ಸಮಗ್ರ ಸುದ್ದಿ

ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಹೆಚ್ಚಿದ ಉತ್ಪಾದನೆ: ಹೆಚ್ಚುವರಿ ಕಲ್ಲಿದ್ದಲು ತರಿಸಿಕೊಳ್ಳಲು ಸಿದ್ಧತೆ- ರಾಜೇಂದ್ರ ಚೋಳನ್

Share

ಬೆಂಗಳೂರು: ಮಳೆ ಕೊರತೆ ಹಿನ್ನೆಲೆಯಲ್ಲಿ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಹೆಚ್ಚಿಸಿ ರಾಜ್ಯದ ವಿದ್ಯುತ್ ಬೇಡಿಕೆ ಪೂರೈಸುತ್ತಿರುವ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್), ಅದಕ್ಕೆ ಅಗತ್ಯ ಕಲ್ಲಿದ್ದಲು ಸಂಗ್ರಹಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.

ಇದಕ್ಕೆ ಪೂರಕವಾಗಿ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ನೇತೃತ್ವದಲ್ಲಿ ನಿಗಮದ ಹಿರಿಯ ಅಧಿಕಾರಿಗಳು ಮಹಾರಾಷ್ಟ್ರದ ನಾಗಪುರದಲ್ಲಿರುವ ವೆಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್, ಬಾರಂಜ್ ಕ್ಯಾಪ್ಟಿವ್ ಕಲ್ಲಿದ್ದಲು ಗಣಿಗಳಿಗೆ ಬೇಟಿ ನೀಡಿದ್ದರು. ಅಲ್ಲದೆ, ಇತರೆ ಕಲ್ಲಿದ್ದಲು ಗಣಿ ಹಾಗೂ ಕೋಲ್ ಇಂಡಿಯಾ ಲಿಮಿಟೆಡ್ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ.

ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕರ ರಾಜೇಂದ್ರ ಚೋಳನ್ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳು ವೆಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ (ಡಬ್ಲ್ಯುಸಿಎಲ್) ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಹೇಮಂತ್ ಶರತ್ ಪಾಂಡೆ ಅವರನ್ನು ಭೇಟಿಯಾಗಿ, ಕೆಪಿಸಿಎಲ್ ವತಿಯಿಂದ ನಿರ್ವಹಿಸಲಾಗುತ್ತಿರುವ ಆರ್‌ಟಿಪಿಎಸ್‌ಗೆ ಹೆಚ್ಚುವರಿ ಕಲ್ಲಿದ್ದಲು ರೇಕ್‌ಗಳನ್ನು ಒದಗಿಸುವಂತೆ ಮನವಿ ಮಾಡಿದರು. ಇದಕ್ಕೆ ಸಮ್ಮತಿಸಿದ ಡಬ್ಲ್ಯುಸಿಎಲ್ ಅಧಿಕಾರಿಗಳು, ಪ್ರಸ್ತುತ ಪ್ರತಿದಿನ ನೀಡುತ್ತಿರುವ ಕಲ್ಲಿದ್ದಲು ಜತೆಗೆ ಪ್ರತಿನಿತ್ಯ 4,000 ಮೆಟ್ರಿಕ್ ಟನ್ ಹೆಚ್ಚುವರಿ ಕಲ್ಲಿದ್ದಲು ಒದಗಿಸಲು ಸಮ್ಮತಿಸಿದ್ದಾರೆ.

ಅದೇ ರೀತಿ ಬಳ್ಳಾರಿ ಉಷ್ಣ ವಿದ್ಯುತ್ ಸ್ಥಾವರದ ಘಟಕ 1 ಮತ್ತು 2ಕ್ಕೆ ಮೀಸಲಾದ ಬಾರಂಜ್ ಕ್ಯಾಪ್ಟಿವ್ ಕಲ್ಲಿದ್ದಲು ಗಣಿಯಿಂದ ಪ್ರಸ್ತುತ ಪ್ರತಿನಿತ್ಯ ಬರುತ್ತಿರುವ 16 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲನ್ನು 25 ಸಾವಿರ ಮೆಟ್ರಿಕ್ ಟನ್ ಗೆ ಹೆಚ್ಚಿಸಲು ವ್ಯವಸ್ಥೆ ಮಾಡಲಾಗಿದೆ. ಈ ಗಣಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೆಪಿಸಿಎಲ್‌ ಎಂಡಿ ರಾಜೇಂದ್ರ ಚೋಳನ್ ಹಾಗೂ ಹಿರಿಯ ಅಧಿಕಾರಿಗಳು ಕಲ್ಲಿದ್ದಲು ಉತ್ಪಾದನೆ, ತೂಕ ಮಾಪನ ವ್ಯವಸ್ಥೆ ಹಾಗೂ ಕಲ್ಲಿದ್ದಲು ಸಾಗಣೆ ವ್ಯವಸ್ಥೆಯನ್ನು ಪರಿಶೀಲಿಸಿದರು.

