ಸಮಗ್ರ ಸುದ್ದಿ

ವಿಶೇಷ ಲೇಖನ: ಬರ ಸೆಳೆದ ಭೂಮಿಗೆ ಪರ್ಯಾಯ ಬೆಳೆ ಸಂಜೀವಿನಿ|ಒಣಗುತ್ತಿರುವ ಹೊಲಗಳಿಗೆ ಮರುಜೀವ ನೀಡುವ ಜಾಣ್ಮೆ

Share

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು, ಭೀಕರ ಬರಗಾಲ ಆವರಿಸಿದೆ. ಜಲಾಶಯಗಳು ಬತ್ತುತ್ತಿವೆ, ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸಾಂಪ್ರದಾಯಿಕ ಮತ್ತು ಹೆಚ್ಚು ನೀರು ಬೇಡುವ ಬೆಳೆಗಳನ್ನು ನಂಬಿ ಕೂತರೆ ರೈತರು ಸಂಪೂರ್ಣ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ.

ಅದಕ್ಕಾಗಿಯೇ ಕೃಷಿ ತಜ್ಞರು ಈಗ ‘ಪರ್ಯಾಯ ಬೆಳೆ ಪದ್ಧತಿ’ ಯನ್ನು ಅಳವಡಿಸಿಕೊಳ್ಳಲು ಕರೆ ನೀಡಿದ್ದಾರೆ. ಕಡಿಮೆ ನೀರು, ಕಡಿಮೆ ಅವಧಿ ಮತ್ತು ಕನಿಷ್ಠ ವೆಚ್ಚದಲ್ಲಿ ಕೈತುಂಬ ಆದಾಯ ತರುವ ಬೆಳೆಗಳತ್ತ ಮುಖ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ.

ಏನಿದು ಪರ್ಯಾಯ ಬೆಳೆ ಪದ್ಧತಿ?:
ಬರಗಾಲದ ಸಮಯದಲ್ಲಿ ನೀರಾವರಿ ಸೌಲಭ್ಯ ಕಡಿಮೆಯಾದಾಗ, ಹೆಚ್ಚು ನೀರು ಬೇಡುವ ಬೆಳೆಗಳಾದ ಭತ್ತ, ಕಬ್ಬು ಮತ್ತು ಅಡಿಕೆಗೆ ಬೆಳೆಗಳಿಗೆ ಪರ್ಯಾಯವಾಗಿ ಕಡಿಮೆ ನೀರಿನಲ್ಲಿ ಬೆಳೆಯುವ ಅಲ್ಪಾವಧಿ ಬೆಳೆಗಳನ್ನು ಬೆಳೆಯುವುದೇ ಪರ್ಯಾಯ ಬೆಳೆ ಪದ್ಧತಿ. ಇದು ಮಣ್ಣಿನ ತೇವಾಂಶವನ್ನು ಸಮರ್ಥವಾಗಿ ಬಳಸಿಕೊಂಡು, ರೈತರಿಗೆ ಆರ್ಥಿಕ ನಷ್ಟವಾಗದಂತೆ ತಡೆಯುತ್ತದೆ.

ವಲಯವಾರು ಮತ್ತು ಜಿಲ್ಲಾವಾರು ಪರ್ಯಾಯ ಬೆಳೆಗಳ ಮಹತ್ವದ ಮಾಹಿತಿ:

ರಾಜ್ಯದ ಮಣ್ಣಿನ ಗುಣಲಕ್ಷಣ ಮತ್ತು ಹವಾಮಾನ ವೈವಿಧ್ಯತೆಗೆ ಅನುಗುಣವಾಗಿ ಕೃಷಿ ಇಲಾಖೆಯು ಜಿಲ್ಲಾವಾರು ಪರ್ಯಾಯ ಬೆಳೆಗಳನ್ನು ಶಿಫಾರಸು ಮಾಡಿದೆ.

