಸಿದ್ದಾರೆ.
​’ವಿಜಯ ಕರ್ನಾಟಕ’ ಪತ್ರಿಕೆ ವತಿಯಿಂದ ಆಯೋಜಿಸಿದ್ದ ಉತ್ತರ ಕರ್ನಾಟಕ ಸಾಧಕರಿಗೆ ವಿಕೆ ಹೆಲ್ತ್ ಎಕ್ಸಲೆನ್ಸ್ ಆಂಡ್ ಆನರ್ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

​ವೈದ್ಯ ಮತ್ತು ರೋಗಿಯ ನಡುವೆ ಆತ್ಮೀಯತೆ ಅಗತ್ಯ:

ಇಂದಿನ ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ ಯಂತ್ರಗಳು ಮತ್ತು ರೋಗನಿರ್ಣಯ ಪರೀಕ್ಷೆಗಳು (MRI, ಸ್ಕ್ಯಾನಿಂಗ್) ಹೆಚ್ಚಾಗಿ ಪ್ರಾಮುಖ್ಯತೆ ಪಡೆಯುತ್ತಿದ್ದು, ವೈದ್ಯರು ರೋಗಿಯೊಂದಿಗೆ ಕಳೆಯುವ ಸಮಯ ಹಾಗೂ ಆತ್ಮೀಯ ಮಾತುಗಳು ಕಡಿಮೆಯಾಗುತ್ತಿವೆ. ರೋಗಿಯ ಮಾನಸಿಕ ಆತಂಕವನ್ನು ತಿಳಿಗೊಳಿಸುವುದೇ ಶೇಕಡಾ 50 ರಷ್ಟು ಚಿಕಿತ್ಸೆಗೆ ಸಮಾನ. ಈ ಮುಂಚಿನ ಕುಟುಂಬ ವೈದ್ಯರಿದ್ದಂತೆ ಆತ್ಮೀಕತೆ ಮತ್ತೆ ಬರಬೇಕಿದೆ ಎಂದು ಅಭಿಪ್ರಾಯಪಟ್ಟರು.

​ವೈದ್ಯಕೀಯ ಶಿಕ್ಷಣದ ವೆಚ್ಚ ಮತ್ತು ಸವಾಲುಗಳು:

ಕಳೆದ 10 ವರ್ಷಗಳಲ್ಲಿ ವೈದ್ಯಕೀಯ ಸೀಟುಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದ್ದರೂ ಸ್ಪರ್ಧೆ ಕಡಿಮೆಯಾಗಿಲ್ಲ. ಮಕ್ಕಳು ಪಿಯುಸಿಯಲ್ಲಿ ಓದಿದ್ದು ನೀಟ್ ಪರೀಕ್ಷೆಯಲ್ಲಿ ಬರೆಯಬೇಕು. ವೈದ್ಯಕೀಯ ಶಿಕ್ಷಣ ಅತ್ಯಂತ ದುಬಾರಿಯಾಗುತ್ತಿದ್ದು, ಇದು ಸಾಮಾನ್ಯ ಜನರಿಗೆ ಚಿಕಿತ್ಸಾ ವೆಚ್ಚ ಹೆಚ್ಚಾಗಲು ಕಾರಣವಾಗುತ್ತಿದೆ. ಟ್ಯೂಷನ್ ಮತ್ತು ಕೋಚಿಂಗ್ ಸೆಂಟರ್‌ಗಳು ಹೆಚ್ಚಾಗಿ ನಿಯಮಿತ ಕಾಲೇಜುಗಳನ್ನೇ ಹಿಂದಿಕ್ಕುತ್ತಿರುವುದು ಕಳವಳಕಾರಿ ಸಂಗತಿ ಎಂದರು.

