ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಮುಂದುವರಿದಿದ್ದು, ಉತ್ತರ ಕರ್ನಾಟಕ ಭಾಗದ 111 ತಾಲ್ಲೂಕುಗಳಲ್ಲಿ 4 ವಾರಗಳಿಂದ ಒಣಹವೆ ಮುಂದುವರಿದಿದೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು.
ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮುಖ್ಯಮಂತ್ರಿಯವರೊಂದಿಗೆ ಪಾಲ್ಗೊಂಡು ಅವರು ಮಾತನಾಡಿದರು.
ಇಂದು ಕ್ಯಾಬಿನೆಟ್ ವಿಸ್ತರಣೆ ಆಗಿದೆ. ಮುಖ್ಯಮಂತ್ರಿಯವರು ಹೊಸ ಸಚಿವರಿಗೆ ಬಹಳ ವಿಸ್ತಾರವಾಗಿ ಜವಾಬ್ದಾರಿಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ರಾಜ್ಯದಲ್ಲಿ ಬರದ ಪರಿಸ್ಥಿತಿ ಇದ್ದು, ಕೆಲವು ಜಿಲ್ಲೆಗಳಲ್ಲಿ ಮಾತ್ರ ಮಳೆಯಾಗುತ್ತಿದೆ. ಕೆಲವು ಜಲಾಶಯಗಳಿಗೆ ನೀರು ಹರಿದು ಬರುತ್ತಿದೆ ಎಂದರು.
ಕಾವೇರಿ ಜಲಾನಯನ ಪ್ರದೇಶದಲ್ಲಿ ಮೂರು ಡ್ಯಾಮ್‌ಗಳಲ್ಲಿ ಶೇ. 90ರಷ್ಟು ನೀರು ತುಂಬಿದೆ. ಕೆಆರ್‌ಎಸ್ ಜಲಾಶಯದಲ್ಲಿ ಒಳ ಹರಿವು ಹೆಚ್ಚಾಗಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಶೇ. 90ರಷ್ಟು ನೀರು ತುಂಬುವ ಸಾಧ್ಯತೆ ಇದೆ ಎಂದು ಹೇಳಿದರು.
ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಬರದ ಪರಿಸ್ಥಿತಿ ಮುಂದುವರಿದಿದೆ. 111 ತಾಲೂಕುಗಳಲ್ಲಿ ಬರದ ತೀವ್ರತೆ ಹೆಚ್ಚಿದೆ. ಮಳೆ ಕೊರತೆ ಹೆಚ್ಚಾದಷ್ಟು ಬರದ ಪರಿಸ್ಥಿತಿ ಹೆಚ್ಚಾಗುತ್ತದೆ. ಹೀಗಾಗಿ ಬರ ಘೋಷಣೆ ಮಾಡಬೇಕು ಎಂದು ಶಾಸಕರು ಮತ್ತು ಜನರು ಒತ್ತಾಯಿಸುತ್ತಿದ್ದಾರೆ. ಆದರೆ, ಕೇಂದ್ರದ 10 ನಿಯಮಗಳ ಪ್ರಕಾರ ಆಗಸ್ಟ್ ಮಾಸಾಂತ್ಯದವರೆಗೆ ಬರ ಘೋಷಣೆ ಮಾಡಲು ಸಾಧ್ಯವಾಗುವುದಿಲ್ಲ. ಅವುಗಳನ್ನು ಸಡಿಲ ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬರ ಪರಿಸ್ಥಿತಿ ರೆಡ್ ಝೋನ್, ಯೆಲ್ಲೋ ಝೋನ್ ಹೋಗಿರುವುದನ್ನು ಪರಿಶೀಲನೆ ಮಾಡಲಾಗುವುದು. ಅದನ್ನು ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ನಿರ್ಣಯ ಮಾಡುತ್ತೇವೆ. ಬರದ ಕುರಿತಂತೆ ಕಂದಾಯ ಇಲಾಖೆಯಿಂದ ಸಂಪುಟ ಸಭೆಯಲ್ಲಿ ಪ್ರೆಸೆಂಟೆಷನ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