ಉತ್ತರ ಕರ್ನಾಟಕ ವಲಯ (ವಿಜಯಪುರ, ಬಾಗಲಕೋಟೆ, ಕಲಬುರಗಿ, ಬೆಳಗಾವಿ ಜಿಲ್ಲೆಗಳು):

ಈ ಭಾಗದಲ್ಲಿ ಸಾಂಪ್ರದಾಯಿಕವಾಗಿ ಅತಿ ಹೆಚ್ಚು ನೀರು ಬೇಡುವ ಕಬ್ಬು ಮತ್ತು ಭತ್ತವನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ. ಆದರೆ ಪ್ರಸ್ತುತ ಬರಗಾಲದ ಪರಿಸ್ಥಿತಿಯಲ್ಲಿ ಇವುಗಳ ಬದಲಾಗಿ ಕಡಿಮೆ ನೀರಿನಲ್ಲಿ ಹಾಗೂ ಕಡು ಬಿಸಿಲಲ್ಲೂ ತಡೆದುಕೊಂಡು ನಿಲ್ಲುವ ಸಜ್ಜೆ, ನವಣೆ, ಜೋಳ, ಕಡಲೆ, ಸೂರ್ಯಕಾಂತಿ, ಹೆಸರು ಮತ್ತು ಮಟ್ಕಿ (ಮಡಿಕೆ ಕಾಳು) ಬೆಳೆಗಳನ್ನು ಬೆಳೆಯಲು ಶಿಫಾರಸು ಮಾಡಲಾಗಿದೆ. ಇವು ಕಡಿಮೆ ದಿನಗಳಲ್ಲಿ ರೈತರ ಕೈಸೇರುತ್ತವೆ.

ಮಧ್ಯ ಕರ್ನಾಟಕ ವಲಯ (ಚಿತ್ರದುರ್ಗ, ದಾವಣಗೆರೆ, ತುಮಕೂರು, ಬಳ್ಳಾರಿ ಜಿಲ್ಲೆಗಳು):

ತುಂಗಭದ್ರಾ ಮತ್ತು ಇತರೆ ನದಿ ಪಾತ್ರದ ನಂಬಿಕೆಯಲ್ಲಿ ಇಲ್ಲಿ ಭತ್ತ ಮತ್ತು ಕಬ್ಬನ್ನು ಹೆಚ್ಚಾಗಿ ಬೆಳೆಯಲಾಗುತ್ತಿತ್ತು. ಆದರೆ ಈಗ ನೀರಿನ ಅಭಾವ ತೀವ್ರವಾಗಿರುವುದರಿಂದ, ರೈತರು ರಾಗಿ, ಹರಳು (Castor), ಶೇಂಗಾ (ನೆಲಗಡಲೆ), ಸಾಮೆ, ಕೊರಲೆ ಮತ್ತು ನವಣೆ ಬೆಳೆಗಳತ್ತ ಗಮನ ಹರಿಸಬೇಕು. ವಿಶೇಷವಾಗಿ ಹರಳು ಮತ್ತು ಶೇಂಗಾ ಮಳೆಯಾಶ್ರಿತ ಪ್ರದೇಶಗಳಿಗೂ ಅತ್ಯುತ್ತಮ ಪರ್ಯಾಯವಾಗಿವೆ.

ದಕ್ಷಿಣ ಕರ್ನಾಟಕ ವಲಯ (ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳು):