ಕೋಚಿಂಗ್ ಸೆಂಟರ್ ಗಳಿಗೂ ಶಿಫಾರಸ್ಸು ಮಾಡುವ ಕಾಲ ಬಂದಿದೆ. ಎಲ್ಲ ಕೋಚಿಂಗ್ ಸೆಂಟರ್ ನವರು ಫಸ್ಟ್ ರ್ಯಾಂಕ್ ಅಂತ ಹೇಳಿಕೊಳ್ಳುತ್ತಾರೆ‌. ಎಷ್ಟು ಜನ ಫಸ್ಟ್ ರ್ಯಾಂಕ್ ಬಂದಿದ್ದಾರೆ ಎನ್ನುವ ಅನುಮಾನ ಮೂಡುತ್ತದೆ. ಈಗ ಹತ್ತು ವರ್ಷದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸೀಟುಗಳಾಗಿವೆ. ಹೆಚ್ಚು ಕಾಲೇಜುಗಳಾಗಿವೆ. ಮೊದಲು ತಂದೆ ತಾಯಿಗೆ ಮಕ್ಕಳು ಬಿಎ ಡಿಗ್ರಿ ಆದರೆ ಸಾಕು ಅನ್ನುತ್ತಿದ್ದರು. ನಂತರ ಇಂಜನಿಯರ್ ಆಗಬೇಕು ಎನ್ನುತ್ತಿದ್ದರು, ಈಗ ಡಾಕ್ಟರ್ ಆಗಬೇಕು ಅಂತ ಬಯಸುತ್ತಾರೆ, ಅದೂ ಎಂಬಿಬಿಎಸ್ ಗೆ ಮರ್ಯಾದೆ ಇಲ್ಲ ಪಿಜಿ ಮಾಡಿದರೆ ಮಾತ್ರ ಬೆಲೆ ಎನ್ನುವಂತಾಗಿದೆ. ನಮ್ಮ ರಾಜ್ಯದಲ್ಲಿ ಅತಿ ಹೆಚ್ಚು ಮೆಡಿಕಲ್ ಸೀಟುಗಳಿವೆ. ಆದರೆ ಎಲ್ಲವೂ ರಾಜ್ಯದ ವಿದ್ಯಾರ್ಥಿಗಳಿಗೆ ಸಿಗುವುದಿಲ್ಲ. ಅದಕ್ಕೂ ಪೈಪೋಟಿ ಇದೆ. ಬೇರೆ ರಾಜ್ಯದವರಿಗೆ ನಾವು ಕಾಲೆಜು ಮಾಡಿದ್ದೇವೆ ಎಂದರು.

​ಗ್ರಾಮೀಣ ಭಾಗದಲ್ಲಿ ವೈದ್ಯರ ಕೊರತೆ:

ನಗರ ಪ್ರದೇಶಗಳಲ್ಲಿ ಮತ್ತು ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ವೈದ್ಯರು ಕೇಂದ್ರೀಕೃತರಾಗುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಅಭಾವ ಎದ್ದು ಕಾಣುತ್ತಿದೆ. ಈ ಅಸಮಾನತೆಯನ್ನು ಸರಿಪಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಎಲ್ಲಿವರೆಗೂ ಕಡಿಮೆ ದರದಲ್ಲಿ ಮೆಡಿಕಲ್ ಶಿಕ್ಷಣ ಸಿಗುವುದಿಲ್ಲವೋ ಅಲ್ಲಿವರೆಗೂ ಕಡಿಮೆ ದರದಲ್ಲಿ ವೈದ್ಯಕೀಯ ಸೇವೆ ಸಿಗುವುದಿಲ್ಲ ಎಂದರು

ವಿದೇಶಿ ಬಂಡವಾಳದ ಕುರಿತು ಎಚ್ಚರಿಕೆ:

ಆರೋಗ್ಯ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಗಳು ಹೆಚ್ಚುತ್ತಿರುವುದು ಸ್ವಾಗತಾರ್ಹವಾದರೂ, ಚಿಕಿತ್ಸಾ ವೆಚ್ಚವನ್ನು ವಿದೇಶಗಳಲ್ಲಿ ಕುಳಿತವರು ನಿರ್ಧರಿಸುವಂತಾಗಬಾರದು. ಕಾರ್ಪೊರೇಟ್ ವ್ಯವಸ್ಥೆಯಿಂದ ವೈದ್ಯಕೀಯ ಸೇವೆ ದುಬಾರಿಯಾಗಿದೆ. ಭಾರತದ ಜನಸಂಖ್ಯೆ ಹಾಗೂ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಚಿಕಿತ್ಸಾ ವೆಚ್ಚಗಳು ಸ್ಥಳೀಯವಾಗಿಯೇ ನಿರ್ಧಾರವಾಗಬೇಕು ಎಂದು ಎಚ್ಚರಿಸಿದರು.

