ಬೆಂಗಳೂರು: ಯುನೈಟೆಡ್ ಕಿಂಗ್ಡಮ್‌ನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಮತ್ತು ರಸೆಲ್ ಗ್ರೂಪ್‌ನ ಭಾಗವಾಗಿರುವ ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯವು ತಕ್ಷಣಕ್ಕೆ ಬೆಂಗಳೂರಿನಲ್ಲಿ ತನ್ನ ಕ್ಯಾಂಪಸ್ ಆರಂಭಿಸುತ್ತಿದೆ. ಮುಂದಿನ ದಿನಗಳಲ್ಲಿ ಕ್ವಿನ್ ಸಿಟಿಯಲ್ಲಿ ಇದು ತನ್ನ ಕ್ಯಾಂಪಸ್ ತೆರೆಯಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.
ಮಂಗಳವಾರ ತಮ್ಮನ್ನು ಖನಿಜ ಭವನದಲ್ಲಿ ಭೇಟಿ ಮಾಡಿದ ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯದ ಅಸೋಸಿಯೇಟ್ ಡೀನ್ ಮಾರ್ಕ್ ಸ್ಟೀವನ್ಸನ್ ನೇತೃತ್ವದ ಉನ್ನತ ಮಟ್ಟದ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಿದರು.
ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯವು ಜಾಗತಿಕ ಮಟ್ಟದಲ್ಲಿ 164ನೇ ರ್ಯಾಂಕ್ ಹೊಂದಿದ್ದು, ಕ್ಯೂಎಸ್ ಶ್ರೇಯಾಂಕದಲ್ಲಿ 5-ಸ್ಟಾರ್ ಸ್ಥಾನಮಾನ ಹೊಂದಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗವು ವಿದೇಶಿ ವಿ.ವಿ.ಗಳಿಗೆ ಹೊಂದಿರುವ ಮಾನದಂಡಗಳಿಗೆ ಅನುಗುಣವಾಗಿ ತನ್ನ ಬೆಂಗಳೂರು ಕ್ಯಾಂಪಸ್ ತೆರೆಯುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಬೆಂಗಳೂರು ಕ್ಯಾಂಪಸ್ಸಿನಲ್ಲಿ ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯವು ಬಿಝಿನೆಸ್, ವ್ಯವಸ್ಥಾಪನೆ (ಮ್ಯಾನೇಜ್ಮೆಂಟ್) ಮತ್ತು ಕಂಪ್ಯೂಟಿಂಗ್ ವಿಷಯಗಳಲ್ಲಿ ಪದವಿ ಕೋರ್ಸ್ ಆರಂಭಿಸುತ್ತಿದೆ. ಇಲ್ಲೂ ಅದು ಯುನೈಟೆಡ್ ಕಿಂಗ್ಡಮ್ ನಲ್ಲಿ ಅನುಸರಿಸುವ ಪಠ್ಯಕ್ರಮವನ್ನೇ ಇಟ್ಟುಕೊಳ್ಳಲಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಸಿಗಲಿದ್ದು, ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳ ನಡುವಿನ ಸಹಭಾಗಿತ್ವದ ಬಲವರ್ಧನೆಯಾಗಲಿದೆ. ಈ ಮೂಲಕ ಬೆಂಗಳೂರು ನಗರವು ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣದ ತಾಣವಾಗಿ ಬೆಳೆಯಲಿದೆ ಎಂದು ಪಾಟೀಲ ತಿಳಿಸಿದ್ದಾರೆ.
ನಿಯೋಗದಲ್ಲಿ ನಾವಿಟಾಸ್ ನ ಯೂರೋಪಿನ ವಿವಿ ಸಹಭಾಗಿತ್ವ ಉಪಕ್ರಮಗಳ ಸಿಇಒ ಪಾಲ್ ಲವ್ಗ್ರೋವ್, ಜಾಗತಿಕ ಕಾರ್ಯತಂತ್ರ ಮುಖ್ಯಸ್ಥ ವಿಕಾಸ್ ಪಂಜ್ವಾನಿ, ಬ್ರಿಟಿಷ್ ಕೌನ್ಸಿಲ್‌ನ ದಕ್ಷಿಣ ಭಾರತದ ನಿರ್ದೇಶಕ ಜನಕ್ ಪುಷ್ಪನಾಥನ್ ಇದ್ದರು.