ಕೆಆರ್‍ಎಸ್ ಜಲಾಶಯದ ಅಚ್ಚುಕಟ್ಟು ಪ್ರದೇಶವಾಗಿರುವ ಈ ವಲಯದಲ್ಲಿ ಭತ್ತ ಮತ್ತು ಕಬ್ಬು ಪ್ರಮುಖ ಬೆಳೆಗಳಾಗಿದ್ದವು. ಪ್ರಸ್ತುತ ನೀರಿನ ಕೊರತೆಯಿಂದಾಗಿ ಇವುಗಳ ಜಾಗದಲ್ಲಿ ಅಲ್ಪಾವಧಿ ದ್ವಿದಳ ಧಾನ್ಯಗಳಾದ ಅಲಸಂದಿ (ಬೆಣ್ಣೆಕಾಳು), ಹೆಸರು ಬೇಳೆ, ಉದ್ದು, ಸಾಸಿವೆ ಮತ್ತು ಮೇವಿನ ಜೋಳವನ್ನು ಬೆಳೆಯುವುದು ಸೂಕ್ತ. ಇದು ಜಾನುವಾರುಗಳ ಮೇವಿನ ಕೊರತೆಯನ್ನೂ ನೀಗಿಸುತ್ತದೆ.

ಕರಾವಳಿ ಮತ್ತು ಮಲೆನಾಡು ವಲಯ (ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳು):

ಸಾಮಾನ್ಯವಾಗಿ ಅತಿ ಹೆಚ್ಚು ಮಳೆ ಪಡೆಯುವ ಈ ಪ್ರದೇಶಗಳಲ್ಲೂ ಈ ಬಾರಿ ಭತ್ತದ ಬೆಳೆಗೆ ನೀರಿನ ತತ್ವಾರ ಎದುರಾಗಿದೆ. ಹಾಗಾಗಿ, ಇಲ್ಲಿನ ಭತ್ತದ ಗದ್ದೆಗಳಲ್ಲಿ ತೇವಾಂಶ ಇರುವಾಗಲೇ ವಿವಿಧ ತರಕಾರಿಗಳು, ಕಪ್ಪು ಎಳ್ಳು, ಉದ್ದು ಮತ್ತು ಅಲ್ಪಾವಧಿಯ ದ್ವಿದಳ ಧಾನ್ಯಗಳನ್ನು ಬೆಳೆಯುವುದರಿಂದ ಭೂಮಿಯನ್ನು ಖಾಲಿ ಬಿಡದೆ ಆದಾಯ ಗಳಿಸಬಹುದು.

ಬರಗಾಲದಲ್ಲಿ ಸಿರಿಧಾನ್ಯಗಳೇ ರೈತರ ಆಪ್ತ ಮಿತ್ರರು:

ಬರಗಾಲವನ್ನು ಮೆಟ್ಟಿ ನಿಲ್ಲುವ ಅದ್ಭುತ ಶಕ್ತಿ ಸಿರಿಧಾನ್ಯಗಳಿಗೆ (Millet) ಇದೆ. ರಾಗಿ, ನವಣೆ, ಸಜ್ಜೆ, ಸಾಮೆ, ಬರಗು ಮತ್ತು ಕೊರಲೆ ಬೆಳೆಗಳಿಗೆ ಅತಿ ಕಡಿಮೆ ನೀರು ಸಾಕು.

ರೋಗ ನಿರೋಧಕ ಶಕ್ತಿ: ಇವುಗಳಿಗೆ ಕೀಟಬಾಧೆ ತೀರಾ ಕಡಿಮೆ, ಹಾಗಾಗಿ ಕೀಟನಾಶಕಗಳ ವೆಚ್ಚ ಉಳಿಯುತ್ತದೆ.

ಆರೋಗ್ಯ ಹಾಗೂ ಮಾರುಕಟ್ಟೆ ಬೇಡಿಕೆ: ಪ್ರಸ್ತುತ ಮಾರುಕಟ್ಟೆಯಲ್ಲಿ ಸಿರಿಧಾನ್ಯಗಳಿಗೆ ಭಾರಿ ಬೇಡಿಕೆಯಿದ್ದು, ರೈತರಿಗೆ ಉತ್ತಮ ಬೆಲೆ ಸಿಗುತ್ತದೆ.