​ಸರ್ಕಾರದ ಸಾಧನೆ:

ತಮ್ಮ ಆಡಳಿತಾವಧಿಯಲ್ಲಿ ಬೆಂಗಳೂರಿನಲ್ಲಿ 184 ಹಾಗೂ ರಾಜ್ಯಾದ್ಯಂತ ಒಟ್ಟು 400 ‘ನಮ್ಮ ಕ್ಲಿನಿಕ್’ಗಳನ್ನು ಪ್ರಾರಂಭಿಸಲಾಗಿತ್ತು. ಅಲ್ಲದೆ ಹುಬ್ಬಳ್ಳಿಯಲ್ಲಿ ಜಯದೇವ ಹಾಗೂ ಬೆಳಗಾವಿಯಲ್ಲಿ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಗಳ ಶಾಖೆಗಳನ್ನು ತರಲು ಶ್ರಮಿಸಿದ್ದನ್ನು ಸ್ಮರಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ‘ಆಯುಷ್ಮಾನ್ ಭಾರತ್’ ಹಾಗೂ ‘ಜನೌಷಧಿ’ ಕೇಂದ್ರಗಳು ಜನರಿಗೆ ತಲುಪುತ್ತಿರುವುದನ್ನು ಶ್ಲಾಘಿಸಿದರು.

​”ವೈದ್ಯಕೀಯ ವೃತ್ತಿಯು ಕೇವಲ ಹಣಗಳಿಕೆಯ ಹಾದಿಯಾಗದೆ, ಮಾನವನ ದೈಹಿಕ ನೋವನ್ನು ನಿವಾರಿಸುವ ಅತ್ಯಂತ ಪವಿತ್ರವಾದ ಕಾಯಕ. ನಿರಂತರವಾಗಿ ಸಮಾಜದ ಬಡವರ ನೋವಿಗೆ ಸ್ಪಂದಿಸುವುದೇ ನಿಜವಾದ ಸಾಧನೆಯಾಗಿದೆ. ನೀವು ದೇವರಿಗೆ ಅತ್ಯಂತ ಹತ್ತಿರವಾದ ಮಕ್ಕಳು, ಮನುಷ್ಯನ ನೋವು ಕಡಿಮೆ ಮಾಡುವ ಅತ್ಯಂತ ಪವಿತ್ರ ಕೆಲಸ. ಉತ್ತರ ಕರ್ನಾಟಕದಿಂದ ರೋಗಿಗಳು ಬೆಂಗಳೂರಿಗೆ ಬರದಂತೆ ನೊಡಿಕೊಳ್ಳಿ. ಯಶಸ್ಸು ಬಹಳ ಸಣ್ಣ ವಿಚಾರ, ಯಶಸ್ಸು ನಿರಂತರವಾಗಿದ್ದರೆ ಅದು ಸಾಧನೆಯಾಗುತ್ತದೆ. ಸಾಧನೆ ಮಾಡಲು ನಿಮ್ಮ ಶ್ರಮ ಮೀಸಲಿಡಿ. ಬಡವರ ಬಾಳಲ್ಲಿನ ನೋವು ತೆಗೆದು ಸಮಾಜದಲ್ಲಿ ನಗುವು ತರುವ ಕೆಲಸ ಮಾಡಿ ಎಂದು ಹೇಳಿದರು.

​ಕಾರ್ಯಕ್ರಮದಲ್ಲಿ ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ, ವಿಜಯ ಕರ್ನಾಟಕ ಸಿಇಒ ದೀಪಕ ಸಲುಜಾ ವಿಜಯ ಕರ್ನಾಟಕ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ ಹಾಗೂ ಚಿತ್ರನಟಿ ನಿಮಿಕಾ ರತ್ನಾಕರ ಹಾಜರಿದ್ದರು.


Share

You cannot copy content of this page