“ರಾಯಚೂರು ಉಷ್ಣ ವಿದ್ಯುತ್ ಸ್ಥಾವರಕ್ಕೆ ಪ್ರಸ್ತುತ ಪೂರೈಕೆಯಾಗುತ್ತಿರುವ ಕಲ್ಲಿದ್ದಲು ಜತೆಗೆ ಪ್ರತಿನಿತ್ಯ 1ರಿಂದ 2 ಕೋಲ್ ರೇಕ್ ಹೆಚ್ಚುವರಿಯಾಗಿ ಒದಗಿಸುವಂತೆ ಕೋಲ್ ಇಂಡಿಯಾ ಲಿಮಿಟೆಡ್ ಜತೆಗೂ ಮಾತುಕತೆ ನಡೆಸಲಾಗಿದೆ. ಬೇಡಿಕೆಗೆ ತಕ್ಕಂತೆ ಕಲ್ಲಿದ್ದಲು ಪೂರೈಸಲು ಕೋಲ್ ಇಂಡಿಯಾ ಲಿಮಿಟೆಡ್ ಅಧಿಕಾರಿಗಳು ಸಮ್ಮತಿಸಿದ್ದಾರೆ,” ಎಂದು ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.

“ಮಳೆ ಕೊರತೆಯಿಂದಾಗಿ ಜಲ ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿದ್ದು, ಈ ಕೊರತೆ ಭರಿಸಲು ರಾಯಚೂರು, ಯರಮರಸ್ ಮತ್ತು ಬಳ್ಳಾರಿಯ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಪ್ರತಿನಿತ್ಯ 100 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲು ಕೆಪಿಸಿಎಲ್ ನಿರ್ಧರಿಸಿದೆ. ಅದಕ್ಕೆ ಪ್ರತಿನಿತ್ಯ 20 ಕೋಲ್ ರೇಕ್ ವರೆಗೂ ಕಲ್ಲಿದ್ದಲು ಅಗತ್ಯವಿದ್ದು, ಅಷ್ಟನ್ನು ತರಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ,” ಎಂದು ಅವರು ಹೇಳಿದ್ದಾರೆ.

ರೈಲ್ವೆ ಅಧಿಕಾರಿಗಳ ಭೇಟಿ:

ಈ ಮಧ್ಯೆ ಮಹಾರಾಷ್ಟ್ರದ ನಾಗಪುರದಲ್ಲಿ ಕೇಂದ್ರ ರೈಲ್ವೆ ಹಿರಿಯ ವಿಭಾಗೀಯ ವ್ಯವಸ್ಥಾಪಕರಾದ (ಕಾರ್ಯಾಚರಣೆ) ಕೃಷ್ಣಾತ್ ಎಸ್. ಪಾಟೀಲ್ ಅವರನ್ನು ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ರಾಜೇಂದ್ರ ಚೋಳನ್ ನೇತೃತ್ವದ ಅಧಿಕಾರಿಗಳು ಭೇಟಿಯಾಗಿ, ರಾಜ್ಯದ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿಗೆ ಹೆಚ್ಚುವರಿ ಕಲ್ಲಿದ್ದಲು ಪೂರೈಸಲು ಅಗತ್ಯ ರೈಲು ಬೋಗಿಗಳನ್ನು ವ್ಯವಸ್ಥೆ ಮಾಡುವಂತೆ ಕೋರಿದ್ದಾರೆ. ಇದಕ್ಕೆ ಸಮ್ಮತಿಸಿದ ರೈಲ್ವೆ ಅಧಿಕಾರಿಗಳು, ಕೆಪಿಸಿಎಲ್‌ಗೆ ಅಗತ್ಯ ಖಾಲಿ ರೇಕುಗಳನ್ನು ಪೂರೈಸಲು ಸಮ್ಮತಿಸಿದ್ದಾರೆ.

ಇಂಧನ ಮತ್ತು ಪ್ರವಾಸೋದ್ಯಮ ಸಚಿವರಾದ ಕೆ.ಜೆ.ಜಾರ್ಜ್,
ಮಳೆ ಕೊರತೆ ಹಿನ್ನೆಲೆಯಲ್ಲಿ ರಾಜ್ಯದ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಹೆಚ್ಚು ವಿದ್ಯುತ್ ಉತ್ಪಾದಿಸಲು ಅಗತ್ಯವಿರುವ ಹೆಚ್ಚುವರಿ ಕಲ್ಲಿದ್ದಲು ತರಿಸಿಕೊಳ್ಳಲು ಕೆಪಿಸಿಎಲ್ ವತಿಯಿಂದ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜತೆಗೆ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳನ್ನೂ ಸಮರ್ಪಕ ನಿರ್ವಹಣೆಯೊಂದಿಗೆ ಸಜ್ಜುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.


Share

You cannot copy content of this page