ಮೇವಿಗೆ ಸಹಕಾರಿ: ಧಾನ್ಯದ ಜೊತೆಗೆ ಜಾನುವಾರುಗಳಿಗೆ ಪೌಷ್ಟಿಕಾಂಶಯುಕ್ತ ಒಣ ಮೇವು ಕೂಡ ಸಿಗುತ್ತದೆ.

ದ್ವಿದಳ ಧಾನ್ಯಗಳು: ಮಣ್ಣಿನ ಫಲವತ್ತತೆಗೂ ವರ:

ಹೆಸರು, ಉದ್ದು, ಅಲಸಂದಿ ಮತ್ತು ಕಡಲೆಯಂತಹ ದ್ವಿದಳ ಧಾನ್ಯಗಳು ಕೇವಲ 60 ರಿಂದ 75 ದಿನಗಳಲ್ಲಿ ಕಟಾವಿಗೆ ಬರುತ್ತವೆ. ಇವುಗಳ ವಿಶೇಷತೆಯೆಂದರೆ, ಇವು ವಾತಾವರಣದಲ್ಲಿರುವ ಸಾರಜನಕವನ್ನು (Nitrogen)  ಹೀರಿ ಮಣ್ಣಿನಲ್ಲಿ ಹಿಡಿದಿಟ್ಟುಕೊಳ್ಳುವುದರಿಂದ ಭೂಮಿಯ ಫಲವತ್ತತೆ ಸ್ವಾಭಾವಿಕವಾಗಿ ಹೆಚ್ಚುತ್ತದೆ. ಇದು ಮುಂದಿನ ಹಂಗಾಮಿನ ಬೆಳೆಗೆ ವರವಾಗಲಿದೆ.

ಕೃಷಿ ತಜ್ಞರ ಪ್ರಮುಖ ಸಲಹೆ: ‘ಬರಗಾಲದ ಸಮಯದಲ್ಲಿ ಹನಿ ನೀರಾವರಿ (Drip Irrigation) ಮತ್ತು ತುಂತುರು ನೀರಾವರಿ (Sprinkler) ಪದ್ಧತಿಯನ್ನು ಕಡ್ಡಾಯವಾಗಿ ಬಳಸಿ. ಇದು ಶೇಕಡಾ 50 ಕ್ಕಿಂತ ಹೆಚ್ಚು ನೀರನ್ನು ಉಳಿಸುತ್ತದೆ ಮತ್ತು ಗಿಡದ ಬೇರುಗಳಿಗೆ ನೇರವಾಗಿ ತೇವಾಂಶವನ್ನು ತಲುಪಿಸುತ್ತದೆ. ಜೊತೆಗೆ ಮಣ್ಣಿಗೆ ಮಲ್ಚಿಂಗ್ (ಹೊದಿಕೆ) ಮಾಡುವುದರಿಂದ ತೇವಾಂಶ ಆವಿಯಾಗುವುದನ್ನು ತಡೆಯಬಹುದು’.

ಬದಲಾವಣೆಯೇ ಬದುಕಿನ ದಾರಿ:

ಬರಗಾಲ ಎನ್ನುವುದು ಪ್ರಕೃತಿಯ ವಿಕೋಪ ಇರಬಹುದು, ಆದರೆ ಅದಕ್ಕೆ ಶರಣಾಗದೆ ಬುದ್ಧಿವಂತಿಕೆಯಿಂದ ಕೃಷಿ ಮಾಡುವುದು ನಮ್ಮ ಕೈಯಲ್ಲಿದೆ. ಹೆಚ್ಚು ನೀರು ಬೇಡುವ ಸಾಂಪ್ರದಾಯಿಕ ಬೆಳೆಗಳ ವ್ಯಾಮೋಹವನ್ನು ಬಿಟ್ಟು, ಪರಿಸ್ಥಿತಿಗೆ ತಕ್ಕಂತೆ ಪರ್ಯಾಯ ಬೆಳೆಗಳನ್ನು ಅಳವಡಿಸಿಕೊಂಡರೆ ಮಾತ್ರ ಈ ಭೀಕರ ಬರಗಾಲದಲ್ಲೂ ಕೃಷಿಯನ್ನು ಲಾಭದಾಯಕವಾಗಿಸಲು ಸಾಧ್ಯ.

