ಸಮಗ್ರ ಸುದ್ದಿ

​ಬರ ಪರಿಸ್ಥಿತಿಯ ನಡುವೆ ತಮಿಳುನಾಡಿಗೆ ನೀರು ಹರಿಸುವ ಆದೇಶ ಸರಿಯಲ್ಲ: ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ

Share

​ಬೆಂಗಳೂರು: ಕರ್ನಾಟಕದಲ್ಲಿ ತೀವ್ರ ಬರದ ಛಾಯೆ ಆವರಿಸಿರುವ ಈ ಸೂಕ್ಷ್ಮ ಸಮಯದಲ್ಲಿ ತಮಿಳುನಾಡಿಗೆ 3,500 ಕ್ಯುಸೆಕ್ ಕಾವೇರಿ ನೀರು ಬಿಡುವಂತೆ ಸೂಚಿಸಿರುವುದು ಅತ್ಯಂತ ಅಸಮಂಜಸ. ನಮ್ಮ ಬಳಿ ಕುಡಿಯಲು ನೀರಿಲ್ಲದಿರುವಾಗ ಈ ರೀತಿಯ ಆದೇಶ ಸರಿಯಲ್ಲ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಖಂಡಿಸಿದ್ದಾರೆ.

ಕಾವೇರಿ ನೀರು ಹಂಚಿಕೆ: ರಾಜ್ಯದಲ್ಲಿ ಅಗತ್ಯಕ್ಕೆ ತಕ್ಕಷ್ಟು ನೀರಿದ್ದಾಗ ಕೇಳದೆಯೇ ನೀಡಿದ್ದೇವೆ, ಆದರೆ ಈಗ ನಮಗೇ ಕುಡಿಯುವ ನೀರಿನ ಅಭಾವವಿರುವಾಗ ನೀರು ಬಿಡಲು ಸಾಧ್ಯವಿಲ್ಲ. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಕಾನೂನು ತಜ್ಞರೊಂದಿಗೆ ಚರ್ಚಿಸಲಿದ್ದು, ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ.

ಮೇಕೆದಾಟು ಕರ್ನಾಟಕದ ಹಕ್ಕು: ಮೇಕೆದಾಟು ಯೋಜನೆಗೆ ತಮಿಳುನಾಡಿನ ಸಮ್ಮತಿಯ ಅಗತ್ಯವಿಲ್ಲ ಎಂದು ನ್ಯಾಯಾಲಯ ಈಗಾಗಲೇ ಸ್ಪಷ್ಟಪಡಿಸಿದೆ. ಪ್ರಧಾನಮಂತ್ರಿಯವರೂ ಕೋರ್ಟ್‌ಗಿಂತ ಮೇಲಲ್ಲ, ನ್ಯಾಯಾಲಯದ ಆದೇಶವೇ ಅಂತಿಮ.

ನೆರೆಯ ರಾಜ್ಯಗಳ ಬಾಂಧವ್ಯ: ಒಕ್ಕೂಟ ವ್ಯವಸ್ಥೆಯಲ್ಲಿ ನೆರೆರಾಜ್ಯಗಳ ನಡುವೆ ಸಮಸ್ಯೆಗಳು ಬರುವುದು ಸಹಜ. ಇತ್ತೀಚೆಗೆ ತುಂಗಭದ್ರಾ ಗೇಟ್‌ ಲೋಕಾರ್ಪಣೆ ವೇಳೆ ಆಂಧ್ರ ಹಾಗೂ ತೆಲಂಗಾಣ ಸಿಎಂಗಳು ಬಂದು ಸಮಸ್ಯೆ ಬಗೆಹರಿಸಿಕೊಳ್ಳುವ ಬಗ್ಗೆ ಚರ್ಚಿಸಿದ್ದಾರೆ. ರಾಜ್ಯಗಳು ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದಕ್ಕೆ ಬಿಜೆಪಿ ಏಕೆ ಆಕ್ಷೇಪ ವ್ಯಕ್ತಪಡಿಸುತ್ತಿದೆ ಎಂದು ಪ್ರಶ್ನಿಸಿದರು.

ಬರ ಪರಿಹಾರ ಮತ್ತು ನಿಯಮ ಸಡಿಲಿಕೆಗೆ ಮನವಿ: ಆಸ್ಗಟ್‌ ಅಂತ್ಯದವರೆಗೂ ಮಳೆ ಪರಿಸ್ಥಿತಿ ಅವಲೋಕಿಸಿ ಕೇಂದ್ರಕ್ಕೆ ಮತ್ತೊಮ್ಮೆ ವರದಿ ಸಲ್ಲಿಸಲಾಗುವುದು. ಶೇ.80 ರಷ್ಟು ಮಳೆ ಕೊರತೆಯಿದ್ದರೂ ಕೆಲವು ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲು ಪ್ರಸ್ತುತ ಇರುವ ಮಾನದಂಡಗಳು ಅಡ್ಡಿಯಾಗುತ್ತಿದ್ದು, ಅವುಗಳನ್ನು ಸಡಿಲಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ರಾಜಕೀಯ ವಿದ್ಯಮಾನಗಳು: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳು ದೆಹಲಿಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಹೆಚ್ಚುವರಿ ಡಿಸಿಎಂ ಹುದ್ದೆಗಳ ಕುರಿತು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದರು.

​ಕಾವೇರಿ ನೀರಿಗಾಗಿ ಮಂಡ್ಯ ಹಾಗೂ ಸುತ್ತಮುತ್ತಲ ಭಾಗಗಳಲ್ಲಿ ರೈತರ ಮತ್ತು ಕನ್ನಡಪರ ಸಂಘಟನೆಗಳ ಪ್ರತಿಭಟನೆ ಸ್ವಾಭಾವಿಕವಾಗಿದ್ದು, ಸರ್ಕಾರದ ನಿರ್ಧಾರ ಹಾಗೂ ಕಾನೂನಾತ್ಮಕ ಹೋರಾಟದ ಕುರಿತು ಸದ್ಯದಲ್ಲೇ ಸ್ಪಷ್ಟ ಚಿತ್ರಣ ಹೊರಬೀಳಲಿದೆ.


Share

You cannot copy content of this page