ನಾಡಿನ ರೈತರು ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆ) ನೀಡುವ ಉಚಿತ/ರಿಯಾಯಿತಿ ದರದ ಬೀಜಗಳು ಮತ್ತು ತಾಂತ್ರಿಕ ಸೌಲಭ್ಯಗಳನ್ನು ಬಳಸಿಕೊಂಡು ಪರ್ಯಾಯ ಕೃಷಿಯತ್ತ ಹೆಜ್ಜೆ ಇಡಬೇಕಾಗಿದೆ.

ಕರ್ನಾಟಕದಲ್ಲಿ ಮುಂಗಾರು ಬೆಳೆಗಳ ತುರ್ತು ನಿರ್ವಹಣೆ ಮತ್ತು ಪರ್ಯಾಯ ಬೆಳೆ ಯೋಜನೆ: ರೈತರಿಗೆ ಸಮಗ್ರ ಮಾರ್ಗದರ್ಶಿ

ಹೈದರಾಬಾದ್‍ನ ಐಸಿಎಆರ್-ಸಿಆರ್‍ಐಡಿಎ (ICAR-CRIDA) ಸಂಸ್ಥೆಯು ಕರ್ನಾಟಕದ ಕೃಷಿ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಮುಂಗಾರು (ಖಾರೀಫ್) ಋತುವಿನಲ್ಲಿ ಎದುರಾಗುವ ಮಳೆ ಅಭಾವ ಹಾಗೂ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸಮಗ್ರ ತುರ್ತು ಬೆಳೆ ಯೋಜನೆಯನ್ನು ರೂಪಿಸಿದೆ.

ಮುಂಗಾರು ಮಳೆಯು ವಿಳಂಬವಾದಾಗ ಅಥವಾ ಋತುವಿನ ವಿವಿಧ ಹಂತಗಳಲ್ಲಿ (ಆರಂಭಿಕ, ಮಧ್ಯಂತರ ಹಾಗೂ ಕೊನೆಯ ಹಂತ) ಮಳೆಯ ಕೊರತೆಯುಂಟಾದಾಗ ರೈತರು ಅನುಸರಿಸಬೇಕಾದ ಪರ್ಯಾಯ ಮಾರ್ಗಸೂಚಿಗಳು.

ವಿವಿಧ ಬೆಳೆಗಳ ತುರ್ತು ನಿರ್ವಹಣೆ:

ರಾಗಿ (ಫಿಂಗರ್ ಮಿಲೆಟ್): ಮಳೆ ವಿಳಂಬವಾದರೆ GPU 28, GPU 66, ML 365, MR-1 ನಂತಹ ತಳಿಗಳನ್ನು ಶೇಕಡಾ 15-20 ರಷ್ಟು ಹೆಚ್ಚಿನ ಬಿತ್ತನೆ ಬೀಜ ಬಳಸಿ ಬಿತ್ತನೆ ಮಾಡಬೇಕು. ಬಿತ್ತನೆಗೆ ಮುನ್ನ 18 ಗಂಟೆ ನೀರಿನಲ್ಲಿ ನೆನೆಸಿ, 24 ಗಂಟೆ ನೆರಳಿನಲ್ಲಿ ಒಣಗಿಸಿ ಬೀಜೋಪಚಾರ (Seed hardening) ಮಾಡುವುದು ಸೂಕ್ತ. ಸಾಲು ತೆಳುಗೊಳಿಸುವುದು (Thinning)  ಕಳೆ ತೆಗೆದು ಮಣ್ಣಿನ ಹೊದಿಕೆ (Soil mulch) ಮಾಡುವುದು ಮತ್ತು ಮಳೆ ಬಂದ ತಕ್ಷಣ ಸಾರಜನಕ ಗೊಬ್ಬರ ನೀಡುವುದು ಬೆಳೆಗೆ ಸಹಕಾರಿ.

ನೆಲಕಡಲೆ (ಕಡಲೆಕಾಯಿ): ಸಾಧಾರಣವಾಗಿ ಜುಲೈ ಮೊದಲ ವಾರ ಬಿತ್ತನೆಗೆ ಸೂಕ್ತ. ಜುಲೈ ದ್ವಿತೀಯಾರ್ಧದಲ್ಲೂ ಮಳೆಯಾಗದಿದ್ದರೆ ಹರಡುವ ತಳಿಗಳನ್ನು (DSG-1, S-230) ಬಳಸಬಹುದು ಅಥವಾ ಸೂರ್ಯಕಾಂತಿಯನ್ನು ಪರ್ಯಾಯ ಬೆಳೆಯಾಗಿ ಆಯ್ಕೆ ಮಾಡಬಹುದು. 30-40 ದಿನಗಳ ಬೆಳೆಗೆ ಮಣ್ಣು ಏರು ಮಾಡುವುದು, ಜಿಪ್ಸಮ್ ಮತ್ತು ಡಿಎಪಿ (2%) ಸಿಂಪಡಣೆ ಮಾಡುವುದು ಹಾಗೂ ತುರ್ತು ನೀರಾವರಿ ನೀಡುವುದು ಅಗತ್ಯ.

ಮೆಕ್ಕೆಜೋಳ: ಜುಲೈ ಕೊನೆಯಲ್ಲಿ ಸಸಿಗಳ ಸಂಖ್ಯೆ ಕಡಿಮೆಯಿದ್ದರೆ ಮರು ಬಿತ್ತನೆ ಅಥವಾ ಪಾಲಿಥಿನ್ ಚೀಲಗಳಲ್ಲಿ ಬೆಳೆಸಿದ ಸಸಿಗಳನ್ನು ನೆಟ್ಟು ಸಾಲು ತುಂಬಬೇಕು. ಮಣ್ಣಿನಲ್ಲಿ ತೇವಾಂಶವಿದ್ದಾಗ ಮಾತ್ರ ಮೇಲುಗೊಬ್ಬರ ನೀಡಬೇಕು. ನೀರಿನ ಅಭಾವವಿದ್ದಾಗ ಗಿಡದ ಕೆಳಗಿನ ಎಲೆಗಳನ್ನು ತೆಗೆದು ಮೇವಿಗೆ ಬಳಸಬಹುದು.

ಜೋಳ, ತೊಗರಿ, ಸಜ್ಜೆ ಮತ್ತು ಸೂರ್ಯಕಾಂತಿ:* ಮಳೆ ವಿಳಂಬವಾದರೆ ಜೋಳದ ಸಾಲುಗಳ ನಡುವೆ ತೊಗರಿ ಅಥವಾ ಸೂರ್ಯಕಾಂತಿಯನ್ನು ಪರ್ಯಾಯವಾಗಿ ಬಿತ್ತಬಹುದು. ಸಜ್ಜೆಯಲ್ಲಿ ತೇವಾಂಶ ಅಭಾವವಿದ್ದಾಗ ಪ್ರತಿ ಮೂರನೇ ಸಾಲನ್ನು ತೆಗೆದು ಮೇವಿಗಾಗಿ ಬಳಸಬಹುದು. ಸೂರ್ಯಕಾಂತಿಗೆ 2% ಯೂರಿಯಾ ಅಥವಾ ಕೆಸಿಎಲ್ ಅಥವಾ 5% ಕಾಯೋಲಿನ್ ಸಿಂಪಡಿಸುವುದರಿಂದ ಒಣಹವೆ ತಡೆಯಬಹುದು.

ಹೆಸರು ಮತ್ತು ಉದ್ದು: ಜುಲೈ ನಂತರದ ದಿನಗಳಲ್ಲಿ ತೇವಾಂಶದ ಅಭಾವವಿದ್ದರೆ ಕಾಯಿಗಳನ್ನು ತರಕಾರಿ ಉದ್ದೇಶಕ್ಕಾಗಿ ಅಥವಾ ಶಾರೀರಿಕ ಪಕ್ವತೆಯ ಹಂತದಲ್ಲೇ ಕೊಯಿಲು ಮಾಡಿ, ಮುಂದಿನ ರಬಿ ಬೆಳೆಗೆ ಭೂಮಿ ಸಿದ್ಧಪಡಿಸಿಕೊಳ್ಳಬೇಕು.

ಎಳ್ಳು: ಮಳೆ ಕೊರತೆಯಿದ್ದರೆ ಗಿಡಗಳ ಸಂಖ್ಯೆ ತೆಳುಗೊಳಿಸಿ, ಸಾಲುಗಳ ನಡುವೆ ಒಣ ಹುಲ್ಲಿನ ಹೊದಿಕೆ (ಒuಟಛಿh) ಮಾಡಬೇಕು. ಕೊಯ್ಲಿನ ಸಮಯದಲ್ಲಿ ಕಾಳುಗಳು ಉದುರುವುದನ್ನು ತಡೆಯಲು ಸರಿಯಾದ ಹಂತದಲ್ಲಿ ಕೊಯ್ಲು ಮಾಡುವುದು ಮುಖ್ಯ.

ಕೃಷಿ ನಿರ್ದೇಶಕ ಡಾ.ಜಿ.ಟಿ.ಪುತ್ರ ಅವರು, ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು (SAUs) ಮತ್ತು ಕೃಷಿ ವಿಜ್ಞಾನ ಕೇಂದ್ರಗಳ (KVKs) ಸಹಕಾರದೊಂದಿಗೆ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ (ICAR) ಕೇಂದ್ರ ಒಣಭೂಮಿ ಬೇಸಾಯ ಸಂಶೋಧನಾ ಸಂಸ್ಥೆಯು (CRIDA) ಪ್ರತಿ ಜಿಲ್ಲೆಗೆ ‘ಜಿಲ್ಲಾ ಪರ್ಯಾಯ ಬೆಳೆ ಯೋಜನೆ’ಯನ್ನು (DACP) ಸಿದ್ಧಪಡಿಸಲಾಗಿರುತ್ತದೆ. ಈ ಬಗ್ಗೆ ಕ್ಷೇತ್ರ ಮಟ್ಟದಲ್ಲಿ ವ್ಯಾಪಕ ಪ್ರಚಾರ ನೀಡಲಾಗಿದೆ. ಹವಾಮಾನ ಪರಿಸ್ಥಿತಿಗಳು, ಮಣ್ಣಿನ ಗುಣಲಕ್ಷಣಗಳು ಹಾಗೂ ಬೆಳೆಗಳ ಸೂಕ್ತತೆಯನ್ನು ಆಧರಿಸಿ, ಕೃಷಿ ಉತ್ಪಾದಕತೆಯನ್ನು ನಿರಂತರವಾಗಿ ಕಾಪಾಡಿಕೊಳ್ಳುವ ಉದ್ದೇಶದಿಂದ, ರೈತರಿಗೆ ಸೂಕ್ತ ಬೆಳೆಗಳನ್ನು ಆಯ್ಕೆ ಮಾಡಿಕೊಂಡು ಶಿಫಾರಸು ಮಾಡಲಾದ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಸಂಪತ್ ಕುಮಾರ್, ವೈ.ಸಿ.
ಮುಖ್ಯ ವರದಿಗಾರರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ.


Share

You cannot copy content of this page